ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡಸರೆಲ್ಲಾ ಹಂಗೇನಾ..?

ಹೆಣ್ಣೊಬ್ಬಳ ಒಡಲಾಳದ ದನಿ
Last Updated 25 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ನಾನು ಮದಿವಿ ಆಗೂದಿಲ್ಲ...’ ಹಣೀಗೆ ಗಂಟು ಹಾಕ್ಕೊಂಡು, ಗಲ್ಲಕ್ಕ ಬಂದು ಮುಟ್ತಿದ್ದ ಕೂದಲಾ, ಕಿವಿ ಹಿಂದ ಸರಿಸಿ ಹೇಳ್ತಿದ್ಲು ಆ ಹುಡುಗಿ.
ಅವರಮ್ಮಂದು ಅಕೀದು ಜುಗಲ್ಬಂದಿ ನಡದಿತ್ತು. ‘ಓದ್ತೀನಿ ಅಂದ್ಲು. ಸುಮ್ನಾದೆ. ಓದಿದ ಮ್ಯಾಲೆ ಕೆಲ್ಸಕ್ಕ ಸೇರ್ತೀನಿ ಅಂದ್ಲು. ಅದೂ ಆಯ್ತು. ಕೆಲಸಾ ಕಾಯಂ ಆಗಲಿ ಅಂದ್ಲು. ಅದೂ ಆಯ್ತು. ಇನ್ನೇನು ಎರಡು ವರ್ಷ ಕಳದ್ರ ಮೂವತ್ತು ತುಂಬ್ತಾವ. ಈಗರೆ ಮದಿವಿ ಆಗಬಾರದ? ಇನ್ನಾ ಎಷ್ಟು ದಿನಾ ಕಾಯೂನು ಇಕೀ ಮದೀವಿಗೆ?’

‘ಯಾಕ ಕಾಯ್ತೀರಿ? ಕಾಯಬ್ಯಾಡ್ರಿ. ನಾ ಆಗೂದಿಲ್ಲಂದ್ರ ಆಗೂದಿಲ್ಲ. ಯಾರದೋ ಮನೀಗೆ ಹೋಗಿ, ಮಕ್ಕಳನ್ನ ಹುಟ್ಟಸೂದು ಅಷ್ಟೇ ನನ್ನ ಕೆಲಸನ? ನನ್‌ ಕಡೆಂದ ಅದಾಗೂದಿಲ್ಲ.’
‘ಬರೇ ಮಕ್ಕಳನ್ನ ಹೆರಾಕ ಮದಿವಿ ಅಲ್ಲ ಅಂತ ಹೆಂಗ ಹೇಳೂದು ಇಕೀಗೆ?’
‘ಸೂಟಿ ತೊಗೊಳ್ಳೂದೆ ತಪ್ಪಾಗೇದ... ಸುಮ್ನ ಆಫೀಸಿನಾಗ ಅರಾಮ ಇರಬೌದು ನೋಡು... ಪಾರ್ಲರ್‌ಗೆ ಹೋಗಿ ಬರ್ತೀನಿ. ನನ್ನ ಮದಿವಿ ಸುದ್ದಿ ಚಿಂತೀ ಮಾಡೂದೇನೂ ಬ್ಯಾಡ. ಸುಮ್ನ ಸೊರಗತಿ. ನಾ ಆಗೂದಿಲ್ಲ. ಬಿಟ್ಟು ಬಿಡು’ ಅಂತ ಹೇಳ್ದಕ್ಕಿನ ತನ್ನ ಕೂದಲಿಗೊಂದು ಬನಾನಾ ಕ್ಲಿಪ್‌ ಸಿಗಸಿ, ತನ್ನ ಕಾರು ತೊಗೊಂಡು ಹೊಂಟೇ ಬಿಟ್ಲು.

ನಾನು, ಅವರಮ್ಮ ಇಬ್ರೂ ಮಿಕಿಮಿಕಿ ಮುಖಾ ನೋಡ್ಕೊಂತ ಕುಂತ್ವಿ. ಏನು ಮಾತಾಡಬೇಕು ಇಬ್ಬರಿಗೂ ಹೊಳೀಲಿಲ್ಲ. ಆ ಮಾಮಿ ನಮಗ ಆಡಿಸಿ ಬೆಳೆಸಿದೋರು. ಅವರ ಮಕ್ಳಿಗೆ ನಾವು ಆಡಿಸಿ ಬೆಳೆಸಿದೋರು. ನನ್ನ ಮಕ್ಳಿಗೆ ನಾನು ಊಟಾ ಮಾಡಿಸಿರೂದಕ್ಕಿಂತ ಹೆಚ್ಗಿ ಈ ಮಕ್ಕಳಿಗೆ ಊಟಾ ಮಾಡಿಸೇನಿ. ಆ ಸಲಗಿ, ಪ್ರೀತಿ ಎರಡೂ ಆ ಹುಡುಗೀಗೆ ಇತ್ತು. ವಾತಾವರಣ ತಿಳಿ ಮಾಡಾಕ, ‘ಹೋಗ್ಲಿ ಬಿಡು ಮಾಮಿ, ನಾವೂ ಎಲ್ಲಾರೂ ಮದಿವಿ ಅಂದ್ರ ಹಿಂಗ ವಲ್ಯ ಅಂತಿದ್ವಿ. ಆಮೇಲೆ ಆಗ್ಲಿಲ್ಲೇನು. ಆಗ್ತಾಳ ಬಿಡು’ ಅಂದಾಗ, ನಕ್ಕೊಂತ ಸುಮ್ನಾಗಿದ್ರು ಮಾಮಿ.

‘ನೀನೇ ಅಕೀಗೆ ಕೇಳು, ಯಾರನ್ನರೆ ನೋಡ್ಯಾಳನ? ನಮಗೇನು ಅಂಥಾ ಮಡಿ ಹುಡಿ ಇಲ್ಲ. ಈಗಿನ ಕಾಲ್ದಾಗ ಹುಡುಗ್ಯಾರು, ಹುಡುಗೂರಿಗೆ, ಹುಡುಗೂರು, ಹುಡುಗ್ಯಾರಿಗೆ ಮದಿವಿ ಆದ್ರ ಸಾಕಾಗೇದ. ಅದಕ್ಕಿಂತ ಹೆಚ್ಗಿ ಏನು ಬ್ಯಾಡಾಗೇದ. ಅಷ್ಟರೆ ಮಾಡ್ತಾಳಿಲ್ಲ ಕೇಳು...’ ಅಂದು ಸುಮ್ನಾದ್ರು. ಹೆತ್ತೊಡಲಿನ ಉರಿ ಅದು. ತನ್ನ ಮಗಳು ಸಹಜ, ಅಸಹಜ ಅನ್ನೂ ಬಗ್ಗೆ ವಿಚಾರ ಮಾಡಾಕೂ ಅಂಜ್ತಿದ್ರು ಅವರು. ಮಧ್ಯಾಹ್ನದ ನಿದ್ದಿ ಮಾಡಾಕ ಮಾಮಿ ಒಳಗೆದ್ದು ಹೋದಾಗ, ಮಾವಿನ ಗಿಡದ ಕೆಳಗ ನಾವಿಬ್ರೇ ಕುಂತಿದ್ವಿ. ನನ್ನ ತೋಳ್ನಾಗ ನನ್ನ ಮಗಳು, ಅವಾಗವಾಗ ಛಂದನ ನಗಿ ಛಲ್ಕೊಂತ ಆಡ್ತಿದ್ಲು. ಜಗತ್ತಿನ ಪ್ರೀತಿ ಎಲ್ಲಾ ನನ್ನ ಕಣ್ಣಾಗ ಮನೀ ಮಾಡ್ದಂಗ ಅಕಿನ್ನ ನೋಡ್ತಿದ್ದೆ. ನಮ್ಮ ಗುಬ್ಬಿ ಕೇಳ್ತು... ‘ನಿಂಗೇನು ಅನ್ನಸ್ಲಿಲ್ಲ... ಅವಾಗ?’ ‘ಯವಾಗ’ ಅಂದೆ, ಪಾಪೂ ಹುಟ್ಟು ಮುಂದ... ಅಂದ್ಲು. ‘ಇಲ್ಲಾ! ನಂಗ ನನ್ನೊಳಗ ಜೀವ ಬೆಳಿಯೂದೆ ವಿಸ್ಮಯ ಅನಿಸಿತ್ತು’

‘ಅವರಪ್ಪ ಪ್ರೀತಿ ಮಾಡ್ತಾನ?’ ಅಂದ್ಲು. ‘ನನಗಿಂತ ಹೆಚ್ಗಿ ಮಾಡ್ತಾನ’ ಅಂದೆ. ‘ಛೊಲೊ ಆತು ಬಿಡು. ನಮ್ಮಪ್ಪನ ಹಂಗ ಓಡಿಹೋಗದಿದ್ರ ಸಾಕು’ ಅಂತ್ಹೇಳಿ ಎದ್ದು ಹೋದ್ಲು. ಮಾತಾಡಾಕ ಅವಕಾಶನೇ ಕೊಡದೇ. ಆದ್ರ ಮದಿವಿಯಿಂದ ಯಾಕ ಹಿಂದ ಸರೀತಾಳ ಅನ್ನೂದಕ್ಕ ಒಂದೆಳಿ ಉತ್ತರಾ ಅಂತೂ ಸಿಕ್ಕಿತ್ತು.
ಅಕಿನ್‌ ಮನಸಿನಾಗ ಅದೊಂದು ನಮೂನಿ ಸಂಘರ್ಷ. ತಾನು ಹೆರುವ ಯಂತ್ರ ಅಲ್ಲ ಅನ್ನೂದು ಒಂದು ಕಡೆ ಕಲ್ಲಿನಿಂದ ಕಟದಿಟ್ಕೊಂಡಿದ್ಲು. ಇನ್ನೊಂದು ಕಡೆ, ತನಗ್ಯಾವ ಭಾವನೆಗಳೂ ಇಲ್ಲ ಅನ್ನೂದನ್ನ ಬಲವಾಗಿ ನಂಬಿದ್ಲು. ಹುಡುಗರ ಕಡೆ ಸೆಳೆತ ಇಲ್ಲ. ‘ಗಂಡಸರು ಬದುಕಿಗೆ ಅನಿವಾರ್ಯ ಅಲ್ಲ’ ಅನ್ನೂದೊಂದೇ ಅಕಿನ್ನ ವಾದ ಆಗಿತ್ತು.

‘ದುಡೀತೀನಿ. ಖರ್ಚು ಮಾಡ್ತೀನಿ.   ಅಮ್ಮಾ ಒಬ್ಬಕೀನೆ ಅದಾಳ, ಅಕಿಗೆ ನೋಡ್ಕೊಂಡು ಅರಾಮ ಇರ್ತೀನಿ’ ಅನ್ನೂದೊಂದೆ ಅಕೀ ವಾದ ಆಗಿತ್ತು. ಅಮ್ಮನ ನಂತರ ಅನ್ನೂ ಮಾತಿಗೆ ‘ಆ ಟೈಮಿಗೆ ನೋಡಿದ್ರಾತು’ ಅನ್ನೂದೊಂದು ಸಿದ್ಧ ಉತ್ತರ ಇತ್ತು. ಗಂಡಸರು ಬದುಕಿಗೆ ಅನಿವಾರ್ಯ ಅಲ್ಲ ಅನ್ನೂದು ಭಾಳ ಮಂದಿ ಹೆಣ್ಮಕ್ಕಳ ಜೀವನಕ್ಕ ಅನ್ವಯಿಸಿ ಹೇಳಬಹುದು. ಕೆಲವು ಕಡೆ ಅಂತೂ ಅವರು ಇರೂದೆ ನಾಮ್‌ಕಾ ವಾಸ್ತೆ ಅನ್ನೂ ಹಂಗೂ ಆಗಿರ್ತದ. ಇನ್ನೂ ಕೆಲವು ಕಡೆ ಬಿಟ್ಟು ಹೋಗಾಕ ಏನೇ ಕಾರಣಗಳಿರಲಿ,  ಒಂಟಿ ಜೀವನ ಅಷ್ಟು ಸುಲಭ ಅಲ್ಲ. ಆದ್ರ ಯಾರೋ ಮಾಡಿದ ತಪ್ಪಿಗೆ, ಅವರ ಮಕ್ಕಳು ಇಂಥಾ ನಿರ್ಧಾರಕ್ಕ ಬಂದಿರ್ತಾರ. ಆದ್ರ ಎಲ್ಲಾರೂ ಹಂಗಲ್ಲ. ಎಲ್ಲರೂ ಹಂಗೇ ಇರಬೇಕು ಅಂತನೂ ಇಲ್ಲ.

ತಾಯ್ತನಕ್ಕೂ ಹೆರುವ ಯಂತ್ರ ಅನಿಸಿಕೊಳ್ಳೂದಕ್ಕೂ ಇರುವ ತರತಮದತ್ತ ಮನಸು ಸಂಕಟ ಪಡ್ತಿತ್ತು. ನಮಗಿಷ್ಟ ಇಲ್ಲದಾಗ ಹೆರುವ ಯಂತ್ರ ಅನ್ನಬಹುದೇನೋ? ಅಥವಾ ನಮ್ಮಿಷ್ಟ ಅನಿಷ್ಟವನ್ನು ಎಣಿಸದೇ ವರ್ಷಕ್ಕೊಂದು, ಹೆಗಲಿಗೊಂದು, ಬಗಲಿಗೊಂದು, ಕೈಗೊಂದು, ಹೊಟ್ಯಾಗೊಂದು ಮಕ್ಕಳಿದ್ರ ಹಂಗ ಅನ್ನಬಹುದೇನೋ. ಆದ್ರ ನಮ್ಮ ಪ್ರೀತಿ ನಮ್ಮ ಒಡಲೊಳಗ ಅರಳಲಿ. ನಾವು ಅಪ್ಪ ಅಮ್ಮ ಆಗಲಿ ಅನ್ನುವ ಮನಸು ಬರೂದು ಹೆಂಗ? ಅದು ಸಂಸ್ಕಾರ. ಅದು ಸಂಗಾತಿಯ ಪ್ರೀತಿಯ ತೀವ್ರತೆಯನ್ನು ಅವಲಂಬಿಸಿದ ಸಂಗತಿ. 

ಆದ್ರ ಹುಟ್ಟಿಸಿದ ಮಕ್ಕಳ ಜವಾಬ್ದಾರಿ ಹಂಚಕೊಳ್ಳದಿದ್ರ ಮಾತ್ರ ಅವರಿಗೆ ಅಪ್ಪ ಅನ್ನಲಾಗದು. ಅವರು ಕೊನೀತನಾನೂ ಗಂಡ ಮಾತ್ರ ಆಗಿರಾಕ ಸಾಧ್ಯ.
ಹಿಂಗೇ ಇನ್ನೊಂದು ಹುಡುಗಿ ಅಗ್ದಿ ಆರ್ದ್ರ ಆಗಿ ನಮ್ಮವ್ವಗ ಕೇಳಿದ್ಲು. ‘ನನಗೇ ದುಡದು ಹಾಕೂದಿಲ್ಲ ನನ್ನ ಗಂಡ. ಇನ್ನ ಮಕ್ಕಳು ಹುಟ್ಟಿದ್ರ ಅವರ ಜವಾಬ್ದಾರಿ ಯಾರು ಹೊರೋರು? ನನ್ನ ಹಸಿವು ತಡಕೋಬಹುದು. ಮಕ್ಕಳು ಹಸಿವಿನಿಂದ ಇದ್ರ ತಡಕೋಳಾಕ ಆಗುದಿಲ್ರಿ...’ ಅಂತ ಕಣ್ಣೀರು ಹಾಕಿದ್ರು. ಅಕೀಗೆ ‘ಮಕ್ಕಳ ಆದ್ರ ಎಲ್ಲಾ ಛೊಲೊ ಆಗ್ತದ’ ಅಂತ ಒಂದು ಸಾಲಿನ ಸಮಾಧಾನ ಹೇಳುವ ಧೈರ್ಯನೂ ನನ್ನಮ್ಮಗ ಇರಲಿಲ್ಲ. ಒಂದು ವೇಳೆ ಹುಡುಗ ಬದಲಾಗದೇ ಇದ್ರ, ‘ಕೂಸಿನ್ನ ಉಪವಾಸ ಕೆಡವಿದ ಕರ್ಮ ನಮಗೇ ಸುತ್ಕೋತದ’ ಅಂದಿದ್ಲು ಅಮ್ಮ.

ಈ ಕರ್ಮದ ವಾದ ಐತೆಲ್ಲ ಅದು ಎಲ್ಲಾದಕ್ಕೂ ಒಂದೇ ಶಬ್ದದಾಗ ಸಮರ್ಥನೆ ಕೊಡ್ತದ. ಆದ್ರ ಆ ಹುಡುಗೀಗೆ ತಾಯ್ತನ ಬ್ಯಾಡಾಗಿರಲಿಲ್ಲ. ಗಂಡನ ಬೇಜವಾಬ್ದಾರಿತನ ಬ್ಯಾಡಾಗಿತ್ತು. ಅದನ್ನ ಯಾರೂ ಕೊನೀತನಾ ಮಾತಾಡಲಿಲ್ಲ. ಎಲ್ಲಾರೂ ಆ ಹುಡಗೀನ್ನ ಹೀಗಳೆಯೋರೆ. ಮಕ್ಕಳು ಬ್ಯಾಡಂತಾಳ ಅಂತ. ಮಾಮಿ ಮಗಳಿಗೆ ಗಂಡಸರಂದ್ರ ಬಿಟ್ಟು ಹೋಗೋರಷ್ಟೇ ಅಲ್ಲ ಅನ್ನೂದು ತಿಳಿ ಹೇಳೂದು ಹೆಂಗ? ಗಂಡಸರ ಬಗೆಗಿನ ಇಂಥಾ ಆತಂಕಗಳು ಬಗಿಹರಿಯೂದು ಯವಾಗ?ಬಗೀಹರಸೂದು ಯಾರು? ಗಂಡಸರ ಅಗತ್ಯವೂ ಇಲ್ಲ. ಅನಿವಾರ್ಯವೂ ಅಲ್ಲ ಅನ್ನೂ ಪರಿಸ್ಥಿತಿ ಸೃಷ್ಟಿಯಾಗಿದ್ದು ಹೆಂಗ? ಉತ್ತರ ಕೊಡೋರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT