ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳವೆಬಾವಿ ಬಳಕೆ: ಎಲ್ಲ ಮನೆಗೂ ಶುಲ್ಕ

ಒಳಚರಂಡಿ ನಿರ್ವಹಣೆ ವೆಚ್ಚ ಸರಿದೂಗಿಸಲು ಜಲಮಂಡಳಿ ಕ್ರಮ * ಬಳಕೆದಾರರ ಆಕ್ರೋಶ
Last Updated 13 ಫೆಬ್ರುವರಿ 2016, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೊಳವೆಬಾವಿ ಬಳಸುತ್ತಿರುವ ನಿವೇಶನದಲ್ಲಿರುವ ಎಲ್ಲ ಮನೆಗಳಿಗೆ ‘ಕೊಳವೆಬಾವಿ ಶುಲ್ಕ’ ವಿಧಿಸಲು ಜಲಮಂಡಳಿ ಆರಂಭಿಸಿದೆ.

ಈವರೆಗೆ ನಿವೇಶನದ ಮಾಲೀಕರು ಮಾತ್ರ ಪ್ರತಿ ತಿಂಗಳು ₹100 ಕೊಳವೆಬಾವಿ ಶುಲ್ಕ ಪಾವತಿಸಬೇಕಿತ್ತು. ಈಗ ನಿವೇಶನದಲ್ಲಿರುವ ಎಲ್ಲ ಮನೆಯವರು ತಲಾ ₹100 ಶುಲ್ಕ ಪಾವತಿಸಬೇಕಿದೆ. ಜನವರಿ ತಿಂಗಳ ನೀರಿನ ಬಿಲ್‌ನಲ್ಲೇ ಈ ಶುಲ್ಕ ಸೇರಿಸಲಾಗಿದೆ. ಜಲಮಂಡಳಿಯ ನಡೆಗೆ ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ನಗರದಲ್ಲಿ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆಯ 2.20 ಲಕ್ಷ ಕೊಳವೆಬಾವಿಗಳು ಇವೆ ಎಂದು ಅಂದಾಜಿಸಲಾಗಿದೆ. ನಗರದ ಶೇ 60 ಕುಟುಂಬಗಳು ಈಗಲೂ ಕೊಳವೆಬಾವಿ  ನೀರನ್ನೇ ಅವಲಂಬಿಸಿವೆ ಎಂದು ಜಲ ತಜ್ಞರು ಹೇಳುತ್ತಾರೆ.

ಮನೆಯವರು ಉಪಯೋಗಿಸಿದ ನೀರನ್ನು ಜಲಮಂಡಳಿಯ ಒಳಚರಂಡಿ ಮಾರ್ಗಗಳಿಗೆ ಬಿಡುತ್ತಿದ್ದಾರೆ. ಕೊಳಚೆ ನೀರಿನ ಸಂಸ್ಕರಣೆಗೆ ಜಲಮಂಡಳಿ ದೊಡ್ಡ  ಮೊತ್ತ ವೆಚ್ಚ ಮಾಡುತ್ತಿದೆ. ಇದರಿಂದ ಮಂಡಳಿಗೆ ಹೊರೆಯಾಗುತ್ತಿದೆ. ಇನ್ನೊಂದೆಡೆ ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡುತ್ತಿಲ್ಲ ಎಂಬ ಆರೋಪ ಎದುರಿಸಬೇಕಿದೆ. ಹೀಗಾಗಿ ಮಂಡಳಿಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ಜಲಮಂಡಳಿಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

‘ಟಿ.ಎಂ. ವಿಜಯಭಾಸ್ಕರ್‌ ಅವರು ಜಲಮಂಡಳಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಮರೋಪಾದಿಯಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಾಗುತ್ತಿದೆ.  ಎರಡು ತಿಂಗಳ ಹಿಂದೆ ರಾಮಮೂರ್ತಿನಗರದಲ್ಲಿ ತಪಾಸಣೆ ನಡೆಸಲಾಯಿತು. 1200 ಚದರ ಅಡಿಯ ನಿವೇಶನದಲ್ಲಿ 20 ಮನೆಗಳು ಇರುವುದು ಕಂಡು ಬಂತು. ಅಲ್ಲಿನ ಮನೆಗಳಲ್ಲಿ ಪ್ರತಿ ತಿಂಗಳು ಸಾವಿರಾರು ಲೀಟರ್‌ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಆದರೆ, ಮಂಡಳಿಗೆ ಬರುತ್ತಿರುವ ಶುಲ್ಕ ₹100 ಮಾತ್ರ. ಇಂತಹ ಹಲವಾರು ಉದಾಹರಣೆಗಳು ಇವೆ. ಹೀಗಾಗಿ ಎಲ್ಲ ಮನೆಗಳಿಗೂ ಶುಲ್ಕ ವಿಧಿಸಲು ನಿರ್ಧರಿಸಲಾಯಿತು’ ಎಂದು ಅವರು ತಿಳಿಸಿದರು.

‘ಎಲ್ಲ ಮನೆಗಳಿಗೂ ಕೊಳವೆಬಾವಿ ಶುಲ್ಕ ವಿಧಿಸಬೇಕು ಎಂಬ ನಿಯಮ 2012ರಿಂದಲೂ ಇದೆ. ವಾಣಿಜ್ಯ ಬಳಕೆದಾರರಿಗೆ ಮಾತ್ರ ಈವರೆಗೆ ವಿಧಿಸಲಾಗು
ತ್ತಿತ್ತು. ಈಗ ಎಲ್ಲರಿಗೂ ವಿಧಿಸಲಾಗುತ್ತಿದೆ. ಇದರಿಂದ ಮಂಡಳಿಗೆ ₹3 ಕೋಟಿ ಹೆಚ್ಚುವರಿ ಆದಾಯ ಬರುವ  ನಿರೀಕ್ಷೆ ಇದೆ’ ಎಂದು ಜಲಮಂಡಳಿಯ ಕಾರ್ಯ
ನಿರ್ವಾಹಕ ಎಂಜಿನಿಯರ್‌ (ಆದಾಯ) ನರಹರಿ ‘ಪ್ರಜಾವಾಣಿ’ಗೆ ತಿಳಿಸಿದರು.

ನಿವಾಸಿಗಳ ಆಕ್ರೋಶ:  ‘ನನ್ನದು 1200 ಚದರ ಅಡಿ ವಿಸ್ತೀರ್ಣದ ನಿವೇಶನ. ನಿವೇಶನದಲ್ಲಿ ನಾಲ್ಕು ಮನೆಗಳಿವೆ. ಈ ತಿಂಗಳು ನೀರಿನ ಬಿಲ್‌ ₹300 ಹೆಚ್ಚಾಗಿದೆ. ಇದನ್ನು ನೋಡಿ ಆಘಾತ ಉಂಟಾಯಿತು. ಯಾವುದೇ ಮಾಹಿತಿ ನೀಡದೆ ಶುಲ್ಕ ವಿಧಿಸಿದ್ದು ಅಕ್ಷಮ್ಯ. ಮಂಡಳಿ ನೀರಿನ ಬಳಕೆದಾರರ ಸುಲಿಗೆಗೆ ಮುಂದಾಗಿದೆ’ ಎಂದು ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಸುಧೀಂದ್ರ ರಾವ್‌ ಆಕ್ರೋಶ ವ್ಯಕ್ತಪಡಿಸಿದರು.

‘ಮಂಡಳಿ ಸರಿಯಾಗಿ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ನೀರಿನ ಸೋರಿಕೆ ತಡೆಗಟ್ಟುವ ಕೆಲಸವನ್ನೂ ಮಾಡುತ್ತಿಲ್ಲ. ನಾವೆಲ್ಲ ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದೇವೆ. ಅದಕ್ಕೂ ಶುಲ್ಕ ವಿಧಿಸುವ ಮೂಲಕ ಗ್ರಾಹಕರಿಗೆ ಶಾಕ್‌ ನೀಡಿದೆ’ ಎಂದು ಬಸವೇಶ್ವರನಗರದ ನಿವಾಸಿ ಜನಾರ್ದನ್‌ ಹೇಳಿದರು.

ಗಡುವು ನೀಡಿದರೂ 93 ಸಾವಿರ ಮಾತ್ರ ನೋಂದಣಿ

ನಗರದಲ್ಲಿರುವ 93 ಸಾವಿರ ಕೊಳವೆಬಾವಿಗಳು ಮಾತ್ರ ಜಲಮಂಡಳಿಯಲ್ಲಿ ನೋಂದಣಿಯಾಗಿವೆ.

ನಗರ ವ್ಯಾಪ್ತಿಯಲ್ಲಿನ ಕೊಳವೆ­ಬಾವಿಗಳನ್ನು ಕಡ್ಡಾಯ­ವಾಗಿ ನೋಂದಣಿ ಮಾಡಿಸಿ­ಕೊಳ್ಳ­ಬೇಕು ಎಂದು ಜಲಮಂಡಳಿ ವರ್ಷಗಳ ಹಿಂದೆ ಸೂಚಿಸಿತ್ತು.
‘ನೋಂದಣಿ ಮಾಡಿಕೊಳ್ಳದಿದ್ದರೆ ₹10 ಸಾವಿರ ದಂಡ ಹಾಗೂ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶ ಇದೆ. ನೋಂದಣಿಗೆ ಹಲವು ಬಾರಿ ಗಡುವು ನೀಡಿದರೂ ಜನರು ಹೆಚ್ಚಿನ ಆಸಕ್ತಿ ತೋರಲಿಲ್ಲ’ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT