ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಂ ಕಥೆ ಹಿಂದೆ ಚೈತನ್ಯ!

Last Updated 5 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಪ್ರಣಯಕ್ಕೂ ಅಪರಾಧಕ್ಕೂ ಏನು ಸಂಬಂಧ? ಎರಡೂ ಪರಸ್ಪರ ವಿರುದ್ಧ ಪದಗಳೇ ಆಗಿವೆ. ಹಾಗಿದ್ದರೂ ಎರಡೂ ಪದಗಳನ್ನು ಬೆರೆಸಿ ತಮ್ಮ ಸಿನಿಮಾಕ್ಕೆ ಶೀರ್ಷಿಕೆಯನ್ನಾಗಿಸಿದ್ದಾರೆ ನಿರ್ದೇಶಕ ಶಾಮ್ ಜೆ. ಚೈತನ್ಯ. ಇಂದು (ಮಾರ್ಚ್ 6) ಬಿಡುಗಡೆಯಾಗಲಿರುವ ಅವರ ‘ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಲಿದೆ ಎಂಬುದು ಶಾಮ್ ಅವರ ವಿಶ್ವಾಸ.

ತೆಲುಗಿನ ‘ಒಕ ರೊಮ್ಯಾಂಟಿಕ್ ಕ್ರೈಂ ಕಥಾ’ ಚಿತ್ರದ ರಿಮೇಕ್ ಇದು. ಮೂಲ ಸಿನಿಮಾದ ನಿರ್ಮಾಪಕರಾದ ಡಾ. ಮಲಿನೇನಿ ಲಕ್ಷ್ಮಯ್ಯ ಅವರೇ ಕನ್ನಡದ ರಿಮೇಕ್‌ಗೂ ಬಂಡವಾಳ ಹಾಕಿದ್ದಾರೆ. ‘ಈಗಾಗಲೇ ಈ ಚಿತ್ರ ತೆಲುಗಿನಲ್ಲಿ ಸೂಪರ್ ಹಿಟ್ ಆಗಿದೆ. ಮಾಧ್ಯಮಗಳೂ ಸಾಕಷ್ಟು ಪ್ರಶಂಸೆ ವ್ಯಕ್ತಪಡಿಸಿವೆ. ಅದನ್ನೇ ಈಗ ಕನ್ನಡಕ್ಕೆ ತರಲಾಗಿದೆ’ ಎನ್ನುತ್ತಾರೆ ಶ್ಯಾಮ್.

ತೆಲುಗಿನಲ್ಲಿ ‘ಎ’ ಸರ್ಟಿಫಿಕೇಟ್ ಪಡೆದಿದ್ದ ಚಿತ್ರಕ್ಕೆ ಕನ್ನಡದಲ್ಲಿ ‘ಯು/ಎ’ ಸರ್ಟಿಫಿಕೇಟ್ ಸಿಕ್ಕಿದೆ. ‘ತುಂಬಾ ಚೆನ್ನಾಗಿ ಈ ಚಿತ್ರ ಮೂಡಿಬಂದಿದೆ. ಪ್ರತಿಯೊಬ್ಬ ಯುವಕ–ಯುವತಿ ಹಾಗೂ ಪಾಲಕರು ನೋಡುವಂಥ ಸಿನಿಮಾವಿದು ಎಂಬುದರಲ್ಲಿ ಎರಡು ಮಾತಿಲ್ಲ. ಈಗಿನ ಯುವಪೀಳಿಗೆಗೆ ಮಾರ್ಗದರ್ಶನ ಮಾಡುವಂತೆ ಈ ಸಿನಿಮಾ ಮಾಡಿದ್ದೇನೆ’ ಎಂಬುದು ನಿರ್ದೇಶಕರ ಮಾತು.

ತೆಲುಗಿನ ರಿಮೇಕ್ ಆದರೂ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ನಡೆದ ಘಟನೆಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ ಎನ್ನುತ್ತಾರೆ ಶಾಮ್. ತೆಲುಗಿನಲ್ಲಿ ‘...ಕಥಾ’ ಸಂಗೀತ ಪ್ರಧಾನವಾಗಿಲ್ಲ. ಆದರೆ ಇಲ್ಲಿ ನಾವು ಇದನ್ನು ಸಂಗೀತ ಪ್ರಧಾನವನ್ನಾಗಿ ರೂಪಿಸಿದ್ದೇವೆ. ಮೂಲಚಿತ್ರದಲ್ಲಿ ಹಾಡುಗಳಿಗೆ ಹೆಚ್ಚು ಆದ್ಯತೆ ಸಿಕ್ಕಿಲ್ಲ; ಕನ್ನಡದಲ್ಲಿ ಮಾತ್ರ ಪ್ರಾಮುಖ್ಯ ನೀಡಲಾಗಿದೆ. ಯೂಟ್ಯೂಬ್ ಸೇರಿದಂತೆ ಹಲವು ಜಾಲತಾಣಗಳಲ್ಲಿ ಈಗಾಗಲೇ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನಾಗೇಂದ್ರ ಪ್ರಸಾದ್ ಅವರ ಹಾಡುಗಳಿಗೆ ಎ.ಕೆ.ರಿಷಾಲ್ ಸಾಯಿ ಸಂಯೋಜಿಸಿದ ಸಂಗೀತ ಯುವಪೀಳಿಗೆಯ ಮನಸ್ಸು ಸೆಳೆದಿದೆ ಎನ್ನುತ್ತಾರೆ.

ಕಥೆ ಏನೆಂಬುದರ ಬಗ್ಗೆ ಗುಟ್ಟು ಬಿಟ್ಟುಕೊಡದ ಶಾಮ್, ಯುವಪೀಳಿಗೆಗೆ ಇದೊಂದು ಒಳ್ಳೆಯ ಸಂದೇಶ ಕೊಡುವ ಚಿತ್ರವಂತೂ ಹೌದು ಎಂದು ವಿಶ್ವಾಸದಿಂದ ನುಡಿಯುತ್ತಾರೆ. ಮೋಜಿನ ಬದುಕಿಗೆ ಮರುಳಾಗಿ ಕೆಲವೊಮ್ಮೆ ಅಡ್ಡದಾರಿ ತುಳಿಯುವ ಯುವಕ–ಯುವತಿಯರನ್ನು ಸರಿದಾರಿಗೆ ತರುವ ಸಂದೇಶ ತಲುಪಿಸಲಿದೆ ಎಂದಷ್ಟೇ ಹೇಳುತ್ತಾರೆ. ಬದುಕು ಹಾಳು ಮಾಡಿಕೊಳ್ಳದಂತೆ ಮುನ್ನೆಚ್ಚರಿಕೆ ನೀಡುವ ಕಥಾ ಹಂದರ ಹೊಂದಿರುವ ‘ರೊಮ್ಯಾಂಟಿಕ್...’ ಚಿತ್ರದ ಬಗ್ಗೆ ಸೆನ್ಸಾರ್ ಮಂಡಳಿ ಸದಸ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸಮಾಜಕ್ಕೆ ಇಂತಹ ಸಿನಿಮಾಗಳು ಅವಶ್ಯಕ ಎಂಬ ಮಾತನ್ನು ಸಹ ಹೇಳಿದ್ದಾರೆ’ ಎಂದು ಖುಷಿಯಿಂದ ಶಾಮ್ ನುಡಿಯುತ್ತಾರೆ.

ಅರುಣ್, ಅಶ್ವಿನಿ, ಪೂಜಾಶ್ರೀ, ಸೋನಲ್ ಸೇರಿದಂತೆ ಯುವ ಪ್ರತಿಭೆಗಳ ತಂಡ ಚಿತ್ರದಲ್ಲಿದೆ. ‘ಕಥೆಗೆ ಪೂರಕವಾಗಿ ಆಯ್ದುಕೊಳ್ಳಲಾದ ಕಲಾವಿದರ ಪೈಕಿ ಕೆಲವರು ಹೊಸಬರು. ಆದರೆ ಅಭಿನಯದ ವಿಷಯಕ್ಕೆ ಬಂದರೆ ಎಲ್ಲರೂ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದಷ್ಟೇ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಆ ದೃಷ್ಟಿಯಿಂದ ನೋಡಿದರೂ ನಮ್ಮ ಸಿನಿಮಾ ಹೆಚ್ಚು ಗಮನಸೆಳೆಯಲಿದೆ’ ಎಂದು ವಿಶ್ವಾಸದಿಂದ ನಿರ್ದೇಶಕರು.

ಪ್ರೇಮಕಥೆಗಳನ್ನು ಚಿತ್ರಕ್ಕೆ ಆಯ್ದುಕೊಳ್ಳುತ್ತಿರುವ ಯುವ ನಿರ್ದೇಶಕರ ದಾರಿಯಲ್ಲಿ ಶಾಮ್ ಕೂಡ ಹೆಜ್ಜೆ ಹಾಕಿದ್ದಾರೆ. ‘ಇದು ಮೂವರು ಅಮಾಯಕ ಹುಡುಗಿಯರ ಕಥೆ. ಆದರೆ ಬರೀ ಪ್ರೀತಿ– ಪ್ರೇಮವೊಂದನ್ನೇ ನೆಚ್ಚಿಕೊಳ್ಳದೇ ಅದಕ್ಕೊಂದಷ್ಟು ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ಅಂಶಗಳನ್ನೂ ಬೆರೆಸಲಾಗಿದೆ. ವಿಚಿತ್ರ ತಿರುವುಗಳ ಮೂಲಕ ಪ್ರೇಕ್ಷಕನಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಚಿತ್ರವಿದು’ ಎಂದು ಒಂದೇ ಸಾಲಿನಲ್ಲಿ ಚಿತ್ರಕಥೆಯ ಎಳೆಯನ್ನು ಬಿಟ್ಟಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT