ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ಕನಸು...

Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ನಟ, ನಾಟಕಕಾರ ನಾಗರಾಜ ಕೋಟೆ ತಮ್ಮ ರಂಗಭೂಮಿ ಮತ್ತು ಚಿತ್ರರಂಗದ ಅನುಭವಗಳನ್ನು ಒಟ್ಟುಗೂಡಿಸಿ ‘ಬಾನಾಡಿ’ ಮಕ್ಕಳ ಸಿನಿಮಾ ಹೆಣೆದಿದ್ದಾರೆ. ಮೊದಲ ನಿರ್ದೇಶನದ ಖುಷಿಯಲ್ಲಿರುವ ಅವರು ‘ಸಿನಿಮಾ ರಂಜನೆ’ ಜತೆ ನಡೆಸಿದ ಮಾತುಕತೆಯ ಆಯ್ದಭಾಗ ಇಲ್ಲಿದೆ.

*ಚಿತ್ರ ನಿರ್ದೇಶನದ ಕನಸು ಚಿಗುರಿದ್ದು ಯಾವಾಗ? 
ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದೇ ನಿರ್ದೇಶಕನಾಗುವ ಕನಸಿನಿಂದ. ಶಂಕರ್‌ ನಾಗ್ ಅವರ ಚಿತ್ರಗಳಿಂದ ಪ್ರೇರಿತನಾಗಿ ಅವರ ಜತೆ ಕೆಲಸ ಮಾಡಲು ಆಸೆಪಟ್ಟಿದ್ದೆ; ಸಾಧ್ಯವಾಗಲಿಲ್ಲ. ನನ್ನ ಚಿತ್ರ ನಿರ್ದೇಶನದ ಕನಸು ಹಾಗೇ ಉಳಿದಿತ್ತು. ಈಗ ‘ಬಾನಾಡಿ’ಯಿಂದ ನನ್ನ ಕನಸುಗಳು ಕಾರ್ಯರೂಪಕ್ಕೆ ಬಂದಿವೆ.

*‘ಬಾನಾಡಿ’ ಚಿತ್ರ ರೂಪ ತಳೆದಿದ್ದು ಹೇಗೆ?
ನನ್ನ ‘ಉಸಿರು’ ಎಂಬ ನಾಟಕ ಚಿತ್ರ ಚೌಕಟ್ಟಿಗಿಳಿಯಲು ನಿರ್ಮಾಪಕ ಎಂ.ನಾಗರಾಜು ಅವರನ್ನು ಸಂಪರ್ಕಿಸಿದೆ. ಅವರು ‘ಪ್ರೀತಿ–ಪ್ರೇಮ, ಮರಸುತ್ತುವ ಕಥೆಗಳೆಲ್ಲ ಬೇಡ’ ಅಂದರು. ‘ಉಸಿರು’ ಬಾನಾಡಿ ಆಯಿತು. ನಟನೆಯ ಅನುಭವವಿರುವುದರಿಂದ ನಿರ್ದೇಶನ ಕಷ್ಟವೇನೂ ಆಗಲಿಲ್ಲ. ಚಿತ್ರದಲ್ಲಿ ನಾನೂ ನಟಿಸಿದ್ದೇನೆ. ಹಾಗೆಂದು ಚಿತ್ರದುದ್ದಕ್ಕೂ ಇರುವ ಪಾತ್ರ ಅಲ್ಲ ನನ್ನದು. ‘ಚುಕ್ಕಿ’ ಧಾರಾವಾಹಿಯಲ್ಲಿ ಅಭಿನಯಿಸಿದ ಪ್ರಫುಲ್ ಇಷ್ಟವಾದ. ಆತ ಚಿತ್ರದ ನಾಯಕ. ದತ್ತಣ್ಣ ಅವರು ತಾತನ ಪಾತ್ರದಲ್ಲಿ, ನಟರಂಗ ರಾಜೇಶ್ ಪ್ರಫುಲ್ಲನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕರಾದ ನಾಗಾಭರಣ, ಬರಗೂರು ರಾಮಚಂದ್ರಪ್ಪ ಅತಿಥಿ ಪಾತ್ರದಲ್ಲಿ ನಟಿಸಿರುವುದು ವಿಶೇಷ.

*ಬಾಲಕನೊಬ್ಬನ ತವಕ–ತಲ್ಲಣಗಳನ್ನು ಯಾವ ರೀತಿ ಅನಾವರಣಗೊಳಿಸಿದ್ದೀರಿ?
ಬಾಲಕನೊಬ್ಬನ ಮಾನಸಿಕ ತುಮುಲಗಳಿಗೆ ಸಂಬಂಧಿಸಿದ ಕಥೆ ಇಲ್ಲಿಯದ್ದು. ಅವನಿಗೆ ಹಳ್ಳಿ ವಾತಾವರಣದಲ್ಲಿ ಬೆಳೆಯುವ ಬಯಕೆ. ಅವನ ತಂದೆಗೆ ಹೈ ಫೈ ಜೀವನದ ವ್ಯಾಮೋಹ. ಈ ತಿಕ್ಕಾಟದಲ್ಲಿ ಬಾಲಕ ಮನೆ ಬಿಡುತ್ತಾನೆ. ಇವರಿಬ್ಬರ ನಡುವೆ ಬಾಲಕನ ಅಜ್ಜ, ಮಗ ಹಾಗೂ ಮೊಮ್ಮಗನನ್ನು ಸಂಭಾಳಿಸುವ ಪ್ರಯತ್ನ ನಡೆಸುತ್ತಾನೆ. ಬಾಲಕ ತನ್ನಿಷ್ಟದಂತೆ ಬದುಕಿ ಮುಂದೆ ಒಳ್ಳೆಯ ಹೆಸರು ಮಾಡಿದಾಗ ಅವನ ತಂದೆಗೆ ಹಳ್ಳಿ ಜೀವನದ ಮಹತ್ವ ಅರ್ಥವಾಗಿ ಮಗನ ಕ್ಷಮೆ ಕೇಳುತ್ತಾನೆ. ಒಟ್ಟಾರೆಯಾಗಿ, ನಮ್ಮ ನೆಲೆ, ನಮ್ಮತನ, ನಮ್ಮ ಸಂಸ್ಕೃತಿಯನ್ನು ಪ್ರೀತಿಸಬೇಕು ಎಂಬುದೇ ಚಿತ್ರದ ಸಾರ–ಸಂದೇಶ.

*ನಟನೆಯ ಅನುಭವ ನಿರ್ದೇಶನಕ್ಕೆ ಬೆಂಬಲವಾಯಿತೆ?
ಸಾಮಾನ್ಯವಾಗಿ ಕಲಾವಿದರು ತಮ್ಮ ಕೆಲಸ ಮುಗಿದರೆ ಚಿತ್ರೀಕರಣದ ಸ್ಥಳದಿಂದ ಜಾಗ ಖಾಲಿ ಮಾಡತ್ತಾರೆ. ನಾನು ಹಾಗಲ್ಲ. ನನ್ನ ಪಾತ್ರ ಪೋಷಣೆ ಮುಗಿದರೂ ಮತ್ತೊಬ್ಬ ಕಲಾವಿದ ನಟಿಸುವ ದೃಶ್ಯ, ಕ್ಯಾಮೆರಾ ಬಳಕೆ... ಇತ್ಯಾದಿ ವಿಚಾರಗಳನ್ನು ಗಮನಿಸುತ್ತ ನಿರ್ದೇಶಕರ ಜತೆ ಚರ್ಚಿಸುತ್ತಿದ್ದೆ. ಈ ಅಂಶಗಳೆಲ್ಲ ನನ್ನ ನಿರ್ದೇಶನಕ್ಕೆ ಬಲ ನೀಡಿದವು.

*ಮಕ್ಕಳ ಚಿತ್ರ ಎನ್ನುವ ಹಣೆಪಟ್ಟಿಯಲ್ಲಿ ಪ್ರಶಸ್ತಿಯತ್ತ ಗಮನವೇನಾದರೂ ಇದೆಯೇ?
ಆ ರೀತಿ ಏನೂ ಇಲ್ಲ. ಮಕ್ಕಳ ಚಿತ್ರವಾದರೂ ಕಮರ್ಷಿಯಲ್ ಅಂಶಗಳೂ ಇವೆ. ತೀರಾ ಕಲಾತ್ಮಕ ಚಿತ್ರ ಮಾಡಲೂ ಆಗುವುದಿಲ್ಲ. ಕಮರ್ಷಿಯಲ್ ಅಂಶಗಳಿದ್ದರೂ ಮೂಲ ಕಥೆಗೆ ಧಕ್ಕೆ ಬಂದಿಲ್ಲ. ಮಕ್ಕಳ ಚಿತ್ರಕ್ಕೆ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ ಎಂದಾಗಲಿ, ಪ್ರಶಸ್ತಿಯನ್ನು ಗುರಿಯಾಗಿಸಿಕೊಂಡಾಗಲಿ ‘ಬಾನಾಡಿ’ ಚಿತ್ರ ಮಾಡಲು ಮುಂದಾಗಿಲ್ಲ. ಸದಭಿರುಚಿ ಚಿತ್ರ ಮಾಡಬೇಕೆಂಬುದಷ್ಟೇ ನನ್ನ ಆಲೋಚನೆಯಲ್ಲಿ ಇದ್ದಿದ್ದು.

*ನಿಮ್ಮ ಸಿನಿಮಾ ತುಡಿತದ ಬಗ್ಗೆ ಹೇಳಿ
ರಂಗಭೂಮಿಯಲ್ಲಿ ನಮ್ಮ ವಿಚಾರಗಳು ರಂಗಮಂದಿರದೊಳಗಿನ ಪ್ರೇಕ್ಷಕರನ್ನಷ್ಟೇ ತಲುಪಲು ಸಾಧ್ಯ. ಸಿನಿಮಾ ಲಕ್ಷಾಂತರ ಜನರನ್ನು ತಲುಪುವ ಮಾಧ್ಯಮ. ವೈಯಕ್ತಿಕವಾಗಿ ನನಗೆ ರಂಗಭೂಮಿಯೇ ಇಷ್ಟ. ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವುದರಿಂದ ಜನರಿಗೆ ಏನು ಇಷ್ಟ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ರಂಗಭೂಮಿಯಲ್ಲಿ ಎಲ್ಲಾ ರೀತಿಯ ಕಷ್ಟಗಳು ಅನುಭವಕ್ಕೆ ಬರುತ್ತವೆ. ಆದ್ದರಿಂದ ರಂಗಭೂಮಿ ಮೂಲದವರಿಗೆ ಚಿತ್ರರಂಗ ಸಹಿಷ್ಣುವೇ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT