ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಚುಗಲ್ ಸವಾಲ್

ಸುತ್ತಾಣ
Last Updated 25 ಜುಲೈ 2014, 19:30 IST
ಅಕ್ಷರ ಗಾತ್ರ

ಗೆಳೆಯರ ಪಟಾಲಂ ಕಟ್ಟಿಕೊಂಡು ಹೊರಟಾಗ ಏನೋ ಹುರುಪು. ಹೊರಟಿದ್ದು ಸಣ್ಣ ಬೆಟ್ಟ ಹತ್ತುವುದಕ್ಕೆ. ಬೆಳಿಗ್ಗೆ 7ರ ಹೊತ್ತು. ತುಮಕೂರು ರಸ್ತೆಯ ಟಿ.ಬೇಗೂರಿನಲ್ಲಿ ತ್ಯಾಮಗೊಂಡ್ಲುವಿನ ಕಡೆಗೆ ತಿರುಗುವ ಬದಿಯಲ್ಲಿ ಗಾಡಿಗಳನ್ನು ನಿಲ್ಲಿಸಿ ‘ಪೂಜಾಶ್ರೀ ಇಡ್ಲಿ ಹೋಟೆಲ್‍’ ಹೊಕ್ಕೆವು.
ಮೆತ್ತಗಿನ ತಟ್ಟೆ ಇಡ್ಲಿ, ನೆಂಚಿಕೊಳ್ಳಲು ಖಾರಾ ಚಟ್ನಿ. ಮೈಯ್ಯಲ್ಲಿದ್ದ ಚಳಿಯೆಲ್ಲಾ ಓಡಿಹೋಗಿತ್ತು. ಮಧ್ಯಾಹ್ನಕ್ಕೆ ಒಂದಷ್ಟು ಚಿತ್ರಾನ್ನ, ವಡೆ ಕಟ್ಟಿಸಿಕೊಂಡು ಗಾಡಿ ಹತ್ತಿದೆವು.

ಅಲ್ಲಿಂದ ಒಂದೆರಡು ಕಿ.ಮೀ ಸಾಗುವಷ್ಟರಲ್ಲಿ ಮಹಿಮಾರಂಗನ ಬೆಟ್ಟ ಕೈಬೀಸಿ ಕರೆಯುತ್ತಿತ್ತು. ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿರುವ ಬೆಟ್ಟ ಹಲವು ಸಿನಿಮಾಗಳಲ್ಲಿ ಪಾತ್ರವೇ ಆಗಿದೆ. ಹೆಚ್ಚು ಕಡಿದಾದ, ಸುಮಾರು 150 ಮೆಟ್ಟಿಲುಗಳಿರುವ ಈ ಬೆಟ್ಟವನ್ನು ಹತ್ತಿ ಅದಾಗಲೇ ದಿಗಂತದಿಂದ ಮಾರುದ್ದ ಮೇಲೇರಿದ್ದ ನೇಸರನನ್ನು ಕಣ್ತುಂಬಿಕೊಂಡೆವು.

ಅಷ್ಟರಲ್ಲಾಗಲೇ ನಮ್ಮ ಗಾಡಿಗಳು ‘ನಮ್ಮನ್ನು ಮರೆತಿರಾ?’ ಎಂದು ಕರೆಯುತ್ತಿದ್ದವು. ಮತ್ತೆ ಪಯಣ ಮುಂದಕ್ಕೆ... ಅಲ್ಲಿಂದ 4-5 ಕಿ.ಮೀ ಕಳೆಯುವಷ್ಟರಲ್ಲಿ ಗಟ್ಟಿಗೆರೆ ಕ್ರಾಸ್. ಅಲ್ಲಿ ಮಾಗಡಿ ಕೆಂಪೇಗೌಡನ ಕಾಲದ ಮಂಟಪವುಂಟು. ಆಸಕ್ತಿಯಿದ್ದವರು ಅದನ್ನೊಮ್ಮೆ ನೋಡಬಹುದು. ಈ ಹಾದಿಯಲ್ಲಿ ಶಿವಗಂಗೆಗೆ ಹೋಗುವ ಹಲವು ಮಂದಿ ಬೆಂಗಳೂರಿಗರು ಎಡತಾಕುತ್ತಾರೆ. ಆದರೆ ನಮ್ಮ ಗುರಿ ಶಿವಗಂಗೆಯ ತುದಿಯಲ್ಲ.

ಆದರೂ ಗಟ್ಟಿಗೆರೆ ಕ್ರಾಸ್‌ನಲ್ಲಿ ನೇರವಾಗಿ ಶಿವಗಂಗೆಯ ಕಡೆ ಸಾಗಿದೆವು. ಶಿವಗಂಗೆ 1 ಕಿ.ಮೀ ದೂರವಿರುವಾಗ ಎಡಕ್ಕೆ ತಿರುಗಿದೆವು. ಅದು (ಎಸ್‍.ಎಚ್.74). ಈ ಹಾದಿಯಲ್ಲಿತ್ತು ನಮ್ಮ ಗುರಿ. ಅಲ್ಲಿಂದ  5 ಕಿ.ಮೀ ಕಳೆದಾಗ ಬಲಕ್ಕೆ ತಿರುಗಿದೆವು. ಅಲ್ಲಿತ್ತು ‘ಕೌಚುಗಲ್ ಮುನೇಶ್ವರ’ನ ಬೆಟ್ಟ. ಸ್ಥಳೀಯರೆಲ್ಲಾ ಕಾಚುಗಲ್ ಬೆಟ್ಟ, ಮುನೇಶ್ವರನ ಬೆಟ್ಟ ಎಂದೆಲ್ಲಾ ಕರೆಯುವ ಈ ಬೆಟ್ಟ ಸಣ್ಣ ಚಾರಣಕ್ಕೊಂದು ಹೇಳಿ ಮಾಡಿಸಿದ ತಾಣ.

ಆಷಾಢದ ಗಾಳಿಗೆ ಸುತ್ತಮುತ್ತಲ ಕಾಡೆಲ್ಲಾ ಸುಂಯ್‌ಗುಡುತಿತ್ತು. ಹೊಂಬಿಸಿಲಿನಲ್ಲೂ ಆಗಸಕ್ಕೆ ನೆಗಡಿಯಾದಂತೆ ಜಿನುಗುತ್ತಲೇ ಇದ್ದ ಜಡಿಗೆ ನವಿಲುಗಳು ಕೇಕೆ ಹಾಕುತ್ತಿದ್ದವು. ಬೆಟ್ಟದ ಕಣಿವೆಯಿಂದ ಹೊರಟ ಕೇಕೆ ಸುತ್ತಮುತ್ತಲ ಗುಡ್ಡಗಳಿಗೆಲ್ಲಾ ಬಡಿದು ಮಾರ್ದನಿಸುತ್ತಿತ್ತು. ಬೆಟ್ಟದ ಅರ್ಧ ಹಾದಿಯವರೆಗೂ ಮಣ್ಣ ಹಾದಿಯಿದ್ದರೂ ಕಾಡಿನ ಮಧ್ಯೆ ಈ ಬೈಕುಗಳೆಲ್ಲಾ ಬಂದರೆ ಚಾರಣಕ್ಕೇ ಅವಮಾನವೆಂದು, ಅವುಗಳ ಬಾಯಿಗೆ ಬೀಗ ಹಾಕಿ ಕಣಿವೆ ಇಳಿಯತೊಡಗಿದೆವು. 10 ನಿಮಿಷ ಕಣಿವೆಯ ತಳದಲ್ಲಿದ್ದೆವು. ಹಿಂದಿನ ಒಂದೆರಡು ದಿನಗಳಲ್ಲಿ ಇಲ್ಲೆಲ್ಲಾ ಮಳೆಯಾಗಿರಬೇಕು. ಕಣಿವೆಯ ತಳದಲ್ಲಿ ಸಣ್ಣಗೆ ಝರಿ ಹರಿಯುತ್ತಿತ್ತು. ಕಾಡಿನ ನಾರು ಬೇರುಗಳಿಂದೆಲ್ಲಾ ಜಿನುಗಿ ಹರಿಯುತ್ತಿದ್ದ ಝರಿಯ ಸಿಹಿನೀರನ್ನು ಇದ್ದಬದ್ದ ಬಾಟೆಲ್‌ಗಳಿಗೆಲ್ಲಾ ತುಂಬಿಸಿಕೊಂಡೆವು. ಅಲ್ಲಿಂದ ಮುನೇಶ್ವರ ಸನ್ನಿಧಿಗೆ ನೇರ ಮೆಟ್ಟಿಲುಗಳಿದ್ದರೂ ಬಲಕ್ಕೆ ಹೊರಳಿ ಕಾಡಿಗಿಳಿದೆವು. ನಮಗೆ ಬೇಕಿದ್ದದ್ದು ಚಾರಣ.

ಹಸಿರು ನಗೆ ತುಳುಕಿಸುತ್ತಿದ್ದ ಕಾಡುಗಿಡಗಳನ್ನು, ಲಂಟಾನ ಪೊದೆಗಳನ್ನು ಭೇದಿಸಿಕೊಂಡು ಮುನ್ನಡೆದವು. ಕಾಡಿನ ಸೆರಗು ಮುಗಿಯುವಲ್ಲಿ ಕಡಿದಾದ ಬಂಡೆ ಎದುರಾಯಿತು. ಕತ್ತೆತ್ತಿ ನೋಡಿದರೂ ತುದಿ ಕಾಣದ ಬಂಡೆ. ಚಾರಣಿಗರಿಗೆ ನಿಜಕ್ಕೂ ಮುದ ನೀಡುವ ಸಂಗತಿಯದು. ಕೈಲಿದ್ದ ದಂಡಗಳನ್ನೂರುತ್ತಾ ಬೆಟ್ಟವನ್ನೇರತೊಡಗಿದೆವು. ಒಂದು ಹಂತ ಮುಗಿದೊಡನೆ ಮತ್ತೊಂದು, ಅದೂ ಮುಗಿದೊಡನೆ ಇನ್ನೊಂದು. ಹೀಗೆ ಮೂರು ಹಂತದ ಬಂಡೆಯನ್ನೇರುವಷ್ಟರಲ್ಲಿ ಬೆಟ್ಟದ ಮೇಲೊಂದು ದ್ವೀಪದಂತಹ ಕಾಡು.

ಸುತ್ತಲೂ ಆವರಿಸಿದ ಬಂಡೆಯ ಕಣಿವೆಯಲ್ಲಿ ಎಳೆಂಟು ಎಕರೆಯಷ್ಟು ದಟ್ಟವಾದ ಕಾಡು. ಧೂಪ, ಕಾಡು ಬಾದಾಮಿ, ಮುತ್ತುಗ, ಗೇರು ಮೊದಲಾದ ಕಾಡು ಮರಗಳು, ಆಳೆತ್ತರದ ಹುಲ್ಲು. ಅಲ್ಲೆಲ್ಲಾ ಮೊಲದ ಹಿಕ್ಕೆಗಳು. ತಣ್ಣಗೆ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ ಕಾಡಲ್ಲಿ ಒಂದಾಗಿ ಹೋದೆವು. ಆಗ ಕಾಡೂ ಮಾತಾಡತೊಡಗಿತ್ತು. ನಮ್ಮ ಇರುವಿನಿಂದ ಕಸಿವಿಸಿಗೊಳ್ಳದ ಮಂಗಗಳ ಗುಂಪು ಯಾವುದೋ ಕಾಡು ಹಣ್ಣಿಗೆ ಮುಗಿಬಿದ್ದಿದ್ದವು. ಮತ್ಯಾವುದೋ ಬಂಡೆಯ ಕೊರಕಲಿನಿಂದ ಹೊರಬಂದ ಮುಂಗುಸಿ ನಮ್ಮನ್ನು ನೋಡಿ ಮತ್ತೊಂದು ಕೊರಕಲನ್ನು ಸೇರಿತು. ಕೇಕೆ ಹಾಕಿ ಮನಸ್ಸಿಗೆ ಮುದ ನೀಡುತ್ತಿದ್ದ ನವಿಲುಗಳು ರೆಕ್ಕೆ ಬೀಸಿ, ಬೆಚ್ಚಿ ಬೀಳಿಸಿ, ಬೆಟ್ಟದ ತಪ್ಪಲಿನ ಕಾಡಿನಲ್ಲಿ ಅಂತರ್ಧಾನವಾದವು.

ವಿಶಾಲವಾಗಿದ್ದ ಬಂಡೆಯ ಮೇಲೆ ಕುಳಿತು, ತಂದಿದ್ದ ಚಿತ್ರಾನ್ನ, ವಡೆ, ಪಪ್ಸ್ ಮುಗಿಸಿದೆವು. ಒಂದಷ್ಟು ಹೊತ್ತು ಹರಟೆ ಹೊಡೆದು ಕಣಿವೆಗೆ ಇಳಿಯತೊಡಗಿದೆವು. ಅದೇ ದಾರಿಯಲ್ಲಿ ಇಳಿಯುವುದೇ? ಬೇಡ, ಬೆಟ್ಟದ ಬೇರೊಂದು ಮಗ್ಗುಲಲ್ಲಿ ಇಳಿದು ಮಧ್ಯಭಾಗದಲ್ಲಿದ್ದ ಮುನೇಶ್ವರನ ಗುಡಿಯೆಡೆಗೆ ಹೆಜ್ಜೆ ಹಾಕಿದೆವು. ನಾವು ಹತ್ತಿದ್ದ ಬಂಡೆಯ ಕೆಳಗೆ ಮತ್ತೂ ವಿಶಾಲವಾದ ಬಂಡೆಯಿತ್ತು. ಈ ಎರಡೂ ಬಂಡೆಗಳ ಮಧ್ಯದಲ್ಲಿ ಉಳಿದಿದ್ದ ವಿಶಾಲವಾದ ಗವಿಯಲ್ಲಿ ಮುನೇಶ್ವರನ ಗುಡಿ. ದೊಡ್ಡ ಬಂಡೆಯ ಮೇಲೆ ಸಣ್ಣ ಬಂಡೆಯೊಂದು ಕವುಚಿ  ಬಿದ್ದಂತಿರುವುದರಿಂದಲೇ ಇದು ಕೌಚುಗಲ್ ಮುನೇಶ್ವರ ಎಂದು ಹೆಸರಾಗಿರಬೇಕು. ಗವಿಗೇ ತಡೆಗೋಡೆಗಳನ್ನು ಕಟ್ಟಿ ಗುಡಿ ಕಟ್ಟಲಾಗಿದೆ. ಗವಿಯೊಳಗೆ ನೀರಿನ ಒರತೆಯಿದೆ. ತಣ್ಣಗೆ ಕೊರೆಯುವ ಈ ನೀರು ಗವಿಯಲ್ಲಿನ ಬಾವಿಯಲ್ಲಿ ಶೇಖರವಾಗಿ ಹೊರ ಹರಿಯುತ್ತದೆ.
ಮುನೇಶ್ವರನಿಗೆ ನಮಿಸಿ ಬೈಕ್‌ಗಳತ್ತ ಹೆಜ್ಜೆ ಹಾಕಿದೆವು.

ಮಧ್ಯಾಹ್ನ ಒಂದು ದಾಟಿತ್ತಷ್ಟೆ. ಬೆಟ್ಟದ ಹಿಂದೆ ಒಂದು ವಿಶಾಲವಾದ ಕಾಡಿದೆ. ಕಾಡಿನ ಮಧ್ಯೆ ಸ್ವಚ್ಛವಾದ ಕೆರೆ. ಬೆಟ್ಟದ ಮೇಲ್ಭಾಗದ ಮೂಲೆಯೊಂದರಲ್ಲಿ ಐಲ್‍ಚುಕ್ಕಿ ಗವಿ ಇದೆ ಎಂದು ಕುರಿ ಕಾಯುವ ಹುಡುಗರು ಹೇಳಿದರು. ಇದೇ ಕಾಡಿನಲ್ಲಿ ಹಿಂದೊಮ್ಮೆ ಎರಡು ರಾತ್ರಿ ಕಳೆದಿದ್ದ ಗೆಳೆಯರು ಹೊರಡೋಣ ಎಂದರು. ಆ ಹುಡುಗರಿಗೆ, ‘ನಾನೂ ಮೈಲನಹಳ್ಳಿಯೋನೆ ಕಣೇಳ್ರಿ’ ಎಂದು ಬೈಕನ್ನೇರಿದೆವು.
ಮುಂದಿನ ಅರ್ಧ ಗಂಟೆಯಲ್ಲಿ ಗುಡೆಮಾರನಹಳ್ಳಿ ಹ್ಯಾಂಡ್‌ಪೋಸ್ಟ್ ಹಾದು, ಮಾಗಡಿ ತಲುಪಿದ್ದೆವು. ಮಾಗಡಿಯ ಸಂತೆ ಬೀದಿಯಲ್ಲಿ ಹತ್ತಾರು ಲೀಟರು ‘ತುಮಕೂರು ಪುರಿ’, ‘ತುಮಕೂರು ಖಾರದ ಕಡಲೆಬೀಜ’ ಮತ್ತು ಬಿಸಿ ಬಿಸಿ ಖಾರಾಬೂಂದಿ ಕೊಂಡು ಗಾಡಿ ಬಿಟ್ಟೆವು. ಮತ್ತೊಂದು 25 ಕಿ.ಮೀ ಸವೆಸುವಷ್ಟರಲ್ಲಿ ತಿಪ್ಪಗೊಂಡನಹಳ್ಳಿ ಡ್ಯಾಂ ದಾಟಿದ್ದೆವು.

ಹಿಂದೊಮ್ಮೆ ಬೆಂಗಳೂರಿಗೆ ನೀರು ಕುಡಿಸುತ್ತಿದ್ದ ಈ ಡ್ಯಾಂ ತುಂಬಿ ಹಲವು ವರ್ಷಗಳೇ ಕಳೆದಿವೆ. ಆದರೂ ಅದರ ಹಿನ್ನೀರು ನೋಡಲು ಚೆಂದ. ಡ್ಯಾಂನ ಮುಂಭಾಗ ಹಾದು ಬರುವಾಗ ಎದುರಾಗುವ ಘಾಟನ್ನು ಏರಿ ಇಳಿದರೆ ಬಿಡಬ್ಲ್ಯುಎಸ್‍ಎಸ್‍ಬಿ ಬೈಪ್‍ಲೈನ್ ಹಾದಿ ಸಿಗುತ್ತದೆ. ಅಲ್ಲಿ ಬೈಕ್‌ಗಳನ್ನು ಪಾರ್ಕ್ ಮಾಡಿ ಜಲಾಶಯದ ಹಿನ್ನೀರಿನೆಡೆಗೆ ಹೆಜ್ಜೆ ಹಾಕಿದೆವು.

ಕೊರಕಲು ಬಿದ್ದ ಹಾದಿಯಲ್ಲಿ ಒಂದು ಕಿ.ಮೀ ನಡೆದು ಹಿನ್ನೀರಿನ ತೀರ ತಲುಪಿದರೆ ಮತ್ತೊಂದು ಲೋಕ ಮೈದೆಳೆಯಿತು. ಹಿನ್ನೀರಿನ ಮಧ್ಯದಲ್ಲಿರುವ ದೇವಸ್ಥಾನವೊಂದು ತನ್ನ ಗತವೈಭವ ನೆನಪಿಸುತ್ತದೆ. ಕುಲುಮೆಯಲ್ಲಿ ಕಾಸಿದ ಕಬ್ಬಿಣದ ತುಣುಕುಗಳು ನೀರಿನ ಹೊಡೆತಕ್ಕೆ ನುಣುಪಾಗಿವೆ. ಹಳೆ ಮನೆಗಳ ಅಡಿಪಾಯಗಳು, ಈಗಲೂ ಚೆನ್ನಾಗೇ ಇರುವ ಸುಟ್ಟ ಇಟ್ಟಿಗೆಗಳು.. ಹಿಂದೆಂದೋ ಜೀವಂತವಾಗಿದ್ದ, ಈಗ ನೀರಿನಲ್ಲಿ ಮುಳುಗಿರುವ ತಿಪ್ಪಗೊಂಡನಹಳ್ಳಿ ನಮ್ಮೆದುರು ನಿಂತು ಕಥೆ ಹೇಳಿತು. ಕಥೆ ಕೇಳುತ್ತಾ ಕಡಲೆಪುರಿ ಮುಗಿದ ಮೇಲೆ ಮನೆಯ ಚಿಂತೆ ಶುರುವಾಯಿತು. ಮತ್ತೊಂದು ಗಂಟೆಯಲ್ಲಿ ಮನೆಯಲ್ಲಿದ್ದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT