ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಗೆ ಹಬ್ಬದ ಒನಪು

Last Updated 29 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

13ನೇ ಶತಮಾನದಿಂದ ಒಂದಿಲ್ಲೊಂದು ರಾಜ ವಂಶಗಳ ಆಳ್ವಿಕೆಗೆ ಒಳಗಾಗಿದ್ದ, ಮೈಸೂರು ಒಡೆಯರ್‌ ಹಾಗೂ ಹೈದರ್‌ ಅಲಿ– ಟಿಪ್ಪು ಸುಲ್ತಾನರ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದ ಐತಿಹಾಸಿಕ ಕೋಟೆ ಇದೀಗ ನೈಜ ರೂಪ ಪಡೆದಿದೆ.

ಮೈಸೂರು ದಸರಾ ಉತ್ಸವದೊಡನೆ ಇಲ್ಲಿಯೂ 5 ದಿನಗಳ ಕಾಲ ದಸರೆ ನಡೆಯುತ್ತಿರುವುದು, ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆರಂಭವಾಗಿರುವುದು ಕೋಟೆ, ಕಂದಕ, ಬುರುಜುಗಳಿಗೆ ವರವಾಗಿ ಪರಿಣಮಿಸಿದೆ. ನಿರ್ವಹಣೆ ಕೊರತೆಯಿಂದಾಗಿ ನೂರಾರು ವರ್ಷಗಳಿಂದ ಮಸುಕಾಗಿದ್ದ ಕೋಟೆಗೆ ಸ್ಪಷ್ಟ ರೂಪ ಬಂದಿದೆ. ಶ್ರೀರಂಗಪಟ್ಟಣ ಹಾಗೂ ಪಾಂಡವಪುರ– ಈ ಎರಡು ತಾಲ್ಲೂಕುಗಳ ಸುಮಾರು 400 ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಂಡ ಸತತ 8 ತಾಸು ಕಷ್ಟಪಟ್ಟು ಕೋಟೆಯನ್ನು ಸ್ವಚ್ಛಗೊಳಿಸಿದೆ. ಕೆಲವು ವಿದ್ಯಾರ್ಥಿಗಳು ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಸುಮಾರು 50 ಅಡಿ ಎತ್ತರದ ಕೋಟೆಯ ಮೇಲೆ ಬೆಳೆದಿದ್ದ ಗಿಡಗಳನ್ನು ತೆಗೆದು ಶುದ್ಧಗೊಳಿಸಿದ್ದಾರೆ. ಜಿಲ್ಲಾಧಿಕಾರಿ ಡಾ.ಅಜಯ ನಾಗಭೂಷಣ ಹಾಗೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಕೂಡ ಸ್ವಯಂ ಸೇವಕರಾಗಿ ದುಡಿದು ಕೋಟೆಯನ್ನು ಅಂದಗಾಣಿಕಾಣುವಂತೆ ಮಾಡಿದ್ದಾರೆ. ಕಾಲಿಡಲಾಗದ ದುರ್ಗಮ ಪ್ರದೇಶಕ್ಕೆ ಯಂತ್ರಗಳನ್ನು ನುಗ್ಗಿಸಿ ಸ್ವಚ್ಛ ಮಾಡಲಾಗಿದೆ. ಹಾಗಾಗಿ ಕೋಟೆ ಥಳ ಥಳ ಎನ್ನುತ್ತಿದೆ.

ಪಟ್ಟಣದ ಚೆಕ್‌ ಪೋಸ್ಟ್‌ ಮಾರ್ಗವಾಗಿ ಪಟ್ಟಣ ಪ್ರವೇಶಿಸಿದರೆ ಹಸನಾದ ಕೋಟೆ ಹಾಗೂ ಕಂದಕಗಳನ್ನು ಈಗ ಕಣ್ತುಂಬಿಕೊಳ್ಳಬಹುದು. ಶತ್ರುಗಳು ಒಳ ನುಸುಳದಂತೆ ನಿರ್ಮಿಸಿರುವ ಆಳವಾದ ಕಂದಕ ವ್ಯವಸ್ಥೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಾವೇರಿ ನದಿಯ ನೀರನ್ನು ಈ ಕಂದಕಕ್ಕೆ ಹಾಯಿಸುತ್ತಿದ್ದರು ಎಂಬುದಕ್ಕೆ ಡಕ್‌ನಂತಹ ಕುರುಹುಗಳು ಕಾಣುತ್ತಿವೆ. ಕಪ್ಪು ಹಾಗೂ ಕಂದು ಬಣ್ಣದ ಕಲ್ಲು ಹಾಗೂ ಚುರಕಿ ಗಾರೆ ಬಳಸಿ ಕೋಟೆ ನಿರ್ಮಿಸಿರುವುದು ಸ್ಟಷ್ಟವಾಗಿ ಕಾಣುತ್ತಿದೆ. ಹಲವು ಶತಮಾನಗಳ ಹಿಂದೆ ನಿರ್ಮಿಸಿರುವ ಕಿರು ಸೇತುವೆಗಳು ಮರ, ಗಿಡ, ಬಳ್ಳಿಗಳಿಂದ ಆವೃತವಾಗಿದ್ದವು ಎಂಬುದನ್ನು ಬಿಟ್ಟರೆ ಈ ಕಿರು ಸೇತುವೆಗಳು ಇನ್ನೂ ಗಟ್ಟಿತನ ಉಳಿಸಿಕೊಂಡಿವೆ. ಆನೆ ಕೋಟೆ ದ್ವಾರವಂತೂ ವರ್ಷದ ಹಿಂದೆ ನಿರ್ಮಿಸಿರಬಹುದೇನೋ ಎಂಬಷ್ಟು ಸೊಗಸಾಗಿದೆ.

ಕೋಟೆ ಕಟ್ಟಿ ಮೆರೆದವರು...
ಹೊಯ್ಸಳರ ದೊರೆ ಉದಯಾತ್ಯ 13ನೇ ಶತಮಾನದಲ್ಲಿ ನಿರ್ಮಿಸಿದ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ಕೋಟೆಯೇ ಪ್ರಮುಖ ಆಕರ್ಷಣೆ. ಈ ದ್ವೀಪ ಪಟ್ಟಣದ ಸುತ್ತಲೂ ಇರುವ 6 ಕಿ.ಮೀ. ಸುತ್ತಳತೆಯ 3 ಸುತ್ತಿನ ಕೋಟೆ ಹಾಗೂ ಕಂದಕಗಳನ್ನು 15ನೇ ಶತಮಾನದಲ್ಲಿ ವಿಜಯನಗರದ ಅರಸರು (ವಿಜಯನಗರದ ರಾಜ ಪ್ರತಿನಿಧಿಗಳಾದ ನಾಗಮಂಗದ ತಿಮ್ಮಣ್ಣನ ದಣ್ಣಾಯಕ ಹಾಗೂ ತಿರುಮಲರಾಯರಿಂದ ಮೊದಲ ಸುತ್ತಿನ ಕೋಟೆ ನಿರ್ಮಾಣವಾಗಿದೆ ಎಂಬುದಕ್ಕೆ ಉಲ್ಲೇಖ ಇದೆ.), ನಂತರದಲ್ಲಿ ಯದು ವಂಶದ ಒಡೆಯರ್‌ ದೊರೆಗಳಿಂದ ಅಭಿವೃದ್ಧಿಯಾಗಿದೆ. ಕಂಠೀರವ ನರಸರಾಜ ಒಡೆಯರ್‌ (ಕ್ರಿ.ಶ.1638–59) ಎರಡನೇ ಸುತ್ತಿನ ಬಲವಾದ ಕೋಟೆ ನಿರ್ಮಿಸಿದ್ದಾನೆ. ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ರ ಆಳ್ವಿಕೆಯ ಕಾಲದಲ್ಲಿ ಈ ಕೋಟೆಯ ಹೆಚ್ಚು ಭಾಗ ನಿರ್ಮಾಣಗೊಂಡಿದೆ. ಫ್ರೆಂಚ್‌ ಎಂಜಿನಿಯರ್‌ ಹ್ಯೂಬನ್‌ ಎಂಬಾತನ ನೇತೃತ್ವದಲ್ಲಿ ಕೋಟೆಯ ಪ್ರಮುಖ ಭಾಗ ಮತ್ತು ದ್ವಾರಗಳನ್ನು ಟಿಪ್ಪು ಸುಲ್ತಾನ್‌ (ಕ್ರಿ.ಶ.1782–99)ಅಭಿವೃದ್ಧಿ ಪಡಿಸಿದ್ದರಿಂದ ಇದನ್ನು ‘ಟಿಪ್ಪು ಕೋಟೆ’ ಎಂದು ಕರೆಯುವುದು ವಾಡಿಕೆ.

‘ಬ್ರಿಟಿಷರು ಮಾತ್ರವಲ್ಲದೆ, ಮರಾಠರು, ಹೈದರಾಬಾದ್‌ನ ನಿಜಾಮ ಇತರರು 20ಕ್ಕೂ ಹೆಚ್ಚು ಬಾರಿ ಶ್ರೀರಂಗಪಟ್ಟಣದ ಮೇಲೆ ಲಗ್ಗೆಯಿಟ್ಟಿದ್ದಾರೆ. ಆದರೂ ಈ ಕಗ್ಗಲ್ಲ ಕೋಟೆ ಜಗ್ಗಿಲ್ಲ; ಕುಗ್ಗಿಲ್ಲ. ಈ ಕೋಟೆಗೆ ಹೊಂದಿಕೊಂಡಂತೆ ಒಳಾವರಣದಲ್ಲಿ ಶಸ್ತ್ರಾಗಾರಗಳು, ರಾಕೆಟ್‌ ಉಡಾವಣಾ ಕೇಂದ್ರ ಹಾಗೂ ಸೈನಿಕರು ಪಾಳಿ ಬದಲಿಸುವ ಮನೆಗಳು ಟಿಪ್ಪು ಕಾಲದಲ್ಲಿ ನಿರ್ಮಾಣಗೊಂಡಿವೆ. ನಂತರದ ದಿನಗಳಲ್ಲಿ ಕಡೆಗಣನೆಗೆ ಒಳಗಾದ ಈ ಸ್ಮಾರಕಗಳು ವರ್ಷದಿಂದ ವರ್ಷಕ್ಕೆ ಶಿಥಿಲವಾಗುತ್ತಿವೆ’ ಎಂಬುದು ಇತಿಹಾಸಕಾರ ಪ್ರೊ.ಎಂ. ಕರಿಮುದ್ದೀನ್‌ ಅವರ ನೋವಿನ ಮಾತು.

‘ದಸರೆಯ ಕಾರಣಕ್ಕೆ ಕೋಟೆಯ ಸ್ವಲ್ಪ ಭಾಗವನ್ನು ಮಾತ್ರ ಸ್ವಚ್ಛಗೊಳಿಸಲಾಗಿದೆ. ಆನೆದ್ವಾರ ಮತ್ತು ಅದರ ಆಸುಪಾಸಿನ ಸ್ಮಾರಕ ಮಾತ್ರ ಗಿಡಗಂಟಿಗಳ ಕಬಂಧ ಬಾಹುಗಳಿಂದ ಮುಕ್ತವಾಗಿದೆ. ರಾಜ್ಯ ಪ್ರಾಚ್ಯವಸ್ತು ಇಲಾಖೆಯ ಸುಪರ್ದಿಯಲ್ಲಿ ರುವ ಕೋಟೆಯ ಹೆಚ್ಚು ಭಾಗ ಈಗಲೂ ಹಾವು, ಹಲ್ಲಿಗಳ ಆವಾಸಸ್ಥಾನವಾಗಿದೆ. ಪಟ್ಟಣದ ಇತರ ಸ್ಮಾರಕಗಳಿಗೂ ಬೆಳಕು ನೀಡಿ ಇದು ‘ಸ್ಮಾರಕಗಳ ತವರು’ ಎಂಬ ಮಾತಿಗೆ ಅರ್ಥ ತಂದುಕೊಡಬೇಕು’ ಎಂಬುದು ಇತಿಹಾಸಪ್ರಿಯರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT