ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಅಬ್ಬರಕ್ಕೆ ಎಲ್ಲೆಲ್ಲೂ ಗುಣಗಾನ

Last Updated 29 ಮಾರ್ಚ್ 2016, 15:14 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧ ಭಾನುವಾರ ರಾತ್ರಿ ನಡೆದ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ  ಪಂದ್ಯದಲ್ಲಿ ಭಾರತಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟ ವಿರಾಟ್‌ ಕೊಹ್ಲಿ ಅವರ ‘ವಿರಾಟ’ ಆಟಕ್ಕೆ ಸಾಮಾಜಿಕ ಜಾಲತಾಣಗಳು ಸೇರಿದಂತೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಆತಿಥೇಯರ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಹೋರಾಟ ಎನಿಸಿದ್ದ ಪಂದ್ಯದಲ್ಲಿ ದೆಹಲಿಯ ಬ್ಯಾಟ್ಸ್‌ಮನ್‌ ಅಪ್ರತಿಮ ಹೋರಾಟ ತೋರಿ ಮಹಿ ಬಳಗದ ಸೆಮಿಫೈನಲ್‌ ಕನಸನ್ನು ಈಡೇರಿಸಿದ್ದರು.  ಕೊಹ್ಲಿ ಅವರ ಈ ಆಟ ಈಗ  ವಿಶ್ವದ ಕ್ರಿಕೆಟ್್ ಪ್ರಿಯರ ಮನ ಗೆದ್ದಿದೆ. ಆಸ್ಟ್ರೇಲಿ ಯಾದ ಆಟಗಾರರು ಮತ್ತು ಅಲ್ಲಿನ ಮಾಧ್ಯಮಗಳೂ ಕೂಡಾ ವಿರಾಟ್‌ ಆಟವನ್ನು ಹಾಡಿ ಹೊಗಳಿವೆ.

‘ವಾವ್‌ ಕೊಹ್ಲಿ.  ನಿಮ್ಮ ಆಟ ನನ್ನನ್ನು ಮೂಕವಿಸ್ಮಿತನನ್ನಾಗಿ ಮಾಡಿದೆ’ ಎಂದು ಸಚಿನ್‌ ತೆಂಡೂಲ್ಕರ್‌ ಟ್ವೀಟ್‌ ಮಾಡಿದ್ದಾರೆ.
ಸಚಿನ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆಸ್ಟ್ರೇಲಿಯಾದ ಸ್ಪಿನ್‌ ಮಾಂತ್ರಿಕ ಶೇನ್‌ ವಾರ್ನ್‌ ‘ ಕೊಹ್ಲಿ ಆಟ ಮನಮೋಹಕವಾಗಿತ್ತು. ಅವರ ಆಟ ಕಂಡು ನನಗೆ ನೀವು ಹಿಂದೆ ಕಟ್ಟಿದ್ದ ಕೆಲ ಅವಿಸ್ಮರಣೀಯ ಇನಿಂಗ್ಸ್‌ಗಳ ನೆನಪು ಮರುಕಳಿಸಿತು’ ಎಂದಿದ್ದಾರೆ.

‘ತಂಡ ಸಂದಿಗ್ಧ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಕೆಚ್ಚೆದೆಯ ಆಟ ಆಡಿ  ಗೆಲುವು ತಂದುಕೊಟ್ಟ ಕೊಹ್ಲಿ ಆಟವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ’ ಎಂದು ವೆಸ್ಟ್‌ ಇಂಡೀಸ್‌ನ ಬ್ಯಾಟಿಂಗ್‌ ದಂತಕಥೆ ಬ್ರಯನ್‌ ಲಾರಾ ತಮ್ಮ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಯುವರಾಜ್‌ ಸಿಂಗ್‌, ಹರಭಜನ್‌ ಸಿಂಗ್‌ ಅವರೂ ಸಹ ಆಟಗಾರ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಏನು ಹೇಳ ಬೇಕೆಂದೆ ತೋಚುತ್ತಿಲ್ಲ.  ಒಬ್ಬ ಆಟಗಾರ ಉತ್ತಮ ಲಯದಲ್ಲಿದ್ದಾಗ ಹೆಚ್ಚು ಹೆಚ್ಚು ರನ್‌ ಗಳಿಸಬಹುದು. ಆದರೆ ಮತ್ತೆ ಮತ್ತೆ ತಂಡವನ್ನು ಗೆಲುವಿನ ದಡ ಸೇರಿಸುವುದು ವಿರಳ.  ಆ ಪೈಕಿ ಕೊಹ್ಲಿ ಮೊದಲಿಗರು’ ಎಂದು ಯುವಿ ತಮ್ಮ ಟ್ವೀಟ್‌ನಲ್ಲಿ ಬಣ್ಣಿಸಿದ್ದಾರೆ.
‘ವಿರಾಟ್‌ ನಿನ್ನ ವೀರಾವೇಷಕ್ಕೆ ತಲೆಬಾಗದವರೇ ಇಲ್ಲ. ನೀನು ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನ’ ಎಂದು ಹರಭಜನ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.   ಮಾಜಿ ಆಟಗಾರ ಅನಿಲ್‌ ಕುಂಬ್ಳೆ,  ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಶೇನ್‌ ವ್ಯಾಟ್ಸನ್‌ ಅವರೂ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘ವಿರಾಟ್‌ ನಿನಗೆ ಯಾರೂ ಸಾಟಿಯಾಗಲಾರರು’ ಎಂದು ಕುಂಬ್ಳೆ   ಶ್ಲಾಘಿಸಿದ್ದರೆ, ‘ಮೊಹಾಲಿ ಅಂಗಳದಲ್ಲಿ ನಮಗೆ ‘ವಿರಾಟ’ ದರ್ಶನವಾಯಿತು. ನಿಮ್ಮ ಮನಮೋಹಕ ಇನಿಂಗ್ಸ್‌ಗೆ ಪರವಶರಾಗದವರಿಲ್ಲ’ ಎಂದು ವ್ಯಾಟ್ಸನ್‌ ತಮ್ಮ ಟ್ವಿಟರ್‌ ಪುಟದಲ್ಲಿ ಬರೆದಿದ್ದಾರೆ.
‘ಮೊಹಾಲಿ ಮೈದಾನದಲ್ಲಿ ಭಾನುವಾರ ಮಿಂಚಿನ ಸಂಚಲನ ಸೃಷ್ಟಿಯಾಗಿತ್ತು. ಅದಕ್ಕೆ ಕಾರಣ ಕೊಹ್ಲಿ. ಅವರ ಆಟದ ಶೈಲಿಗೆ ನಾನು ಮಾರುಹೋಗಿದ್ದೇನೆ’ ಎಂದು ಮ್ಯಾಕ್ಸ್‌ವೆಲ್‌ ಹೇಳಿದ್ದಾರೆ.

ಕೊಹ್ಲಿ ವಿಶ್ವ ಶ್ರೇಷ್ಠ ಆಟಗಾರ: ‘ವಿರಾಟ್‌ ಕೊಹ್ಲಿ ಈ ಪೀಳಿಗೆಯ  ಸರ್ವಶ್ರೇಷ್ಠ  ಆಟಗಾರ. ಅವರ ಅಪೂರ್ವ ಆಟಕ್ಕೆ ಮನಸೋಲದವರೇ ಇಲ್ಲ’ ಎಂದು ಮಾಜಿ ಆಟಗಾರ ಸುನಿಲ್‌ ಗಾವಸ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಭಾನುವಾರ ರಾತ್ರಿ ನಡೆದ ಪಂದ್ಯ ನೋಡುವಾಗ ನನ್ನ ಮೈ ರೋಮಾಂಚನಗೊಂಡಿತ್ತು.

ಅಷ್ಟರ ಮಟ್ಟಿಗೆ ಕೊಹ್ಲಿ ಆಟ ನನ್ನನ್ನು ಆವರಿಸಿತ್ತು.  ದೊಡ್ಡ ಇನಿಂಗ್ಸ್‌ ಕಟ್ಟಿ ತಂಡಕ್ಕೆ ಆಸರೆಯಾಗಿರುವ ಆಟಗಾರನಲ್ಲಿ ಗೆಲುವಿನ ರನ್‌ಗಳನ್ನೂ ತಾನೇ ಬಾರಿಸಬೇಕೆಂಬ ಸ್ವಾರ್ಥ ಮನೆಮಾಡಿರುತ್ತದೆ. ಆದರೆ ಕೊಹ್ಲಿ ಹಾಗಲ್ಲ. ಈ ಹಿಂದೆ  ಹಲವು ಬಾರಿ ನಾಯಕ ದೋನಿಗೆ ಜಯದ ರನ್‌ ಗಳಿಸುವ ಅವಕಾಶ ನೀಡಿದ್ದಾರೆ.  ಅವರ ಈ ಗುಣ ನನಗೆ ಬಲು ಇಷ್ಟ’ ಎಂದು ಗಾವಸ್ಕರ್‌ ವರ್ಣಿಸಿದ್ದಾರೆ.

ಆಸ್ಟ್ರೇಲಿಯಾ ಮಾಧ್ಯಮಗಳ ಗುಣಗಾನ: ಆಸ್ಟ್ರೇಲಿಯಾದ ಮಾಧ್ಯಮಗಳೂ ಕೊಹ್ಲಿ ಅವರ ಆಟವನ್ನು ಗುಣಗಾನ ಮಾಡಿವೆ. ಸುದ್ದಿ ಹಾಗೂ ಲೇಖನಗಳಲ್ಲಿ ದೆಹಲಿಯ ಬ್ಯಾಟ್ಸ್‌ಮನ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ‘ಇದು ವಿರಾಟ್‌ ಷೋ’ ಎಂದು ಆಸ್ಟ್ರೇಲಿಯಾ ನಾಯಕ ಸ್ಟೀವನ್‌ ಸ್ಮಿತ್‌  ಹೇಳಿದ ಮಾತು ಅಕ್ಷರಶಃ ಸತ್ಯ’ ಎಂದು ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಪತ್ರಿಕೆಯ ಕ್ರಿಸ್‌ ಬಾರಟ್‌ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ಬದ್ಧತೆಯೇ ಕೊಹ್ಲಿ ಬ್ಯಾಟಿಂಗ್‌ನ ಶಕ್ತಿ: ಶರ್ಮಾ
ಬೆಂಗಳೂರು: ‘ಅದು 2006ರ ರಣಜಿ ಟೂರ್ನಿಯ ಕರ್ನಾಟಕ ಎದುರಿನ ಪಂದ್ಯ. ಆ ಪಂದ್ಯದ ಮೂರನೇ ದಿನದಾಟದ ಬೆಳಿಗ್ಗೆ ವಿರಾಟ್‌ ತಂದೆ  ಪ್ರೇಮ್ ಕೊಹ್ಲಿ ನಿಧನ ಹೊಂದಿದ್ದರು. ಅಪ್ಪನ ಮುಖ ನೋಡಿ ಮತ್ತೆ ಆಡಲು ಬಂದ ವಿರಾಟ್‌ ಆ ಪಂದ್ಯದಲ್ಲಿ 90 ರನ್ ಬಾರಿಸಿದ್ದರು. ಇದರಿಂದ ದೆಹಲಿ  ತಂಡ ಪಂದ್ಯ ಸೋಲುವ ಸಂಕಷ್ಟದಿಂದ ಪಾರಾಗಿತ್ತು. ಇದು  ಆಟದ ಬಗ್ಗೆ  ವಿರಾಟ್‌ ಹೊಂದಿರುವ ಬದ್ಧತೆಗೆ ಸಾಕ್ಷಿ.   ಈ ಗುಣವೇ ಅವರನ್ನು ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ...’

ಭಾರತ ಕ್ರಿಕೆಟ್ ತಂಡದ ಬ್ಯಾಟಿಂಗ್ ಐಕಾನ್ ವಿರಾಟ್‌ ಕೊಹ್ಲಿ ಬಗ್ಗೆ ಅವರ ಬಾಲ್ಯದ ಕೋಚ್‌ ರಾಜಕುಮಾರ್‌ ಶರ್ಮಾ  ಹೇಳಿದ ಹೆಮ್ಮೆಯ ಮಾತುಗಳಿವು. ವಿಶ್ವ ಟ್ವೆಂಟಿ–20 ಟೂರ್ನಿಯಲ್ಲಿ ಭಾರತ ತಂಡ ಸೆಮಿಫೈನಲ್‌ ತಲುಪಲು ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಕೊಹ್ಲಿ ಆಡಿದ ಸಿಡಿಲಬ್ಬರದ ಬ್ಯಾಟಿಂಗ್  ಕಾರಣವಾಗಿತ್ತು.

‘ರನ್‌ ಮೆಷಿನ್‌’ ಕೊಹ್ಲಿ ಟೆಸ್ಟ್‌, ಏಕದಿನ ಮತ್ತು ಟ್ವೆಂಟಿ–20 ಎಲ್ಲಾ ಮಾದರಿಗಳಲ್ಲಿಯೂ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದ್ದರಿಂದ ದೆಹಲಿಯ ಬ್ಯಾಟ್ಸ್‌ಮನ್ ಕೊಹ್ಲಿ ಆಟ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಕ್ರೀಸ್‌ನಲ್ಲಿ ಕೊಹ್ಲಿ ಇದ್ದರೆ ‘ಭಾರತಕ್ಕೆ ಗೆಲುವು ಖಚಿತ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳಲ್ಲಿ ಅವರು ಭರವಸೆ ಮೂಡಿಸಿದ್ದಾರೆ.

ಕೊಹ್ಲಿ ಒಂಬತ್ತು ವರ್ಷದವರಿದ್ದಾಗ ದೆಹಲಿಯ ಮಾಜಿ ಕ್ರಿಕೆಟಿಗ ರಾಜಕುಮಾರ ಬಳಿ ತರಬೇತಿ ಪಡೆಯುತ್ತಿದ್ದರು. ಸಮಯ ಸಿಕ್ಕಾಗಲೆಲ್ಲಾ ಈಗಲೂ ವೆಸ್ಟ್‌ ಡೆಲ್ಲಿ ಕ್ರಿಕೆಟ್‌ ಅಕಾಡೆಮಿಗೆ ಹೋಗಿ ಅಭ್ಯಾಸ ನಡೆಸುತ್ತಾರೆ. ತಮ್ಮ ಅಕಾಡೆಮಿಯಲ್ಲಿ ತರಬೇತು ಪಡೆದು  ಛಾಪು ಮೂಡಿಸಿರುವ ಕೊಹ್ಲಿ ಬಗ್ಗೆ ರಾಜಕುಮಾರ್ ‘ಪ್ರಜಾವಾಣಿ’ ಗೆ ನೀಡಿದ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
‘ನಮ್ಮ ಅಕಾಡೆಮಿ ಸೇರಿದಾಗ ಕೊಹ್ಲಿಗೆ ಒಂಬತ್ತು ವರ್ಷ.

ಕ್ರಿಕೆಟ್‌ ಆಡಲು ಆರಂಭಿಸಿದಾಗಿನಿಂದಲೂ ತಾಂತ್ರಿಕ ವಿಷಯಕ್ಕೆ ತುಂಬಾ ಒತ್ತು ಕೊಡುತ್ತಿದ್ದರು. ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ  ರೀತಿ ನನ್ನಲ್ಲಿ ಅಚ್ಚರಿ ಮೂಡಿಸುತ್ತದೆ’ ಎಂದು ರಾಜಕುಮಾರ್ ಹೇಳಿದರು. ‘ವೈಯಕ್ತಿಕ ಅಥವಾ ಕೌಟುಂಬಿಕ ಯಾವುದೇ ಕೆಲಸಗಳಿರಲಿ  ಒಮ್ಮೆಯೂ ಅಭ್ಯಾಸ ತಪ್ಪಿಸಿಲ್ಲ. ಎಷ್ಟೇ ಒತ್ತಡವಿದ್ದರೂ ನೆಟ್ಸ್‌ಗೆ ಬರುವವುದನ್ನು  ಬಿಟ್ಟಿಲ್ಲ. ಆಟದ ಬಗ್ಗೆ ಹೊಂದಿರುವ ಬದ್ಧತೆಯೇ ಯಶಸ್ಸಿನ ಗುಟ್ಟು’ ಎಂದರು.

‘ಯಾವ ಪಂದ್ಯದಲ್ಲಿ ಎಷ್ಟು ರನ್ ಹೊಡೆಯಬಲ್ಲೆ ಎನ್ನುವುದರ ಬಗ್ಗೆ ಕೊಹ್ಲಿಗೆ ಒಂದು ಅಂದಾಜು ಇರುತ್ತದೆ. ಅನೇಕ ಸಲ ಈ ವಿಷಯ ಸತ್ಯವಾಗಿದೆ. 2013ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇದು ದಕ್ಷಿಣ ಆಫ್ರಿಕಾದಲ್ಲಿ ಕೊಹ್ಲಿ ಹೊಡೆದ ಮೊದಲ ಶತಕ. ಅಲ್ಲಿಗೆ ಪ್ರವಾಸಕ್ಕೆ ತೆರಳುವ ಮೊದಲೇ ಶತಕ ಹೊಡೆಯುತ್ತೇನೆಂದು ಕೊಹ್ಲಿ ಹೇಳಿದ್ದ’  ಎಂದು ರಾಜಕುಮಾರ್ ನೆನಪಿಸಿಕೊಂಡರು.

‘ಕೊಹ್ಲಿ ಗಲ್ಲಿ ಕ್ರಿಕೆಟ್‌ ಆಡುತ್ತಲೇ ಹೆಚ್ಚು ಸಮಯ ಕಳೆಯಲಿಲ್ಲ. ಇದನ್ನು ವೃತ್ತಿಪರವಾಗಿ ಸ್ವೀಕರಿಸಿದರು. ಆದ್ದರಿಂದಲೇ ಸಣ್ಣ ವಯಸ್ಸಿನಲ್ಲಿಯೇ ದಿಗ್ಗಜ ಕ್ರಿಕೆಟಿಗರ ದಾಖಲೆಗಳನ್ನು ಮುರಿಯುತ್ತಿದ್ದಾರೆ. ವಿಶ್ವದ ಪ್ರತಿಯೊಬ್ಬ  ಆಟಗಾರನ ದಾಖಲೆಯನ್ನು ಮುರಿಯುವ ಸಾಮರ್ಥ್ಯ ಅವರಲ್ಲಿದೆ’ ಎಂದು ಕೊಹ್ಲಿಯ ಸಲಹೆಗಾರ ಕೂಡ ಆಗಿರುವ ರಾಜಕುಮಾರ್‌ ಭವಿಷ್ಯ ನುಡಿದರು.

ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ  ವಿಶ್ವ ಟೂರ್ನಿಯ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್‌ ಬಗ್ಗೆಯೂ ರಾಜಕುಮಾರ್ ಮಾತನಾಡಿದ್ದಾರೆ. ‘ವಿಶ್ವದ ಶ್ರೇಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯಾ ಬಲಿಷ್ಠ ಬೌಲರ್‌ಗಳನ್ನು ಹೊಂದಿದೆ. ಆ ತಂಡದ ಎದುರು ಯಾರಿಗಾದರೂ ವೇಗವಾಗಿ ರನ್ ಗಳಿಸುವುದು ಕಷ್ಟ.

ಆದರೆ ಕೊಹ್ಲಿ ಬಗ್ಗೆ ನನಗೆ ಭರವಸೆ ಇತ್ತು. ಆಸ್ಟ್ರೇಲಿಯಾದ ಬೌಲರ್‌ಗಳನ್ನು ಅವರದ್ದೇ ನೆಲದಲ್ಲಿ ಕೊಹ್ಲಿ ಸರಿಯಾಗಿ ದಂಡಿಸಿದ್ದರು. 2012 ಮತ್ತು 2014ರಲ್ಲಿ ಅಡಿಲೇಡ್‌ ಅಂಗಳದಲ್ಲಿ ಬಾರಿಸಿದ್ದ ಶತಕವನ್ನು ಎಂದಿಗೂ ಮರೆಯಲಾಗದು. ಆದ್ದರಿಂದ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಆಡುತ್ತಾರೆ ಅಂದುಕೊಂಡಿದ್ದೆ. ನನ್ನ ನಿರೀಕ್ಷೆ ನಿಜವಾಗಿದೆ’ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಅನುಷ್ಕಾಳನ್ನು ಟೀಕಿಸುವವರಿಗೆ ನಾಚಿಕೆಯಾಗಬೇಕು: ಕೊಹ್ಲಿ
‘ಕ್ರೀಡಾಪಟುವಿನ ಬದುಕಿನಲ್ಲಿ ಏಳು ಬೀಳುಗಳು ಸಾಮಾನ್ಯ. ಹಿಂದೆ ನಾನು ವೈಫಲ್ಯ ಕಂಡಿದ್ದಾಗ ನಟಿ ಅನುಷ್ಕಾ ಶರ್ಮಾ ಕಾರಣ ಎಂದು ಟೀಕಿಸಿದ್ದವರಿಗೆ  ಬುದ್ದಿ ಇಲ್ಲ. ನನ್ನ ಕ್ರೀಡಾಬದುಕಿನ ಕೆಟ್ಟ ಘಳಿಗೆಗಳಿಗಾಗಿ ಅನುಷ್ಕಾಳತ್ತ ಬೊಟ್ಟು ಮಾಡುತ್ತಿರುವವರಿಗೆ ನಾಚಿಕೆ ಯಾಗಬೇಕು. ತಮ್ಮನ್ನು ಪ್ರಜ್ಞಾವಂತರು ಎಂದು ಕರೆಸಿಕೊಳ್ಳುವ ಅವರೆಲ್ಲಾ ತಲೆ ತಗ್ಗಿಸಬೇಕು’ ಎಂದು ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ವಿರಾಟ್‌ ಮತ್ತು ಅನುಷ್ಕಾ ಪರಸ್ಪರ ಪ್ರೀತಿಸುತ್ತಿದ್ದರು ಎಂಬ ಸುದ್ದಿ ದಟ್ಟವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಆಗಾಗ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಅವರ ನಡುವಣ ಪ್ರೀತಿ ಮುರಿದು ಬಿದ್ದಿದೆ ಎಂಬ ಸುದ್ದಿಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ  ಹರಿಬಿಟ್ಟಿದ್ದರು.

‘ತಮ್ಮ  ಖುಷಿಗಾಗಿ ಅನುಷ್ಕಾಳ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ. ನಾನು ಫಾರ್ಮ್‌ನಲ್ಲಿಲ್ಲದಿದ್ದರೆ  ಅನುಷ್ಕಾ ಏನು ಮಾಡಲು ಸಾಧ್ಯ. ಸಂಕಷ್ಟದ ದಿನಗಳಲ್ಲಿ ಆಕೆ  ಬೆಂಬಲವಾಗಿ ನಿಂತು ನನ್ನಲ್ಲಿ ಸ್ಫೂರ್ತಿ ತುಂಬಿದ್ದಾಳೆ. ಇದನ್ನೆಲ್ಲಾ ಮುಚ್ಚಿಟ್ಟು ಏನೇನೋ ಬರೆಯುವ ಹುಚ್ಚರು ಈಗ ಹೆಚ್ಚಾಗಿದ್ದಾರೆ ’ ಎಂದು ಅವರು ಕುಟುಕಿದ್ದಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ರವಾನಿಸುವ ಮುನ್ನ ಸ್ವಲ್ಪ ಆಲೋಚಿಸಿ. ಆಕೆಯನ್ನು ಗೌರವಿಸಿ. ನಿಮ್ಮ ತಂಗಿ, ಗೆಳತಿ ಅಥವಾ ಹೆಂಡತಿಯನ್ನು ಯಾರಾದರೂ ಛೇಡಿಸಿದರೆ ಇಲ್ಲವೇ ಹೀಯಾಳಿಸಿದರೆ ನೀವು ಸುಮ್ಮನಿರುತ್ತೀರಾ. ಇದನ್ನು ಮೊದಲು ಅರ್ಥಮಾಡಿಕೊಳ್ಳಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT