ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರಕ್ಕೆ ‘ಸುಪ್ರೀಂ’ ತರಾಟೆ

ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪುಹಣ ಇಟ್ಟವರ ಪಟ್ಟಿ ಬಿಡುಗಡೆಗೆ ಇಂದೇ ಗಡುವು
Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಬ್ಯಾಂಕುಗಳಲ್ಲಿ ತೆರಿಗೆಗೆ ಒಳಪಡದ ಕಪ್ಪುಹಣ ಇರಿಸಿರು­ವವರ ಹೆಸರು ಬಹಿರಂಗ ಸಂಬಂಧ ಸರ್ಕಾರದ ನಿಲುವಿಗೆ ಕಪಾಳಮೋಕ್ಷ ಮಾಡಿರುವ ಸುಪ್ರೀಂಕೋರ್ಟ್‌, ಎಲ್ಲರ ಹೆಸರುಗಳನ್ನು ಬುಧವಾರ ಮುಚ್ಚಿದ ಲಕೋಟೆಯಲ್ಲಿ ತನಗೆ ಸಲ್ಲಿಸುವಂತೆ ಆದೇಶಿಸಿದೆ.

ಕಪ್ಪುಹಣ ಖಾತೆದಾರರ ಎಲ್ಲಾ ಹೆಸರುಗಳನ್ನು ಬಹಿರಂಗಪಡಿಸ­ಬೇಕು ಎಂದು ಈ ಹಿಂದೆ ಕೋರ್ಟ್‌ ನೀಡಿದ್ದ ಆದೇಶದಲ್ಲಿ ಬದಲಾ­ವಣೆ ಕೋರಿದ್ದ ಎನ್‌ಡಿಎ ಸರ್ಕಾರಕ್ಕೆ  ಮುಖ್ಯ ನ್ಯಾಯ­ಮೂರ್ತಿ ಎಚ್‌.ಎಲ್‌.ದತ್ತು ಅವರ ನೇತೃತ್ವದ ಪೀಠ  ಬಿಸಿ ಮುಟ್ಟಿಸಿದೆ. ‘ಹಿಂದಿನ ಯುಪಿಎ ಸರ್ಕಾರ ಹೆಸರು ಬಹಿರಂಗ­ಗೊಳಿಸಲು ಒಪ್ಪಿಕೊಂಡಿತ್ತು. ವಿದೇಶಗಳಲ್ಲಿ ಅಕ್ರಮ ಬ್ಯಾಂಕ್‌ ಖಾತೆ ಹೊಂದಿರುವವರನ್ನು ರಕ್ಷಿಸಲು ಏಕೆ ಯತ್ನಿಸುತ್ತಿದ್ದೀರಿ?’– ಎಂದು ನ್ಯಾಯ­ಪೀಠ ತರಾಟೆಗೆ ತೆಗೆದುಕೊಂಡಿತು.

‘ಸುಪ್ರೀಂಕೋರ್ಟ್‌ ಈ ಹಿಂದೆ ಮುಕ್ತ ವಿಚಾರಣೆ ವೇಳೆ ಸಾಲಿಸಿಟರ್‌ ಜನರಲ್‌ ಅವರ ಸಮ್ಮುಖದಲ್ಲಿ ಈ ಆದೇಶ ಹೊರ­ಡಿಸಿತ್ತು. ಅಂತಹ ಆದೇಶದಲ್ಲಿ ಬದಲಾ­ವಣೆ  ಕೋರಬಾರದು. ಈ ಹಿಂದಿನ ಆದೇಶವನ್ನು ಒಂದು ಸಾಸಿವೆ ಕಾಳಿ­ನಷ್ಟೂ ಬದಲಾಯಿಸು­ವುದಿಲ್ಲ’ ಎಂದೂ ಸ್ಪಷ್ಟಪಡಿಸಿತು.

‘ಈ ಸಂಬಂಧ ನೀವು (ಸರ್ಕಾರ) ಏನನ್ನೂ ಮಾಡಲು ಮುಂದಾ­ಗಬೇಡಿ. ಎಲ್ಲಾ ಮಾಹಿತಿ­ಗಳನ್ನು ಕೋರ್ಟ್‌ನ ಮುಂದಿಡುವುದಷ್ಟೇ ನಿಮ್ಮ ಕೆಲಸ. ನೀವು ಹೆಸರಿನ ಪಟ್ಟಿ ಕೊಟ್ಟ ನಂತರ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ), ಸಿಬಿಐಗೆ ಅಥವಾ ಬೇರ್‍್ಯಾವುದೇ ಸಂಸ್ಥೆಗೆ ತನಿಖೆ ನಡೆಸಲು ಕೋರ್ಟ್‌ ನಿರ್ದೇಶಿಸಲಿದೆ’ ಎಂದಿತು.

‘ಸರ್ಕಾರವೇ ಸ್ವಯಂಪ್ರೇರಿತವಾಗಿ ಈ ಕುರಿತು ತನಿಖೆಗೆ ಕೈಹಾಕಬಾರದು. ಕಪ್ಪುಹಣವನ್ನು ದೇಶಕ್ಕೆ ವಾಪಸ್‌ ತರುವ ವಿಷಯವನ್ನು ನಾವು ಸರ್ಕಾರಕ್ಕೆ ಬಿಡಲು ಸಾಧ್ಯವಿಲ್ಲ. ಹಾಗೊಮ್ಮೆ ಬಿಟ್ಟರೆ ನಮ್ಮ ಜೀವಿತಾವಧಿಯಲ್ಲಿ ಅದು ಆಗುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು. ‘ನ್ಯಾಯಾಲಯಕ್ಕೆ ಒಬ್ಬರು, ಇಬ್ಬರು, ಮೂರು ಜನರ ಹೆಸರುಗಳ ಪಟ್ಟಿಯ­ನ್ನಷ್ಟೇ ನೀಡಬೇಡಿ. ಇಡೀ ಪಟ್ಟಿಯನ್ನು ಮುಂದಿಡಿ. ನಮಗೆ ಯಾವುದೇ ಭರವಸೆ ನೀಡಬೇಡಿ. ದೇಶದ ಹಣವು ವಿದೇಶ­ಗಳನ್ನು ಸೇರಬಾರದೆಂಬುದೇ ನಮ್ಮ ಉದ್ದೇಶ.

ನಾವು ಇದಕ್ಕಾಗಿ ಎಸ್‌ಐಟಿ ರಚಿಸಿದ್ದೇವೆ. ಸರ್ಕಾ­ರವು ಎಸ್‌ಐಟಿಗೆ ಸಹಕರಿಸಲಿ. ಒಂದು ಪಕ್ಷ ವಿದೇಶಿ ಬ್ಯಾಂಕುಗಳ ಖಾತೆದಾರರು ನಿಜವಾದ ದುಡಿಮೆಯ ಹಣವನ್ನು ಅಲ್ಲಿ ಇರಿಸಿದ್ದರೆ ಆ ಬಗ್ಗೆ ನ್ಯಾಯಾಲಯದ ಮುಂದೆ ವಿವರಣೆ ನೀಡಲಿದ್ದಾರೆ’ ಎಂದು ಪೀಠ ಖಡಕ್ಕಾಗಿ ಹೇಳಿತು.

ಅಟಾರ್ನಿ ಜನರಲ್‌ ವಾದ: ಕಪ್ಪುಹಣ ಖಾತೆ ದಾರರ ಎಲ್ಲ ಹೆಸರುಗಳನ್ನು ಬಹಿರಂಗಗೊಳಿಸಿದರೆ ಅದರಿಂದ ಅಕ್ರಮ ಹಣವನ್ನು ವಾಪಸ್‌ ತರಿಸಿಕೊಳ್ಳುವ ಯತ್ನಕ್ಕೆ ತೊಂದರೆಯಾಗಬಹುದು. ವಿದೇಶಗಳು ಮುಂದೆ ಈ ಸಂಬಂಧ ನಮಗೆ ಮಾಹಿತಿ ನೀಡದೇ ಇರಬಹುದು ಎಂದು ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಸರ್ಕಾರದ ಪರವಾಗಿ ವಾದಿಸಿದರು.

‘ಸುಪ್ರೀಂ ರಚಿಸಿರುವ ಎಸ್‌ಐಟಿ ಶಾಸನಬದ್ಧ ಸಮಿತಿ­ಯಲ್ಲ. ಖಾತೆದಾ­ರರಿಗೆ ನೋಟಿಸ್‌ ನೀಡುವ ಅಧಿಕಾರ ಈ ಸಮಿತಿಗೆ ಇಲ್ಲ. ಆದಾಯ ತೆರಿಗೆ ಇಲಾಖೆಗೆ ಮಾತ್ರ ಹೀಗೆ ನೋಟಿಸ್‌ ನೀಡುವ ಅಧಿಕಾರ ಇದೆ. ಈಗಾಗಲೇ ಸರ್ಕಾರವು ಎಸ್‌ಐಟಿಗೆ ಮಾಹಿತಿ ಸಲ್ಲಿಸಿದೆ ಎಂದರು.

ಕಪ್ಪುಹಣ ಖಾತೆದಾರರ ಮಾಹಿತಿ­ಯನ್ನು ಗೋಪ್ಯ­ವಾಗಿ ಇಡುವುದಾಗಿ ಸರ್ಕಾರವು ವಿದೇಶ­ಗಳಿಗೆ ವಾಗ್ದಾನ ನೀಡಿದೆ. ಒಂದೊಮ್ಮೆ ಸರ್ಕಾರವು ಈಗ ಹೆಸರುಗಳ ಪಟ್ಟಿಯನ್ನು ಕೊಟ್ಟರೆ,  ಮುಂದೆ ಆ ದೇಶಗಳೊಂದಿಗೆ ಮಾಹಿತಿ ವಿನಿಮಯ ಒಪ್ಪಂದ­ಗಳನ್ನು ಮುಂದುವ­ರಿಸುವುದು ಅಥವಾ ಹೊಸ ಒಪ್ಪಂದ­ ಮಾಡಿಕೊಳ್ಳುವುದು ಕಷ್ಟವಾಗ­ಲಿದೆ ಎಂದೂ ಅಟಾರ್ನಿ ಜನರಲ್‌ ಹೇಳಿದರು.

ಎಲ್ಲರ ಹೆಸರುಗಳನ್ನೂ ಬಹಿರಂಗಪಡಿ­ಸಿದರೆ ವಿದೇಶಗಳ ಬ್ಯಾಂಕುಗಳಲ್ಲಿ ಸಕ್ರಮ ಖಾತೆ ಹೊಂದಿ­ರುವವರ ಖಾಸಗಿ­ತನದ ಹಕ್ಕನ್ನು ಉಲ್ಲಂಘಿಸಿದಂತೆ ಆಗುತ್ತದೆ. ಹೀಗಾಗಿ ತೆರಿಗೆ ವಂಚನೆ ಮೇಲ್ನೋಟಕ್ಕೆ ನಿಜವೆಂದು ಕಂಡುಬಂದ ಪ್ರಕರಣಗಳಲ್ಲಿ ಮಾತ್ರ ಹೆಸರು ಬಹಿ­ರಂಗ ಮಾಡಲಾಗುವುದು ಎಂಬ ಅವರ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ.

ದೆಹಲಿ ಸರ್ಕಾರ: ಕೇಂದ್ರಕ್ಕೆ ತಪರಾಕಿ
ನವದೆಹಲಿ (ಪಿಟಿಐ):  ದೆಹಲಿ ಸರ್ಕಾರ ರಚನೆಗೆ ಸಂಬಂಧಿಸಿದ ಪ್ರಕ್ರಿಯೆ ಚುರುಕುಗೊಳಿಸುವಂತೆ ಸುಪ್ರೀಂ­ಕೋರ್ಟ್‌ ಕೇಂದ್ರ ಸರ್ಕಾರವನ್ನು  ತರಾಟೆಗೆ ತೆಗೆದುಕೊಂಡಿದೆ. ದೆಹಲಿ ವಿಧಾನಸಭೆ ವಿಸರ್ಜಿಸುವಂತೆ ಕೋರಿ ಆಮ್‌ ಆದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎಚ್‌. ಎಲ್‌. ದತ್ತು ನೇತೃತ್ವದ ಐವರು ನ್ಯಾಯ­ಮೂರ್ತಿಗಳ ಪೀಠವು, ಸರ್ಕಾರ ರಚನೆಗೆ ಸಂಬಂಧಿಸಿ ಐದು ತಿಂಗಳ ಕಾಲ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇರುವುದಕ್ಕೆ ಕೇಂದ್ರ ಸರ್ಕಾರ ಹಾಗೂ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಸರ್ಕಾರ ರಚನೆಗೆ ಬಿಜೆಪಿಯನ್ನು ಆಹ್ವಾನಿಸುವ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಅವರ ಪ್ರಸ್ತಾಪಕ್ಕೆ ರಾಷ್ಟ್ರಪತಿ ಒಪ್ಪಿಗೆ ಸೂಚಿಸಿದ್ದಾರೆ ಎಂಬ ವಿಚಾರವನ್ನು ಕೇಂದ್ರ ಸರ್ಕಾರ ಕೋರ್ಟ್‌ಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT