ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ 5 ಸದಸ್ಯರ ಅಮಾನತಿಗೆ ಶಿಫಾರಸು

ಒಂಬತ್ತು ಮಂದಿ ವಿರುದ್ಧ ಕ್ರಮ: ರಾಷ್ಟ್ರಪತಿಗೆ ಕೋರಿಕೆ
Last Updated 17 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ 2011ನೇ ಸಾಲಿನ  ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿರುವ ಆಯೋಗದ ಐವರು ಸದಸ್ಯರನ್ನು ತಕ್ಷಣ ಅಮಾನತು ಮಾಡಿ, ಅವರ ವಿರುದ್ಧ ಕಾನೂನು ಕ್ರಮಕ್ಕೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲು ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈಗಾಗಲೇ ಅಮಾನತುಗೊಂಡಿರುವ ಆಯೋಗದ ಸದಸ್ಯೆ ಮಂಗಳಾ ಶ್ರೀಧರ್ ಹಾಗೂ ನಿವೃತ್ತ ಸದಸ್ಯರಾದ   ಡಾ.ಬಿ.ಎಸ್‌. ಕೃಷ್ಣಪ್ರಸಾದ್‌, ಎನ್‌.ರಾಮಕೃಷ್ಣ ಮತ್ತು ಬಿ.ಪಿ.ಕನಿರಾಂ ಅವರ ವಿರುದ್ಧವೂ ಕಾನೂನು ಕ್ರಮಕ್ಕಾಗಿ ರಾಷ್ಟ್ರಪತಿಗಳ ಅನುಮತಿ ಪಡೆಯುವುದಕ್ಕೆ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ವಿವಿಧ ವೃಂದದ 362 ಮಂದಿ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೂರುಗಳು ಬಂದ ನಂತರ ಅದನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿತ್ತು. ಸಿಐಡಿ ಪೊಲೀಸರು ಕೊಟ್ಟಿರುವ ವರದಿಯಲ್ಲಿ ಈ ಎಲ್ಲ ಒಂಬತ್ತು ಸದಸ್ಯರೂ ಅಕ್ರಮ ಎಸಗಿದ್ದಾರೆಂದು ಹೇಳಲಾಗಿತ್ತು. ಅದನ್ನೇ ಆಧಾರವಾಗಿ ಇಟ್ಟಕೊಂಡು ಈ ಎಲ್ಲ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಅವರು ವಿವರಿಸಿದರು.

‘ಈ ಹಿಂದೆ ಮಂಗಳಾ ಶ್ರೀಧರ್‌ ಅವರನ್ನು ರಾಜ್ಯಪಾಲರು ಅಮಾನತು ಮಾಡಿದ್ದನ್ನು ಹೈಕೋರ್ಟ್‌ ಎತ್ತಿಹಿಡಿದಿತ್ತು.  ಆದರೆ, ಅವರ ವಿರುದ್ಧ ಕಾನೂನು ಕ್ರಮಕ್ಕೆ ಇದುವರೆಗೂ ರಾಷ್ಟ್ರಪತಿಗಳ ಅನುಮತಿಗಾಗಿ ಕಳುಹಿಸಿರಲಿಲ್ಲ. ಕೆಪಿಎಸ್‌ಸಿ ಸದಸ್ಯರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ರಾಷ್ಟ್ರಪತಿಗಳ ಅನುಮತಿ ಕಡ್ಡಾಯ. ಈ ಕಾರಣದಿಂದಲೇ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಪತ್ರ ಕಳಿಸಲಾಗುವುದು’ ಎಂದು ಅವರು ವಿವರಿಸಿದರು.

ಕಾರ್ಯದರ್ಶಿ ವಿರುದ್ಧವೂ ಕ್ರಮ: ಅಕ್ರಮ ನಡೆದಾಗ ಇದ್ದ  ಕೆಪಿಎಸ್‌ಸಿ ಕಾರ್ಯದರ್ಶಿ ವಿರುದ್ಧವೂ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಹೊಸದಾಗಿ ಅಮಾನತಾದವರು

ಎಸ್‌.ಆರ್‌.ರಂಗಮೂರ್ತಿ
ಡಾ.ಎನ್‌.ಮಹದೇವ
ಡಾ.ಎಚ್.ವಿ.ಪಾರ್ಶ್ವನಾಥ
ಎಸ್‌.ದಯಾಶಂಕರ
ಡಾ.ಎಚ್‌.ಡಿ.ಪಾಟೀಲ್‌
(ಮಂಗಳಾ ಶ್ರೀಧರ್ ಈಗಾಗಲೇ ಅಮಾನತುಗೊಂಡಿದ್ದಾರೆ)

ನಿವೃತ್ತ ಸದಸ್ಯರು
ಡಾ.ಬಿ.ಎಸ್‌.ಕೃಷ್ಣಪ್ರಸಾದ್‌
ಎನ್‌.ರಾಮಕೃಷ್ಣ
ಬಿ.ಪಿ.ಕನಿರಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT