ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ವರ್ಗಾವಣೆಯ ‘ಅನುಭವ’

Last Updated 1 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಕಳೆದ ವಾರ ಮನೆಯನ್ನು ಖರೀದಿ ಮಾಡಿ ಅದನ್ನು ನೋಂದಣಿ ಮಾಡಿಸುವ ಸಾಮಾನ್ಯ ಪ್ರಕ್ರಿಯೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಂಡಂತಾಯಿತು. ಆದರೆ, ಅಧಿಕಾರಿಗಳು ಏನೇ ಹೇಳಲಿ ಬಿಡಲಿ ನೋಂದಣಿ ಪ್ರಕ್ರಿಯೆ ಇಂದಿಗೂ ‘ಕಬ್ಬಿಣದ ಕಡಲೆ’ಯೇ ಸರಿ. ಬಕಪಕ್ಷಿಗಳಂತೆ ಕಾಯುತ್ತಿರುವ ಮಧ್ಯವರ್ತಿಗಳ ಕಣ್ಣಿಗೆ ಬೀಳದವರೇ ಇಲ್ಲ. ಎಂತಹ ಉನ್ನತ ಹುದ್ದೆಯಲ್ಲಿರಲಿ, ಎಷ್ಟೇ ವಿದ್ಯಾವಂತರಾಗಿರಲಿ, ಮಧ್ಯವರ್ತಿಗಳ ಪಾಶಕ್ಕೆ ಬಿದ್ದೇ ಬೀಳಬೇಕು ಎಂಬಂತಾಗಿದೆ ಈ ವ್ಯವಸ್ಥೆ.

ಎಲ್ಲವೂ ಸರಳ, ಶುದ್ಧ ಹಾಗೂ ಪಾರದರ್ಶಕತೆಯಿಂದ ಕೂಡಿದ್ದರೂ ಮನಸಿನೊಳಗೆ ಕಾಡುವ ಅನುಮಾನಕ್ಕೋ ಅಥವಾ ನೋಂದಣಿ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿಗೋ ಏನೋ ಮಧ್ಯವರ್ತಿಗಳ ಹಾವಳಿ ಗಣಕ ಯಂತ್ರಗಳು ಬಂದ ಮೇಲೂ ತಪ್ಪಿಲ್ಲ. ಇನ್ನು, ನೋಂದಣಿ ಮುಗಿದ ಬಳಿಕ ಎದುರಾಗುವ ಬಲುದೊಡ್ಡ ಸಮಸ್ಯೆ ನಿವೇಶನ ಅಥವಾ ಮನೆಯ ಖಾತೆ ಮಾಡಿಸುವುದು ಮತ್ತು ಕಂದಾಯ ನಿಗದಿಪಡಿಸುವುದಕ್ಕೆ ಸಂಬಂಧಿಸಿದ್ದು.

ಕಂದಾಯವನ್ನು ಹೇಗೆ ನಿರ್ಧಾರ ಮಾಡಲಾಗುತ್ತದೆ? ನಿವೇಶನ ಅಥವಾ ಮನೆಗೆ ಎಷ್ಟು ಕಂದಾಯ ಕಟ್ಟಬೇಕಾಗುತ್ತದೆ? ಆ ಬಗ್ಗೆ ತಿಳಿದುಕೊಳ್ಳುವುದಾದರೂ ಎಲ್ಲಿ? ಮೊದಲಾದ ಪ್ರಶ್ನೆಗಳು ಬಹಳಷ್ಟು ಮಂದಿಯನ್ನು ಕಾಡುವುದುಂಟು. ಇಲ್ಲೂ ಇಲಾಖೆಯ ಅಧಿಕಾರಿಗಳು ಹೇಳುವುದು, ‘ಇದೆಲ್ಲವೂ ಬಹಳ ಸರಳ’ ಎಂದೇ. ಆದರೆ, ಇದು ‘ಕಲಿಯುವವರೆಗೆ ಬ್ರಹ್ಮವಿದ್ಯೆ, ಕಲಿತ ಮೇಲೆ ಕೋತಿ ವಿದ್ಯೆ’ ಎಂಬ ಗಾದೆ ಮಾತಿನಷ್ಟು ಸರಳವಾಗಿಲ್ಲ. ಒಂದು ರೀತಿಯಲ್ಲಿ ಕಲಸುಮೇಲೋಗರದಂತೆ ಇದೆ ಒಂದು ನಿವೇಶನ ಅಥವಾ ಕಟ್ಟಡಕ್ಕೆ ಕಂದಾಯ  ನಿಗದಿಪಡಿಸುವ ವಿದಾನ. ಸ್ಥಿರಾಸ್ತಿಯನ್ನು ನೋಂದಣಿ ಮಾಡಿಸಿದ ಕೂಡಲೇ ಮಾಡಬೇ­ಕಾದ್ದು ಸಂಬಂಧಪಟ್ಟ ಸ್ಥಳೀಯ ಆಡಳಿತ ಸಂಸ್ಥೆಯಲ್ಲಿನ(ಪುರಸಭೆ, ನಗರಸಭೆ ಅಥವಾ ಪಾಲಿಕೆ) ಕಂದಾಯ ಶಾಖೆಯಲ್ಲಿ ಖಾತೆ ಬದಲಾವಣೆ.

‘ಖಾತೆ ಬದಲಾವಣೆಯಲ್ಲಿ ಮೊದಲಿನಂತೆ ಲಂಚಗುಳಿತನ ಇಲ್ಲ. ಎಲ್ಲ ಪ್ರಕ್ರಿಯೆಯೂ ಬಹಳ ಸರಳ, ಸುಲಲಿತವಾಗಿದೆ’ ಎಂದು ಅಧಿಕಾರಿಗಳು ಹೇಳುವುದೆಲ್ಲ ಮಾತಿನಲ್ಲಿಯೇ ಇದೆ. ಖಾತೆ ಬದಲಾವಣೆ ವಿಚಾರದಲ್ಲಿ  ಇಲಾಖೆಯೊಳಗೆ ಇಂದಿಗೂ ಮಧ್ಯವರ್ತಿಗಳ ಹಾವಳಿ ಇದ್ದೇ ಇದೆ. ನಿವೇಶನ ಮಾರಿದ ವ್ಯಕ್ತಿಯ ಹೆಸರಿನಲ್ಲಿರುವ ಕಂದಾಯ ಖಾತೆಯನ್ನು ಖರೀದಿಸಿದ ವ್ಯಕ್ತಿಯ ಹೆಸರಿಗೆ ಬದಲಿಸಿಕೊಳ್ಳಲು (ಖಾತೆ ವರ್ಗಾಯಿಸಲು) ಮುಖ್ಯವಾಗಿ ‘ಆಸ್ತಿ ವರ್ಗಾವಣೆಯ ನೋಟಿಸ್’ ಪತ್ರವನ್ನು ಪಡೆದು ಅದರಲ್ಲಿ ಕೋರಿರುವ ಎಲ್ಲ ಮಾಹಿತಿಗಳನ್ನೂ ಬರೆಯಬೇಕು. ಅದನ್ನು ಖಾತೆ ಬದಲಾವಣೆಗೆ ಬರೆದ ಮನವಿ ಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು.

ಇದರಲ್ಲಿ ಆ ಸ್ಥಿರಾಸ್ತಿಗೆ ಈ ಮೊದಲು ನೀಡಿರುವ ಕಂದಾಯ ಖಾತೆ ಸಂಖ್ಯೆ, ಸ್ಥಿರಾಸ್ತಿ ಇರುವ ವಿಭಾಗ/ವಾರ್ಡ್‌ ಸಂಖ್ಯೆ, ವಿಳಾಸ, ನಿವೇಶನ ಅಥವಾ ಕಟ್ಟಡದ ವಿಸ್ತೀರ್ಣ, (ಉದ್ದ, ಅಗಲ) ಸದ್ಯ ಆಸ್ತಿ ಯಾರ ಸುಪರ್ದಿಯಲ್ಲಿದೆಯೋ ಅವರ ಹೆಸರು, ಆಸ್ತಿ ವರ್ಗಾವಣೆ ಮಾಡಬೇಕಾಗಿರುವವರ ಹೆಸರು, ಖಾತೆ ವರ್ಗಾವಣೆಗೆ ಕಾರಣ, ಇದು ಉಯಿಲೆ, ನೋಂದಣಿಯೇ, ಕ್ರಯಪತ್ರವೇ, ವಿಭಾಗ ಪತ್ರವೇ, ಪೌತಿಖಾತೆಯೇ ಎಂಬುದನ್ನು ನಮೂದಿಸುವುದು ಕಡ್ಡಾಯ.
ಕ್ರಯಪತ್ರದ ಮೇಲೆ  ಶೇ 0.5ರಷ್ಟು ಶುಲ್ಕ ಪಾವತಿಸಿ ಖಾತೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ಉಳಿದಂತೆ ಪೌತಿಖಾತೆ (ಈ ಮೊದಲು ಆಸ್ತಿ ಒಡೆತನ ಹೊಂದಿದ್ದ ವ್ಯಕ್ತಿ ನಿಧನರಾದ ನಂತರ ಅವರ ವಾರಸುದಾರರಿಗೆ ಖಾತೆ ವರ್ಗಾವಣೆ), ದಾನ ಮೊದಲಾದವುಗಳಿಗೆ ಸಂಬಂಧಿಸಿದಂತೆ ಆಯಾ ಆಸ್ತಿಯ ಅಳತೆ ಮೇಲೆ ಶುಲ್ಕ ನಿರ್ಧರಿಸಲಾಗುತ್ತದೆ.

ಖಾತೆ ಗೊಂದಲ
ಈ ಖಾತೆ ಬದಲಾವಣೆಯ ಪ್ರಕ್ರಿಯೆಯೇ ರಾಜ್ಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಮೈಸೂರಿನಲ್ಲಿ ಖಾತೆ ಎಂದು ನೀಡುವುದೇ ಇಲ್ಲ. ಇಲ್ಲಿ ಕೇವಲ ‘ಕರಪಾವತಿ ಹೊಣೆಗಾರಿಕೆ’ ಎಂದೇ ನೀಡಲಾಗುತ್ತಿದೆ.

‘ಬೇರೆ ಕಡೆಯಲ್ಲಿ ‘ಖಾತೆ’ ಎಂದೇ ನೀಡಲಾಗುತ್ತಿದೆ. ಮೊದಲಿಗೆ ಮೈಸೂರಿನಲ್ಲೂ ‘ಖಾತೆ’ ಎಂಬ ಪದ ಪ್ರಯೋಗವೇ ಇತ್ತು. ಭೂಮಾಫಿಯ ಜತೆ ಶಾಮೀಲಾಗಿ ಸರ್ಕಾರಿ ಭೂಮಿ ಅಥವಾ ಅಕ್ರಮ ರೆವಿನ್ಯೂ ನಿವೇಶನಗಳಿಗಾಗಿ ಯಾವುದೋ ಒಂದು ಹಂತದಲ್ಲಿ ಕಾಣದ ಕೈಗಳಿಂದ ಸೃಷ್ಟಿಯಾದದ್ದೇ ‘ಕರಪಾವತಿ ಹೊಣೆಗಾರಿಕೆ’. ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲೆಂದೇ ಇದನ್ನು ಜಾರಿಗೆ ತಂದಂತಿದೆ. ಇದರ ಬದಲಿಗೆ ಮೊದಲಿದ್ದ ‘ಖಾತೆ’ ಪ್ರಕ್ರಿಯೆಯೇ ಜಾರಿಗೆ ಬರಬೇಕು’ ಎನ್ನುತ್ತಾರೆ ಮೈಸೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ತೆರಿಗೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಬಿ.ಎಲ್.ಭೈರಪ್ಪ. ಈ ಬಗ್ಗೆ ಹೋರಾಟವನ್ನು ಮುಂದುವರೆಸುವುದಾಗಿಯೂ ಅವರು ತಿಳಿಸುತ್ತಾರೆ.

ಆದರೆ, ರಾಜ್ಯದ ಉಳಿದ ನಗರಗಳಲ್ಲೆಲ್ಲಾ ‘ಖಾತೆ’ ಎಂದೇ ಈಗಲೂ ದಾಖಲೆ ನೀಡಲಾಗುತ್ತಿದೆ. ಇದಕ್ಕೆ ಮೈಸೂರು ಮಹಾ ನಗರಪಾಲಿಕೆಯ ಕಂದಾಯ ಶಾಖೆ ಅಧಿಕಾರಿಗಳು ಹೇಳುವುದೇ ಬೇರೆ. ‘ಯಾವ ಕಾಯಿದೆಯಲ್ಲೂ ಖಾತೆ ಎಂಬುದು ಇಲ್ಲ. ಹಾಗಾಗಿ, ಖಾತೆ ನೀಡುತ್ತಿಲ್ಲ’. ಒಟ್ಟಾರೆ, ಈ ವಾದ–ವಿವಾದ–ಗೊಂದಲಗಳು ಏನೇ ಇರಲಿ. ‘ಖಾತೆ’ ಅಥವಾ ‘ಕರಪಾವತಿ ಹೊಣೆಗಾರಿಕೆ’ಯನ್ನು ಪಡೆದ ನಂತರ ಆರಂಭವಾಗುವುದೇ ತೆರಿಗೆ ನಿಗದಿ ಪ್ರಕ್ರಿಯೆ.
ಇಲ್ಲಿ ಸರ್ಕಾರ 2002ರ ಏಪ್ರಿಲ್ ಒಂದರಿಂದ ‘ಸ್ವಯಂಘೋಷಿತ ಆಸ್ತಿ ತೆರಿಗೆ ಪದ್ಧತಿ’ಯನ್ನು ಜಾರಿಗೆ ತಂದಿದೆ. ‘ಈ ಪದ್ಧತಿಯು ಹೆಚ್ಚು ಸುಲಭ ಪಾರದರ್ಶಕತೆಯಿಂದ ಕೂಡಿದೆ’ ಎಂಬುದು ಅಧಿಕಾರಿಗಳ ಆಂಬೋಣ.

ತೆರಿಗೆ ನಿರ್ಧಾರ ಕೈಪಿಡಿ
ಆದರೆ, ಇದೂ ಸಹ ಅಧಿಕಾರಿಗಳು ಹೇಳಿದಷ್ಟು ಸರಳವಾಗಿಲ್ಲ. ಇದಕ್ಕೆ ಮೊದಲಿಗೆ ‘ಸ್ವಯಂ ಆಸ್ತಿ ತೆರಿಗೆ ನಿರ್ಧಾರಣಾ ಯೋಜನೆ ಕೈಪಿಡಿ’ ಯನ್ನು ನಿಗದಿತ ಶುಲ್ಕ ಪಾವತಿಸಿ ತೆಗೆದುಕೊಳ್ಳಬೇಕು. ಇದರಲ್ಲಿ ಸುಮಾರು 80 ಪುಟಗಳಿದ್ದು, ಯಾವ ಯಾವ ಬಗೆಯ ಆಸ್ತಿಗಳಿಗೆ ಎಷ್ಟೆಷ್ಟು ತೆರಿಗೆ ಎಂಬುದನ್ನು ನಮೂದಿಸಲಾಗಿದೆ.

ಲೈಬ್ರರಿ, ಆರೋಗ್ಯ, ಭಿಕ್ಷುಕರು, ಎಸ್‌ಡಬ್ಲ್ಯುಎಂ ಮೊದಲಾದ ಸೆಸ್‌ಗಳ ಪ್ರಮಾಣವನ್ನು ನಮೂದಿಸಲಾಗಿದೆ. ಅಲ್ಲದೇ, ಪ್ರದೇಶವಾರು ಭೂಮಿಯ ಅಂದಾಜು ಮಾರುಕಟ್ಟೆ ಬೆಲೆಗಳೂ ಇದರಲ್ಲಿವೆ.ಒಂದು ಚದರಡಿ ವಸತಿಗೆ ಒಂದು ವಿಧದ ಮೌಲ್ಯ ಇದ್ದರೆ, ವಾಣಿಜ್ಯ ಉದ್ದೇಶದ ನಿವೇಶನ ಅಥವಾ ಕಟ್ಟಡಕ್ಕೆ ಹೆಚ್ಚು ಮೌಲ್ಯ ಇರುತ್ತದೆ. ಕಟ್ಟಡದಲ್ಲಿ ನೆಲಕ್ಕೆ ಮೊಸಾಯಿಕ್ ಹಾಕಿಸಿದ್ದರೆ ಒಂದು ಮೌಲ್ಯ, ಮಾರ್ಬಲ್ ನೆಲಹಾಸು ಹಾಕಿದ್ದರೆ ಬೇರೆಯದೇ ಮೌಲ್ಯ... ಹೀಗೆ, ಸಾಗುತ್ತದೆ ಪ್ರದೇಶವಾರು ಕಂದಾಯ ನಿರ್ಧಾರಣೆ.

‘ಅಕ್ಷರಶಃ’ ಪರದಾಟ
ಒಂದೇ ನಗರದಲ್ಲಿ ವಿವಿಧ ಪ್ರದೇಶ, ಬಡಾವಣೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಕಂದಾಯ ನಿಗದಿಯಾಗಿರುವ ಉದಾಹರಣೆಗಳೂ ಇವೆ. ಆದರೆ, ಕಂದಾಯ ಇಲಾಖೆಯ ಈ ಪುಟ್ಟ ಹೊತ್ತಗೆ ಓದಿ ಸ್ಥಿರಾಸ್ತಿ ಮಾಲೀಕರೇ ತಮ್ಮ ಆಸ್ತಿಗೆ ಸಂಬಂಧಿಸಿದ ತೆರಿಗೆಯನ್ನು ಸ್ವತಃ ಲೆಕ್ಕ ಹಾಕಿ ತಿಳಿದುಕೊಳ್ಳುವುದು ಎಲ್ಲರಿಗೂ ಸುಲಭ ಇಲ್ಲ. ಅನಕ್ಷರಸ್ಥರಿರಲಿ, ಅಕ್ಷರಸ್ಥರೂ ಸಹ ಈ ಹಂತದಲ್ಲಿ ‘ಅಕ್ಷರಶಃ’ ಪರದಾಡಲೇ­ಬೇಕಾಗುತ್ತದೆ! ಹೇಗೋ ಏನೋ ಆಸ್ತಿ ತೆರಿಗೆಯನ್ನು ನಿರ್ಧರಿಸಿ­ಕೊಂಡು­ಬಿಟ್ಟಿರಿ ಎಂದುಕೊಳ್ಳಿ. ನಂತರ ‘ಸ್ವಯಂ ಆಸ್ತಿ ತೆರಿಗೆ ಘೋಷಣೆಯ ವಿವರ ಪಟ್ಟಿ’ಯನ್ನು ತುಂಬಲೇ ಬೇಕು.

ಇದೂ ಅಷ್ಟೇ, ಕನ್ನಡದಲ್ಲೇ ಇದ್ದರೂ ಸಾಮಾನ್ಯ ಜನರಿಗೆ ಮಾಹಿತಿ ಭರ್ತಿ ಮಾಡಲು ಕಷ್ಟಕರ ಎನಿಸುತ್ತದೆ.  ಮೂಲ ಆಸ್ತಿ ತೆರಿಗೆ ಮೇಲೆ ಶೇ 15ರಂತೆ ಆರೋಗ್ಯ ಸೆಸ್‌, ಶೇ 6ರಂತೆ ಲೈಬ್ರರಿ ಸೆಸ್‌, ಶೇ 3ರಂತೆ ಭಿಕ್ಷುಕರ  ಕಲ್ಯಾಣದ ಸೆಸ್‌... ಮೊದಲಾದವನ್ನು ನೀವೇ ಲೆಕ್ಕಹಾಕಿ ಅರ್ಜಿಯನ್ನು ತುಂಬಿ  ತೆರಿಗೆ ಪಾವತಿಸಬೇಕು.

ಈ ತೆರಿಗೆ ಪಾವತಿಸಲು ಬ್ಯಾಂಕ್ ಪ್ರತಿ, ಪಾಲಿಕೆ ಪ್ರತಿ, ವಲಯ ಕಚೇರಿಗೆ ಸಲ್ಲಿಸಬೇಕಾದ ಪ್ರತಿ ಹಾಗೂ ಪಾವತಿದಾರರ ಪ್ರತಿ ಸೇರಿದಂತೆ ಒಟ್ಟು ನಾಲ್ಕು ಪ್ರತಿಗಳಲ್ಲಿ ಹಲವು ಕಾಲಂಗಳ ಚಲನ್‌ಗಳನ್ನು ಭರ್ತಿ ಮಾಡಬೇಕು. ಇಷ್ಟೆಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಷ್ಟರ ವೇಳೆಗೆ ‘ಖಾತೆ ವರ್ಗಾವಣೆ ಹಾಗೂ ಕಂದಾಯ ನಿರ್ಧಾರ ಎಂಬುದು ಅಧಿಕಾರಿಗಳು ಹೇಳುವಷ್ಟು ಸುಲಭದ್ದಲ್ಲ’ ಎಂಬ ಅನುಭವ ಆಗುತ್ತದೆ.

‘ನಮ್ಮ ಈ ಗೊಂದಲ, ಪರದಾಟದ ಪ್ರಯೋಜನವನ್ನು ಪಡೆದುಕೊಳ್ಳಲೆಂದೇ ಇಲಾಖೆಯ ಕಚೇರಿಯಾಚೆ ಮಧ್ಯವರ್ತಿಗಳು ಸಾಕಷ್ಟು ಸಂಖ್ಯೆಯಲ್ಲಿ ಓಡಾಡುತ್ತಾ ಸಾಮಾನ್ಯನ ಜೇಬಿಗೆ ಕೈಹಾಕುತ್ತಿದ್ದಾರೆ. ಸರ್ಕಾರ ಇನ್ನಾದರೂ ಈ ವ್ಯವಸ್ಥೆಯನ್ನು ಗೊಂದಲಗಳಿಲ್ಲದೇ ಇನ್ನಷ್ಟು ಸರಳಗೊಳಿಸಬೇಕಾಗಿದೆ’ ಎಂಬುದು ಇತ್ತೀಚೆಗಷ್ಟೇ ಬಹಳ ಕಷ್ಟಪಟ್ಟು ಖಾತೆ ವರ್ಗಾವಣೆ ಮಾಡಿಸಿಕೊಂಡ ಹಿರಿಯ ನಾಗರಿಕರೊಬ್ಬರ ಒತ್ತಾಯದ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT