ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಯೊಜೆನಿಕ್‌ ಅಭಿವೃದ್ಧಿ: ಬಾನೆತ್ತರದ ಸಾಧನೆ

ಎರಡು ದಶಕಗಳ ತಪಸ್ಸು: ತಂತ್ರಜ್ಞಾನ ನಿರಾಕರಣೆಗೆ ತಿರುಗೇಟು
Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಎರಡು ದಶಕಗಳ ಹಿಂದೆ ಅಮೆರಿಕದ ಒತ್ತಡದಿಂದಾಗಿ ಭಾರತಕ್ಕೆ ಕ್ರಯೊಜೆನಿಕ್ ತಂತ್ರಜ್ಞಾನವನ್ನು ನಿರಾ­ಕರಿಸ­ಲಾಗಿತ್ತು. ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯಮವನ್ನು ನೆಪವಾಗಿ ಒಡ್ಡಲಾಗಿತ್ತು. ಈ ಅಡ್ಡಿಗಳನ್ನು ದಾಟಿ ಭಾರತ ದೇಶೀಯವಾಗಿ ಅಭಿವೃದ್ಧಿ­ಪಡಿಸಿದ  ಕ್ರಯೊಜೆನಿಕ್ ಎಂಜಿನ್‌  ಭಾನುವಾರ ಭಾರಿ ರಾಕೆಟನ್ನು ಗಗನ ತಲುಪಿಸಿ ಯಶಸ್ಸಿನ ನಗೆ ಬೀರಿತು.

ಕ್ರಯೊಜೆನಿಕ್ ರಾಕೆಟ್‌ ತಂತ್ರಜ್ಞಾನ­ದಲ್ಲಿ ಅತಿಯಾಗಿ ತಂಪಾಗಿಸಿದ ದ್ರವ ಇಂಧನ ಬಳಸಲಾಗುತ್ತದೆ (ಮೈನಸ್‌ 183 ಡಿಗ್ರಿ ಸೆಲ್ಸಿಯಸ್‌ನಷ್ಟು ತಂಪಾಗಿ­ಸಿದ ಆಮ್ಲಜನಕ ಮತ್ತು ಮೈನಸ್‌ 253 ಸೆಲ್ಸಿಯಸ್‌ನಷ್ಟು ತಂಪಾಗಿಸಿದ ಜಲ­ಜನಕ). ಭಾರಿ ತೂಕದ ಉಪಕರಣ­ಗಳನ್ನು ಬಾಹ್ಯಾಕಾಶಕ್ಕೆ ತಳ್ಳುವುದಕ್ಕೆ ಅಗತ್ಯವಾದ ಅಪಾರ ಪ್ರಮಾಣದ ಶಕ್ತಿ ಇದರಿಂದ ಉತ್ಪಾದನೆಯಾಗುತ್ತದೆ.
ಆದರೆ ಘನ ಇಂಧನ ಬಳಸುವ ಎಂಜಿನ್‌ಗೆ ಹೋಲಿಸಿದರೆ ಇದು ಅತ್ಯಂತ ಸಂಕೀರ್ಣ ತಂತ್ರಜ್ಞಾನ. ಇದರಲ್ಲಿ ಹಲವು ವೈಜ್ಞಾನಿಕ ಮತ್ತು ತಾಂತ್ರಿಕ ಸವಾಲುಗಳಿವೆ.

ಅಮೆರಿಕ, ರಷ್ಯಾ, ಯುರೋಪ್‌, ಚೀನಾ ಮತ್ತು ಜಪಾನ್‌ ಈ ತಂತ್ರ­ಜ್ಞಾನ­ವನ್ನು ಹೊಂದಿವೆ. ಆದರೆ ಇವರು ಅದನ್ನು ಯಾರಿಗೂ ಕೊಡದೆ ಮುಚ್ಚಿಟ್ಟುಕೊಂಡಿದ್ದಾರೆ.

ಅಡ್ಡಗಾಲಾದ ಅಮೆರಿಕ: 1980ರ ಕೊನೆಯ ಭಾಗದಲ್ಲಿ ಭಾರತ ಕ್ರಯೊ­ಜೆನಿಕ್‌ ತಂತ್ರಜ್ಞಾನದ ಹುಡುಕಾಟ­ದಲ್ಲಿತ್ತು. ಆಗ ಅಮೆರಿಕದ ಶಸ್ತ್ರ ತಯಾರಿಕಾ ಸಂಸ್ಥೆ ಜನರಲ್‌ ಡೈನಮಿಕ್‌ ಕ್ರಯೊಜೆನಿಕ್‌ ಎಂಜಿನನ್ನು ಭಾರತಕ್ಕೆ ನೀಡುವುದಕ್ಕೆ ಮುಂದೆ ಬಂತು. ಯುರೋಪ್‌ನ ಏರಿಯನ್‌ಸ್ಪೇಸ್‌ ಕೂಡ ಎಂಜಿನ್‌ ನೀಡಲು ಸಿದ್ಧವಾಯಿತು. ಆದರೆ ಎರಡೂ ಕಂಪೆನಿಗಳು ಕೇಳಿದ್ದ ಬೆಲೆ ಭಾರತದ ಕೈಗೆಟುಕುವ ಮಟ್ಟದಲ್ಲಿ ಇರಲಿಲ್ಲ.

‘ಆಗ ಸೋವಿಯತ್‌ ಒಕ್ಕೂಟ, ಎರಡು ಎಂಜಿನ್‌ಗಳು ಮತ್ತು ತಂತ್ರಜ್ಞಾನ­ವನ್ನು ಹಸ್ತಾಂತರಿಸಲು ಒಪ್ಪಿತು. ಸೋವಿಯತ್‌ ಆಗ ಕೇಳಿದ್ದು ಈಗಿನ  ಮೌಲ್ಯದಲ್ಲಿ ಸುಮಾರು ರೂ1200 ಕೋಟಿ. ಅದು ಭಾರತ ಪಾವತಿಸಬಹುದಾದ ಮೊತ್ತವಾಗಿತ್ತು’ ಎಂದು ಬಾಹ್ಯಾಕಾಶ ವಿಷಯಗಳ ಬಗ್ಗೆ ಬರೆಯುವ ಬ್ರಿಯಾನ್‌ ಹಾರ್ವೆ ‘ರಷ್ಯಾ ಇನ್‌ ಸ್ಪೇಸ್‌: ದಿ ಫೈಲ್ಡ್‌ ಫ್ರಾಂಟಿಯರ್‌’ (ಬಾಹ್ಯಾಕಾಶದಲ್ಲಿ ರಷ್ಯಾ: ವಿಫಲಗೊಂಡ ರಂಗ) ಎಂಬ ಕೃತಿಯಲ್ಲಿ ಬರೆದಿದ್ದಾರೆ.

1991ರ ಜನವರಿ 18ರಂದು ಈಗಿನ ಮೌಲ್ಯದಲ್ಲಿ ರೂ720 ಕೋಟಿ ಮೊತ್ತಕ್ಕೆ ರಷ್ಯಾದ ಗ್ಲಾವ್‌ಕಾಸ್ಮೊಸ್‌ ಕಂಪೆನಿ­ಯೊಂದಿಗೆ ಇಸ್ರೊ ಒಪ್ಪಂದ ಮಾಡಿ­ಕೊಂಡಿತು. ಎರಡು ಕೆವಿಡಿ1 ಕ್ರಯೊಜೆನಿಕ್‌ ಎಂಜಿನ್‌ ಮತ್ತು ಪೂರ್ಣ ತಂತ್ರಜ್ಞಾನ ಹಸ್ತಾಂತರ ಈ ಒಪ್ಪಂದದ ತಿರುಳಾಗಿತ್ತು. ಅದು ಸೋವಿಯತ್‌ ಒಕ್ಕೂಟ ಶಿಥಿಲಗೊಳ್ಳುತ್ತಿದ್ದ ಕಾಲ. ಹಾಗಾಗಿ ಈ ವ್ಯವಹಾರವನ್ನು ತಡೆ­ಯಲು ಅಮೆರಿಕ ಒತ್ತಡ ಹಾಕಲಿದೆ ಎಂಬುದು ಒಪ್ಪಂದಕ್ಕೆ ಸಹಿ ಹಾಕಿದ ಎರಡೂ ಸಂಸ್ಥೆಗಳಿಗೆ ಅರಿವಿತ್ತು.

ಹಾಗಾಗಿಯೇ ಇಸ್ರೊ ಮತ್ತು ಗ್ಲಾವ್‌ಕಾಸ್ಮೊಸ್‌ ಇನ್ನೊಂದು ಯೋಜನೆ­ಯನ್ನೂ ಹೊಂದಿದ್ದವು. ಅದೆಂದರೆ, ಸರ್ಕಾರಿ ಸ್ವಾಮ್ಯದ ಕೇರಳ ಹೈ ಟೆಕ್‌ ಇಂಡಸ್ಟ್ರೀಸ್‌ಗೆ ಕ್ರಯೊಜನಿಕ್‌ ಎಂಜಿನ್‌ ತಯಾರಿಕೆಯ ಹೊರಗುತ್ತಿಗೆ ನೀಡುವುದು.

ಆದರೆ ಮೊದಲಿಗೆ, ಜಾರ್ಜ್ ಬುಷ್‌ ಮತ್ತು ನಂತರ ಬಿಲ್‌ ಕ್ಲಿಂಟನ್‌ ಆಡಳಿತ­ದಲ್ಲಿ ಈ ಒಪ್ಪಂದ ರದ್ದು­ಪಡಿಸಲು ಅಮೆರಿಕ ಟೊಂಕ ಕಟ್ಟಿ ನಿಂತಿತು. ಹಾಗಾಗಿ ಒಪ್ಪಂದವನ್ನು ಮರು ರೂಪಿಸಬೇಕಾಯಿತು.

ಹಿಂದೆ ಸರಿದ ರಷ್ಯಾ: ಅಮೆರಿಕದ ಒತ್ತಡಕ್ಕೆ ಮಣಿದ ರಷ್ಯಾ 1993ರ ಜುಲೈಯಲ್ಲಿ ಕ್ರಯೊಜೆನಿಕ್‌ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಿಂದ ಹಿಂದೆ ಸರಿಯಿತು. ತಂತ್ರಜ್ಞಾನ ನೀಡುವುದು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ನಿಯ­ಮದ ಉಲ್ಲಂಘನೆಯಾಗುತ್ತದೆ ಎಂಬುದು ಇದಕ್ಕೆ ಕಾರಣವಾಗಿತ್ತು. ತಂತ್ರಜ್ಞಾನದ ಬದಲಿಗೆ ಇನ್ನೂ ಎರಡು ಕ್ರಯೊಜನಿಕ್‌ ಯಂತ್ರಗಳನ್ನು ನೀಡು­ವು­­ದಾಗಿ ರಷ್ಯಾ ಹೇಳಿತು. ಈ ಯಂತ್ರ­ಗಳನ್ನು ಶಾಂತಿಯುತ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂಬ ಷರತ್ತು ಕೂಡ ಇತ್ತು. ‘ರಾಜಕೀಯ ಪರಿಸ್ಥಿತಿ­ಯಿಂದಾಗಿ ತಂತ್ರಜ್ಞಾನ ವರ್ಗಾವಣೆ ಸಾಧ್ಯವಾಗಲಿಲ್ಲ. ಏಳು ಕ್ರಯೊಜೆನಿಕ್‌ ಯಂತ್ರಗಳ ಪೂರೈಕೆಗಷ್ಟೆ ರಷ್ಯಾ­ದೊಂದಿ­ಗಿನ ಒಪ್ಪಂದ ಸೀಮಿತ­ವಾಯಿತು’ ಎಂದು ಕರೆಂಟ್‌ ಸೈನ್ಸ್‌ ನಿಯತಕಾಲಿಕದಲ್ಲಿ 2001ರಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಜಿ. ಮಾಧವನ್‌ ನಾಯರ್‌ ಸೇರಿದಂತೆ ಇಸ್ರೊದ ನಾಲ್ವರು ವಿಜ್ಞಾನಿಗಳ ತಂಡ ಬರೆದಿದೆ. ತಮಿಳುನಾಡಿನ ಮಹೇಂದ್ರಗಿರಿ­ಯಲ್ಲಿ­ರುವ ಲಿಕ್ವಿಡ್‌ ಪ್ರೊಪಲ್ಶನ್‌ ಸಿಸ್ಟಮ್ಸ್‌ ಸೆಂಟರ್‌ನಲ್ಲಿ ರಷ್ಯಾ ನೆರವಿನೊಂದಿಗೆ ಕ್ರಯೊಜೆನಿಕ್‌ ಮೇಲಿನ ಹಂತದ ಯಂತ್ರ­ವನ್ನು ಇಸ್ರೊ ಅಭಿವೃದ್ಧಿ­ಪಡಿಸಿತು.

ಯಶಸ್ಸಿನ ಸಿಹಿ: ಆರಂಭದಲ್ಲಿ ಹಲವು ವೈಫಲ್ಯಗಳನ್ನೇ ಕಾಣಬೇಕಾಯಿತು. 2012ರ ಮೇ ನಲ್ಲಿ ಮೊದಲ ಯಶಸ್ಸಿನ ಕಿರಣ ಕಾಣಿಸಿಕೊಂಡಿತು. ಜಿಎಸ್‌ಎಲ್‌ವಿಡಿ5 ನೆಗೆತಕ್ಕೆ ಸ್ವದೇಶಿ ನಿರ್ಮಿತ ಕ್ರಯೊಜೆನಿಕ್‌ ಎಂಜಿನ್‌ ಬಳಸಿ ಪರೀಕ್ಷೆ ನಡೆಸಲಾಯಿತು. 200 ಸೆಕೆಂಡ್‌ಗಳ ಪರೀಕ್ಷೆ ಯಶಸ್ವಿ­ಯಾಯಿತು. ಎಂಜಿನ್‌ನ ಕಾರ್ಯದಕ್ಷತೆ ನಿರೀಕ್ಷೆಗೆ ಅನುಗುಣವಾಗಿಯೇ ಇತ್ತು. ಭಾನುವಾರದ ಯಶಸ್ಸು ಭಾರತದ ದೇಶೀಯ ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದೆ.

ಆಕಾಶವೇ ಎಲ್ಲೆ
ತಿರುವನಂತಪುರ(ಐಎಎನ್‌ಎಸ್‌): ‘ಭಾರ­ತಕ್ಕೆ ಆಕಾಶವೇ ಎಲ್ಲೆ’...

–ಹೀಗೆಂದವರು ಇಸ್ರೊದ ಮಾಜಿ ವಿಜ್ಞಾನಿ ಎಸ್‌.ನಂಬಿನಾರಾಯಣನ್‌. 


ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಲ್ಲಿ ಜಿಸ್ಯಾಟ್‌–14 ಸಂವಹನ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ನಂಬಿನಾರಾಯಣನ್‌ ಉಸಿರು ಬಿಗಿ ಹಿಡಿದು ಕುಳಿತಿದ್ದರು. ಪ್ರಮುಖ ಸುದ್ದಿವಾಹಿನಿಯ ಸ್ಟುಡಿಯೊದಲ್ಲಿ ಕುಳಿತಿದ್ದ ಅವರ ಭಾವನೆಗಳ ಕಟ್ಟೆ ಒಡೆದಿತ್ತು.  ಮೊತ್ತಮೊದಲ ಬಾರಿಗೆ ಕ್ರಯೊಜೆನಿಕ್   ತಂತ್ರಜ್ಞಾನವನ್ನು ಬಳಸಿಕೊಂಡ ರಾಕೆಟ್‌ ಉಡಾವಣೆ ಯಶಸ್ವಿಯಾದಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ. ಕನ್ನಡಕ ಸರಿಸಿ ಕಣ್ಣೀರು ಒರೆಸಿಕೊಂಡರು. 

   ಭಾರತದಲ್ಲಿ ಕ್ರಯೊಜೆನಿಕ್‌ ತಂತ್ರಜ್ಞಾನಕ್ಕೆ ಮುನ್ನುಡಿ ಬರೆದವರೇ ನಂಬಿ ನಾರಾಯಣನ್‌.  1991ರಲ್ಲಿ ಇಸ್ರೊದ ಕ್ರಯೊಜೆನಿಕ್‌ ತಂತ್ರಜ್ಞಾನ ಅಭಿವೃದ್ಧಿ ಯೋಜನೆ ನಿರ್ದೇಶಕರಾಗಿ ಇವರನ್ನು ನೇಮಿಸಲಾಗಿತ್ತು. ಸಂಶೋಧನಾ  ಕೆಲಸ ಮುಂದುವರಿಯುತ್ತಿರುವಾಗಲೇ   ಮೂರು ವರ್ಷಗಳ ನಂತರ, ಅಂದರೆ 1994ರಲ್ಲಿ, ಭಾರತದ ಬಾಹ್ಯಾಕಾಶ ಯೋಜನೆಗಳ ಕುರಿತು ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾದರು. ಸುಪ್ರೀಂಕೋರ್ಟ್‌ 1996ರಲ್ಲಿ ಈ ಪ್ರಕರಣವನ್ನು ವಜಾ ಮಾಡಿತು.

ಇನ್ನೊಂದು ಸುದ್ದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT