ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಾಂತಿ ಪುರುಷ ಕುಮಾರರಾಮ

13ನೇ ಶತಮಾನದ ಕುಮ್ಮಟದುರ್ಗದ ಸಾಂಸ್ಕೃತಿಕ ಜಾತ್ರೆ
ಅಕ್ಷರ ಗಾತ್ರ

ಗಂಗಾವತಿ: ಗ್ರಾಂಥಿಕ  ರೂಪದ ದಾಖಲೆಗಳಲ್ಲಿ ಕಳೆದು ಹೋದರೂ, ಜನಪದ ಸಾಹಿತ್ಯದಲ್ಲಿ ಹಾಸುಹೊಕ್ಕಾಗಿರುವ ಹಲವು ತಲೆಮಾರುಗಳನ್ನು ಯಶಸ್ವಿಯಾಗಿ ದಾಟಿಕೊಂಡು ಬಂದ ಉತ್ತರ ಕರ್ನಾಟಕದ ವೀರ ಪುರುಷರ ಪಾತ್ರಗಳಲ್ಲಿ ಕುಮ್ಮಟದುರ್ಗದ ಕುಮಾರ ರಾಮನೂ ಒಬ್ಬ.

ಕೇವಲ ಕುಮಾರರಾಮ ಎಂದರೆ ಸುಲಭವಾಗಿ ಯಾರ ಊಹೆಗೂ ನಿಲುಕದ ಪಾತ್ರ. ಆದರೆ ಕುಮಾರನ ಮುಂದೆ ‘ಗಂಡುಗಲಿ’ ಎಂಬ ಬಿರುದಾಂಕಿತ ವಿಶೇಷಣವೊಂದೇ ಸಾಕು. ಉತ್ತರ ಕರ್ನಾಟಕದ ಜನರ ಕಣ್ಣ ಮುಂದೆ 13ನೇ ಶತಮಾನದ ಸಾಂಸ್ಕೃತಿಕ ವೀರ ಪುರುಷನ ಪಾತ್ರವೊಂದು ಮಿಂಚಿಮರೆಯಾಗುತ್ತದೆ.

ಗಂಗಾವತಿ ಸಮೀಪದಲ್ಲಿರುವ ಕುಮ್ಮಟದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು 13ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಗಂಡುಗಲಿ ಕುಮಾರ ರಾಮ, ತನ್ನ ಶೌರ್ಯ, ತ್ಯಾಗ, ಜನಪರವಾದ ಆದರ್ಶ ಆಡಳಿತ, ಸಹೋದರತ್ವ ಮೊದಲಾದ ವಿಶೇಷಗಳಿಂದಲೇ ಇಂದಿಗೂ ಪ್ರಸಿದ್ಧಿ ಪಡೆದಿದ್ದಾನೆ.

ಪ್ರತಿ ವರ್ಷ ಆಗಿ ಹುಣ್ಣಿಮೆ ಬಳಿಕ 8ನೇ ದಿನ (ಮೇ. 11ಸೋಮವಾರ)  ರಾಮನ ಜಾತ್ರೆ ನಡೆಯುತ್ತದೆ. ಇಲ್ಲಿನ ಜಾತ್ರೆಯಲ್ಲಿ ಮಾಡಿದ ಅಕ್ಕಿಪಡಿ (ಅಕ್ಕಿ ಪಾಯಸ) ಹುಲುಗಿಗೆ ಒಯ್ದನಂತರವಷ್ಟೆ  ಹುಲುಗಿ ಜಾತ್ರೆಗೆ ಶ್ರೀಕಾರ ಹಾಕುವ ಸಂಪ್ರದಾಯ  ಏಳು ಶತಮಾನದಿಂದ ನಡೆದುಕೊಂಡು ಬಂದಿದೆ.

ಕುಮ್ಮಟದದುರ್ಗದ ಕೋಟೆ ಅಥವಾ ಪಾಳು ಬಿದ್ದಿರುವ ದೇವಸ್ಥಾನದಲ್ಲಿರುವ ಕುಮಾರರಾಮ, ಹೋಲಿಕೆ ರಾಮ ಮತ್ತು ಇತರ 12 ಜನ ಸಹಚರರ ತಲೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಕ್ಕಿ ದೀಪ, ಬಲಿಪೂಜೆ, ನೀರಗೂಳಿ ತುಳಿಯುವ ಮೊದಲಾದ ಧಾರ್ಮಿಕ ಕಾರ್ಯ ನಡೆಯುತ್ತವೆ.

ಕೊಪ್ಪಳ ಗಂಗಾವತಿ ಮಧ್ಯದ ಮುಖ್ಯರಸ್ತೆಯಿಂದ ಸುಮಾರು ನಾಲ್ಕು ಕಿ.ಮೀ. ಅಂತರದಲ್ಲಿರುವ ವಿಶಾಲ ತಳಹದಿ ಬೆಟ್ಟದ ಮೇಲೆ ಜಾತ್ರೆ ನಡೆಯುತ್ತದೆ. ವಿಶೇಷವಾಗಿ ನಾಯಕ, ಬೇಡ ಜನಾಂಗದವರು ವಿವಿಧ ಜಿಲ್ಲೆಗಳಿಂದ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ರಾಮನ ಐತಿಹಾಸಿಕ ಹಿನ್ನೆಲೆ: ಬಳ್ಳಾರಿ ಜಿಲ್ಲೆಯ ಸಂಡೂರಿನ ಹೊಸಮಲಿ ದುರ್ಗವನ್ನು ಸಾಮ್ರಾಜ್ಯವನ್ನಾಗಿಸಿಕೊಂಡು 13ನೇ ಶತಮಾನದಲ್ಲಿ ಕಂಪಲಿರಾಯ ಆಳ್ವಿಕೆ ನಡೆಸುತ್ತಿದ್ದ. ಕಂಪಲಿರಾಯನ ಮಗನೇ ಈ ಕುಮಾರರಾಮ. ರಾಮ ಕುಮ್ಮಟದುರ್ಗ ವನ್ನು ಎರಡನೇ ರಾಜಧಾನಿ ಮಾಡಿಕೊಂಡು ಆಳ್ವಿಕೆ ಮಾಡುತ್ತಿದ್ದ.

ಕಂಪಲಿರಾಯ ಮತ್ತು ಕುಮಾರರಾಮರು, ದೋರಸಮುದ್ರದ ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ದೇವಗಿರಿ ಸೇವಣರು ಮತ್ತು ಮಧುರೆ ಪಾಂಢ್ಯ ಅರಸರ ಸಮಕಾಲಿನರಾಗಿ ದಕ್ಷಿಣ ಭಾರತದಲ್ಲಿ ಹಿಂದು ಸಾಮ್ರಾಜ್ಯ ಸ್ಥಾಪಿಸಿದರು ಎಂಬ ಉಲ್ಲೇಖವಿದೆ.

ಕ್ರಿ.ಶ. 1206ರಲ್ಲಿ ನವದೆಹಲಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ ಬಳಿಕ ಮೊದಲ ಬಾರಿಗೆ ಅವನಿಗೆ ದಕ್ಷಿಣ ಪ್ರಾಂತ್ಯಗಳತ್ತ ಕಣ್ಣುಬಿತ್ತು. ಮಂತ್ರಿ ಮಲ್ಲಿಕಾಪರ್ ನೇತೃತ್ವದಲ್ಲಿನ ಮೊಘಲ್‌ರ ಸೈನ್ಯವನ್ನು ಕುಮಾರರಾಮ ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ಮಾಹಿತಿ ಇದೆ.

ರಾಮನಕಾಲದಲ್ಲಿ ಕಾವ್ಯ ಸಂಸ್ಕೃತಿ, ಜನಪದ ಸಾಹಿತ್ಯ ಉಚ್ಛ್ರಾಯ ಸ್ಥಿತಿಯಲ್ಲಿತ್ತು ಎಂಬುವುದನ್ನು ಇತಿಹಾಸಕಾರರು ಒಪ್ಪುತ್ತಾರೆ. ಅಗಾಧಸಾಧನೆ ಇಲ್ಲವಾದರೂ, ಸಂಪನ್ನ, ಸದ್ಗುಣಗಳಿಂದಾಗಿಯೇ ಕುಮಾರರಾಮ ಬೇರೆ ಅರಸರಿಗಿಂತ ವಿಭಿನ್ನಸ್ಥಾನ ಪಡೆದು ಜನಮಾನಸದಲ್ಲಿ ಇಂದಿಗೂ ಶಾಶ್ವತವಾಗಿ ಉಳಿದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT