ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತದತ್ತ ಕ್ರಿಕೆಟ್‌ ಪ್ರೇಮಿಗಳ ಚಿತ್ತ

ಇಂದು ಫೈನಲ್‌ ಹೋರಾಟ: ಕುತೂಹಲ ಮೂಡಿಸಿದೆ ಚೆನ್ನೈ ಸೂಪರ್‌ ಕಿಂಗ್ಸ್‌–ಮುಂಬೈ ಇಂಡಿಯನ್ಸ್‌ ಪೈಪೋಟಿ
Last Updated 23 ಮೇ 2015, 19:59 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿರುವ ಐಪಿಎಲ್‌ ಎಂಟನೇ ಆವೃತ್ತಿಯ ಫೈನಲ್‌ ಭಾನುವಾರ ನಡೆಯಲಿದೆ. ಇದಕ್ಕಾಗಿ ‘ಸಿಟಿ ಆಫ್‌ ಜಾಯ್‌’ ಖ್ಯಾತಿಯ ಕೋಲ್ಕತ್ತದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣ ಸಜ್ಜಾಗಿದೆ.

2013ರ ಟೂರ್ನಿಯ ಫೈನಲ್‌ನಲ್ಲಿ ಮುಖಾಮುಖಾಮುಖಿಯಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್ ತಂಡಗಳೇ ಈ ಬಾರಿಯ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಪೈಪೋಟಿ ನಡೆಸಲಿವೆ. ಆಗ ಮುಂಬೈ ಚಾಂಪಿಯನ್‌ ಆಗಿತ್ತು.

ಲೀಗ್‌ ಹಂತದ ಆರಂಭದ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡು ಟೂರ್ನಿಯಿಂದಲೇ ಹೊರಬೀಳುವ ಸಂಕಷ್ಟಕ್ಕೆ ಸಿಲುಕಿದ್ದ ಮುಂಬೈ ನಂತರ ಅಪೂರ್ವವಾಗಿ ಚೇತರಿಸಿಕೊಂಡು ಫೈನಲ್‌ಗೆ ಬಂದಿದೆ. ತಂಡ ಈಗ ಎರಡನೇ ಟ್ರೋಫಿ ಮೇಲೆ ಕಣ್ಣು ಇಟ್ಟಿದೆ. ಟೂರ್ನಿಯಲ್ಲಿ ಉತ್ತಮ ಸಾಮರ್ಥ್ಯ ನೀಡಿರುವ ಸೂಪರ್‌ ಕಿಂಗ್ಸ್‌ ತಂಡಕ್ಕೂ ಮೂರನೇ ಬಾರಿ ಚಾಂಪಿಯನ್ ಆಗುವ ಆಸೆ. ದೋನಿ ನಾಯಕತ್ವದಲ್ಲಿ ಸೂಪರ್‌ ಕಿಂಗ್ಸ್‌ 2010 ಮತ್ತು 2011ರಲ್ಲಿ ಪ್ರಶಸ್ತಿ ಜಯಿಸಿತ್ತು.

ಐಪಿಎಲ್‌ ಟೂರ್ನಿಯ ಎಲ್ಲಾ ಆವೃತ್ತಿಗಳಲ್ಲಿ ‘ಪ್ಲೇ ಆಫ್‌’ ಹಂತ ಪ್ರವೇಶಿಸಿದ ಏಕೈಕ ತಂಡ ಎನ್ನುವ ಕೀರ್ತಿ ಹೊಂದಿರುವ ಸೂಪರ್‌ ಕಿಂಗ್ಸ್‌ ಅದಮ್ಯ ವಿಶ್ವಾಸದಲ್ಲಿದೆ. ಈ ತಂಡ ಮೊದಲ ಕ್ವಾಲಿಫೈಯರ್ ಹೋರಾಟದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ಧ ಸೋತಿತ್ತು. ಆದರೆ, ಎರಡನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ತಂಡವನ್ನು ಮಣಿಸಿ ಆರನೇ ಬಾರಿ ಫೈನಲ್‌ ತಲುಪಿದೆ.

ಅಷ್ಟೇ ಅಲ್ಲದೇ ಹೋದ ವರ್ಷದ ಆವೃತ್ತಿಯಲ್ಲಿ ಸೂಪರ್‌ ಕಿಂಗ್ಸ್‌ ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಎದುರು ಗೆಲುವು ಪಡೆದಿತ್ತು. ಉಭಯ ತಂಡಗಳು ಈ ಬಾರಿಯ ಲೀಗ್‌ ಹಂತದಲ್ಲಿ ಎರಡು ಸಲ ಪೈಪೋಟಿ ನಡೆಸಿ ತಲಾ ಒಂದು ಜಯ ಪಡೆದಿವೆ. ಸಮಬಲ ಸಾಮರ್ಥ್ಯ ಹೊಂದಿರುವ ತಂಡಗಳಾದ ಕಾರಣ ಸಹಜವಾಗಿಯೇ ಎಲ್ಲರ ಗಮನ ಕೋಲ್ಕತ್ತದತ್ತ ನೆಟ್ಟಿದೆ.

ಚೈತನ್ಯದ ಚಿಲುಮೆ: ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಮುಂಬೈ ಇಂಡಿಯನ್ಸ್‌ ತಂಡ ಈಗ ಉತ್ಸಾಹದ ಚಿಲುಮೆಯಾಗಿದೆ. ರೋಹಿತ್‌ ಶರ್ಮಾ ನಾಯಕತ್ವದ  ತಂಡ ಎಂಟನೇ ಆವೃತ್ತಿಯಲ್ಲಿ ಒಟ್ಟು 15 ಪಂದ್ಯಗಳನ್ನಾಡಿ ಒಂಬತ್ತರಲ್ಲಿ ಗೆಲುವು ಸಾಧಿಸಿದೆ.

ಲೆಂಡ್ಲ್‌ ಸಿಮನ್ಸ್‌, ರೋಹಿತ್‌ ಶರ್ಮಾ, ಕೀರನ್‌ ಪೊಲಾರ್ಡ್‌, ಪಾರ್ಥಿವ್‌ ಪಟೇಲ್‌, ಅಂಬಟಿ ರಾಯುಡು ಅವರನ್ನು ಹೊಂದಿರುವ ಮುಂಬೈ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಎರಡು ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ ಖುಷಿಯಲ್ಲಿರುವ ಹರಭಜನ್‌ ಸಿಂಗ್ ಶ್ರೇಷ್ಠ ಬೌಲಿಂಗ್‌ ಮಾಡುತ್ತಿದ್ದಾರೆ. ಆಫ್‌ ಸ್ಪಿನ್ನರ್‌ 14 ಪಂದ್ಯಗಳಿಂದ 16 ವಿಕೆಟ್‌ ಉರುಳಿಸಿದ್ದಾರೆ.

ಲಂಕಾದ ವೇಗಿ ಲಸಿತ್‌ ಮಾಲಿಂಗ, ಮಿಷೆಲ್‌ ಮೆಕ್‌ಲಾಗನ್‌, ಕರ್ನಾಟಕದ ಜೆ. ಸುಚಿತ್‌ ಮತ್ತು ಆರ್‌. ವಿನಯ್‌ ಕುಮಾರ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳಲ್ಲಿ ನಡುಕ ಉಂಟು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

ಸ್ಥಿರ ಸಾಮರ್ಥ್ಯದ ಚೆನ್ನೈ: ಲೀಗ್‌ ಹಂತದಲ್ಲಿ ಒಂಬತ್ತು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ‘ಪ್ಲೇ ಆಫ್‌’ ಪ್ರವೇಶಿಸಿರುವ ಸೂಪರ್‌ ಕಿಂಗ್ಸ್‌  ಪ್ರತಿ ಪಂದ್ಯದಲ್ಲಿಯೂ ಸ್ಥಿರ ಸಾಮರ್ಥ್ಯ ನೀಡುತ್ತಿದೆ. ಎಂಟೂ ಆವೃತ್ತಿಗಳಲ್ಲಿ ತಂಡವನ್ನು ಮುನ್ನಡೆಸಿದ ಏಕೈಕ ನಾಯಕ ಎನ್ನುವ ಕೀರ್ತಿ ಹೊಂದಿರುವ ದೋನಿ ಸೂಪರ್‌ ಕಿಂಗ್ಸ್‌ ತಂಡದ ಪ್ರಮುಖ ಶಕ್ತಿ.

  ಎದುರಾಳಿ ತಂಡವನ್ನು ಕಟ್ಟಿ ಹಾಕಲು ಅವರು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಫಾಫ್‌ ಡು ಪ್ಲೆಸಿಸ್‌,  ಸುರೇಶ್ ರೈನಾ, ದೋನಿ, ಡ್ವೇನ್‌ ಸ್ಮಿತ್‌ ಬ್ಯಾಟಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ.  ಆರಂಭಿಕ ಬ್ಯಾಟ್ಸ್‌ಮನ್‌ ಬ್ರೆಂಡನ್‌ ಮೆಕ್ಲಮ್‌ ಅಲಭ್ಯರಾಗಿದ್ದರಿಂದ ಉಳಿದ ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚು ಜವಾಬ್ದಾರಿಯಿದೆ.

ಸೂಪರ್‌ ಕಿಂಗ್ಸ್‌ ಶುಕ್ರವಾರ ರಾಂಚಿಯಲ್ಲಿ ನಡೆದ ಎರಡನೇ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ತಂಡವನ್ನು ಮೂರು ವಿಕೆಟ್‌ಗಳಿಂದ ಮಣಿಸಿತ್ತು. ಮೈಕಲ್‌ ಹಸ್ಸಿ ಅರ್ಧಶತಕ ಗಳಿಸಿ ಗೆಲುವು ತಂದುಕೊಟ್ಟಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈ ತಂಡ ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ಎಡಗೈ ವೇಗಿ ಆಶಿಶ್‌ ನೆಹ್ರಾ, ಆರ್‌. ಅಶ್ವಿನ್‌, ಮೋಹಿತ್‌ ಶರ್ಮಾ, ಡ್ವೇನ್‌  ಬ್ರಾವೊ ಶಕ್ತಿ ಎನಿಸಿದ್ದಾರೆ. ನೆಹ್ರಾ ಆರ್‌ಸಿಬಿ ಎದುರಿನ ಪಂದ್ಯದಲ್ಲಿ ಕರಾರುವಾಕ್ಕಾಗಿ ಬೌಲಿಂಗ್‌ ಮಾಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

ಕೋಲ್ಕತ್ತದಲ್ಲಿ ಸಂಭ್ರಮ: ಹೋದ ತಿಂಗಳ ಏಳರಂದು ಭರ್ಜರಿ ಉದ್ಘಾಟನೆಯೊಂದಿಗೆ ಇಲ್ಲಿ ಆರಂಭಗೊಂಡಿದ್ದ ಚುಟುಕು ಕ್ರಿಕೆಟ್‌ ಆಟಕ್ಕೆ ಕೋಲ್ಕತ್ತದಲ್ಲಿಯೇ ತೆರೆ ಬೀಳಲಿದೆ. ಒಂದೂವರೆ ತಿಂಗಳಲ್ಲಿ 56 ಲೀಗ್‌ ಮತ್ತು ಮೂರು ಪ್ಲೇ ಆಫ್‌ ಪಂದ್ಯಗಳು ನಡೆದವು. ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಏಳು ಪಂದ್ಯಗಳು ಆಯೋಜನೆಯಾಗಿದ್ದವು.

ಇಲ್ಲಿ ಫೈನಲ್‌ ನಡೆಯುತ್ತಿರುವುದು ಎರಡನೇ ಬಾರಿ. ಆದರೆ, ತವರೂರ ತಂಡ ನೈಟ್‌ ರೈಡರ್ಸ್‌ ಇಲ್ಲ ಎನ್ನುವ ಬೇಸರ ಅಭಿಮಾನಿಗಳಲ್ಲಿದ್ದರೂ ಫೈನಲ್‌ ಪಂದ್ಯದ ಸೊಬಗು ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದ್ದಕ್ಕೆ ಇಲ್ಲಿನ ಕ್ರಿಕೆಟ್‌ ಪ್ರೇಮಿಗಳು ಸಾಕಷ್ಟು ಖುಷಿಯಲ್ಲಿದ್ದಾರೆ.

‌ಮಳೆ ಬಂದರೆ ಮೀಸಲು ದಿನ: ಫೈನಲ್‌ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಟೂರ್ನಿಯ ಉದ್ಘಾಟನಾ ಸಮಾರಂಭವೂ ಇಲ್ಲಿಯೇ ನಡೆದಾಗ ಮಳೆ ಅಡ್ಡಿಯಾಗಿತ್ತು. ಆದ್ದರಿಂದ ಸಮಾರಂಭ ಒಂದೂವರೆ ಗಂಟೆ ತಡವಾಗಿ ಆರಂಭವಾಗಿತ್ತು. ಫೈನಲ್‌ಗೆ ಮಳೆ ಅಡ್ಡಿಯಾದರೆ ಮೇ 25ರಂದು ಪಂದ್ಯ ನಡೆಸಲಾಗುತ್ತದೆ.
*
ಮುಖ್ಯಾಂಶಗಳು
* ಸೂಪರ್‌ ಕಿಂಗ್ಸ್‌ ತಂಡಕ್ಕೆ ಆರನೇ ಫೈನಲ್‌
*ಮುಂಬೈ ಇಂಡಿಯನ್ಸ್‌ಗೆ ಮೂರನೇ ಫೈನಲ್‌
*ಚಾಂಪಿಯನ್‌ ತಂಡಕ್ಕೆ ₹ 15 ಕೋಟಿ ಬಹುಮಾನ
*
ಒಟ್ಟು  ₹ 40 ಕೋಟಿ ಬಹುಮಾನ
ಈ ಬಾರಿಯ ಟೂರ್ನಿಯು ಒಟ್ಟು ₹ 40 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ. ಚಾಂಪಿಯನ್‌ ತಂಡ ₹ 15 ಕೋಟಿ ಪಡೆಯಲಿದೆ. ರನ್ನರ್ಸ್‌ ಅಪ್‌ ಆಗುವ ತಂಡಕ್ಕೆ ₹ 10 ಕೋಟಿ ಲಭಿಸಲಿದೆ.  ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದ ಆರ್‌ಸಿಬಿ ಹಾಗೂ ರಾಜಸ್ತಾನ ರಾಯಲ್ಸ್ ತಂಡಗಳು ತಲಾ ₹ 7.5 ಕೋಟಿ ಪಡೆದುಕೊಳ್ಳಲಿವೆ.
*
ಕಣದಲ್ಲಿ ಐವರು ಕನ್ನಡಿಗರು
ಮುಂಬೈ ಇಂಡಿಯನ್ಸ್ ಮತ್ತು ಸೂಪರ್ ಕಿಂಗ್ಸ್ ಎರಡೂ ಸೇರಿದಂತೆ ಒಟ್ಟು ಐವರು ಕರ್ನಾಟಕದ ಆಟಗಾರರು ತಂಡದಲ್ಲಿದ್ದಾರೆ. ಸೂಪರ್‌ ಕಿಂಗ್ಸ್ ತಂಡದಲ್ಲಿ ಬೆಳಗಾವಿಯ ರೋನಿತ್‌ ಮೋರೆ ಇದ್ದಾರೆ. ಬಲಗೈ ವೇಗಿ ರೋನಿತ್‌ ಒಂದು ಪಂದ್ಯವಾಡಿ ಒಂದು ವಿಕೆಟ್‌ ಪಡೆದಿದ್ದಾರೆ.

ಸ್ಪಿನ್ನರ್‌ಗಳಾದ ಶ್ರೇಯಸ್‌ ಗೋಪಾಲ್‌, ಜೆ. ಸುಚಿತ್‌ ವೇಗಿಗಳಾದ ವಿನಯ್‌ ಕುಮಾರ್ ಮತ್ತು ಅಭಿಮನ್ಯು ಮಿಥುನ್‌ ಮುಂಬೈ ತಂಡದಲ್ಲಿದ್ದಾರೆ. ವಿನಯ್‌ 12 ಪಂದ್ಯಗಳನ್ನಾಡಿದ್ದು ಆರು ವಿಕೆಟ್‌ ಪಡೆದಿದ್ದಾರೆ. ಒಂದೂ ಪ್ರಥಮ ದರ್ಜೆ ಪಂದ್ಯವಾಡದ ಸುಚಿತ್‌ ಐಪಿಎಲ್‌ನಲ್ಲಿ 12 ಪಂದ್ಯಗಳನ್ನಾಡಿದ್ದು 10 ವಿಕೆಟ್‌ ಉರುಳಿಸಿ ಗಮನ ಸೆಳೆದಿದ್ದಾರೆ. ಲೆಗ್‌ ಸ್ಪಿನ್ನರ್ ಶ್ರೇಯಸ್ ಒಂದು ಪಂದ್ಯದಲ್ಲಿ ಆಡಿದ್ದರೆ, ‘ಪೀಣ್ಯ ಎಕ್ಸ್‌ಪ್ರೆಸ್‌’ ಎಂದೇ ಹೆಸರಾದ ಮಿಥುನ್‌ ‘ಬೆಂಚ್‌’ ಕಾದಿದ್ದಾರೆ.
*
ತಂಡಗಳು ಹೀಗಿವೆಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ (ನಾಯಕ), ಅಭಿಮನ್ಯು ಮಿಥುನ್‌, ಆದಿತ್ಯ ತಾರೆ, ಪಾರ್ಥಿವ್‌ ಪಟೇಲ್‌, ಕೀರನ್‌ ಪೊಲಾರ್ಡ್‌, ಲಸಿತ್‌ ಮಾಲಿಂಗ, ಹರಭಜನ್‌ ಸಿಂಗ್‌, ಜಸ್‌ಪ್ರೀತ್‌ ಬೂಮ್ರಾ, ಮರ್ಚೆಂಟ್‌ ಡಿ. ಲಾಂಗೆ, ಪವನ್‌ ಸುಯಾಲ್‌, ಉನ್ಮುಕ್ತ್‌ ಚಾಂದ್‌, ಶ್ರೇಯಸ್‌ ಗೋಪಾಲ್‌, ಲೆಂಡ್ಲ್‌ ಸಿಮನ್ಸ್‌, ಪ್ರಗ್ಯಾಜ್ ಓಜಾ, ಮಿಷೆಲ್‌ ಮೆಕ್‌ ಲಾಗನ್‌, ಬ್ಲಿಜಾರ್ಡ್‌, ನಿತಿಶ್‌ ರಾಣಾ, ಸಿದ್ದೇಶ್‌ ಲಾಡ್‌, ಆರ್‌. ವಿನಯ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ ಮತ್ತು ಜೆ. ಸುಚಿತ್‌.

ಚೆನ್ನೈ ಸೂಪರ್‌ ಕಿಂಗ್ಸ್‌: ಮಹೇಂದ್ರ ಸಿಂಗ್ ದೋನಿ (ನಾಯಕ), ಆಶಿಶ್‌ ನೆಹ್ರಾ, ಡ್ವೇನ್‌ ಬ್ರಾವೊ, ಡ್ವೇನ್‌ ಸ್ಮಿತ್‌, ಫಾಫ್ ಡು ಪ್ಲೆಸಿಸ್, ಈಶ್ವರ್‌ ಪಾಂಡೆ, ಮ್ಯಾಟ್‌ ಹೆನ್ರಿ, ಮಿಥುನ್‌ ಮನ್ಹಾಸ್‌, ಮೋಹಿತ್‌ ಶರ್ಮಾ, ಪವನ್‌ ನೇಗಿ, ಆರ್‌. ಅಶ್ವಿನ್‌, ರವೀಂದ್ರ ಜಡೇಜ, ಸ್ಯಾಮುಯೆಲ್ ಬದ್ರಿ, ಸುರೇಶ್‌ ರೈನಾ, ರೋನಿತ್‌ ಮೋರೆ, ಮೈಕಲ್ ಹಸ್ಸಿ, ಬಾಬಾ ಅಪರಾಜಿತ್‌, ರಾಹುಲ್‌ ಶರ್ಮಾ. ಕೇಲ್‌ ಅಬಾಟ್, ಅಂಕುಶ್‌ ಬೈನ್ಸ್‌, ಇರ್ಫಾನ್‌ ಪಠಾಣ್‌, ಪ್ರತ್ಯುಷ್‌ ಸಿಂಗ್‌ ಮತ್ತು ಏಕಲವ್ಯ ದ್ವಿವೇದಿ.
*
ದೋನಿ ಅವರ ಗಟ್ಟಿ ನಿರ್ಧಾರಗಳಿಂದ ನಮಗೆ ಯಶಸ್ಸು ಲಭಿಸುತ್ತಿದೆ. ಮುಂಬೈ ಇಂಡಿಯನ್ಸ್‌ ಎದುರಿನ ಫೈನಲ್‌ ಕುತೂಹಲ ಮೂಡಿಸಿದೆ.
-ಸುರೇಶ್ ರೈನಾ,
ಸೂಪರ್ ಕಿಂಗ್ಸ್‌ ತಂಡದ ಆಟಗಾರ

ಆರಂಭದಲ್ಲಿ ನಮ್ಮ ತಂಡದ ಆಟ ಕಳಪೆಯಾಗಿತ್ತು. ಈಗ ಫೈನಲ್‌ ತಲುಪಿದ್ದು ದೊಡ್ಡ ಸಾಧನೆ. ಕಠಿಣ ಪರಿಶ್ರಮವೇ ಇದಕ್ಕೆ ಕಾರಣ.
-ರೋಹಿತ್‌ ಶರ್ಮಾ,
ಮುಂಬೈ ಇಂಡಿಯನ್ಸ್ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT