ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಹಿಂಸೆ ಮುಕ್ತ ಬಲಿಷ್ಠ ಭಾರತ: ಕೇಂದ್ರ ಭರವಸೆ

Last Updated 9 ಜೂನ್ 2014, 10:05 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ‘ಕೋಮು ಹಿಂಸಾಚಾರ ಮುಕ್ತ ಬಲಿಷ್ಠ ಆಧುನಿಕ ಭಾರತ ನಿರ್ಮಾಣಕ್ಕೆ ಹೊಸ ಸರ್ಕಾರ ಶ್ರಮಿಸುವುದು' ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸೋಮವಾರ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭರವಸೆ ನೀಡಿದರು.

'ಈ ದೇಶದ 125 ಕೋಟಿ ಜನರ ಆಶೋತ್ತರಗಳನ್ನು ಪೂರೈಸುವ ನಿಟ್ಟಿನಲ್ಲಿ  ನನ್ನ ಸರ್ಕಾರ ಕೆಲಸ ಮಾಡಲಿದೆ’ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳಿದರು.

ದೇಶದ ಆಂತರಿಕ ಭದ್ರತೆಗೆ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು. ಭಯೋತ್ಪಾದನೆ, ತೀವ್ರವಾದ, ಕೋಮು ಗಲಭೆ ಮತ್ತು ಅಪರಾಧವನ್ನು ಸಂಪೂರ್ಣವಾಗಿ ಹತ್ತಿಕ್ಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳ ಸಲಹೆ ಪಡೆದು ರಾಷ್ಟ್ರೀಯ ನೀತಿ ರೂಪಿಸಲಾಗುವುದು. ಸೈಬರ್ ದಾಳಿಯಂತಹ ಹೊಸ ರೀತಿಯ ಭಯೋತ್ಪಾದನೆಯನ್ನು ಎದುರಿಸಲು ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ನೀಡಲು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗುವುದು ಎಂದು ಅವರು ನುಡಿದರು.

ಹಿಂದಿನ ಯುಪಿಎ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಹೊಸ ಸರ್ಕಾರ ಕೆಲಸ ಮಾಡಲಿದೆ ಎಂದರು.

ದೇಶದ ಅಭಿವೃದ್ಧಿಗೆ ಎಲ್ಲಾ ಅಲ್ಪಸಂಖ್ಯಾತರನ್ನು ಸಮಾನ ಭಾಗಿದಾರರನ್ನಾಗಿ ಬಳಸಿಕೊಳ್ಳುವ ಜವಾಬ್ದಾರಿ ಹೊಸ ಸರ್ಕಾರದ ಮೇಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಜಕೀಯ, ಆರ್ಥಿಕ ಮತ್ತು ವಿದೇಶಾಂಗ ನೀತಿಯ ಕುರಿತಾಗಿ ಪ್ರಣವ್ ಬೆಳಕು ಚೆಲ್ಲಿದರು. ಅಲ್ಲದೆ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಅಭಿವೃದ್ಧಿ ಸಾಧಿಸುವ ಬಗ್ಗೆ ಗಮನ ಹರಿಸುವ ಕುರಿತಾಗಿಯೂ ಮಾತನಾಡಿದರು.

‘ಉತ್ತಮ ಆಡಳಿತದ ಮೂಲಕ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಜಾತಿ, ಮತ, ಪ್ರಾಂತ, ಮತ್ತು ಧರ್ಮ ಎಂಬ ಮಿತಿಗಳನ್ನು ಮೀರಿ  ಮತದಾರರು  ಮತದಾನ ಮಾಡಿದ್ದಾರೆ.  30 ವರ್ಷಗಳ ನಂತರ ಒಂದು ಪಕ್ಷಕ್ಕೆ ಸಂಪೂರ್ಣ ಬಹುಮತ ದೊರೆತಿರುವುದು ಇದನ್ನೇ ಪುಷ್ಠೀಕರಿಸುತ್ತದೆ’ ಎಂದರು.

ಜಂಟಿ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯ ಸಭೆ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರತಿಪಕ್ಷದ ನಾಯಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT