ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳೆಯುತ್ತ ಬಿದ್ದಿದೆ ಭೈರಪ್ಪ ಮರಳಿಸಿದ ಹಣ

Last Updated 30 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಕಲಿಯುವ ಕಂದಮ್ಮಗಳಿಗೆ ಕೊಡಿ’ ಎಂದು ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಸರ್ಕಾರಕ್ಕೆ ಹಿಂದಿರುಗಿಸಿದ ರೂ. 5 ಲಕ್ಷದಷ್ಟು ಮೊತ್ತ ಮೂರು ವರ್ಷಗಳಿಂದ ಕೊಳೆಯುತ್ತ ಬಿದ್ದಿದೆ. ಆ ಹಣ ಬಳಸಿಕೊಂಡು ಏನು ಮಾಡಬಹುದು ಎಂಬ ಬಗ್ಗೆ ಅಧಿಕಾರಿಗಳು ಭೈರಪ್ಪ ಅವರ ಜತೆ ಕೊನೆಯ ಪಕ್ಷ ಚರ್ಚೆಯನ್ನೂ ಮಾಡಿಲ್ಲ.

‘ಭೈರಪ್ಪ ಹಿಂದಿರುಗಿಸಿದ ರೂ. 5 ಲಕ್ಷ ತುಂಬಾ ಕಡಿಮೆ ಮೊತ್ತ. ಅದರಲ್ಲಿ ಏನೂ ಮಾಡಲಾಗದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ! ಭೈರಪ್ಪ ಅವರ ‘ಮಂದ್ರ’ ಕಾದಂಬರಿಗೆ ‘ಸರಸ್ವತಿ ಸಮ್ಮಾನ’ ಪ್ರಶಸ್ತಿ ಲಭಿಸಿತ್ತು. ಕನ್ನಡ ಭಾಷೆಗೆ ದೊರೆತ ಮೊದಲ ಸರಸ್ವತಿ ಸಮ್ಮಾನ ಇದು. ಈ ಕಾರಣಕ್ಕೆ, ರಾಜ್ಯ ಸರ್ಕಾರ ಅವರಿಗೆ 2011ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಸನ್ಮಾನ ಮಾಡಿ  ರೂ.5 ಲಕ್ಷ ನೀಡಿ ಗೌರವಿಸಿತ್ತು. ನಗದು ಬೇಡವೆಂದ ಭೈರಪ್ಪ ಅವರು, ‘ಈ ಹಣ­ವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಟ್ಟು, ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ 15 ವಿದ್ಯಾರ್ಥಿ­ಗಳಿಗೆ ಹಣದ ಸಹಾಯ ಮಾಡಬಹುದು. ವಿದ್ಯಾರ್ಥಿ ವೇತನ ಒದಗಿಸಲು ಸರ್ಕಾರ ಮುಂದಾಗಬಹುದು ಎಂಬ ಆಶಯದಿಂದ ಹಣವನ್ನು ಸರ್ಕಾರಕ್ಕೇ ಹಿಂದಿ­ರುಗಿಸುತ್ತಿದ್ದೇನೆ’ ಎಂದು ಕಾರ್ಯಕ್ರಮದಲ್ಲಿಯೇ ಪ್ರಕಟಿಸಿದ್ದರು.

ಭೈರಪ್ಪ ಅವರ ಸಲಹೆ ಆಧರಿಸಿ, ರೂ. 5 ಲಕ್ಷವನ್ನು ಹೇಗೆ ಖರ್ಚು ಮಾಡಬಹುದು ಎಂದು ಕೇಳಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿಕ್ಷಣ ಇಲಾಖೆಗೆ ಪತ್ರ ಬರೆದಿತ್ತು. ಆದರೆ ಆ ಮೊತ್ತದಲ್ಲಿ ಏನೂ ಮಾಡಲಾಗದು. ಅದು ತೀರಾ ಸಣ್ಣ ಮೊತ್ತ ಎಂಬ ವಿವರಣೆ ಶಿಕ್ಷಣ ಇಲಾಖೆಯಿಂದ ದೊರೆಯಿತು. ಭೈರಪ್ಪ ಹಿಂದಿರುಗಿಸಿದ ಹಣ ಇದುವರೆಗೆ ಯಾವ ಉದ್ದೇಶಕ್ಕೂ ಬಳಕೆಯಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾಗೇರಿ ಬಂದಿದ್ದರು’: ‘ನಾನು ಹಿಂದಿರುಗಿಸಿದ ಹಣ­ದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲು ಅಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನನ್ನಲ್ಲಿಗೆ ಒಮ್ಮೆ ಬಂದಿದ್ದರು. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು ಎಂಬ ಮಾಹಿತಿಗಳನ್ನೆಲ್ಲ ಅವರು ತಂದಿದ್ದರು. ನಂತರದ ಕೆಲವು ದಿನಗಳಲ್ಲಿ ಸರ್ಕಾರ ಬದಲಾಯಿತು’ ಎಂದು ‘ಪ್ರಜಾವಾಣಿ’ ಜೊತೆ ಮಾತನಾಡಿದ ಭೈರಪ್ಪ ನೆನಪಿಸಿಕೊಂಡರು.

‘ಆ ಹಣದಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಚರ್ಚಿಸಲು ಸರ್ಕಾರದ ಯಾವ ಅಧಿಕಾರಿಯೂ ನನ್ನನ್ನು ಸಂಪರ್ಕಿಸಿಲ್ಲ. ಯಾವ ಪ್ರಸ್ತಾವವನ್ನೂ ನನ್ನ ಮುಂದಿಟ್ಟಿಲ್ಲ. ಆ ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿ ರೂಪದಲ್ಲಿ ಇರಿಸಿ, ಅದರಿಂದ ಬರುವ ಬಡ್ಡಿಯಲ್ಲಿ ಪ್ರೌಢ­ಶಾಲಾ ಹಂತದಲ್ಲಿರುವ 15 ವಿದ್ಯಾರ್ಥಿಗಳಿಗೆ ವಾರ್ಷಿಕ ತಲಾ ರೂ.3 ಸಾವಿರ ವಿದ್ಯಾರ್ಥಿ ವೇತನ ನೀಡಲಿ ಎಂಬುದು ನನ್ನ ಆಶಯವಾಗಿತ್ತು’ ಎಂದು ಭೈರಪ್ಪ ಹೇಳಿದರು.

ಭೈರಪ್ಪ ಅವರು ಹಿಂದಿರುಗಿಸಿದ ಹಣಕ್ಕೆ ಇನ್ನಷ್ಟು ಮೊತ್ತ ಸೇರಿಸಿ, ವಿದ್ಯಾರ್ಥಿ ವೇತನ ನೀಡಲಾಗುವುದು. ಅದನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕಾರ್ಯ­ಕ್ರಮದಲ್ಲೇ ಪ್ರಕಟಿಸಿದ್ದರು. ಆದರೆ ಅದೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಹೆಸರು ಬಹಿ­ರಂಗ­ಪಡಿಸಲು ಒಲ್ಲದ ಹಿರಿಯ ಸಾಹಿತಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT