ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಜ್ರಿವಾಲ್‌ಗೆ ಕೋರ್ಟ್ ಎಚ್ಚರಿಕೆ

Last Updated 19 ಏಪ್ರಿಲ್ 2014, 10:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನ್ಯಾಯಾಲಯದ ಮುಂದೆ ಮೇ 24ರೊಳಗೆ ಖುದ್ದು ಹಾಜರಾಗದಿದ್ದರೆ ನಿಮ್ಮ ವಿರುದ್ಧ `ಬಲಪ್ರಯೋಗದ ಪ್ರಕ್ರಿಯೆ'ಗೆ ಮುಂದಾಗಬೇಕಾಗುತ್ತದೆ ಎಂದು ಸ್ಥಳೀಯ ನ್ಯಾಯಾಲಯವೊಂದು ಆಮ್‌ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಇತರ ಮೂವರು ನಾಯಕರಿಗೆ ಶನಿವಾರ ಎಚ್ಚರಿಕೆ ನೀಡಿದೆ.

ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರ ಪುತ್ರ ವಕೀಲ ಅಮಿತ್ ಸಿಬಲ್ ಅವರು ಹೂಡಿರುವ ಮಾನನಷ್ಟ ಪ್ರಕರಣ ಇದಾಗಿದೆ.

ನ್ಯಾಯಾಲಯದೆದುರು ಶನಿವಾರ ಪ್ರಕರಣದ ವಿಚಾರಣೆಗೆ ಹಾಜರಾದ ಕೇಜ್ರಿವಾಲ್ ಪರ ವಕೀಲ ರಾಹುಲ್ ಮೆಹ್ರಾ ಅವರಿಗೆ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಸುನಿಲ್ ಕುಮಾರ್ ಶರ್ಮಾ ಅವರು ಆರೋಪಿಗಳಾದ ಕ್ರೇಜಿವಾಲ್, ಮನಿಷ್ ಸಿಸೋಡಿಯಾ, ಪ್ರಶಾಂತ್ ಭೂಷಣ್ ಮತ್ತು ಶಾಜಿಯಾ ಇಲ್ಮಿ ಅವರು ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯದೆದುರು ಹಾಜರಾಗಬೇಕೆಂದು ತಾಕೀತು ಮಾಡಿದರು.

`ಮುಂದಿನ ದಿನಾಂಕದಂದು (ವಿಚಾರಣೆಗೆ) ಪ್ರತಿಯೊಬ್ಬರು ಹಾಜರಿರುತ್ತಾರೆ ಎಂಬ ಭರವಸೆ ನೀಡಬೇಕು. ಒಂದೊಮ್ಮೆ ಅವರು ಹಾಜರಾಗದಿದ್ದರೆ ಅವರ ವಿರುದ್ಧ `ಬಲಪ್ರಯೋಗದ ಪ್ರಕ್ರಿಯೆ' ಕೈಗೊಳ್ಳುತ್ತೇನೆ' ಎಂದು ಮೆಹ್ರಾ ಅವರಿಗೆ ತಿಳಿಸಿದ ಶರ್ಮಾ ಅವರು ಮುಂದಿನ ವಿಚಾರಣೆಯನ್ನು ಮೇ24ಕ್ಕೆ ನಿಗದಿಪಡಿಸಿದರು.

ಇದೇ ವೇಳೆ ನ್ಯಾಯಾಲಯವು ಶನಿವಾರದ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಬಯಸಿದ್ದ ಸಿಸೋಡಿಯಾ, ಭೂಷಣ್ ಮತ್ತು ಇಲ್ಮಿ ಅವರಿಗೆ ತಲಾ ರೂ.2500 ಕೋರ್ಟ್ ವೆಚ್ಚ ಭರಿಸುವಂತೆ ಹೇಳಿದೆ.

ಅದಾಗ್ಯೂ, ನ್ಯಾಯಾಲಯವು ಕೇಜ್ರಿವಾಲ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಅವರ ಖುದ್ದು ಹಾಜರಾತಿ ವಿನಾಯಿತಿ ಮನವಿಯನ್ನು ಮನ್ನಿಸಿ ಅವರಿಗೆ ಯಾವುದೇ ವೆಚ್ಚ ಭರಿಸಲು ಹೇಳಲಿಲ್ಲ.

ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ವರು ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT