ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡೆ ಹಿಡಿದು ನಡೆ!

Last Updated 1 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಬೆನ್ನಿಗಂಟಿಕೊಂಡ ಹೊಟ್ಟೆ, ಮೊಗದಲ್ಲಿ ದಟ್ಟವಲ್ಲದ ಬಿಳಿಗಡ್ಡ, ತಲೆಗೆ ಗಾಂಧಿ ಟೋಪಿ, ಮೊಣಕಾಲುದ್ದದ ಬಿಳಿ ಜುಬ್ಬ, ಮದುವೆಯಲ್ಲೋ–ಮುಂಜಿಯಲ್ಲೋ ಹೊಲಿಸಿ ಈಗ ನವೆದು, ಅಲ್ಲಲ್ಲಿ ತೇಪೆ ಹಾಕಿದ ದೊಗಲೆ ಪ್ಯಾಂಟಿನ ಕುದ್ದೂಸ್ ಸಾಹೇಬರು ಲಡಕಾಸಿ ಸೈಕಲ್ಲು ದೂಡುತ್ತ ನಮ್ಮೂರ ಹಾದಿಯಲ್ಲಿ ಕಾಣುತ್ತಿದ್ದುದು ಮಳೆಗಾಲದ ಆರಂಭಕ್ಕೂ ಕೆಲವು ದಿನಗಳ ಮುಂಚೆ.

‘ಕೊಡೆ ಕೊಡೆ....ಹಳೇ ಕೊಡೆ ರಿಪೇರಿ...ಹಳೇ ಕೊಡೆ ರಿಪೇರಿ...ರಿ...’ ಎಂದು ಸೈಕಲ್ಲಿನ ಬೆಲ್ಲು ಹೊಡೆಯುತ್ತ ಒಂದೇ ಉಸಿರಿನಲ್ಲಿ ಜೀಕುತ್ತಿದ್ದ ಮುದಿ ಜೀವ. ಸೈಕಲ್ಲಿನ ಕ್ಯಾರಿಯರಿನಲ್ಲಿ ಒಂದಿಷ್ಟು ಗಂಟು– ಅದರಲ್ಲಿ ಹತಾರಗಳು. ಆ ಹತಾರಗಳೇ ಮಳೆಗಾಲದಲ್ಲಿ ಅವರ ಬದುಕಿಗೆ ಅನ್ನ ನೀಡುತ್ತಿದ್ದ ಅಸ್ತ್ರಗಳು.

ಅವು ಕೊಡೆ ರಿಪೇರಿ ಸಲಕರಣೆಗಳು. ಡೊಂಕಾದ ಕಡ್ಡಿಯನ್ನು ಲಟ್ಟನೆ ನೆಟ್ಟಗೆ ಮಾಡುತ್ತಿದ್ದರು ಇಲ್ಲವೆ ಹೊಸದನ್ನು ಬಟ್ಟೆಯೊಳಗೆ ತೂರಿಸುತ್ತಿದ್ದರು. ಕೊಡೆಯ ಕಪ್ಪು ಬಟ್ಟೆ ಹರಿದಿದ್ದರೆ ನೀಟಾಗಿ ಹೊಲಿಯುವುದು, ತೂತುಗಳನ್ನು ಮುಚ್ಚುವುದು...ಹೀಗೆ ಕೊಡೆಯ ಯಾವುದೇ ರೀತಿಯ ರಿಪೇರಿ ಅವರಿಗೆ ಸಿದ್ಧಿಸಿತ್ತು. ಅವರ ಕೊಡೆ ಚಿಕಿತ್ಸೆಗೆ ನಿಲುಕದ ಮನೆಗಳು ನಮ್ಮೂರಲ್ಲಿ ಇರಲಿಕ್ಕಿಲ್ಲ.

ಹೌದು, ಮಳೆಗಾಲದ ಮುಹೂರ್ತ ಆರಂಭವಾಗುತ್ತದೆ ಎನ್ನುವಾಗ ಅಗತ್ಯ ವಸ್ತುಗಳ ಶೇಖರಣೆ, ಹಳೆಯ ಹೆಂಚುಗಳ ಮೇಲೆ ಕೈಯಾಡಿಸುವುದು, ಮನೆಯ ಮಹಡುಗಳನ್ನು ಸರಿ ಪಡಿಸುವುದು, ಸೌದೆ ಸರಂಜಾಮುಗಳಿಗೆ ಶೀತ ತಟ್ಟದಂತೆ ಕಾಪಾಡುವುದು ಇತ್ಯಾದಿ ಕೆಲಸಗಳ ಜತೆಗೆ ಕೊಡೆಗಳನ್ನೂ ಒಪ್ಪವಾಗಿಡುವುದು ರೂಢಿ. ಕಳೆದ ಮಳೆಗಾಲದಲ್ಲಿ ಗಾಳಿಮಳೆಗೆ ಸಿಲುಕಿ ಡೊಂಕಾದ ಕಡ್ಡಿಯನ್ನು ಸರಿಪಡಿಸಬೇಕು. ಕೊಡೆಕಡ್ಡಿಗಳನ್ನು ನೇರ್ಪು ಮಾಡಬೇಕು.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಪ್ರತಿ ಮಳೆಗಾಲಕ್ಕೂ ಹೊಸ ಕೊಡೆಗಳನ್ನೇನೂ ಖರೀದಿಸುವುದಿಲ್ಲ. ಗೂಟದಲ್ಲಿದ್ದ ನೇತಾಡುತ್ತಿದ್ದ ಹಳೆಯ ಕೊಡೆಗಳಿಗೆ ತೇಪೆ ಹಾಕಿಸುವುದೇ ರೂಢಿ. ನಮ್ಮೂರ ಕುದ್ದೂಸ್ ಸಾಹೇಬರಂಥ ಕೊಡೆ ವೈದ್ಯರಿಗೆ ಅವರ ಅಪ್ಪ–ಅಜ್ಜಂದಿರು ಕಲಿಸಿಕೊಟ್ಟ ವಂಶಪಾರಂಪರ್ಯ ಕಸುಬು ಇದು. ಅಜ್ಜಂದಿರು ಊರುಗೋಲಿನಂತೆ ಬಳಸುವ ಅಜ್ಜನ ಕೊಡೆಗೆ ಮಳೆ–ಬೇಸಿಗೆ–ಚಳಿ ಎನ್ನುವ ಕಾಲದ ಭೇದವಿಲ್ಲ.

ಹಳ್ಳಿ ಮನೆಗಳಲ್ಲಿ ಈಗ ಎರಡು ಮೂರು ಕೊಡೆಗಳನ್ನು ಕಾಣಬಹುದು. ಆದರೆ ಒಂದು ದಶಕದ ಹಿಂದಕ್ಕೆ ನೋಡಿದರೆ ಮನೆಗೊಂದೇ ಕೊಡೆ ಇರುತ್ತಿದ್ದುದು. ಇದೆಲ್ಲ ಹಳ್ಳಿಗಳಲ್ಲಿನ ಕೊಡೆ ಪರ್ವದ ಬಗೆಗಿನ ಮಾತಾಯಿತು. ಹಳ್ಳಿ ಕೊಡೆ ಚಿತ್ರಣಗಳ ಬಗ್ಗೆ ಬಿಡು ಬೀಸಾದ ಮಳೆಯಂಥ ಪದಗಳನ್ನೇ ಇಲ್ಲಿ ಸುರಿಸಬಹುದಿತ್ತು. ಆ ಮಾತು ಈಗ ಬೇಡ.

ಬನ್ನಿ...ನಗರದೊಳಗೆ ಒಮ್ಮೆ ಸುತ್ತಿ ಬರೋಣ; ಅದೂ ಅಕಾಲಿಕ ಮಳೆಗಾಲದಲ್ಲಿ, ಬಣ್ಣ ಬಣ್ಣದ ವಿವಿಧ ಆಕಾರ–ಆಕರ್ಷಣೆಯ ಕೊಡೆಗಳ ಅಂದವನ್ನು ಕಾಣುತ್ತ. ಇಲ್ಲಿ ಕಪ್ಪು ಕೊಡೆಗಳು ಹೆಚ್ಚಾಗಿ ಕಾಣಿಸುವುದಿಲ್ಲ. ನಗರದ ಬಣ್ಣದ ನಾಗರಿಕತೆಯಂತೆ–ಥಳುಕು ಬಳುಕಿನಂತೆ ಛತ್ರಿಗಳ ವರ್ಣ–ವಿನ್ಯಾಸ. ಗಾಂಧಿ ಬಜಾರಿನಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರರನ್ನು ಕಂಡು ಕೆ.ಎಸ್. ನಿಸಾರ್ ಅಹ್ಮದ್ ಅವರು, 

‘ಅದೇ ಕೊಡೆಯ ಗದೆ: ಬೆದರಿಸಲು ಭಿಕ್ಷುಕರ ಹುಡುಗರನ್ನ,
ಬೀದಿಕುನ್ನಿಯ, ಪೋಲಿ ದನಗಳನ್ನ,
ಎದುರಿಸಲು ಮಳೆ ಬಿಸಿಲ ದಾಳಿಯನ್ನ,
ಸಾಲುವೃಕ್ಷದ ಹಕ್ಕಿಹಿಕ್ಕೆಯನ್ನ’ 

ಎಂದು ಬರೆದಿದ್ದರು. ಅಂತೆಯೇ ಬೀದಿ ಕುನ್ನಿಗಳನ್ನು, ಪೋಲಿ ದನಗಳನ್ನು ಓಡಿಸಲು ನಗರದಲ್ಲಿ ಈಗ ಕೊಡೆಯ ಅಗತ್ಯವಿಲ್ಲ, ಬಿಸಿಲನ್ನು ಸಹ. ಮಳೆಗಾಲದಲ್ಲಿ ಮಾತ್ರ ಮುದುಡಿಕೊಂಡ ಕೊಡೆಗಳು ಮೈ ಹರಡಿಕೊಳ್ಳುತ್ತವೆ. ಹೆಚ್ಚೆಂದರೆ ಸುಡು ಬೇಸಿಗೆಯಲ್ಲಿ ಅವು ತೆರೆದುಕೊಂಡಾವು. ಸುಡು ಬೇಸಿಗೆಯಲ್ಲಿ ಕೊಡೆ ಹಿಡಿಯುವವರಲ್ಲಿ ಅಜ್ಜ–ಅಜ್ಜಿಯರಿಗಿಂತ ಪ್ರಾಯದ ರಮಣಿಯರೇ ಹೆಚ್ಚು!

ಬಣ್ಣ ಮಾಸುತ್ತದೆ–ಸೂರ್ಯ ತನ್ನ ಶಾಖದ ಮೈಯನ್ನು ತಮ್ಮ ಮುಖಕ್ಕೆ ತಾಗಿಸಿ–ಕಚ್ಚಿ–ಚುಚ್ಚಿ ಕಪ್ಪುಗೊಳಿಸಿಯಾನು ಎಂಬ ಭಯ ಅವರಲ್ಲಿ! ನಗರದ ಜನಸಂಖ್ಯೆಗೆ ಹೋಲಿಸಿದರೆ ಕೊಡೆಗಳೂ ಕಡಿಮೆಯೇ. ಕೊಡೆಗಳ ಜಾಗವನ್ನು ರೈನ್‌ಕೋಟ್‌ಗಳು ಆಕ್ರಮಿಸಿವೆ. ಆದರೂ ಕೊಡೆಗಳೇನೂ ಕಿಮ್ಮತ್ತು ಕಳೆದುಕೊಂಡಿಲ್ಲ–ಕಳೆದುಕೊಳ್ಳುವುದೂ ಇಲ್ಲ. ಏಕೆಂದರೆ ಅವು ಮನೆಗೆ ಅಗತ್ಯವಿರುವ ವಸ್ತುವಿನಂತೆ. ಅಜ್ಜನ ಕೊಡೆಯದ್ದೇ ಒಂದು ಗಮ್ಮತ್ತು. ಬಾಲ್ಯದಲ್ಲಿ ಈ ಕೊಡೆಗಳು ಅದೆಷ್ಟೋ ನೆನಪುಗಳನ್ನು ಕೂಡಿಸಿಕೊಟ್ಟಿವೆ.

ಬದಲಾದ ಬಣ್ಣ–ಮೈ ಕಟ್ಟು
ಈಗ್ಗೆ ದಶಕದ ಹಿಂದೆ ಕಾಣುತ್ತಿದ್ದುದು ಕಪ್ಪನೆಯ ಹೊದಿಕೆಯ ‘ಜೆ’ ಆಕಾರದ ಹಿಡಿಕೆಯ ಕೊಡೆ. ಹಳ್ಳಿ–ಪಟ್ಟಣ ಎನ್ನದೆ ಎಲ್ಲ ಕಡೆಯೂ ಕಾಣಿಸುತ್ತಿದ್ದ ಇದರ ಉದ್ದವೇ ಒಂದು ಮೊಳ. ನಂತರದ ದಿನಗಳಲ್ಲಿ ಬೆಂಗಳೂರೆಂಬ ಬಣ್ಣದ ನಗರಿಯಲ್ಲಿ ಬಣ್ಣದ ಕೊಡೆಗಳ ಭರಾಟೆ ಶುರುವಾಯಿತು.

ಬೆಂಗಳೂರಿನಿಂದ ಹಳ್ಳಿ ಹಳ್ಳಿಗಳಿಗೂ ನವನವೀನ ಕೊಡೆಗಳು ರಫ್ತಾಗಿ, ಕಪ್ಪುಕೊಡೆಗಳ ಕಣ್ಮರೆಗೆ ಕಾರಣವಾಯಿತು. ಆದರೀಗ ಮತ್ತೆ ಈ ಕೊಡೆ ಪುಟಿಯುತ್ತಿದೆ. ಸಿಗ್ನಲ್‌ಗಳಲ್ಲಿ ಕುದ್ದೂಸರ ಮೊಮ್ಮಕ್ಕಳೇನೋ ಎನ್ನುವಂತೆ ‘ಎಪ್ಪತ್ತು ರೂಪಾಯಿ... ಎಪ್ಪತ್ತು ರೂಪಾಯಿ ಒಳ್ಳೆಯ ಮಾಲು...’ ಎಂದು ಕೊಡೆಯನ್ನು ಅಗಲಿಸಿ ಚೌಕಾಸಿ ಮಾಡುತ್ತಿರುವವರ ಕೈಯಲ್ಲಿರುವವು ಅವೇ ಹಳೆಯ ‘ಜೆ’ ಆಕಾರದ ಹಿಡಿಕೆಯ ಅಗಲದ ಕೊಡೆಗಳು. ಬಣ್ಣ ಮಾತ್ರ ಬದಲಾಗಿದೆ. ಛತ್ರಿಗಳ ಆಕಾರದಲ್ಲಿ ವಿಚಿತ್ರ ಎನ್ನುವಷ್ಟು ಬದಲಾವಣೆಗಳೇ ಆಗಿವೆ.

ಒಂದು ಫೋಲ್ಡ್‌ ಇದ್ದುದು ನಂತರದಲ್ಲಿ ಟೂ, ಥ್ರೀ ಫೋಲ್ಡ್‌ಗಳಾಗಿ ಬದಲಾಗಿದೆ. ಜೇಬಿನಲ್ಲಿಟ್ಟುಕೊಂಡು ಹೋಗಬಹುದಾದ ಕೊಡೆಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಕೊಡೆ ಕಿರಿದಾದಷ್ಟೂ ಆರಾಮದಾಯಕ. ಜನಜಂಗುಳಿ ಜಾತ್ರೆಯ ನಗರದೊಳಗೆ ಒಂದಕ್ಕೊಂದು ತಾಗಬಾರದು ಅಲ್ಲವೇ! ಅಗಲಿಸಿದಂತೆ ಕಿರಿದಾಗುವ ಎರಡು– ಮೂರು ಹಂತಗಳ ಕೊಡೆಯೂ ನಗರದ ಮಳೆಯ ಸಿಂಚನಕ್ಕೆ ಮೈಯೊಡ್ಡುತ್ತಿದೆ.

ಕಣ್ಣಳತೆಗೊಂದು ಸಿಗುತ್ತಿದ್ದ ಕೊಡೆ ಅಂಗಡಿಗಳು ಕಾಲಳತೆಗೆ ನಿಲುಕುತ್ತಿವೆ. ಬೀದಿ ಬದಿಯ ವ್ಯಾಪಾರಿಗಳು ಕೊಡೆಯನ್ನು ಹೆಚ್ಚು ಮನೆಗಳಿಗೆ ತಲುಪಿಸುವ ವಾಹಕರು. ಹಿರೀಕರದ್ದು ದೊಡ್ಡ ಕೊಡೆಯಾದರೆ, ಪುಟಾಣಿಗಳದ್ದು ‘ಬೇಬಿ ಕೊಡೆ’. ಇವುಗಳದ್ದೂ ಭರ್ಜರಿ ಅಂದ. ಮಕ್ಕಳಿಗೆ ಬಣ್ಣ ಬಣ್ಣದ ಪೆಪ್ಪರ್‌ಮಿಂಟ್‌ಗಳು ಇಷ್ಟವಾದಂತೆ ಪುಟ್ಟ ಪುಟ್ಟ ಕೊಡೆಗಳು ಕೈ ಬೀಸುತ್ತವೆ. ಈ ಆಕರ್ಷಕ ಕೊಡೆಗಳು ಅವರಿಗೆ ಸ್ವತಂತ್ರವಾಗಿ ಮಳೆಯೊಳಗೆ ನಡೆಯವ ಶಕ್ತಿಯನ್ನು ನೀಡಿವೆ. ದೊಡ್ಡ ಕೊಡೆಗಳಡಿ ಇಬ್ಬರು ಮೂವರು ಆಶ್ರಯ ಪಡೆದು ಸಾಗುತ್ತಿದ್ದರು. ಈಗ ಫ್ಯಾಷನ್‌ ಕೊಡೆಗಳಡಿಯಲ್ಲಿ ಒಬ್ಬೊಬ್ಬರೇ. ಅವಿಭಕ್ತ ಕುಟುಂಬಗಳು ಕಳಚಿ ವಿಭಕ್ತ ಕುಟುಂಬಗಳಾದವು  ಎನ್ನುವುದಕ್ಕೆ ಈ ಬೆಳವಣಿಗೆಯನ್ನು ರೂಪಕವಾಗಿಯೂ ನೋಡಬಹುದು. 

ಅನುಭೂತಿಯ ಆಹ್ಲಾದ
ಮಳೆ ಹೊಯ್ಯುತ್ತಿರುತ್ತದೆ. ಪುಟ್ಟ ಕೊಡೆಯೊಳಗೆ ಎರಡು ಜೀವಗಳು ‘ಮೆಲ್ಲುಸಿರೇ ಸವಿಗಾನ...’ ಎನ್ನುವಂತೆ ಕೂಡಿ ಹೆಜ್ಜೆಯಾಕುತ್ತಿರುತ್ತವೆ. ಒಂದು ಕೈಯಲ್ಲಿ ಕೊಡೆ, ಮತ್ತೊಂದು ಕೈಯಿಂದ ಪ್ರೇಯಸಿಯ ತೋಳು ಬಳಸಿರುವ ಪ್ರಿಯಕರ. ಇದು ಸಿನಿಮಾಗಳಲ್ಲಿ ಕಾಣುವ ಚಿತ್ರಣಗಳು. ಇಂಥ ಮಧುರ ಕ್ಷಣಗಳನ್ನು ಬೆಂಗಳೂರು ಮಹಾನಗರಿಯ ರಸ್ತೆಗಳ ಮೇಲೂ ನೋಡಬಹುದು. ಲಾಲ್‌ಬಾಗ್‌ನ ಬಣ್ಣದ ಹೂ ಪಕಳೆಗಳಂತೆ, ಸ್ಯಾಂಕಿ ಟ್ಯಾಂಕ್ ಕೆರೆಯ ಆವರಣದ  ಕೊಕ್ಕರೆಗಳಂತೆ, ಏರುಜವ್ವನೆಯರು ಎದೆಯುಬ್ಬಿಸಿ ಸಾಗಿದಂತೆ ಬಣ್ಣ ಬಣ್ಣದಲ್ಲಿ ಮೈ ಹರಡಿಕೊಂಡ ಕೊಡೆಗಳನ್ನು ನಗರದ ಮಳೆಗಾಲದಲ್ಲಿ ನೋಡುವುದೇ ಚೆಂದ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT