ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗೆ ಬೇಕಿದೆ ಪ್ರೋತ್ಸಾಹ

ಅಕ್ಷರ ಗಾತ್ರ

ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಪದವಿ ಮಟ್ಟ­ದಲ್ಲಿ ಸೆಮಿಸ್ಟರ್ ಪದ್ಧತಿ ಜಾರಿಗೆ ಬಂದು ಹಲವು ವರ್ಷ­ಗಳಾಗಿವೆ. ವರ್ಷಕ್ಕೆ ಎರಡು ಬಾರಿ ಪರೀಕ್ಷೆ ನಡೆಸು­ವುದು ಪರಿಪಾಠ. ಈ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಂತೆ ಪರೀಕ್ಷಾ ಶುಲ್ಕವನ್ನು ತುಂಬುವ ಸಮಯ ಸಮೀಪಿಸುತ್ತದೆ.

ಅದು ಪೂರ್ಣ­ಗೊಳ್ಳುವ ಹೊತ್ತಿಗೆ ಪರೀಕ್ಷೆ ಆರಂಭವಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಸಿದ್ಧತೆಯಲ್ಲಿ ತೊಡ­ಗಿಸಿ­ಕೊಳ್ಳುತ್ತಾರೆ. ಹೀಗೆ ಮೂರು ವರ್ಷದ ಪದವಿ­ಯಲ್ಲಿ ಆರು ಸೆಮಿಸ್ಟರ್‌ಗಳು ಬಂದು ಹೋಗುತ್ತವೆ. ಕಾಲೇಜಿನ ವಿದ್ಯಾಭ್ಯಾಸದಲ್ಲಿ ಪಾಠ ಎಷ್ಟು ಮುಖ್ಯವೋ, ಆಟವೂ ಅಷ್ಟೇ ಮುಖ್ಯ. ಆದರೆ ದಿನೇ ದಿನೇ ಕ್ರೀಡೆ ತನ್ನ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತಿರು­ವುದು ನೋವಿನ ಸಂಗತಿ. ಆಟವಾಡುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ಅಂತಹ ವಿದ್ಯಾರ್ಥಿಯ ವಿದ್ಯಾಭ್ಯಾಸ ಅಪೂರ್ಣ. ಇಂದಿನ ದಿನಗಳಲ್ಲಿ ಕ್ರೀಡೆಗೆ ಒತ್ತು ನೀಡದಿರುವುದು ಸಾಮಾನ್ಯವಾಗಿ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಎದ್ದು ಕಾಣುತ್ತಿದೆ. ವರ್ಷಕ್ಕೆ ಒಂದು ದಿನ ವಿದ್ಯಾರ್ಥಿಗಳನ್ನು ಹತ್ತಿರದ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಆಡಿಸಿ ಕರೆತರು­ತ್ತಾರೆ. ‘ಕಾಲೇಜ್‌ ಡೇ’ ದಿನ ಬಹುಮಾನ ವಿತರಿಸಿ ಕೈ ತೊಳೆದುಕೊಳ್ಳುತ್ತಾರೆ.

ಅನೇಕ ಕಾಲೇಜುಗಳಲ್ಲಿ ಆಟದ ಮೈದಾನವೇ ಇರುವುದಿಲ್ಲ. ಬೆರಳೆಣಿಕೆಯಷ್ಟು ಕಾಲೇಜುಗಳಲ್ಲಿ ಮೈದಾನವಿದ್ದರೂ ಅಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರುವು­ದಿಲ್ಲ. ಅನುದಾನಿತ ಕಾಲೇಜುಗಳಲ್ಲಿ ಇದ್ದ ದೈಹಿಕ ಶಿಕ್ಷಣ ಶಿಕ್ಷಕರೂ ನಿವೃತ್ತಿ ಹೊಂದಿದ್ದಾರೆ. ಖಾಲಿ ಹುದ್ದೆಗಳು ಹಲವಾರು ವರ್ಷಗಳಿಂದ ಭರ್ತಿ ಆಗಿಲ್ಲ. ಸರ್ಕಾರದ ವತಿಯಿಂದ ಉತ್ತೇಜನ ಸಾಲದು, ಖಾಸಗಿ ಆಡಳಿತ ಮಂಡಳಿಗಳು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿಲ್ಲ.

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಆಟ ನಶಿಸುತ್ತಿದೆ. ಇದೇ ಸ್ಥಿತಿ  ಮುಂದುವರೆಯುವುದು ಒಳಿ­ತಲ್ಲ. ಆದ್ದ­ರಿಂದ ಸರ್ಕಾರ ಮತ್ತು ಆಡಳಿತ ಮಂಡಳಿ­ಗಳು ಕೂಡಲೇ ಎಚ್ಚೆತ್ತುಕೊಂಡು ಕ್ರೀಡಾ ಶಿಕ್ಷಕರನ್ನು ನೇಮಕ ಮಾಡಿ ಯುವಕರ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಪಟ್ಟರೆ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT