ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿತನದ ಹಕ್ಕಿಗೆ ಕುತ್ತು

Last Updated 28 ಜುಲೈ 2015, 19:30 IST
ಅಕ್ಷರ ಗಾತ್ರ

ನೀವು ನಿಮ್ಮ ಆತ್ಮೀಯರಿಗೆ ಕಳುಹಿಸುವ ಕೆಲವು ಸಂದೇಶಗಳು ನಿಮಗೆ ಮತ್ತು ಅವರಿಗಷ್ಟೇ ಗೊತ್ತಿರಬೇಕೆಂದು ಬಯಸುತ್ತೀರಿ. ಇದು ನಿಮ್ಮ ಹಕ್ಕು. ಖಾಸಗಿತನದ (ಪ್ರೈವೆಸಿ) ಹಕ್ಕು. ಆದರೆ ದೇಶದ ಅಟಾರ್ನಿ ಜನರಲ್ ಅವರು ಸುಪ್ರೀಂಕೋರ್ಟ್‌ ಮುಂದೆ ಹೇಳಿರುವ ಒಂದು ಮಾತು ಈ ಹಕ್ಕು ನಿಮಗಿಲ್ಲವೇನೊ ಎಂಬ ಶಂಕೆ ಮೂಡಿಸುವಂತಿದೆ. ಜನರ ಈ ಖಾಸಗಿತನದ ಹಕ್ಕು ಅವರ ಮೂಲಭೂತ ಹಕ್ಕೇ ಅಲ್ಲ ಎಂದು ಅವರು ಹೇಳಿದ್ದಾರೆ. ದೇಶದ ಕಾನೂನನ್ನು ಸರ್ಕಾರ ಮತ್ತು ರಾಷ್ಟ್ರದ ಜನರ ಪರವಾಗಿ ವಿಶ್ಲೇಷಿಸಬೇಕಾದವರೇ ಹೀಗೆ ಹೇಳಿದರೆ, ನಾವೆಲ್ಲ ಯಾವುದರ ಹಿಂದೆ ಅಡಗಿಕೊಳ್ಳಬೇಕೊ ತಿಳಿಯದಂತಾಗಿದೆ.

ಖಾಸಗಿತನದ ಹಕ್ಕಿನ ಮೇಲೆ ನಿರಂತರವಾಗಿ ಆಕ್ರಮಣಗಳು ನಡೆಯುತ್ತಿವೆ. ಹೀಗಿರುವಾಗ ನಮ್ಮ ಖಾಸಗಿ ಬದುಕು, ವಿಚಾರಗಳನ್ನು ಸರ್ಕಾರ ಬಾಯಿಮಾತಿನಲ್ಲಾದರೂ ಗೌರವಿಸಲಿ ಎಂದು ಬಯಸುವುದು ತಪ್ಪಲ್ಲವಲ್ಲ! ವಿಶ್ವದಾದ್ಯಂತ ಬೇಹುಗಾರಿಕೆ ಸಂಸ್ಥೆಗಳು ಪ್ರತಿಯೊಬ್ಬರ ಇ– ಮೇಲ್‌ಗಳನ್ನು ಇಣುಕಿ ನೋಡುವುದಲ್ಲದೆ, ಜನರ ಟೆಲಿಫೋನ್ ಸಂಭಾಷಣೆಗಳನ್ನು ಕದ್ದಾಲಿಸುತ್ತಿವೆ ಎಂಬುದನ್ನು ಎಡ್ವರ್ಡ್‌ ಸ್ನೋಡೆನ್  ಬಯಲಿಗೆಳೆದಿದ್ದಾರೆ. ಅಷ್ಟೇ ಏಕೆ, ಅಮೆರಿಕವು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್‌ ಅಂತಹವರ ಮೇಲೇ ಬೇಹುಗಾರಿಕೆ ನಡೆಸಿ, ಅವರ ಗುಟ್ಟುಗಳನ್ನು ಕಳ್ಳತನದಿಂದ ಪರಿಶೀಲಿಸಿದ್ದು ಈಗ ಇತಿಹಾಸ.

ಭಾರತ ತನ್ನ ಜನರ ಮೇಲೆ ಸರ್ವ ರೀತಿಯಿಂದ ಕಣ್ಣಿಡಲು ಅತ್ಯಾಧುನಿಕ ತಾಂತ್ರಿಕ ಪರಿಣತಿ ಮತ್ತು ಸೌಲಭ್ಯ ಹೊಂದಿರುವುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರದ  ಅವಧಿಯಲ್ಲಿ ಸೆಂಟ್ರಲೈಸ್‌್ಡ ಮಾನಿಟರಿಂಗ್ ಸಿಸ್ಟಂ (ಸಿಎಂಎಸ್) ಎಂಬ ಹೆಸರಿನ ಯೋಜನೆ ರೂಪಿಸಲಾಗಿತ್ತು. ಇದರ ಮೂಲಕ 90 ಕೋಟಿ ಮೊಬೈಲ್ ಫೋನುಗಳ ಸಂಭಾಷಣೆಗಳನ್ನು ಕೇಳಿಸಿಕೊಳ್ಳುವ ಹಾಗೂ 16 ಕೋಟಿ ಇಂಟರ್‌ನೆಟ್ ಬಳಕೆದಾರರ ಚಟುವಟಿಕೆಗಳ ಮೇಲೆ ಕಣ್ಗಾವಲಿಡುವ ಕಾರ್ಯಕ್ಕೆ ಕೈಹಾಕಿದ್ದನ್ನು 2013ರ ಜೂನ್ ತಿಂಗಳಿನಲ್ಲಿ ರಾಷ್ಟ್ರ ಮಟ್ಟದ ಪತ್ರಿಕೆಯೊಂದು ವರದಿ ಮಾಡಿತ್ತು. ಸಾಮಾಜಿಕ ಜಾಲತಾಣಗಳ 8.5 ಕೋಟಿ ಬಳಕೆದಾರರ ಮೇಲೂ ನಿಗಾ ಇಡುವ ಯೋಜನೆ ಇದಾಗಿದೆ ಎಂದು ಈ ವರದಿ ಹೇಳಿತ್ತು. ಅಂದರೆ, ಸರ್ಕಾರ ನಮ್ಮೆಲ್ಲರ ಸಂಭಾಷಣೆ ಕೇಳಬಲ್ಲದು; ನಮ್ಮ ಎಸ್‌ಎಂಎಸ್‌ಗಳನ್ನು ಓದಬಲ್ಲದು.

ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ರಕ್ಷಣೆ ನಮಗಿದೆ ಎಂಬ ಆಸೆಯನ್ನು ಇಟ್ಟುಕೊಂಡವರಿಗೆ ಅಟಾರ್ನಿ ಜನರಲ್ ಹೇಳಿಕೆ ನಿರಾಸೆ ಮೂಡಿಸಿದೆ. ಸಂವಿಧಾನದ 21ನೇ ಕಲಂ ನಮಗೆ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಕೊಡುತ್ತದೆ. ಖಾಸಗಿತನದ ಹಕ್ಕು ಇದರಲ್ಲಿ ಅಡಕವಾಗಿದೆಯೆಂದೇ ವ್ಯಾಖ್ಯಾನಿಸಲಾಗಿದೆ.

ಈ ಹಕ್ಕಿನ ವಿಶಾಲ ವ್ಯಾಪ್ತಿಯನ್ನು ಸುಪ್ರೀಂಕೋರ್ಟ್‌ ಮೇನಕಾ ಗಾಂಧಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಹೇಳಿದೆ.
ನಮಗೆ ಗೌರವದಿಂದ ಬದುಕುವ ಹಕ್ಕಿದೆ ಎಂಬ ಅಂಶ ಇದರಲ್ಲಿ ಅಡಕವಾಗಿರುವುದನ್ನು ಹೇಳಿ ನ್ಯಾಯಾಲಯ ನಮ್ಮ ಕೈ ಹಿಡಿದಿದೆ. ಆ ರೀತಿ ಬದುಕುವುದಕ್ಕೆ ಬೇಕಾದುದನ್ನೆಲ್ಲ ಮಾಡಬಹುದು ಎಂಬ ಅಂಶವನ್ನು ತಿಳಿಸಿದೆ. ಜೀವಿಸುವ ಹಕ್ಕು ಎಂದರೆ ಪ್ರಾಣಿಗಳಂತೆ ಬದುಕುವ ಹಕ್ಕಲ್ಲ ತಾನೆ?

1948ರ ವಿಶ್ವಸಂಸ್ಥೆಯ ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯ 12ನೇ ವಿಧಿಯಲ್ಲಿ ಖಾಸಗಿತನದ ಹಕ್ಕನ್ನು ಎತ್ತಿ ಹಿಡಿಯಲಾಗಿದೆ. ಪ್ರತಿಯೊಬ್ಬರ ಖಾಸಗಿ ಬದುಕು, ಕುಟುಂಬ, ಮನೆ ಹಾಗೂ ಪತ್ರ ವ್ಯವಹಾರಗಳಲ್ಲಿ ಅನಗತ್ಯವಾಗಿ ಯಾರೂ ಕೈಹಾಕುವಂತಿಲ್ಲ; ಅವರ ಗೌರವ ಮತ್ತು ಖ್ಯಾತಿಯ ಮೇಲೆ ಆಕ್ರಮಣ ನಡೆಸುವಂತಿಲ್ಲ; ಪ್ರತಿಯೊಬ್ಬರಿಗೂ ಇಂತಹ ಆಕ್ರಮಣಗಳಿಂದ ಕಾನೂನಿನ ರಕ್ಷಣೆ ಪಡೆಯುವ ಹಕ್ಕು ಇದೆಯೆಂದು ವಿಶ್ವಸಂಸ್ಥೆ ಮಾಡಿದ ಘೋಷಣೆ ಸ್ಪಷ್ಟಪಡಿಸಿದೆ. ಯಾರಿಗೂ ತೊಂದರೆ ಕೊಡದೆ ನಮ್ಮ ಪಾಡಿಗೆ ನಾವಿರುವುದು, ಖಾಸಗಿ ಜೀವನವನ್ನು ಅನುಭವಿಸುವುದು ನಮ್ಮ ನೈಸರ್ಗಿಕ ಹಕ್ಕು.

ವಿಶ್ವಸಂಸ್ಥೆಯ ಈ ಘೋಷಣೆ ಮತ್ತು ಮೇನಕಾ ಗಾಂಧಿಯವರ ಪ್ರಕರಣದ ತೀರ್ಪುಗಳನ್ನು ಗಮನಿಸಿದರೆ, ನಮ್ಮ ಖಾಸಗಿತನಕ್ಕೆ ಧಕ್ಕೆ ಬಂದಾಗ ಸರ್ಕಾರ ನಮ್ಮ ರಕ್ಷಣೆಗೆ ಬರಬೇಕೆಂದೇ ಅರ್ಥ. ಆದರೆ ಅಟಾರ್ನಿ ಜನರಲ್ ಅವರು ಬೇರೆ ರಾಗ ಹಾಡಿದ್ದು ಮಾತ್ರ ದುರದೃಷ್ಟಕರ.

ಸ್ನೋಡೆನ್ ಪ್ರಕರಣದ ನಂತರ ಅಮೆರಿಕದ ಬೇಹುಗಾರಿಕೆ ಬಗ್ಗೆ ದೊಡ್ಡ ವಿವಾದ ಉಂಟಾದ ಬಳಿಕ, ಅಧ್ಯಕ್ಷ ಬರಾಕ್ ಒಬಾಮ ದೇಶದ ಜನರ ವಿರುದ್ಧ ಬೇಹುಗಾರಿಕೆ ನಡೆಸುವ ಯಾವುದೇ ಕ್ರಮ ಅಥವಾ ಯೋಜನೆ ಇಲ್ಲವೆಂದು ಹೇಳಿ ನಾಗರಿಕರಿಗೆ ಅಭಯ ನೀಡಿದ್ದಾರೆ (ವಸ್ತುಸ್ಥಿತಿ ಏನೇ ಇರಲಿ). ಆದರೆ ನಮ್ಮ ಅಟಾರ್ನಿ ಜನರಲ್ ಹೇಳಿಕೆಯನ್ನು ಸರ್ಕಾರದ ಇಂಗಿತ ಎಂದು ಅರ್ಥೈಸುವುದಾದರೆ, ನಾವು ಇನ್ನು ಮೈಯೆಲ್ಲ ಕಣ್ಣಾಗಿರಬೇಕೇ ಎಂಬ ಸಂಶಯ ಮೂಡುತ್ತದೆ.

ಅಮೆರಿಕದ ಕೆಲವು ರಾಜ್ಯಗಳು ಖಾಸಗಿ ಬದುಕಿನ ಹಕ್ಕನ್ನು ಕಾನೂನಿನ ಮೂಲಕ ರಕ್ಷಿಸುತ್ತವೆ. ಇಂತಹ ಪ್ರತ್ಯೇಕ ಕಾನೂನಿನ ಅಗತ್ಯ ನಮ್ಮ ದೇಶಕ್ಕೆ  ಇದೆಯೇ ಇಲ್ಲವೇ ಎಂಬುದರ ಬಗ್ಗೆ ಬೇರೆ ಬೇರೆ ವಾದಗಳಿವೆ. ಕಾನೂನು ತಜ್ಞರು ಈ ವಿಷಯದ ಮೇಲೆ ಬೆಳಕು ಚೆಲ್ಲಬಹುದು. ಹಾಗೆಯೆ ನಾಗರಿಕ ಹಕ್ಕುಗಳ ಹೋರಾಟಗಾರರು, ಬೇಹುಗಾರಿಕೆ ಯೋಜನೆಯಡಿ ದೇಶದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಇನ್ನಷ್ಟು ವ್ಯಾಪಕವಾಗಿ ಚರ್ಚೆಗೆ ಒಳಪಡಿಸಬೇಕಾಗಿದೆ. ಸರ್ಕಾರವಂತೂ  ಇದನ್ನು ಮುಚ್ಚಿಟ್ಟುಕೊಳ್ಳಲು ಬಯಸುತ್ತದೆ. ಸರ್ಕಾರ ತನ್ನ ನೀತಿಗಳನ್ನು ವಿರೋಧಿಸುವವರನ್ನು ವರ್ಷಾನುಗಟ್ಟಲೆ ಜೈಲಿಗಟ್ಟಿದ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಪ್ರಜಾಪ್ರಭುತ್ವವಾದಿ ಸರ್ಕಾರಗಳೂ  ಎಷ್ಟು ಬರ್ಬರವಾಗಿ ನಡೆದುಕೊಳ್ಳಲು ಸಾಧ್ಯ ಎಂಬುದನ್ನು ಇರಾಕ್ ಯುದ್ಧದ ನಂತರ ಸೆರೆಸಿಕ್ಕ ಕೈದಿಗಳನ್ನು ಅಮೆರಿಕದ ಗ್ವಾಂಟನಾಮೊದಂತಹ ಜೈಲುಗಳಲ್ಲಿ ಹೇಗೆ ನಡೆಸಿಕೊಳ್ಳಲಾಯಿತು ಎನ್ನುವುದನ್ನು ನೋಡಿದರೆ ಅರ್ಥವಾಗುತ್ತದೆ.

ನಮ್ಮಲ್ಲೂ ಕಾಶ್ಮೀರ ಕಣಿವೆಯಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಯ ವಿವರಗಳನ್ನು ಆಗಾಗ ಪತ್ರಿಕೆಗಳಲ್ಲಿ ಕಾಣುತ್ತಿರುತ್ತೇವೆ. ಇವನ್ನೆಲ್ಲ ನೋಡಿ ಮಾನವ ಹಕ್ಕು, ಖಾಸಗಿ ಬದುಕಿನ ಹಕ್ಕು ಹಾಗೂ ಸರ್ಕಾರ ಜೊತೆಜೊತೆಯಾಗಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ.

ನಾವು ಏನೂ ತಪ್ಪು ಮಾಡದಿದ್ದರೆ ಸರ್ಕಾರದ ಬೇಹುಗಾರಿಕೆ ಬಗ್ಗೆ ಯಾವುದೇ ಸಂದೇಹ ಅಥವಾ ಭಯ ಇಟ್ಟುಕೊಳ್ಳಬೇಕಾಗಿಲ್ಲ ಎಂದು ವಾದಿಸಬಹುದು. ಇದು ಮೇಲ್ನೋಟಕ್ಕೆ ಸರಿ ಎಂದೇ ಕಾಣಬಹುದು. ಆದರೆ ಸರ್ಕಾರದ ಅಧಿಕಾರದ ಬಗ್ಗೆ,  ಬಲದ ಬಗ್ಗೆ ಜಾಗರೂಕರಾಗಿರದಿದ್ದರೆ, ಪ್ರಜಾಪ್ರಭುತ್ವದ ಹೆಸರಿನಲ್ಲಿ ದಬ್ಬಾಳಿಕೆ ನಡೆಯುವ ಅಪಾಯವಿದೆ.

ಸರ್ಕಾರದ ಪರ ಇಲ್ಲ ಎಂಬ ಕಾರಣಕ್ಕೆ ನಮ್ಮ ಸಾಮಾನ್ಯ ಚಟುವಟಿಕೆಗಳಿಗೆ ದೇಶವಿರೋಧಿ ಪಟ್ಟ ಕಟ್ಟುವ, ದೌರ್ಜನ್ಯಕ್ಕೆ ಒಳಪಡಿಸುವ ಸಂಭವವಿದೆ. ಹಾಗಾಗಿ ಇಂತಹ ವಾದದ ಮುಗ್ಧತೆ ನಮ್ಮನ್ನು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT