ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಂಪಸ್‌ ಅಂಗಳದಲ್ಲಿ ನೀರಿಗೆ ಅಭಾವ

ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ; 42 ಎಕರೆ ಭೂಮಿಯಲ್ಲಿ ಕ್ಯಾಂಪಸ್‌ ಅಭಿವೃದ್ಧಿ
Last Updated 6 ಮೇ 2016, 9:53 IST
ಅಕ್ಷರ ಗಾತ್ರ

ಚಾಮರಾಜನಗರ: ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಲು ಭಾರತೀಯ ವೈದ್ಯಕೀಯ ಮಂಡಳಿ ಅನುಮೋದನೆ ನೀಡಿದೆ.
ಜುಲೈನಿಂದ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಾರಂಭವಾಗಲಿದೆ. ಆದರೆ, ಇನ್ನೂ ಕಾಲೇಜಿನ ಕ್ಯಾಂಪಸ್‌ಗೆ ಕಬಿನಿ ನದಿಮೂಲದಿಂದ ಕುಡಿಯುವ ನೀರು ಪೂರೈಸುವ ಯೋಜನೆಯ ಅನುಷ್ಠಾನಕ್ಕೆ ಕ್ರಮವಹಿಸಿಲ್ಲ. ತ್ವರಿತವಾಗಿ ಯೋಜನೆ ಅನುಷ್ಠಾನಗೊಳ್ಳದಿದ್ದರೆ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯು ಕುಡಿಯುವ ನೀರು ಇಲ್ಲದೆ ತೊಂದರೆಗೆ ಸಿಲುಕಲಿದ್ದಾರೆ.

42 ಎಕರೆ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜಿನ ಕ್ಯಾಂಪಸ್‌ ನಿರ್ಮಿಸಲಾಗಿದೆ. ಕಾಮಗಾರಿಯ ಗುತ್ತಿಗೆ ಪಡೆದ ಕಂಪೆನಿಯು ಕ್ಯಾಂಪಸ್‌ನಲ್ಲಿ 12 ಕೊಳವೆಬಾವಿ ಕೊರೆದಿತ್ತು. ಆದರೆ, ಒಂದು ಕೊಳವೆಬಾವಿಯಲ್ಲೂ ನೀರು ಲಭಿಸಿರಲಿಲ್ಲ. ಇದರಿಂದ ಕಟ್ಟಡದ ಕಾಮಗಾರಿಗೆ ತೊಂದರೆಯಾಗಿತ್ತು.

ಕೊನೆಗೆ, ಕಂಪೆನಿಯು ಬೇರೊಂದು ಪ್ರದೇಶದಲ್ಲಿ ಕೊಳವೆಬಾವಿಗಳನ್ನು ಕೊರೆದು ಅಲ್ಲಿಂದ ಪ್ರತಿದಿನ 1.50 ಲಕ್ಷ ಲೀಟರ್‌ ನೀರನ್ನು 6 ಟ್ಯಾಂಕರ್‌ಗಳ ಮೂಲಕ ತರಿಸಿಕೊಂಡು ಕಟ್ಟಡದ ಕಾಮಗಾರಿ ಪೂರ್ಣಗೊಳಿಸಿದೆ. ನದಿ ಮೂಲದಿಂದ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸದಿದ್ದರೆ ಕ್ಯಾಂಪಸ್‌ನಲ್ಲಿ ನೀರಿನ ತತ್ವಾರ ಉಂಟಾಗುವುದು ಕಟ್ಟಿಟ್ಟಬುತ್ತಿ.

ಇನ್ನು ಕಟ್ಟಡದ ವಿದ್ಯುತ್‌ ಕಾಮಗಾರಿ ಪೂರ್ಣಗೊಂಡಿಲ್ಲ. ಅಲ್ಲದೆ ಗುಂಡ್ಲುಪೇಟೆ ರಸ್ತೆಯಿಂದ ಕಾಲೇಜಿನ ಕಟ್ಟಡದವರೆಗೆ ಜೋಡಿರಸ್ತೆ ನಿರ್ಮಾಣಕ್ಕೂ ಚಾಲನೆ ಸಿಕ್ಕಿಲ್ಲ.
150 ಸೀಟು ಲಭ್ಯ: ವೈದ್ಯಕೀಯ ಕಾಲೇಜಿನಲ್ಲಿ 150 ವಿದ್ಯಾರ್ಥಿಗಳ ಪ್ರವೇಶಾತಿಗೆ ಅವಕಾಶವಿದೆ. ಈಗಾಗಲೇ ಕಟ್ಟಡದ ಕಾಮಗಾರಿಯು ಶೇ 95ರಷ್ಟು ಪೂರ್ಣಗೊಂಡಿದೆ. ಬಣ್ಣ ಬಳಿಯುವುದಷ್ಟೇ ಬಾಕಿ ಉಳಿದಿದೆ.

₹ 120.35 ಕೋಟಿ ವೆಚ್ಚದಡಿ ಕಾಲೇಜಿನ ಕಟ್ಟಡ, ಸಭಾಂಗಣ, ಪ್ರಯೋಗಾಲಯ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಹಾಸ್ಟೆಲ್‌, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ವಸತಿಗೃಹ ನಿರ್ಮಿಸಲಾಗಿದೆ.

2014ರ ಫೆ. 23ರಂದು ವೈದ್ಯಕೀಯ ಶಿಕ್ಷಣ ಸಚಿವರು ಈ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ದ್ದರು. ಆದರೆ, ಗುತ್ತಿಗೆದಾರರು ನ್ಯಾಯಾಲಯದ ಮೆಟ್ಟಿಲು ಹತ್ತಿದ ಪರಿಣಾಮ 7 ತಿಂಗಳ ಕಾಲ ಕಾಮಗಾರಿ ಆರಂಭಕ್ಕೆ ವಿಳಂಬವಾಯಿತು.

ಆ ವರ್ಷವೇ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಬ್ಲಾಕ್‌ ವೊಂದರಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಬಗ್ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು. ಸ್ಥಳ ಪರಿಶೀಲಿಸಿದ ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯರು ಕಾಲೇಜು ಆರಂಭಿಸಲು ಅನುಮತಿ ನೀಡಲಿಲ್ಲ.

2015ನೇ ಸಾಲಿನಲ್ಲಿ ಕಾಲೇಜು ಪ್ರಾರಂಭಿಸಲು ಸಿದ್ಧತೆ ನಡೆದಿತ್ತು. ಆ ವರ್ಷ ಮಂಡಳಿಯ ಸದಸ್ಯರು ಜಿಲ್ಲೆಗೆ ಭೇಟಿ ನೀಡುವ ವೇಳೆಗೆ ಕಾಲೇಜಿನ ಕಟ್ಟಡ ಕಾಮಗಾರಿ ಪೂರ್ಣಗೊಂಡಿ ರಲಿಲ್ಲ. ಹಾಗಾಗಿ, ಅಡತಡೆಯ ನಡುವೆ ಎರಡು ವರ್ಷದ ಬಳಿಕ ಕಾಲೇಜು ಕಾರ್ಯಾರಂಭಕ್ಕೆ ಸಜ್ಜಾಗಿದೆ.

ಬೋಧಕರ ನೇಮಕ: ಈಗಾಗಲೇ, ಕಾಲೇಜಿಗೆ 110 ಬೋಧಕರನ್ನು ನೇಮಿಸಲಾಗಿದೆ. ಎಲ್ಲ ವೈದ್ಯರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. 180 ಶುಶ್ರೂಷಕರ ಅಗತ್ಯವಿದ್ದು, ಈ ಪೈಕಿ  ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ 60 ಶುಶ್ರೂಷಕ ರನ್ನು ಕಾಲೇಜಿಗೆ ನಿಯೋಜಿಸಲಾಗುತ್ತದೆ.

‘ಹೊಸದಾಗಿ 80 ಶುಶ್ರೂಷಕರ ನೇಮಕಾತಿ ಪೂರ್ಣಗೊಂಡಿದೆ. ಉಳಿದ 40 ಶುಶ್ರೂಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 200 ಮಂದಿ ಅರೆವೈದ್ಯಕೀಯ, ‘ಡಿ’ ಗ್ರೂಫ್‌ ನೌಕರರ ಅಗತ್ಯವಿದೆ. ಹೊರಗುತ್ತಿಗೆ ಆಧಾರದ ಮೇಲೆ ಈ ಸಿಬ್ಬಂದಿಯ ನೇಮಕಕ್ಕೆ ಕ್ರಮವಹಿಸಲಾಗಿದೆ’ ಎಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್‌ ಡಾ.ಟಿ.ಎನ್‌. ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT