ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಿ ಗುಂಡಿಗೆ ಬಿದ್ದು ಮೂರು ಮಕ್ಕಳ ಸಾವು

Last Updated 1 ಜೂನ್ 2013, 7:09 IST
ಅಕ್ಷರ ಗಾತ್ರ

ಬೆಂಗಳೂರು: ಆಟವಾಡುತ್ತಿದ್ದ ವೇಳೆ ಕಲ್ಲಿನ ಕ್ವಾರಿಯ ನೀರಿನ ಗುಂಡಿಗೆ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ಹೊಸೂರು ರಸ್ತೆಯ ಕೂಡ್ಲು ಗ್ರಾಮ ಸಮೀಪದ ಶ್ಯಾಮರೆಡ್ಡಿ ಬಂಡೆಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಕೂಡ್ಲು ಗ್ರಾಮದ ನಿವಾಸಿಗಳಾದ ರಮೇಶ್ ಮತ್ತು ಪದ್ಮ ದಂಪತಿಯ ಪುತ್ರಿ ಮೇಘ (13), ತಮಿಳರಸನ್ ಹಾಗೂ ಭುವನೇಶ್ವರಿ ದಂಪತಿಯ ಪುತ್ರಿ ಐಶ್ವರ್ಯ (13) ಹಾಗೂ ನಾಗರಾಜ್ ಮತ್ತು ಶಾರದ ದಂಪತಿಯ ಪುತ್ರ ಲೋಕೇಶ್ (14) ಮೃತಪಟ್ಟ ಮಕ್ಕಳು. ಪದ್ಮ ಮತ್ತು ಐಶ್ವರ್ಯ ಅವರ ಮೃತದೇಹಗಳನ್ನು ಕ್ವಾರಿಯಿಂದ ಹೊರ ತೆಗೆಯಲಾಗಿದ್ದು, ಲೋಕೇಶ್‌ನ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ.

ಘಟನೆ ಹಿನ್ನೆಲೆ:  ಐಶ್ವರ್ಯಳ ಅಕ್ಕ ಸಾಂಘವಿ ಬಟ್ಟೆ ತೊಳೆಯುವ ಸಲುವಾಗಿ ಮಧ್ಯಾಹ್ನ 12.30ರ ಸುಮಾರಿಗೆ ಕ್ವಾರಿಗೆ ಹೋಗಿದ್ದಳು. ಆಕೆಯೊಂದಿಗೆ ಕ್ವಾರಿಗೆ ಹೋಗಿದ್ದ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದವು. ಈ ವೇಳೆ ಲೋಕೇಶ್ ಆಳ ನೀರಿರುವ ಸ್ಥಳಕ್ಕೆ ಹೋಗಿದ್ದು, ಆತನ ಹಿಂದೆ ಮೇಘ ಮತ್ತು ಐಶ್ವರ್ಯ ಕೂಡ ಹೋಗಿದ್ದಾರೆ. ಆಗ ಗುಂಡಿಯಲ್ಲಿ ಕಾಲಿಟ್ಟಿರುವ ಲೋಕೇಶ್, ನಿಯಂತ್ರಣ ಕಳೆದುಕೊಂಡು ಮೇಘ ಮತ್ತು ಐಶ್ವರ್ಯ ಅವರ ಕೈಗಳನ್ನು ಹಿಡಿದುಕೊಂಡಿದ್ದಾನೆ. ಪರಿಣಾಮ ಮೂವರು ಮಕ್ಕಳು ಸುಮಾರು 30 ಅಡಿ ಆಳವಿರುವ ಜಾಗದಲ್ಲಿ ಬಿದ್ದಿದ್ದಾರೆ.

`ಪಕ್ಕದ ಮನೆಯ ಪರಿಮಳ ಎಂಬುವರ ಜತೆ ಬಟ್ಟೆ ತೊಳೆಯಲು ಕ್ವಾರಿಗೆ ಬಂದಿದ್ದೆ. ಆಗ ಜತೆಗೆ ಬಂದಿದ್ದ ಮೂವರು ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಅವರು ನೀರಿಗೆ ಬೀಳುತ್ತಿದ್ದಂತೆ ಗಾಬರಿಯಾಗಿ ಕ್ವಾರಿಯ ಮೇಲೆ ಹೋಗಿ ಜನರನ್ನು ಕೂಗಿದೆ. ಸ್ಥಳದಲ್ಲೇ ಇದ್ದ ಚಿಕ್ಕಪ್ಪ ಏಳೆಂಟು ಮಂದಿ ಗ್ರಾಮಸ್ಥರ ನೆರವು ಪಡೆದು ರಕ್ಷಣೆಗೆ ಧಾವಿಸಿದರು. ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಐಶ್ವರ್ಯ ಮತ್ತು ಮೇಘ ಶವವಾಗಿ ಸಿಕ್ಕರು' ಎಂದು 15 ವರ್ಷದ ಸಾಂಘವಿ ದುಃಖತಪ್ತವಾಗಿ `ಪ್ರಜಾವಾಣಿ'ಗೆ ತಿಳಿಸಿದಳು.

`ಮೇ 30ರಿಂದಲೇ ಶಾಲೆ ಆರಂಭವಾಗಿತ್ತಾದರೂ ಮಗಳು ಸೋಮವಾರದಿಂದ (ಜೂ.1) ಶಾಲೆಗೆ ಹೋಗುವುದಾಗಿ ಹೇಳಿದ್ದಳು. ಪತಿ ಹರಳಕುಂಟೆಯಲ್ಲಿ ವಾಟರ್‌ಮನ್ ಅಗಿದ್ದು, ಅವರು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ನಾನು ಮತ್ತು ಹಿರಿಯ ಮಗಳು ಹೇಮಲತಾ ಕೂಲಿ ಕೆಲಸಕ್ಕೆ ಹೋಗಿದ್ದೆವು. ಹೀಗಾಗಿ ಮನೆಯಲ್ಲಿ ಒಬ್ಬಳೇ ಇದ್ದ ಮೇಘ ಕ್ವಾರಿಗೆ ಹೋಗಿ ನೀರುಪಾಲಾಗಿದ್ದಾಳೆ' ಎಂದು ಹೇಳುತ್ತಾ ಪದ್ಮಾ ಕುಸಿದು ಬಿದ್ದರು.

`ಪತಿ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಾರೆ. ನಾನು, ಮನೆಕೆಲಸಕ್ಕೆ ಹೋಗುತ್ತೇನೆ. ಇನ್ನೂ ನಾಲ್ಕೈದು ವರ್ಷಗಳಲ್ಲಿ ಮಗ ದುಡಿಮೆಗೆ ಇಳಿಯುತ್ತಿದ್ದ. ಆತನ ಅನಿರೀಕ್ಷಿತ ಸಾವಿನಿಂದ ದಿಕ್ಕು ತೋಚದಂತಾಗಿದೆ' ಎಂದು ಲೋಕೇಶ್ ತಾಯಿ ಶಾರದ ಕಣ್ಣೀರಿಟ್ಟರು.
`ರಸ್ತೆ ಬದಿಯೇ ಇರುವ ಈ ಕ್ವಾರಿ ಅಪಾಯಕಾರಿ ಸ್ಥಳವೆಂಬುದು ಮತ್ತೊಮ್ಮೆ ದೃಢಪಟ್ಟಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಕ್ವಾರಿಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು' ಎಂದು ಆನೇಕಲ್ ತಹಶೀಲ್ದಾರ್ ಶಿವೇಗೌಡ ಸುದ್ದಿಗಾರರಿಗೆ ತಿಳಿಸಿದರು.

`ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ಕ್ವಾರಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಅಲ್ಲದೇ, ಸಂಜೆ ಆರು ಗಂಟೆ ಸುಮಾರಿಗೆ ಪುನಃ ಮಳೆ ಆರಂಭವಾಗಿದ್ದರಿಂದ ಕಾರ್ಯಾಚರಣೆಗೆ ತೊಡಕಾಯಿತು. ಬೆಳಿಗ್ಗೆ ಆರು ಗಂಟೆಗೆ ಕಾರ್ಯಾಚರಣೆ ಆರಂಭಿಸಿ ಲೋಕೇಶ್‌ನ ಶವ ಪತ್ತೆ ಮಾಡಲಾಗುವುದು' ಎಂದು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.

ಶಾಲೆಗೆ ಬರದೇ ಕ್ವಾರಿಗೆ ಹೋಗಿದ್ದರು
ಮೃತ ಮಕ್ಕಳೆಲ್ಲಾ ಕೂಡ್ಲು ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಬೇಸಿಗೆ ರಜೆ ಮುಗಿದು ಗುರುವಾರದಿಂದ (ಮೇ 30) ತರಗತಿಗಳು ಪುನರಾರಂಭಗೊಂಡಿದ್ದವು. ಆದರೆ, ಮಕ್ಕಳು ಶಾಲೆಗೆ ಬಾರದ ಹಿನ್ನೆಲೆಯಲ್ಲಿ ಬೆಳಿಗ್ಗೆ ಅವರ ಮನೆಗಳಿಗೆ ಹೋಗಿ ಶಾಲೆಗೆ ಬರುವಂತೆ ಹೇಳಿದ್ದೆ. ಸಮವಸ್ತ್ರ ಧರಿಸಿಕೊಂಡು ನಿಮ್ಮ ಹಿಂದೆಯೇ ಬರುತ್ತೇವೆ ಎಂದು ಮಕ್ಕಳು ಹೇಳಿದ್ದರು. ಆದರೆ, ಅವರು ಶಾಲೆಗೆ ಬಾರದೆ ಆಟವಾಡಲು ಕ್ವಾರಿಗೆ ಹೋಗಿದ್ದಾರೆ. ಮಧ್ಯಾಹ್ನ ಸ್ಥಳೀಯರು ಕರೆ ಮಾಡಿ ವಿಷಯ ತಿಳಿಸಿದಾಗ ಆಘಾತವಾತವಾಯಿತು.
- ಸಾಕಪ್ಪ, ಪಾಲಕರು-ಶಿಕ್ಷಕರ ಸಂಘದ ಅಧ್ಯಕ್ಷ .ಸರ್ಕಾರಿ ಪ್ರಾಥಮಿಕ ಪಾಠ ಶಾಲೆ, ಕೂಡ್ಲು

ಈವರೆಗೆ ಸತ್ತವರ ಸಂಖ್ಯೆ 30
ಸುಮಾರು 100 ಅಡಿ ಆಳವಿರುವ ಈ ಕ್ವಾರಿಯ ಸುತ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೇ, ಈ ಕ್ವಾರಿ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ಸ್ಥಳೀಯರಿಗೆ ಗೊತ್ತಿಲ್ಲ. 10 ವರ್ಷಗಳಲ್ಲಿ ಸುಮಾರು 30 ಮಂದಿ ಈ ಕ್ವಾರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಅಲ್ಲದೇ, ರಸ್ತೆ ಬದಿಯೇ ಕ್ವಾರಿ ಇರುವುದರಿಂದ ರಾತ್ರಿ ವೇಳೆ ವಾಹನ ಸವಾರರೂ ಇದರಲ್ಲಿ ಬೀಳುತ್ತಾರೆ. ಕಳೆದ ವರ್ಷ ಎರಡು ತಿಂಗಳ ಅಂತರದಲ್ಲಿ ಟ್ರ್ಯಾಕ್ಟರ್ ಹಾಗೂ ಟಾಟಾ ಇಂಡಿಕಾ ಕಾರು ಕ್ವಾರಿಗೆ ಬಿದ್ದಿದ್ದವು. ಆಗ ಕಾರಿನಲ್ಲಿದ್ದ ಆರು ತಿಂಗಳ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಕೊಲೆ ಮಾಡಿ ಶವವನ್ನು ಕ್ವಾರಿಗೆ ಎಸೆದು ಹೋಗುವವರು ಇದ್ದಾರೆ. ಈ ಕ್ವಾರಿಯನ್ನು ಮುಚ್ಚಿಸಲು ಗಂಭೀರ ಕ್ರಮ ಕೈಗೊಳ್ಳಬೇಕು.
- ವೆಂಕಟೇಶ್,ಮೃತ ಲೋಕೇಶ್‌ನ ಚಿಕ್ಕಪ್ಪ .

ನಿರ್ಲಕ್ಷ್ಯ ಆರೋಪದಡಿ ಪ್ರಕರಣ
`ಸರ್ಕಾರಕ್ಕೆ ಸೇರಿದ ಈ ಜಾಗವನ್ನು ಟೆಂಡರ್‌ನಲ್ಲಿ ಶ್ರೀನಿವಾಸ್ ಅಲಿಯಾಸ್ ಪಟಾಕಿ ಶ್ರೀನಿವಾಸ್ ಎಂಬುವರು ಖರೀದಿಸಿದ್ದಾರೆ. ಈ ಸ್ಥಳದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ನಿರ್ಧರಿಸಿದ್ದ ಅವರು, ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಹೀಗಾಗಿ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು' ಎಂದು ಪರಪ್ಪನ ಅಗ್ರಹಾರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT