ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷುಲ್ಲಕ ರಾಜಕೀಯದಿಂದ ದೇಶ ಹಾಳು

ಬಜೆಟ್‌ ಅಧಿವೇಶನ: ಪಕ್ಷದ ಸಂಸದರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಪ್ರಧಾನಿ ಮೋದಿ
Last Updated 19 ಏಪ್ರಿಲ್ 2015, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):
ಕೇವಲ 10 ತಿಂಗಳ ಅಲ್ಪಾವಧಿಯಲ್ಲಿ ಕೇಂದ್ರ ಮಾಡಿದ  ಸಾಧನೆಗಳನ್ನು ಹೆಮ್ಮೆಯಿಂದ ತಲೆ ಎತ್ತಿ ಜನತೆಗೆ ತಿಳಿಸಿ
ನರೇಂದ್ರ ಮೋದಿ, ಪ್ರಧಾನಿ


ಪ್ರತಿಯೊಂದರಲ್ಲೂ ಹುಳುಕು ಹುಡುಕುವ ಕ್ಷುಲ್ಲಕ ರಾಜಕೀಯದಿಂದಾಗಿ ದೇಶ ಹಾಳಾಗಿದೆ. ದೇಶದ ಅಭಿವೃದ್ಧಿಗಾಗಿ ಹಗಲಿರಳೂ ದುಡಿಯುವ ‘ರಾಷ್ಟ್ರನೀತಿ’ ಮಾತ್ರ ಈ ರಾಷ್ಟ್ರವನ್ನು ಉದ್ಧಾರ ಮಾಡಬಲ್ಲದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಸೋಮವಾರದಿಂದ ಬಜೆಟ್‌ ಅಧಿವೇಶನ ಪುನಾರಂಭವಾಗುತ್ತಿರುವ ಕಾರಣ ಪಕ್ಷದ ಸಂಸದರಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ   ಅವರು ಮಾತನಾಡಿದರು.

ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುವುದು ವಿರೋಧಿಗಳ ಹುಟ್ಟುಗುಣ. ವಿಕೃತ ಮನಸ್ಸಿನವರು ಮಾತ್ರ ಇಂತಹ ಆರೋಪ ಮಾಡಲು ಸಾಧ್ಯ ಎಂದು ಅವರು ಯಾರ ಹೆಸರನ್ನೂ ಪ್ರಸ್ತಾಪಿಸದೆ ತರಾಟೆಗೆ ತೆಗೆದುಕೊಂಡರು.

‘ಸದಾ ಸುದ್ದಿಯಲ್ಲಿರಲು  ಅಥವಾ ಪ್ರಚಾರಕ್ಕಾಗಿ ಕೆಲಸ ಮಾಡುತ್ತಿಲ್ಲ. ನಾವು ಸಾರ್ವಜನಿಕ ಜೀವನದಲ್ಲಿರುವುದು ಬಡವರ ಸೇವೆ ಮಾಡುವುದಕ್ಕಾಗಿಯೇ ಹೊರತು ಅಧಿಕಾರದ ರುಚಿ ಅನುಭವಿಸಲು, ರಾಜಕೀಯ ಮಾಡಲು ಅಲ್ಲ’ ಎಂದು ಮೋದಿ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಭೂಸ್ವಾಧೀನ ಕಾಯ್ದೆ ವಿರುದ್ಧ ಕಾಂಗ್ರೆಸ್‌ ಆಯೋಜಿಸಿದ್ದ ಕೃಷಿಕರ ರ್‍್ಯಾಲಿ ಕುರಿತು ಪ್ರಸ್ತಾಪಿಸದೆ  ಕಾಂಗ್ರೆಸ್‌ ವಿರುದ್ಧ ಅವರು ಪರೋಕ್ಷ ವಾಗ್ದಾಳಿ ನಡೆಸಿದರು.

ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸುವಲ್ಲಿ  ವಿಫಲರಾಗಿರುವುದಾಗಿ ಅವರು ಸಂಸದರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರದ ಎಲ್ಲ ನಿರ್ಧಾರಗಳೂ ಬಡವರ ಹಿತವನ್ನು ದೃಷ್ಟಿಯಲ್ಲಿಟ್ಟು ತೆಗೆದುಕೊಂಡ ನಿರ್ಧಾರಗಳಾಗಿವೆ  ಎಂಬ ವಿಷಯವನ್ನು  ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಸಂಸದರಿಗೆ ಕಿವಿಮಾತು ಹೇಳಿದರು.

ಹಿಂದಿನ ಸರ್ಕಾರಕ್ಕೆ ಹೋಲಿಸಿದರೆ ಎನ್‌ಡಿಎ ಸರ್ಕಾರ ಹತ್ತು ತಿಂಗಳಲ್ಲಿ ಮಾಡಿರುವ ಸಾಧನೆ ಅಪಾರ. ಈ ಹೋಲಿಕೆಯನ್ನು ಅತ್ಯಂತ ಆತ್ಮವಿಶ್ವಾಸದಿಂದ ಜನರ ಮುಂದೆ ತೆರೆದಿಡುವ ಮೂಲಕ ವಿರೋಧಿಗಳ ಅಪಪ್ರಚಾರವನ್ನು ಸಮರ್ಥವಾಗಿ ಎದುರಿಸಿ ಎಂದು  ಪ್ರಧಾನಿ ಸಲಹೆ ನೀಡಿದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಪಕ್ಷದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ತಮ್ಮ ಭಾಷಣವನ್ನು ತಿರುಚಿ ವರದಿ ಮಾಡಲಾಗಿದೆ ಎಂದು ಮಾಧ್ಯಮಗಳ ವಿರುದ್ಧವೂ  ಅವರು ಹರಿಹಾಯ್ದರು. 

‘ಹಗಲು ರಾತ್ರಿ ಅವಧಿ ಮೀರಿ ಕೆಲಸ ಮಾಡುತ್ತಿರುವ ಸರ್ಕಾರದ  ಬೆಟ್ಟದಷ್ಟು ಒಳ್ಳೆಯ ಕೆಲಸಗಳನ್ನು ಬಿಟ್ಟು ಕ್ಷುಲ್ಲಕ ಹಾಗೂ ವಿವಾದಾತ್ಮಕ ಸಂಗತಿಗಳನ್ನು ಅನಗತ್ಯವಾಗಿ ದೊಡ್ಡದಾಗಿ ಬಿಂಬಿಸುವ ಮಾಧ್ಯಮಗಳ ವರದಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ’ ಎಂದು ಅವರು ಸಲಹೆ ಮಾಡಿದರು.

‘ಕೆಲವರು ಒಳ್ಳೆಯದನ್ನು ಕೇಳಿಸಿಕೊಳ್ಳಬಾರದು, ನೋಡಬಾರದು ಮತ್ತು   ಮಾತನಾಡಬಾರದು ಎಂದು ತೀರ್ಮಾನಿಸಿದ್ದಾರೆ. ಇಂಥವರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡಿ’ ಎಂದರು.

ಭಾಷಣದುದ್ದಕ್ಕೂ ತಮ್ಮ ಸರ್ಕಾರದ ಬಡವರ ಪರ ನಿಲುವು ಮತ್ತು ಕಾಳಜಿಯನ್ನು ಪದೇ ಪದೇ ಪುನರುಚ್ಚರಿಸಿದ ಪ್ರಧಾನಿ, ಸಾಧನೆಗಳ ಪಟ್ಟಿಯನ್ನು ನೀಡಿದರು. ಮಳೆಯಿಂದ ಶೇ 50 ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರ ದೊರೆಯುತಿತ್ತು. ಶೇ 33ರಷ್ಟು ಬೆಳೆ ಹಾನಿಯಾದ ರೈತರಿಗೂ ಪರಿಹಾರ ಘೋಷಿಸಿದೆ. ಪರಿಹಾರ ಮೊತ್ತವನ್ನು  ಒಂದೂವರೆ ಪಟ್ಟು  ಹೆಚ್ಚಿಸಿದೆ. ಇದು ರೈತಪರ ನಿರ್ಧಾರವಲ್ಲವೇ ಎಂದು ಪ್ರಶ್ನಿಸಿದರು.

‘ನಾವೇನು ಮುಖೇಶ್‌ ಅಂಬಾನಿ ಅವರಿಗಾಗಿ ಮನೆ ನಿರ್ಮಿಸಲು ಹೊರಟಿದ್ದೇವೆಯೇ? ಖಾಸಗಿ ಚಾನೆಲ್‌ ಅಥವಾ ಪತ್ರಿಕೆಯವರಿಗಾಗಿ ಮನೆ ನಿರ್ಮಿಸುತ್ತಿದ್ದೇವಯೇ? ಇಲ್ಲವಲ್ಲ, ನಾವು ಮನೆ ನಿರ್ಮಿಸುತ್ತಿರುವುದು ಬಡವರಿಗಾಗಿ. ಇದು ಅಪರಾಧವೇ’ ಎಂದರು.

ಕಡ್ಡಾಯ ಹಾಜರಿ: ಭೂಸ್ವಾಧೀನ ತಿದ್ದುಪಡಿ ಮಸೂದೆ ಸೇರಿದಂತೆ ಅನೇಕ ಮಹತ್ವದ ವಿಷಯಗಳು  ಚರ್ಚೆಗೆ ಬರುವ ಸಾಧ್ಯತೆ ಇರುವುದರಿಂದ ಬಿಜೆಪಿ ಸಂಸದರಿಗೆ ಕಡ್ಡಾಯವಾಗಿ ಅಧಿವೇಶನದಲ್ಲಿ ಹಾಜರಿರುವಂತೆ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಸೂಚಿಸಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಗೈರು ಹಾಜರಿ ವಿಷಯವನ್ನು ಅಧಿವೇಶನದ ನಂತರವಷ್ಟೇ ಕೈಗೆತ್ತಿಕೊಳ್ಳುವಂತೆಯೂ ನಾಯ್ಡು ಸಂಸದರಿಗೆ ಸೂಚಿಸಿದ್ದಾರೆ.

ಸಿಂಗ್‌, ಸುಷ್ಮಾ ಕೆಲಸಕ್ಕೆ ಮೆಚ್ಚುಗೆ
ಉತ್ತಮ ಕೆಲಸ ಮಾಡುತ್ತಿರುವ ತಮ್ಮ ಸಂಪುಟ ಸಹೋದ್ಯೋಗಿಗಳಾದ ವಿ.ಕೆ. ಸಿಂಗ್ ಮತ್ತು ಸುಷ್ಮಾ ಸ್ವರಾಜ್‌ ಅವರನ್ನು ಮೋದಿ ಶ್ಲಾಘಿಸಿದರು. ಯೆಮನ್‌ನಲ್ಲಿ ಭಾರತ ಮಾಡಿದ ಕಾರ್ಯಾಚರಣೆಯನ್ನು ವಿದೇಶಿ ಮಾಧ್ಯಮಗಳು ಹಾಡಿ ಹೊಗಳಿವೆ.  ಆದರೆ,  ಭಾರತೀಯರನ್ನು ರಕ್ಷಿಸಿ ಕರೆ ತರುವಲ್ಲಿ ಶ್ರಮಿಸಿದ  ವಿ.ಕೆ. ಸಿಂಗ್‌ ಅವರ ಒಳ್ಳೆಯ ಕೆಲಸವನ್ನು ಗುರುತಿಸುವ ಕೆಲಸ ಮಾಡಬೇಕಿದ್ದ ಇಲ್ಲಿನ ಮಾಧ್ಯಮಗಳು ಸಚಿವರ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ವಿವಾದ ಸೃಷ್ಟಿಸಿದವು. ಎಂದು ಅವರು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT