ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆಗೆ ವಿರೋಧ ಪಕ್ಷದ ನಾಯಕನ ಕುರ್ಚಿ

Last Updated 21 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೋಕಸಭೆ­ಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕರಾ­ಗಿರುವ ಮಲ್ಲಿ­ಕಾರ್ಜುನ ಖರ್ಗೆ ಅವರಿಗೆ ಅಧಿಕೃತವಾಗಿ ವಿರೋಧ ಪಕ್ಷದ ನಾಯ­ಕನ ಸ್ಥಾನಮಾನ ದೊರಕದಿ­ದ್ದರೂ ವಿರೋಧ ಪಕ್ಷದ ನಾಯಕ ಕುಳಿತು­ಕೊಳ್ಳುವ ಕುರ್ಚಿಯನ್ನು ನೀಡಲಾಗಿದೆ.

ವಿರೋಧ ಪಕ್ಷಗಳು ಕುಳಿತುಕೊಳ್ಳುವ ಭಾಗದಲ್ಲಿ ಮೊದಲ ಸಾಲಿನಲ್ಲಿ ಲೋಕ-­ಸಭೆಯ ಉಪ ಸ್ಪೀಕರ್‌ ಕುಳಿತುಕೊಳ್ಳುವ ಕುರ್ಚಿಯ ಪಕ್ಕ ಖರ್ಗೆ ಅವರ ಕುರ್ಚಿ ಇದೆ. ಖರ್ಗೆ ಅವರ ಪಕ್ಕದಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ನಂತರ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್‌ ಯಾದವ್‌,  ಆನಂತರ ಜೆಡಿಎಸ್‌ ನಾಯಕ ಎಚ್‌.ಡಿ. ದೇವೇಗೌಡ    ಕುಳಿತುಕೊಳ್ಳಲಿದ್ದಾರೆ.

ಸೋಮವಾರದಿಂದ ಲೋಕಸಭೆಯ ಚಳಿಗಾ­ಲದ ಅಧಿವೇಶನ ಆರಂಭವಾ­ಗಲಿದ್ದು, ಆ ಕಾರಣ ಸ್ಪೀಕರ್‌ ಅವರು ವಿವಿಧ ರಾಜಕೀಯ ಪಕ್ಷಗಳ ನಾಯ­ಕರಿಗೆ, ಸದಸ್ಯ­ರಿಗೆ ಆಸನದ ವ್ಯವಸ್ಥೆ ಮರು­ರೂಪಿಸಿ ಆದೇಶ ಹೊರಡಿಸಿ­ದ್ದಾರೆ. ಆಡಳಿತ ಪಕ್ಷದ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಂತರದ ಸ್ಥಾನವನ್ನು ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ನೀಡಲಾಗಿದೆ. ಎನ್‌ಡಿಎ ಸರ್ಕಾರದಲ್ಲಿ ಮೋದಿ ಅವರ ನಂತರದ ಸ್ಥಾನ ರಾಜನಾಥ್‌ ಸಿಂಗ್‌ ಅವರದ್ದು ಎಂಬುದು ಇದರಿಂದ ಸಾಬೀತಾಗಿದೆ.

ಅವರ ನಂತರ ಮೂರನೇ ಕುರ್ಚಿ­ಯಲ್ಲಿ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಹಾಗೂ ನಾಲ್ಕನೇ ಕುರ್ಚಿಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಕುಳಿತುಕೊಳ್ಳಲಿ­ದ್ದಾರೆ. ಐದನೇ ಸ್ಥಾನವನ್ನು ಖಾಲಿ ಉಳಿಸಲಾ­ಗಿದ್ದು, 6ನೇ ಕುರ್ಚಿಯನ್ನು ಸಾರಿಗೆ, ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಗೆ ನೀಡಲಾಗಿದೆ. 

ಕಾನೂನು ಸಚಿವ ಸದಾನಂದಗೌಡ, ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ ಜೋಶಿ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌, ಶಿವಸೇನೆಯ ಅನಂತ್‌ ಗೀತೆ, ಟಿಡಿಪಿಯ ಅಶೋಕ್‌ ಗಜಪತಿ ರಾಜು ಹಾಗೂ ಎಲ್‌ಜೆಪಿಯ ರಾಮ ವಿಲಾಸ್‌ ಪಾಸ್ವಾನ್‌ ಸಹ ಮೊದಲ ಸಾಲಿನಲ್ಲಿ ಕುಳಿತುಕೊಳ್ಳಲಿ­ದ್ದಾರೆ.

ವಿರೋಧ ಪಕ್ಷಗಳ ಸಾಲಿನ ಮೊದಲ ಪಂಕ್ತಿಯಲ್ಲಿ ಬಿಜೆಡಿಯ ಭರ್ತೃಹರಿ ಮಹತಾಬ್‌, ಟಿಎಂಸಿಯ ಸುದೀಪ್‌ ಬಂಧೋಪಾಧ್ಯಾಯ, ಎಐಎಡಿಎಂಕೆಯ ಪಿ. ವೇಣುಗೋಪಾಲ್‌ ಸಹ ಕುಳಿತು­ಕೊಳ್ಳಲಿದ್ದಾರೆ. ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ತಮ್ಮ ತಾಯಿ ಸೋನಿಯಾ ಅವರೆ ಹಿಂದೆ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳಲಿದ್ದಾರೆ. ಅದೇ ಸಾಲಿನಲ್ಲಿ ಪಿಡಿಪಿಯ ಮೆಹಬೂಬಾ ಮುಫ್ತಿ, ಕಾಂಗ್ರೆಸ್‌ ನಾಯಕ ಕಮಲ್‌ ನಾಥ್‌, ಎನ್‌ಸಿಪಿಯ ತಾರಿಖ್‌ ಅನ್ವರ್‌ ಹಾಗೂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಕುಳಿತುಕೊಳ್ಳಲಿದ್ದಾರೆ. ಸಿಂಗ್‌ ಅವರು ಲೋಕಸಭೆ­ಯಲ್ಲಿ ಕಾಂಗ್ರೆಸ್‌ನ ಉಪ ನಾಯಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT