ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಂಚಿನ ಕಟ್ಟಡ ನೆಲಸಮ

ಕರ್ನಾಟಕಕ್ಕೆ ಹಸಿರು ನ್ಯಾಯಮಂಡಳಿ ಮಹತ್ವದ ಆದೇಶ
Last Updated 4 ಮೇ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಬೆಂಗಳೂರಿನ ಕೆರೆಗಳು ಮತ್ತು ರಾಜಕಾಲುವೆ ಸುತ್ತ ತಲೆ ಎತ್ತಿರುವ ಕಟ್ಟಡಗಳನ್ನು ಕೆಡವಬೇಕು. ಇನ್ನು ಮುಂದೆ ಈ ಪ್ರದೇಶದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಕೊಡಬಾರದು’ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಬುಧವಾರ ಆದೇಶಿಸಿದೆ. ಇದರಿಂದಾಗಿ ಕೆರೆಕಟ್ಟೆಗಳಿಗೆ ಮರುಜೀವ ಸಿಕ್ಕಂತಾಗಿದೆ.

ಕೆರೆಗಳ ಹೊರ ಅಂಚಿನಿಂದ 75 ಮೀಟರ್‌ ಮತ್ತು ರಾಜಕಾಲುವೆ ಅಂಚಿನಿಂದ 50 ಮೀಟರ್‌ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಬಾರದೆಂದು ಅದು ತಾಕೀತು ಮಾಡಿದೆ. ಹೀಗಾಗಿ ಅಗರ ಕೆರೆ ಅಂಗಳದಲ್ಲಿ ಮಂತ್ರಿ ಡೆವಲಪರ್ಸ್‌ ಕಟ್ಟಡ ಒಳಗೊಂಡಂತೆ ವಿವಿಧ ಕೆರೆ ಅಂಗಳದಲ್ಲಿ ತಲೆ ಎತ್ತಿರುವ ಕಟ್ಟಡಗಳು ನೆಲಸಮಗೊಳ್ಳಲಿವೆ.

ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರಿಗೆ ಸೇರಿದ ‘ನಮ್ಮ ಬೆಂಗಳೂರು ಫೌಂಡೇಷನ್‌’ (ಎನ್‌ಬಿಎಫ್‌) ಸಲ್ಲಿಸಿರುವ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಸ್ವತಂತ್ರ ಕುಮಾರ್‌ ನೇತೃತ್ವದ ನ್ಯಾಯಮಂಡಳಿ, ಕೆರೆ ಅತಿಕ್ರಮಿಸಿರುವ ಮಂತ್ರಿ ಡೆವಲಪರ್ಸ್‌ ಸಂಸ್ಥೆಗೆ ಈ ಹಿಂದೆ ವಿಧಿಸಿರುವ ₹ 117 ಕೋಟಿ ದಂಡವನ್ನು ಎತ್ತಿ ಹಿಡಿಯಿತು. ಪರಿಹಾರದ ರೂಪವಾಗಿ  ₹ 13.5 ಕೋಟಿ ಪಾವತಿಸಬೇಕೆಂದು ಕೋರ್‌ಮೈಂಡ್‌ ಕಂಪೆನಿಗೆ ಸೂಚಿಸಿತು.

ಬೆಳ್ಳಂದೂರು– ಅಗರ ಕೆರೆ ಅಂಗಳದಲ್ಲಿ ಮಂತ್ರಿ ಟೆಕ್ ಜೋನ್‌ ಹಾಗೂ ಕೋರ್‌ಮೈಂಡ್‌ ಕಟ್ಟಡಗಳ ನಿರ್ಮಾಣಕ್ಕೆ ನೀಡಿರುವ ಪರಿಸರ ಮತ್ತು ಕಟ್ಟಡ ಅನುಮತಿಯನ್ನು ನ್ಯಾಯಮಂಡಳಿ ರದ್ದುಪಡಿಸಿತು.

ಅಕ್ರಮವಾಗಿ ಒತ್ತುವರಿ ಮಾಡಿರುವ 3 ಎಕರೆ 10 ಗುಂಟೆ ಕೆರೆ ಅಂಗಳವನ್ನು ತಕ್ಷಣ ತೆರವು ಮಾಡುವಂತೆ ಮಂತ್ರಿ ಡೆವಲಪರ್ಸ್‌ಗೆ ಕಟ್ಟುನಿಟ್ಟಿನ ಆದೇಶ ನೀಡಿತು. ರಾಜ್ಯ ಸರ್ಕಾರ ಭೂಮಿ ಸ್ವಾಧೀನ ಮಾಡಿಕೊಳ್ಳಬೇಕೆಂದು ಹೇಳಿತು.

ಹೊಸ ಅನುಮತಿ: ಮಂತ್ರಿ ಟೆಕ್‌ ಜೋನ್‌ ಹಾಗೂ ಕೋರ್‌ಮೈಂಡ್‌ ಕಟ್ಟಡಗಳ ನಿರ್ಮಾಣಕ್ಕೆ ಹೊಸದಾಗಿ ಪರಿಸರ ಅನುಮೋದನೆ ಪಡೆಯಬೇಕು. ಈ ಅನುಮತಿ ನ್ಯಾಯಮಂಡಳಿ ಆದೇಶದ ಚೌಕಟ್ಟಿಗೆ ಒಳಪಟ್ಟಿರಬೇಕು. ಪರಿಸರ ಪರಿಣಾಮ ಅಧ್ಯಯನ ಸಂಸ್ಥೆ (ಎಸ್‌ಇಐಎಎ) ಉಸ್ತುವಾರಿಯಲ್ಲಿ ಕಟ್ಟಡ ಕಾಮಗಾರಿ ನಡೆಯಬೇಕೂ ಎಂದು ಎನ್‌ಜಿಟಿ ಕಟ್ಟುನಿಟ್ಟಿನ ನಿರ್ದೇಶನ ಕೊಟ್ಟಿತು.

ರಾಜಕಾಲುವೆಯಲ್ಲಿ ಬಿದ್ದಿರುವ ಕಟ್ಟಡದ ಅವಶೇಷಗಳನ್ನು ನಾಲ್ಕು ವಾರಗಳಲ್ಲಿ ತೆರವುಗೊಳಿಸಬೇಕು. ತಪ್ಪಿದರೆ, ಕೆರೆ ಅಭಿವೃದ್ಧಿ ಪ್ರಾಧಿಕಾರವೇ ಅವಶೇಷಗಳನ್ನು ಖುದ್ದು ತೆರವು ಮಾಡಿಸಿ ಅದಕ್ಕೆ ತಗಲುವ ವೆಚ್ಚವನ್ನು ಸಂಬಂಧಿಸಿದ ಸಂಸ್ಥೆಗಳಿಂದ ವಸೂಲು ಮಾಡಬೇಕು ಎಂದೂ ನ್ಯಾಯಮಂಡಳಿ ಸೂಚಿಸಿತು.

ಕಳೆದ ವರ್ಷ ದಂಡ ವಿಧಿಸಿತ್ತು
ಕಟ್ಟಡ ನಿರ್ಮಾಣದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮಂತ್ರಿ ಡೆವಲಪರ್ಸ್ ಹಾಗೂ ಕೋರ್‌ಮೈಂಡ್‌ ಸಂಸ್ಥೆಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಳೆದ ವರ್ಷ ಮೇ 7ರಂದು ₹139.85 ಕೋಟಿ ದಂಡ ವಿಧಿಸಿತ್ತು.

ಈ ಎರಡೂ ನಿರ್ಮಾಣ ಸಂಸ್ಥೆಗಳು ಪರಿಸರ ನಿಯಮಗಳನ್ನು ಉಲ್ಲಂಘಿಸಿ ಬೆಳ್ಳಂದೂರು ಹಾಗೂ ಅಗರದ ಕೆರೆಗಳಿಗೆ ಹೊಂದಿಕೊಂಡ ಜಾಗದಲ್ಲಿ ಹೋಟೆಲ್‌, ಮಾಲ್‌, ವಿಶೇಷ ಆರ್ಥಿಕ ವಲಯ, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿವೆ ಎಂದು ನಮ್ಮ ಬೆಂಗಳೂರು ಫೌಂಡೇಷನ್‌, ಕೋರಮಂಗಲ, ಎಚ್ಎಸ್‌ಆರ್‌ ಬಡಾವಣೆ, ಬೆಳ್ಳಂದೂರು ಬಡಾವಣೆ ನಾಗರಿಕ ಸಂಘಟನೆಗಳು ನ್ಯಾಯಮಂಡಳಿ ಮೆಟ್ಟಿಲೇರಿದ್ದವು.

ರಾಜ ಕಾಲುವೆಗೆ ಸೇರಿದ  2.61 ಎಕರೆ ಪ್ರದೇಶ, ಬೆಳ್ಳಂದೂರು ಹಾಗೂ ಅಗರ ಕೆರೆಗಳ ಅಚ್ಚುಕಟ್ಟು ಪ್ರದೇಶ ಒತ್ತುವರಿ ಮಾಡಿವೆ ಎಂದೂ ದೂರಿದ್ದವು.

****

ಕೆರೆ ದಂಡೆಯಲ್ಲಿ ಎಸ್‌ಇಜೆಡ್‌ ನಿರ್ಮಾಣಕ್ಕೆ ಅನುಮತಿ ಕೊಟ್ಟವರು ಅಧಿಕಾರಿಗಳು. ಅವರಿಗೂ ಕಠಿಣ ಶಿಕ್ಷೆ ಆಗಬೇಕು.  ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸುತ್ತೇವೆ.
-ರಾಜೀವ್‌ ಚಂದ್ರಶೇಖರ್‌, ರಾಜ್ಯಸಭಾ ಸದಸ್ಯ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನದ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT