ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಎಸ್‌ಗೆ ಬದಲಾವಣೆಯ ಪರ್ವ

Last Updated 1 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕೆಎಎಸ್‌ ಮುಖ್ಯ ಪರೀಕ್ಷೆಯ ಪಠ್ಯಕ್ರಮ ಬದಲಾಗಿರುವುದು ಹೊಸ ಆಕಾಂಕ್ಷಿಗಳಿಗೆ ಚೈತನ್ಯ ಬಂದಿದೆ. ನೂತನ ಪಠ್ಯಕ್ರಮ ಬದಲಾವಣೆಗೆ ಹೊಂದಿಕೊಳ್ಳುವ ಪ್ರವೃತ್ತಿ ಮತ್ತು ಸೃಜನಶೀಲತೆ ಆಯ್ದು ತೆಗೆಯುವ ಉತ್ತಮ ಬದಲಾವಣೆಯಾಗಿದೆ. ಹಳೆ ಪಠ್ಯಕ್ರಮದ ಸ್ಥಿತಿಗೆ ಹೊಸ ನೀರು ಹರಿಸಲು ಸಹಾಯಕ.

ಈ ವ್ಯವಸ್ಥೆಯಲ್ಲಿ ಆನ್ವಯಿಕ ಪ್ರಶ್ನೆಗಳಿಗಿಂತ ಗ್ರಹಿಕೆ ಮತ್ತು ಜ್ಞಾನ ಕೌಶಲಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದರಿಂದ ಸೃಜನಶೀಲರಿಗೆ ಸ್ವಲ್ಪಮಟ್ಟಿನ ತೊಂದರೆಯಾಗುತ್ತಿತ್ತು. ಐಎಎಸ್‌ನಲ್ಲಿ ಹಂತ– ಹಂತವಾಗಿ ಪಠ್ಯಕ್ರಮದಲ್ಲಿ ಬದಲಾವಣೆ ತಂದಿದ್ದರಿಂದ, ಅದೇ ಮಾರ್ಗ ಅನುಸರಿಸಿ ಕೆಪಿಎಸ್‌ಸಿ ಕೂಡ ಬದಲಾವಣೆಯ ದಿಕ್ಕಿಗೆ ವಾಲಿದೆ.

2011ರಲ್ಲಿ ಪೂರ್ವಭಾವಿ ಪರೀಕ್ಷೆಯಲ್ಲಿ ಬದಲಾವಣೆ ತಂದು ಐಚ್ಛಿಕ ವಿಷಯ ತೆಗೆದುಹಾಕಿ ಎರಡು ಪತ್ರಿಕೆಗಳನ್ನು ಸಾಮಾನ್ಯ ಅಧ್ಯಯನಕ್ಕೆ ನಿಗದಿಪಡಿಸಿ, ಅದರಲ್ಲಿ ತಾರ್ಕಿಕ ಮತ್ತು ಅಪ್ಟಿಟ್ಯೂಡ್‌ ಟೆಸ್ಟ್‌ಗೆ ಹೆಚ್ಚು ಆದ್ಯತೆ ನೀಡಿರುವುದು ಪ್ರಮುಖ ಬದಲಾವಣೆಯಾಗಿದೆ. ಕೇವಲ ಮಾನವಿಕ ವಿಷಯಗಳನ್ನು ಅಭ್ಯಾಸ ಮಾಡಿ ಯಶಸ್ಸು ಪಡೆಯುವ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು.

ಮುಖ್ಯ ಪರೀಕ್ಷೆಯಲ್ಲಿ ಬದಲಾವಣೆಯಾಗಿರಲಿಲ್ಲ. ಆದರೆ, 2011ರ ನೇಮಕಾತಿಯಲ್ಲಿ ನಡೆದ ಅಹಿತಕರ ಬೆಳವಣಿಗೆಗಳಿಂದ ಪಾಠ ಕಲಿತ ಕೆಪಿಎಸ್‌ಸಿಯು ಪಿ.ಸಿ. ಹೂಟಾ ಕಮಿಟಿಯ ಶಿಫಾರಸುಗಳನ್ನು ಅಳವಡಿಸಿಕೊಂಡಿದೆ. ಈ ಕಮಿಟಿ ಯುಪಿಎಸ್‌ಸಿಯ ಕೆಲವು ನಿಯಮಗಳೊಂದಿಗೆ ಕೆಲವು ಹೊಸ ಬದಲಾವಣೆಗಳನ್ನು ಶಿಫಾರಸು ಮಾಡಿದೆ.

ಪೂರ್ವಭಾವಿ ಪರೀಕ್ಷೆ ಕಳೆದ ಬಾರಿಯ ಪಠ್ಯಕ್ರಮವನ್ನೇ ಹೊಂದಿದ್ದು, ಮುಖ್ಯ ಪರೀಕ್ಷೆಯಲ್ಲಿ ಮಾತ್ರ ಬದಲಾವಣೆ ಹೊಂದಿದೆ. ಮುಖ್ಯ ಪರೀಕ್ಷೆಯಲ್ಲಿ 1750 ಮತ್ತು ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನ) 200 ಅಂಕ ಸೇರಿಸಿ ಒಟ್ಟು 1950 ಅಂಕಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ. ಮುಖ್ಯ ಪರೀಕ್ಷೆಯಲ್ಲಿರುವ ಎರಡು ಐಚ್ಛಿಕ ವಿಷಯಗಳನ್ನು ಒಂದಕ್ಕೆ ಇಳಿಸುವ ಜೊತೆಗೆ ಅಂಕಗಳನ್ನು 500ಕ್ಕೆ ಇಳಿಸಲಾಗಿದೆ.

ಸಾಮಾನ್ಯ ಅಧ್ಯಯನಕ್ಕೆ 1000 ಅಂಕಗಳಿದ್ದು ನಾಲ್ಕು ಪತ್ರಿಕೆಯಲ್ಲಿ ವಿಭಾಗ ಮಾಡಿರುವುದರಿಂದ ಸಾಮಾನ್ಯ ಅಧ್ಯಯನದ ಪ್ರಾಮುಖ್ಯ ಹೆಚ್ಚಿದೆ. ಐಚ್ಛಿಕ ವಿಷಯದಲ್ಲಿ ಎರಡು ಪತ್ರಿಕೆಯಲ್ಲಿ ವಿಭಾಗ ಮಾಡಿದ್ದಾರೆ. ಸಾಮಾನ್ಯ ಅಧ್ಯಯನದ ಮೊದಲ ಪತ್ರಿಕೆಯಲ್ಲಿ ದೇಶ ಮತ್ತು ರಾಜ್ಯದ ಸಾಂಸ್ಕೃತಿಕ ಪರಂಪರೆಯ ವಿಷಯ ವ್ಯಾಪ್ತಿ ವಿಸ್ತರಿಸಿರುವುದು, ಆಕಾಂಕ್ಷಿಗಳ ಸಾಂಸ್ಕೃತಿಕ ಹಿರಿಮೆ ಮತ್ತು ಗರಿಮೆಯ ಆಳ ಪತ್ತೆ ಹಚ್ಚುವ ಪ್ರಯತ್ನವಾಗಿದೆ. ಎರಡನೆ ಪತ್ರಿಕೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅರಿವು, ಸಂವಿಧಾನ, ಸಾರ್ವಜನಿಕ ಆಡಳಿತ ಮತ್ತು ನಿರ್ವಹಣೆಯ ವಿಷಯಗಳನ್ನು ಒಳಗೊಂಡಿದೆ.

ಮೂರನೆ ಪತ್ರಿಕೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಕೃಷಿಯಲ್ಲಿ ಆಧುನಿಕ ಬೆಳವಣಿಗೆಗಳು, ಪರಿಸರ ಮತ್ತು ಜೀವಪರಿಸರ ವ್ಯವಸ್ಥೆಯ ಅವಸಾನಕ್ಕೆ ಕಾರಣಗಳನ್ನು ವಿಷಯ ವ್ಯಾಪ್ತಿಯಲ್ಲಿ ಹೊಂದಿದೆ. ಅಂದರೆ, ಈ ಸಲ ಪರಿಸರಕ್ಕೂ ಕೂಡ ಹೆಚ್ಚು ಮಹತ್ವ ಕಲ್ಪಿಸಲಾಗಿದೆ. ಉಳಿದಂತೆ, ಸಾಮಾನ್ಯ ಅಧ್ಯಯನದ ನಾಲ್ಕನೆ ಪತ್ರಿಕೆ ಎಥಿಕ್ಸ್‌ (ನೀತಿಶಾಸ್ತ್ರ), ಭಾವೈಕ್ಯ ಮತ್ತು ಅಪ್ಟಿಟ್ಯೂಡ್‌ ಎಂಬ ಭಾಗಗಳನ್ನೊಳಗೊಂಡಿದೆ. ಎಥಿಕ್ಸ್‌ ಪತ್ರಿಕೆಗೆ ಸಾಮಾನ್ಯ ವ್ಯಕ್ತಿಯ ನೈತಿಕತೆ ಅಳೆಯುವುದಾಗಿದೆ.

ಪ್ರಬಂಧಕ್ಕಾಗಿಯೇ ಪ್ರತ್ಯೇಕ 250 ಅಂಕಗಳ ಪತ್ರಿಕೆ ಇದೆ. ಇದರಲ್ಲಿ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳನ್ನೊಳಗೊಂಡ ಪ್ರಶ್ನೆ ಒಳಗೊಂಡಿರುತ್ತದೆ. ಇಲ್ಲಿ ಆಯ್ಕೆಗಳಿದ್ದು, ಸಂಭವನೀಯ ಪ್ರಬಂಧ ಮಾದರಿ ರೂಢಿಸಿಕೊಳ್ಳುವುದರಿಂದ ಹೆಚ್ಚು ಅಂಕಗಳಿಸಬಹುದು. 

ಪಠ್ಯಕ್ರಮದಲ್ಲಿ ಕೆಪಿಎಸ್‌ಸಿ ರಚನಾತ್ಮಕ ಬದಲಾವಣೆ ತಂದಿದೆ. ಆದರೆ ಎಥಿಕ್ಸ್‌ ಮತ್ತು ಸಾಂಸ್ಕೃತಿಕ ಪರಂಪರೆ ವಿಷಯದ ಪಠ್ಯಪುಸ್ತಕಗಳು ಕನ್ನಡದಲ್ಲಿ ಸಿಗದೆ ಇರುವುದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳನ್ನು ಆತಂಕಕ್ಕೀಡು ಮಾಡಿದೆ ಇದಕ್ಕೆ ಒಳ್ಳೆಯ ಪರಿಹಾರವೆಂದರೆ ಯುಪಿಎಸ್‌ಸಿ ನೋಟ್ಸ್‌ಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಟಿಪ್ಪಣಿ ಮಾಡಬೇಕು. ದತ್ತಾಂಶ ವಿಶ್ಲೇಷಣೆ ಮತ್ತು ಅಪ್ಟಿಟ್ಯೂಡ್‌ ಕಷ್ಟ ಎಂದು ಸುಮ್ಮನಿರದೇ ಈಗೀನಿಂದಲೇ ಅಭ್ಯಾಸ ಆರಂಭಿಸಬೇಕು. ಯಾವುದೇ ವಿಷಯವನ್ನು ನಿರ್ಲಕ್ಷಿಸದೆ ಎಲ್ಲ ವಿಷಯಗಳ ಕುರಿತು ಅಧ್ಯಯನ ಮಾಡಬೇಕು. 

ಈ ನೇಮಕಾತಿಯಲ್ಲಿ ಐಚ್ಛಿಕ ವಿಷಯದ ಅಂಕ ಇಳಿಸಿರುವುದು ಬೇರೆ ಬೇರೆ ವಿಷಯ ತೆಗೆದುಕೊಂಡವರಿಗೂ ನ್ಯಾಯ ಒದಗಿಸಲು ಸಹಾಯವಾಗುತ್ತದೆ. ಐಚ್ಛಿಕ ವಿಷಯದ ಪ್ರಾಧಾನ್ಯ ಕಡಿಮೆಯಾಗಿ ಸಾಮಾನ್ಯ ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯ ದೊರೆಯುತ್ತದೆ. ಈ ಪಠ್ಯಕ್ರಮದಲ್ಲಿ ಹೊಸ ವಿಷಯಗಳಿಗೆ ಹೆಚ್ಚು ಅವಕಾಶ ಕಲ್ಪಿಸಿರುವುದು ಮಾನವಿಕ ವಿಷಯಗಳ ಮಹತ್ವ ಕಡಿಮೆ ಮಾಡಿರುವುದು ಪಠ್ಯದಲ್ಲಿ ಹೊಸ ಚೈತನ್ಯ ತುಂಬಿದೆ ಎನ್ನಬಹುದು.

ಗ್ರಾಮೀಣಾಭಿವೃದ್ಧಿ ಮತ್ತು ಸಾರ್ವಜನಿಕ ಆಡಳಿತದಂತಹ ಪ್ರಮುಖ ವಿಷಯಗಳ ಕೆಲವು ಭಾಗಗಳನ್ನು ಸಾಮಾನ್ಯ ಅಧ್ಯಯನ ಪತ್ರಿಕೆಯಲ್ಲಿ ಸೇರಿಸಿರುವುದು ಅತ್ಯುತ್ತಮ ಬೆಳವಣಿಗೆ. ಮುಖ್ಯ ಪರೀಕ್ಷೆಗೆ 1:20 ರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಸಲ ಹೈದರಾಬಾದ್‌– ಕರ್ನಾಟಕ ಆಕಾಂಕ್ಷಿಗಳಿಗೆ ಮೀಸಲಾತಿ ಇರುವುದರಿಂದ ಆ ಭಾಗದ ಆಕಾಂಕ್ಷಿಗಳಿಗೆ ಹೆಚ್ಚು ಅವಕಾಶಗಳು ದೊರಕಿದಂತಾಗಿದೆ.

ಮುಖ್ಯ ಪರೀಕ್ಷೆಯ ಕನ್ನಡ ಮತ್ತು ಇಂಗ್ಲಿಷ್‌ ವಿಷಯ ಕೇವಲ ಭಾಷೆ ಗ್ರಹಿಕೆ ಮತ್ತು ಅರ್ಥೈಸುವಿಕೆ ಅವಲಂಬಿಸಿರುತ್ತದೆ. ಈ ಪತ್ರಿಕೆಗಳ ಅಂಕಗಳನ್ನು ಕೇವಲ ಉತ್ತೀರ್ಣವಾಗುವ ಮಟ್ಟಿಗೆ ತೆಗೆದುಕೊಂಡರೆ ಸಾಕು. ವ್ಯಕ್ತಿತ್ವ ಪರೀಕ್ಷೆಯಲ್ಲಿ 1:3ರಷ್ಟು ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುತ್ತದೆ. ನಾಗರಿಕ ಸೇವೆಗೆ ಅಭ್ಯರ್ಥಿಯ ವ್ಯಕ್ತಿತ್ವ ಹೊಂದುವುದೇ? ಎಂದು ಪರೀಕ್ಷಿಸಲಾಗುತ್ತದೆ. ಕೆಲವು ಸಮಸ್ಯೆ ಕೇಳಿ ಒಬ್ಬ ಕೆಎಎಸ್‌ ಅಧಿಕಾರಿಯಾಗಿ ಹೇಗೆ ಪರಿಹರಿಸಬಹುದು ಎಂಬ ಪ್ರಶ್ನೆ ಕೇಳಲಾಗುತ್ತದೆ. ಪೂರ್ವಭಾವಿ ಪರೀಕ್ಷೆಗೆ ಮಾತ್ರವಲ್ಲದೇ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಮನದಲ್ಲಿಟ್ಟು ಅಧ್ಯಯಿಸಿದರೆ ಯಶಸ್ಸು ದೊರೆಯುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT