ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಟ್ಟಿಮುಟ್ಟಾದ ಮೂಳೆಗಾಗಿ..

Last Updated 29 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಮೂಳೆಗಳು, ನಮ್ಮ ದೇಹದ ಜೀವಂತ ಮತ್ತು ಬೆಳವಣಿಗೆ ಹೊಂದುವ ಅಂಗಗಳು. ದೇಹಕ್ಕೆ ಅಗತ್ಯವಿರುವ ಸಂದರ್ಭಗಳಲ್ಲಿ ಕ್ಯಾಲ್ಸಿಯಂ ಸೇರಿದಂತೆ ಇತರ ಮಿನರಲ್‌ಗಳನ್ನು ಒದಗಿಸುವ ಕೆಲಸವನ್ನು ಮೂಳೆಗಳು ಮಾಡುತ್ತವೆ.

ನಿಮಗೆ ವಯಸ್ಸಾದಂತೆ ಮೂಳೆಗಳ ಸವೆತ ಹೆಚ್ಚುತ್ತಲೇ ಹೋಗುತ್ತದೆ. ಒಂದುವೇಳೆ ನೀವು ನಿಮ್ಮ ಮೂಳೆಗಳ ಆರೋಗ್ಯವನ್ನು ನಿರ್ಲಕ್ಷಿಸಿದ್ದೇ ಆದರೆ, ನೀವು ಅಂಗಾಗ ಕಳೆದುಕೊಳ್ಳುವಿಕೆಯಂಥ ದೀರ್ಘಕಾಲದ ಸಮಸ್ಯೆಗಳಿಗೆ ತುತ್ತಾಗುವುದು ಮತ್ತು ಜೀವನದಲ್ಲಿ ಸ್ವಾತಂತ್ರ್ಯ ಕಳೆದುಕೊಳ್ಳುವುದು ಖಚಿತ.

ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಜೀವನದುದ್ದಕ್ಕೂ ಅತ್ಯಗತ್ಯ. ಹಾಗೇ ನಿಮಗೆ ವಯಸ್ಸಾದಂತೆ ಮೂಳೆಗಳ ರಕ್ಷಣೆಗೆ ಅತಿ ಹೆಚ್ಚು ಮಹತ್ವ ನೀಡಲೇಬೇಕು.

ಸಂಧಿವಾತ, ಆಸ್ಟಿಯೋಪೊರೆಸಿಸ್, ಮೂಳೆ ಮುರಿತ, ಪೆಜೆಟ್ಸ್ ಕಾಯಿಲೆಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಸದೃಢವಾದ, ಗಟ್ಟಿಮುಟ್ಟಾಗಿರುವ ಮೂಳೆಗಳನ್ನು ಹೊಂದಬೇಕು ಎಂಬುದನ್ನು ನಮ್ಮಲ್ಲಿ ಬಹುತೇಕರು ಹೇಳುವುದುಂಟು..

ಮೂಳೆಗಳ ಆರೋಗ್ಯವು ನಮ್ಮ ದೀರ್ಘಾಯುಷ್ಯವನ್ನು ನಿರ್ಧರಿಸುವ ಅಂಶವಾಗಿದೆ. ನಮ್ಮ ಪರಿಸರದಲ್ಲಿ ಮಾಲಿನ್ಯಕಾರಕ ಅಂಶಗಳು ಮತ್ತು ಟಾಕ್ಸಿನ್‌ಗಳು ಹೆಚ್ಚಾಗಿರುವುದರಿಂದ ಈ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ. ಅಲ್ಲದೆ ಮುಖ್ಯವಾಗಿ ನಮ್ಮ ಆಹಾರ ಸರಪಳಿ ಅಥವಾ ಆಹಾರ ಪದ್ಧತಿಯು ನಮ್ಮ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ.

ನ್ಯಾಷನಲ್ ಆಸ್ಟಿಯೋಪೊರೆಸಿಸ್ ಫೌಂಡೇಷನ್‌ನ ಪ್ರಕಾರ, 50 ವರ್ಷ ಹಾಗೂ ಅದಕ್ಕಿಂತ ಚಿಕ್ಕ ವಯೋಮಾನದವರು ದಿನಕ್ಕೆ ಕನಿಷ್ಠ 100 ಎಂಜಿ ಕ್ಯಾಲ್ಸಿಯಂ ಪಡೆಯುವ ಗುರಿ ಹೊಂದಿರಬೇಕು. ಹಾಗೇ ಹಿರಿಯ ನಾಗರಿಕರು ನಿತ್ಯ 200 ಎಂಜಿಯಷ್ಟು ಹೆಚ್ಚುವರಿ ಕ್ಯಾಲ್ಸಿಯಂ ಅಂಶವನ್ನು ಸೇವಿಸಬೇಕು.

ಮೂಳೆಗಳ ಆರೋಗ್ಯಕ್ಕಾಗಿ ಸರಿಯಾದ ಪೋಷಕಾಂಶಗಳ ಸೇವನೆಯು ಮುಖ್ಯವಾಗಿ ಎರಡು ಅಂಶಗಳನ್ನು ಅವಲಂಬಿಸಿದೆ; ಕ್ಯಾಲ್ಸಿಯಂ ಮತ್ತು ವಿಟಮಿನ್ ‘ಡಿ’. ನಿಮ್ಮ ವಯಸ್ಸು 20 ವರ್ಷ ತಲುಪಿದ ಸಂದರ್ಭದಲ್ಲಿ ನಿಮ್ಮ ಮೂಳೆಗಳು ಗರಿಷ್ಟ ಸಾಂದ್ರತೆಯನ್ನು ತಲುಪುತ್ತವೆ.

ಈ ಸಾಂದ್ರತೆ ಮಟ್ಟವನ್ನು ಹೀಗೇ ಉತ್ತಮ ಹಂತದಲ್ಲಿ ಕಾಪಾಡಿಕೊಂಡು ಹೋಗುವ ಕೆಲಸ ಅಲ್ಲಿಂದಲೇ ಆರಂಭವಾಗಬೇಕು. ಈ ನಿಟ್ಟಿನಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದ ಕಲ್ಸಿಯಂ ಹಾಗೂ ವಿಟಮಿನ್‌ ಒದಗಿಸುವುದೂ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ.

ಮೂಳೆಗಳ ಆರೋಗ್ಯವನ್ನು ಉತ್ತಮವಾಗಿರಿಸುವಲ್ಲಿ ನೆರವಾಗುವ ಆಹಾರಗಳು
*ಹೈನು ಉತ್ಪನ್ನಗಳು. ಮುಖ್ಯವಾಗಿ ಹಾಲು, ಕ್ಯಾಲ್ಸಿಯಂ ಮತ್ತು ವಿಟಮಿನ್ ‘ಡಿ’-ಭರಿತವಾಗಿರುವ ಕಿತ್ತಳೆ ಜ್ಯೂಸ್ ಅಥವಾ ಹಸುವಿನ ಹಾಲನ್ನು ಹೊರತುಪಡಿಸಿ ಸೋಯಾ, ಬಾದಾಮಿ ಅಥವಾ ತೆಂಗಿನ ಕೊಬ್ಬರಿ ಹಾಲನ್ನು ಕೂಡ ಸೇವಿಸಬಹುದು..

*ಹಸಿರು ಎಲೆ ತರಕಾರಿಗಳು

*ಬೆಳಗಿನ ಉಪಾಹಾರದ ಸಂದರ್ಭದಲ್ಲಿ ದ್ರಾಕ್ಷಿ ರಸ- ಸಿಟ್ರಿಕ್ ಅಂಶ ಒಳಗೊಂಡಿರುವ ಹಣ್ಣುಗಳು ಹೆಚ್ಚಿನ ಪ್ರಮಾಣದ ವಿಟಮಿನ್ ‘ಸಿ’ ಅಂಶವನ್ನು ಒಳಗೊಂಡಿದ್ದು, ಇದು ಮೂಳೆಗಳಿಗೆ ಆಗುವ ಹಾನಿಯನ್ನು ತಡೆಯುತ್ತದೆ

*ಸಸ್ಯಜನ್ಯ ಅಥವಾ ಸಸ್ಯಾಹಾರಿ ಪ್ರೋಟೀನ್‌ಗಳು

*ಕಡಿಮೆ ಸೋಡಿಯಂ ಆಹಾರ

*ಅಮಲು ಬರಿಸುವ ವಸ್ತುಗಳ ಕಡಿಮೆ ಸೇವನೆ ಅಥವಾ ಸೇವಿಸದೇ ಇರುವಿಕೆ

*ಸಾಲ್ಮನ್, ಕ್ಯಾಟ್‌ಫಿಷ್, ಟೂನಾ ಮತ್ತು ಮೊಟ್ಟೆಗಳು ಆಹಾರ ಸೇವನೆಯಲ್ಲಿ ಕಾಳಜಿ ವಹಿಸುವುದು ಮಾತ್ರವಲ್ಲ, ಸದಾ ಚಟುವಟಿಕೆಯಿಂದ ಇರುವುದು ಕೂಡ ನಿಮ್ಮ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬಲ್ಲದು ಮತ್ತು ಮೂಳೆಗಳ ಉತ್ತಮ ಆರೋಗ್ಯ ಪಾಲನೆಗೆ ನೆರವಾಗಬಲ್ಲದು.
ಗಟ್ಟಿಮುಟ್ಟಾದ ಮೂಳೆಗಳನ್ನು ಹೊಂದಲು ಈ ಕೆಳಗಿನ ವ್ಯಾಯಾಮಗಳು ಉಪಯುಕ್ತ.

*ಹೆಚ್ಚು ಪರಿಣಾಮಕಾರಿ ವೇಯ್ಟ್-ಬೇರಿಂಗ್ (ಭಾರ ಹೊರುವ) ವ್ಯಾಯಾಮಗಳು ಮೂಳೆಗಳನ್ನು ಗಟ್ಟಿಮುಟ್ಟಾಗಿಸುತ್ತವೆ. ವೇಯ್ಟ್ ಟ್ರೇನಿಂಗ್, ಹೈಕಿಂಗ್, ಜಾಗಿಂಗ್, ಮೆಟ್ಟಿಲುಗಳನ್ನು ಹತ್ತುವುದು, ಟೆನ್ನಿಸ್ ಆಟವಾಡುವುದು ಮತ್ತು ನೃತ್ಯ ಅಥವಾ ಡ್ಯಾನ್ಸಿಂಗ್ ರೀತಿಯ ವ್ಯಾಯಾಮಗಳನ್ನು ಮಾಡುವುದು ಹೆಚ್ಚು ಉಪಯುಕ್ತ.

ನೀವು ಆಸ್ಟಿಯೋಪೊರೆಸಿಸ್ ಕಾರಣದಿಂದಾಗಿ ಮೂಳೆ ಮುರಿತಕ್ಕೆ ಒಳಗಾಗಿದ್ದರೆ ಅಥವಾ ಮೂಳೆ ಮುರಿತವಾಗುವ ಅಪಾಯದಲ್ಲಿದ್ದರೆ ಹೆಚ್ಚು ಭಾರ ಎತ್ತುವ ಅಥವಾ ಭಾರ ಹೊರುವ ವ್ಯಾಯಾಮ ಮಾಡುವುದು ಬೇಡ. ಇಂಥ ಸಂದರ್ಭಗಳಲ್ಲಿ ನಿಮ್ಮ ವೈದ್ಯರೊಂದಿಗೆ ಸದಾ ಸಂಪರ್ಕದಲ್ಲಿರಿ.

*ಕಡಿಮೆ ಪರಿಣಾಮಕಾರಿ ವೇಯ್ಟ್-ಬೇರಿಂಗ್ (ಭಾರ ಹೊರುವ) ವ್ಯಾಯಾಮಗಳು ಕೂಡ ನಿಮ್ಮ ಮೂಳೆಗಳನ್ನು ಸದೃಢವಾಗಿಸಬಲ್ಲವು ಮತ್ತು ಇವು ಅತ್ಯಂತ ಸುರಕ್ಷಿತ ಹಾಗೂ ಹೆಚ್ಚು ಪರಿಣಾಮ ಉಂಟುಮಾಡಬಲ್ಲ ವ್ಯಾಯಾಮಗಳಾಗಿವೆ.

ಎಲ್ಲಿಪ್ಟಿಕಲ್ ಟ್ರೇನಿಂಗ್ ಮಷೀನ್‌ಗಳ ಬಳಕೆ, ಲೋ-ಇಂಪ್ಯಾಕ್ಟ್ ಏರೊಬಿಕ್ಸ್, ಸ್ಟೇರ್-ಸ್ಟೆಪ್ ಮಷೀನ್‌ಗಳ ಬಳಕೆ, ಟ್ರೆಡ್‌ಮಿಲ್ ಬಳಸಿ ಅಥವಾ ಬ್ರಿಸ್ಕ್ ವಾಕಿಂಗ್ ಮೂಲಕ ಮಾಡುವ ವ್ಯಾಯಾಮಗಳು ಕಡಿಮೆ ಪರಿಣಾಮಕಾರಿ ವೇಯ್ಟ್-ಬೇರಿಂಗ್ ವ್ಯಾಯಾಮಗಳಿಗೆ ಉದಾಹರಣೆಗಳಾಗಿವೆ.

*ಸ್ನಾಯುಗಳನ್ನು ಬಲಗೊಳಿಸುವ ವ್ಯಾಯಾಮಗಳು; ಗುರುತ್ವಾಕರ್ಷಣೆಗೆ ವಿರುದ್ಧವಾಗಿ ನಿಮ್ಮ ದೇಹವನ್ನು ಚಲಿಸುವಂತೆ ಮಾಡುವುದು ಅಥವಾ ವೇಯ್ಟ್ ಬೇರಿಂಗ್ ವ್ಯಾಯಾಮಗಳನ್ನು ಮಾಡುವುದಾಗಿದೆ. ಇವುಗಳನ್ನು ರೆಸಿಸ್ಟೆನ್ಸ್ ಎಕ್ಸರ್‌ಸೈಸಸ್ ಎಂದು ಕೂಡ ಕರೆಯುತ್ತಾರೆ.

ಭಾರ ಎತ್ತುವುದು, ಎಲಾಸ್ಟಿಕ್ ಎಕ್ಸರ್‌ಸೈಸ್ ಬ್ಯಾಂಡ್‌ಗಳನ್ನು ಬಳಸುವುದು ಅಥವಾ ನಿಮ್ಮ ಕಾಲ್ಬೆರಳುಗಳ ಮೇಲೆ ಭಾರ ಹಾಕಿ ನಿಲ್ಲುವಂತಹ ಮೂಲ ಫಂಕ್ಷನಲ್ ಮೂವ್‌ಮೆಂಟ್‌ಗಳನ್ನು ಒಳಗೊಂಡಿರುತ್ತವೆ.

*ಯೋಗ ಮತ್ತು ಪಿಲಾಟೆಸ್ ರೀತಿಯ ವ್ಯಾಯಾಮಗಳು ದೈಹಿಕ ಸಾಮರ್ಥ್ಯ, ಸಮತೋಲನ ಮತ್ತು ಫ್ಲೆಕ್ಸಿಬಲಿಟಿಯನ್ನು ವೃದ್ಧಿಸುತ್ತವೆ. ಆದರೆ ಆಸ್ಟಿಯೋಪೊರೆಸಿಸ್ ಹೊಂದಿರುವ ಮತ್ತು ಮೂಳೆ ಮುರಿತದ ಅಪಾಯವಿರುವ ವ್ಯಕ್ತಿಗಳು ಯೋಗದಲ್ಲಿನ ಕೆಲವು ಆಸನ ಅಥವಾ ವ್ಯಾಯಾಮಗಳನ್ನು ಮಾಡುವುದು ಸೂಕ್ತವಲ್ಲ.

ನಿಮಗೆ ಯಾವ ವ್ಯಾಯಾಮ ಹೆಚ್ಚು ಸೂಕ್ತ ಎಂದು ತಿಳಿಸಿಕೊಡಲು ಒಬ್ಬ ನುರಿತ ದೈಹಿಕ ಚಿಕಿತ್ಸಕ ಅಥವಾ ಫಿಸಿಕಲ್ ಥೆರಪಿಸ್ಟ್ ನೆರವು ಅಗತ್ಯ. ಹಿರಿಯರು ಹೇಳುವಂತೆ, ಉತ್ತಮ ಆರೋಗ್ಯ ನಿಮ್ಮ ಜೀವನಕ್ಕೆ ಮತ್ತಷ್ಟು ವರ್ಷಗಳನ್ನು ಸೇರಿಸುತ್ತದೆ. ಆದರೆ ಸತ್ಯ ಏನೆಂದರೆ ಉತ್ತಮ ಆರೋಗ್ಯವು ಆ ವರ್ಷಗಳಿಗೆ ಜೀವ ತುಂಬುತ್ತದೆ.
ಡಾ. ಜೆ.ವಿ. ಶ್ರೀನಿವಾಸ್
( ಲೇಖಕರು ಆರ್ಥೋಪೆಡಿಕ್ಸ್ ವಿಭಾಗದ ನಿರ್ದೇಶಕರು,
ಫೋರ್ಟೀಸ್ ಆಸ್ಪತ್ರೆ, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT