ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತರಿ ಅಕ್ರಮ: ₹15.75 ಲಕ್ಷ ವಸೂಲಿಗೆ ಆದೇಶ

ಒಂಬುಡ್ಸ್‌ಮನ್‌ ಆದೇಶ ಹೊರಬಿದ್ದರೂ ಕ್ರಮ ಜರುಗಿಸದ ಜಿಲ್ಲಾ ಪಂಚಾಯಿತಿ!
Last Updated 5 ಮಾರ್ಚ್ 2015, 6:06 IST
ಅಕ್ಷರ ಗಾತ್ರ

ಬೀದರ್:  ಉದ್ಯೋಗ ಖಾತರಿ ಯೋಜನೆ­ಯಲ್ಲಿನ ಅವ್ಯವಹಾ­ರಗ­ಳಿಗೆ ಸಂಬಂಧಿಸಿ ಜಿಲ್ಲೆಯ 27 ಗ್ರಾಮ ಪಂಚಾಯಿತಿಗಳ ಪಿಡಿಒ, ಅಧ್ಯಕ್ಷರಿಂದ₹15.75 ಲಕ್ಷ ಹಣ ವಸೂಲಿ  ಮಾಡಲು ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್‌­ಮನ್ ಶಿಫಾರಸು ಮಾಡಿದ್ದರೂ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಆ ಬಗೆಗೆ ಕ್ರಮ ಜರುಗಿಸದೇ ವಿಳಂಬ ಮಾಡುತ್ತಿರುವ ಪ್ರಕರಣ ಇದು.

ಯಂತ್ರ ಬಳಸಿ ಕೆಲಸ ಮಾಡಿಸಿದ್ದರೂ ಕೂಲಿ ಕಾರ್ಮಿಕರ ಬಳಸಿದಂತೆ ಲೆಕ್ಕ ತೋರಿಸಿರುವುದು, ಆಗದ ಕೆಲಸಕ್ಕೆ ನಕಲಿ ಬಿಲ್‌ ತಯಾರಿಸಿ ಹಣ ದುರ್ಬಳಕೆ ಸೇರಿ ಇಲ್ಲದವವರ ಹೆಸರಿನಲ್ಲಿ ಖಾತೆಗೆ ಹಣ ಜಮೆ ಮಾಡಿರುವುದು ಇತ್ಯಾದಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಶಿಫಾರಸು ಮಾಡಲಾಗಿದೆ.

2013ರ ಆಗಸ್ಟ್‌ ತಿಂಗಳಿಂದ 2014ರ ಸೆಪ್ಟೆಂಬರ್‌ವರೆಗೆ ನಡೆದಿರುವ ಅವ್ಯವಹಾರಗಳಿಗೆ ಸಂಬಂಧಿಸಿ ಈ ವರದಿ ನೀಡಲಾಗಿದೆ. ಆರು ತಿಂಗಳ ಹಿಂದೆಯೇ ವರದಿಯನ್ನು ನೀಡಲಾಗಿದ್ದು, ಈಚೆಗೆ ಕ್ರಮಕೈಗೊಂಡ ಬಗೆಗೆ ಅನುಪಾಲನಾ ವರದಿ ಸಲ್ಲಿಸಲು ನೆನಪೋಲೆ ಕಳುಹಿಸಿದೆ. ಆದರೂ ಕ್ರಮ ಜರುಗಿಸಿಲ್ಲ ಎನ್ನುತ್ತಾರೆ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆಯ ಒಂಬುಡ್ಸ್‌ಮನ್‌ ಡಾ. ಟಿ.ನಂದಕುಮಾರ್‌ ಅವರು.

‘ಈ ಮೊದಲು ಉಜ್ವಲ್‌ ಕುಮಾರ್ ಘೋಷ್‌ ಅವರು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದಾಗ ವರದಿ ಸಲ್ಲಿಸಿದ್ದೆ. ಬಳಿಕ ನೆನಪೋಲೆ ಕಳುಹಿಸಿದೆ. ಈಗ ನೂತನ ಸಿಇಒ ಅವರಿಗೂ ಪತ್ರ ಬರೆದಿದ್ದೇನೆ. ಉದ್ಯೋಗ ಖಾತರಿ ಯೋಜನೆ­ಯಡಿ ಅವ್ಯವಹಾರ ಆಗಿರುವ ಕುರಿತು ಸಾಕಷ್ಟು ದೂರುಗಳಿವೆ. ಪ್ರಸಕ್ತ ವರ್ಷ ಇದುವರೆಗೂ ಒಟ್ಟು 21 ಲಿಖಿತ ದೂರುಗಳು ಬಂದಿವೆ. ವಿಚಾರಣೆ ಹಂತದಲ್ಲಿವೆ’ ಎಂದು ತಿಳಿಸಿದರು.

‘ಈಚಿನ ಮಾಹಿತಿ ಪ್ರಕಾರ, ವಿವಿಧ ಗ್ರಾಮ ಪಂಚಾಯಿತಿ­ಗಳಿಂದ ಸುಮಾರು ₨3 ಲಕ್ಷ ವಸೂಲಿ ಮಾಡಲಾಗಿದೆ. ಉಳಿದ ಮೊತ್ತ ವಸೂಲಿಗೆ ಕ್ರಮ ಜರುಗಿಸಲು ತಾಲ್ಲೂಕು ಪಂಚಾ­ಯಿತಿ­ಗಳ ಇಒಗಳಿಗೆ ಪತ್ರ ಹೋಗಿದೆ ಎಂದು ತಿಳಿದುಬಂದಿದೆ. ಈ ಕಾರ್ಯ ಚುರುಕಾ­ಗಬೇಕಿದೆ’ ಎಂದು ಹೇಳಿದರು.

ಬೀದರ್ ತಾಲ್ಲೂಕಿನಲ್ಲಿ ಮೂರು ಗ್ರಾಮ ಪಂಚಾಯಿತಿ, ಔರಾದ್‌ (ಬಿ) ತಾಲ್ಲೂಕಿನಲ್ಲಿ ಐದು, ಹುಮನಾಬಾದ್‌ ತಾಲ್ಲೂ­ಕಿನಲ್ಲಿ 13 ಮತ್ತು ಭಾಲ್ಕಿ ತಾಲ್ಲೂಕಿನಲ್ಲಿ 4 ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ ಎರಡು ಗ್ರಾಮ ಪಂಚಾ­ಯಿತಿಗಳಿಗೆ ಸಂಬಂಧಿಸಿ ಈ ವರದಿ ನೀಡಲಾಗಿದೆ.

ಬಹುತೇಕ ಪ್ರಕರಣಗಳಲ್ಲಿ ಕೂಲಿಗಳಿಗೆ ಕೆಲಸ ನೀಡಿ ಮಾಡಿಸ­ಬೇಕಾದ ಕೆಲಸವನ್ನು ಜೆಸಿಬಿ ನೆರವಿನಿಂದ ಪೂರ್ಣ­ಗೊಳಿಸಿ ಮಾಡಿಸಲಾಗಿದೆ. ಅಲ್ಲದೆ, ಕಾಮಗಾರಿಯನ್ನೇ ಕಾರ್ಯ­ಗತ­ಗೊಳಿಸದೇ, ಕಡತದಲ್ಲಿ ಮಾತ್ರ ಆಗಿರುವಂತೆ ತೋರಿ ಹಣ ಪಡೆದಿರುವ ಪ್ರಕರಣಗಳು ಇವೆ. ಲಿಖಿತವಾಗಿ ಬಂದ ದೂರು ಆಧರಿಸಿ ಸ್ಥಳ ಪರಿಶೀಲಿಸಿ ಅವ್ಯವಹಾರ ಕುರಿತು ವರದಿ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.

ಈ ಗ್ರಾಮ ಪಂಚಾಯಿತಿಗಳಲ್ಲಿ ಉಲ್ಲೇಖಿತ ಅವಧಿ­ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧ್ಯ­ಕ್ಷರು, ಪಿಡಿಒ ಅಲ್ಲದೇ, ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದ ಪಂಚಾಯಿತಿ ಎಂಜಿನಿಯ­ರಿಂಗ್‌ ವಿಭಾಗದ 7 ಮಂದಿ ಕಿರಿಯ ಎಂಜಿನಿಯ­ರ್‌ರ ಮೇಲೂ ಕ್ರಮಕ್ಕೆ ಸಲಹೆ ಮಾಡಲಾಗಿದೆ.

ಉದ್ಯೋಗ ಖಾತರಿ ಯೋಜನೆಯಡಿ ಆಗಿ­ರುವ ಅವ್ಯವಹಾರ ಪ್ರಕರಣಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೇ ಮೊದಲ ಅಪರಾಧಿ­ಗಳು. ಜಂಟಿ ಖಾತೆ ನಿರ್ವಹಣೆ ಮಾಡುವ ಕಾರಣ, ಅವರ ಜೊತೆಗೆ ಅಧ್ಯಕ್ಷರನ್ನು ಎರಡನೇ ಆರೋಪಿಯಾಗಿ ಪರಿಗಣಿಸಲಾಗುತ್ತದೆ. ಇಂಥ ಪ್ರಕರಣದಲ್ಲಿ ಒಂಬುಡ್ಸ್‌ಮನ್‌ ವರದಿ ಆಧರಿಸಿ 60 ದಿನದಲ್ಲಿ ಕ್ರಮ ಜರುಗಿಸಬೇಕು ಎಂಬ ನಿಯಮವಿದೆ.

ಆದರೆ, ಇದು  ಜಿಲ್ಲೆಯಲ್ಲಿ ಜಾರಿಯಾಗುತ್ತಿಲ್ಲ. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಈ ಬಗೆಗೆ ಕ್ರಮ ಜರುಗಿಸಬೇಕು. ಆದರೂ, ಕೈಗೊಂಡಿಲ್ಲ ಎಂದು ಹೇಳಿದರು. ಕೆಲವು ಪ್ರಕರಣಗಳಲ್ಲಿ ಅಧ್ಯಕ್ಷರು ಮತ್ತು ಪಿಡಿಒ ಶಾಮೀಲಾಗಿ ನಕಲಿ ಬಿಲ್‌, ದಾಖಲೆ ತಯಾರಿಸಿ ಹಣ ವಂಚಿರಸಿರುವುದು ಕಂಡು ಬಂದಿದೆ.

ಬೀದರ್‌ ತಾಲ್ಲೂಕಿನ ಸಿಂಧೋಲಾ, ನಾಗೂರಾ ಹಾಗೂ ಭಾಲ್ಕಿ ತಾಲ್ಲೂಕಿನ ಮದಕಟ್ಟಿ, ಹುಮನಾಬಾದ್‌ ತಾಲ್ಲೂಕಿನ ಶೆಡೋಳಾ ಗ್ರಾಮದಲ್ಲಿ ಇಂಥ ಪ್ರಕರಣಗಳು ಕಂಡುಬಂದಿವೆ ಎಂದು ಒಂಬುಡ್ಸ್‌ಮನ್‌ ಡಾ. ನಂದಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT