ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಗ್ರಾಮಗಳಲ್ಲಿ ನೀರೇ ರಾಜಕೀಯ

Last Updated 26 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ:  ಜಿಲ್ಲಾ ಕೇಂದ್ರದಿಂದ 185 ಕಿ.ಮೀ. ದೂರದ ಅಥಣಿ ತಾಲ್ಲೂಕಿನ ತುದಿಯ ಹಳ್ಳಿ ತೆಲಸಂಗ ತಲುಪಿದಾಗ ಸೂರ್ಯ ಪಡುವಣದತ್ತ ಮುಖ ಮಾಡಿದ್ದ.

ಅಥಣಿ-ವಿಜಾಪುರ ನಡುವಿನ ರಾಜ್ಯ ಹೆದ್ದಾರಿಯಿಂದ ಮೂರು ಕಿ.ಮೀ. ಒಳಗೆ ಇರುವ ತೆಲಸಂಗ 18,000 ಜನಸಂಖ್ಯೆ ಹೊಂದಿರುವ ಹೋಬಳಿ ಕೇಂದ್ರ. ಇಲ್ಲಿಂದ ವಾಯವ್ಯಕ್ಕೆ 8 ಕಿ.ಮೀ. ದೂರದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಗಡಿ ಆರಂಭ. ಅಥಣಿಯಿಂದ ತೆಲಸಂಗಕ್ಕೆ ಹೋಗುವಾಗ ಕಣ್ಣು ಹಾಯಿಸಿದಷ್ಟು ದೂರಕ್ಕೆ ಕಾಣುವುದು ಹಸಿರಿನ ಕುರುಹೂ ಇಲ್ಲದ ಬೋಳು ಹೊಲಗಳು, ಕಪ್ಪು ಗುಡ್ಡಗಳು. 6-7 ವರ್ಷಗಳಿಂದ ಇಲ್ಲಿ ಮಳೆ ಮರೀಚಿಕೆಯಾಗಿದೆ.

ತೆಲಸಂಗದಲ್ಲಿ ಪದವಿ ಕಾಲೇಜು,  ಪಾಲಿಟೆಕ್ನಿಕ್, ಆಸ್ಪತ್ರೆ  ಇತ್ಯಾದಿ ಭೌತಿಕ ಸೌಕರ್ಯಗಳೆಲ್ಲ ಇವೆ. ಆದರೆ, ಈ ಜನರಿಗೆ ಶಾಪವಾಗಿರುವುದು ಪ್ರಕೃತಿಯ ಮುನಿಸು. `ಇಲ್ಲೊಂದು ಊರಿದೆ, ಜನರೂ ಇದ್ದಾರೆ' ಎಂಬುದನ್ನು ಮರೆತಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ವೃತ್ತಿಯಿಂದ ಸಿವಿಲ್ ಎಂಜಿನಿಯರ್ ಆಗಿರುವ ಮಹೇಶ್ ಕುಮಟಳ್ಳಿ ಇದೇ ಊರಿನವರು.

ತೆಲಸಂಗದಲ್ಲಿ ಸೈಕಲ್, ಬೈಕ್‌ಗೆ ಹತ್ತಾರು ಕೊಡಗಳನ್ನು ಸಿಕ್ಕಿಸಿಕೊಂಡು ಓಡಾಡುವ ಜನ ಕಾಣುತ್ತಾರೆ.  `ಎಲ್ಲಿಗೆ ಹೊರಟಿರಿ' ಎಂದು ತಡೆದು ಪ್ರಶ್ನಿಸಿದರೆ, `ಕರೆಂಟ್ ಬಂದೈತ್ರಿ, ತ್ವಾಟಕ್ಕ್ ಹೋಗಿ ನೀರ್ ತರ್‌ಬೇಕ್ರಿ' ಎನ್ನುತ್ತ ಮಾತಿಗೆ ನಿಲ್ಲದೇ ಓಡುತ್ತಾರೆ.

ಇದು ತೆಲಸಂಗ ಒಂದರ ಕಥೆಯಲ್ಲ. ಅಥಣಿ ಮತ್ತು ಕಾಗವಾಡ ಮತಕ್ಷೇತ್ರಗಳ ವ್ಯಾಪ್ತಿಗೆ ಬರುವ ಅಥಣಿ ತಾಲ್ಲೂಕಿನ ಉತ್ತರ ಭಾಗದ ಹತ್ತಾರು ಗಡಿ ಗ್ರಾಮಗಳಲ್ಲಿ ನೀರು ತರುವ ಕೆಲಸಕ್ಕೆಂದೆ ಮನೆಯಲ್ಲಿ ಒಬ್ಬರು ನಿಗದಿಯಾಗಿ ಬಿಟ್ಟಿರುತ್ತಾರೆ.

ವರ್ಷಗಳಿಂದ ಮಳೆ ಸರಿಯಾಗಿ ಆಗದ ಕಾರಣ ಸಾಧ್ಯವಿದ್ದ ಕಡೆಗಳಲ್ಲೆಲ್ಲ ಬೋರ್‌ವೆಲ್ ತೆರೆದಿದ್ದಾರೆ. ಮೊದಲೆಲ್ಲ 250- 300 ಅಡಿಗೆ ಸಿಗುತ್ತಿದ್ದ ಅಂತರ್ಜಲ ಈಗ 700-1000 ಅಡಿಗೆ ಕುಸಿದಿದೆ.

ತೆಲಸಂಗದ ಸಮೀಪ ಪುಟ್ಟ ಡೋಣಿ ನದಿ ಹರಿಯುತ್ತದೆ. ಸಿರಿವಂತ ರೈತರು ಆ ಹಳ್ಳದಿಂದ ತಮ್ಮ ಜಮೀನಿನವರೆಗೆ ಪೈಪ್ ಅಳವಡಿಸಿಕೊಂಡು, ಪಂಪ್ ಮೂಲಕ ನೀರು ತರುತ್ತಾರೆ. ಕೈತುಂಬ ರೊಕ್ಕ ತರುವ ದ್ರಾಕ್ಷಿ ಬೆಳೆಯುತ್ತಾರೆ. ಇದೇ ರೈತರು ದೊಡ್ಡ ಮನಸ್ಸು ಮಾಡಿ ತಮ್ಮ ಹಳ್ಳಿಯ ಜನರಿಗೆ ಉಚಿತವಾಗಿ ನೀರು ನೀಡುತ್ತಾರೆ.

ಆದರೆ, ಈ ನೀರು ರೈತರಿಗೆ, ಜನರಿಗೆ ಸಿಗುವುದು ವಿದ್ಯುತ್ ಇದ್ದಾಗ ಮಾತ್ರ. ಅಂದಹಾಗೆ ಇಲ್ಲಿ ದಿನಕ್ಕೆ ಮೂರು ಗಂಟೆ ಮಾತ್ರ ವಿದ್ಯುತ್ ಪೂರೈಕೆಯಾಗುತ್ತದೆ. ಕರೆಂಟ್ ಬಂದಾಗ ನೀರು ಹಿಡಿಯಲು ಎದ್ದು, ಬಿದ್ದು ಓಡುತ್ತಾರೆ. ಮಧ್ಯರಾತ್ರಿ 12 ಗಂಟೆಗೂ ಈ ನೀರು ಹಿಡಿಯುವ ಕಸರತ್ತು ನಡೆಯುತ್ತಿರುತ್ತದೆ ಎಂದು ವಿಷಾದದಿಂದ ಹೇಳುತ್ತಾರೆ ತೆಲಸಂಗದ ವಿದ್ಯಾವಂತ ಯುವಕ ಜಗದೀಶ್ ಕೊಬ್ರಿ.

ಪುಟ್ಟದೊಂದು ಹೋಟೆಲ್ ಮಾಲೀಕರಾಗಿರುವ ಅವರನ್ನು ಚುನಾವಣೆಯ ಬಗ್ಗೆ ಪ್ರಶ್ನಿಸಿದರೆ, `ಚುನಾವಣಿ ಯಾರಿಗೆ ಬೇಕ್ರಿ, ಮೊದಲು ನೀರು ಕೊಡ್ಲಿ' ಎಂದು ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. `ಶ್ರೀಮಂತ ರೈತರು ಡೋಣಿ ಹಳ್ಳದಿಂದ ತಮ್ಮ ಹೊಲದವರೆಗೆ ನೀರು ಹಾಯಿಸಿಕೊಳ್ಳುತ್ತಾರೆ. ಇದೇ ಕೆಲಸವನ್ನು ಸರ್ಕಾರ ಮಾಡಲು ಸಾಧ್ಯವಿಲ್ಲವೇ?' ಎಂದು ಪ್ರಶ್ನಿಸುತ್ತಾರೆ. 

`ಚುನಾವಣೆಗಳಿಂದಲೂ ಈ ಭಾಗದ ಹಳ್ಳಿಗಳ ಸ್ಥಿತಿಯನ್ನು ಬದಲಿಸಲು ಸಾಧ್ಯವಾಗುತ್ತಿಲ್ಲ. ಜಾತಿ ಲೆಕ್ಕಾಚಾರ, ಮತದಾನದ ಹಿಂದಿನ ದಿನ ಗುಟ್ಟಾಗಿ ಕೈಗೆ ಬರುವ ಹಸಿರು ನೋಟುಗಳು, ಹೊಟ್ಟೆಪಾಡಿಗಾಗಿ ಹಳ್ಳಿಯಿಂದ ಗುಳೆ ಹೋದವರನ್ನು ಮಹಾರಾಷ್ಟ್ರ, ಗೋವಾದಿಂದ ಕರೆ ತರುವ ಅಭ್ಯರ್ಥಿಗಳ ಚೇಲಾಗಳು ಚುನಾವಣೆಯ ದಿಕ್ಕನ್ನೇ ಬದಲಿಸುತ್ತಾರೆ. ಇದರಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಸೋಲಾಗುತ್ತದೆ' ಎಂದು ಹೇಳುವಾಗ ಅವರ ದನಿಯಲ್ಲಿ ಅಸಹಾಯಕತೆ ಕಾಣುತ್ತದೆ.

ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಇಲ್ಲಿನವರೇ ಆಗಿರುವುದರಿಂದ ಈ ಬಾರಿ ತೆಲಸಂಗದ ಎಲ್ಲರ್ `ವೋಟ್' ಅವರಿಗೆ ಎಂದು ಅಲ್ಲಿಯೇ ನಿಂತಿದ್ದ ರಾಜಕುಮಾರ್ ಹೊನ್ನಕಾಂಬಳೆ ಖುಲ್ಲಂಖುಲ್ಲಾ ಹೇಳುತ್ತಾರೆ.

ತೆಲಸಂಗದಿಂದ ಹೊರಟಾಗ ಎದುರಾದವರು ಫಡತರವಾಡಿಯ ಮರಾಠಿ ರೈತ ಶಿವಾಜಿ ತುಕಾರಾಮ್ ಫಡತರಿ. ನೀರು ತುಂಬಿದ ಎರಡು ಡ್ರಮ್, ನಾಲ್ಕೈದು ಕೊಡಗಳನ್ನು ಚಕ್ಕಡಿ ಗಾಡಿಯಲ್ಲಿ ತುಂಬಿಕೊಂಡು ಹೊರಟಿದ್ದರು ಅವರು. `ಕುಟುಂಬದ 8 ಸದಸ್ಯರು, 20 ದನಕರುಗಳಿಗೆ ಈ ನೀರು ಏನೂ ಸಾಕಾಗದು. 4 ಕಿ.ಮೀ. ದೂರ ಇರುವ ತೋಟದಿಂದ ದಿನಕ್ಕೆ ಎರಡು ಬಾರಿ ಚಕ್ಕಡಿಯಲ್ಲಿ ನೀರು ಕೊಂಡೊಯ್ಯುತ್ತೇವೆ' ಎಂದರು.

ಚುನಾವಣೆಯ ಬಗ್ಗೆ ಪ್ರಶ್ನಿಸಿದರೆ, ಹಾಲಿ ಶಾಸಕ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. `ಸವದಿ ನಮ್ಮೂರಿಗೆ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅದು ಸಾಕಾಗದೇ ಇದ್ದುದರಿಂದ ನಾವು ನೀರು ಹೊರಬೇಕಾಗಿದೆ' ಎನ್ನುತ್ತಾರೆ.

ನೀರಿನ ಸಮಸ್ಯೆ ಇದ್ದರೂ ಈ ಕ್ಷೇತ್ರದ ರಸ್ತೆಗಳು ಮಾತ್ರ ಬ್ಯೂಟಿ ಪಾರ್ಲರ್‌ಗೆ ಹೋಗಿಬಂದ ಯುವತಿಯರಂತೆ ಮಿಂಚುತ್ತಿವೆ. ಎರಡು ಅವಧಿಗೆ ಶಾಸಕರಾಗಿದ್ದ ಸವದಿ ಹಳ್ಳಿ, ಹಳ್ಳಿಯ ರಸ್ತೆ ಮಾಡಿಸಿದ್ದಾರೆ. ಬೋರ್ ಕೊರೆಸಿದ್ದಾರೆ. ನೀರಿಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಿಸಿದ್ದಾರೆ.

ಮುಗ್ಧ ಹಳ್ಳಿಗರಲ್ಲಿ ಸವದಿಯವರ ಬಗ್ಗೆ ಒಲವು ಎದ್ದು ಕಾಣುತ್ತಿದೆ. ಆದರೆ ತಾಲ್ಲೂಕು ಕೇಂದ್ರ ಅಥಣಿಯಲ್ಲಿ ಸವದಿ ಜನಪ್ರಿಯತೆ ಕಳೆದುಕೊಂಡಂತೆ ಕಾಣುತ್ತದೆ. ಚುನಾವಣೆಯ ಮಾತೆತ್ತಿದರೆ ಸುಶಿಕ್ಷಿತರು, ವ್ಯಾಪಾರಿ ಸಮುದಾಯದ ಕೆಲವರು ಮುಗುಮ್ಮೋಗಿ ಮಾತನಾಡುತ್ತಾರೆ. ತಮ್ಮ ಶಾಸಕ ಸವದಿ 'ವಿಧಾನಸಭೆಯಲ್ಲಿ ನೀಲಿ ಚಿತ್ರ ವೀಕ್ಷಿಸಿದ' ಪ್ರಕರಣದ ಕುರಿತು ಯಾರೂ ಪ್ರಸ್ತಾಪಿಸದಿದ್ದರೂ ಬಿಜೆಪಿ ಸರ್ಕಾರದ ಹಗರಣ, ತಾವೇ ಮಾಡಿಕೊಂಡ ಅವಾಂತರವೇ ಸವದಿ ಗೆಲುವಿಗೆ ಮುಳ್ಳಾಗಬಹುದು ಎನ್ನುತ್ತ ನಸುನಗುತ್ತಾರೆ.

ಕಳೆದ ಚುನಾವಣೆಯಲ್ಲಿ ಮಹಿಳೆಯರು ತಾವೇ ತಂಡಗಳನ್ನು ಕಟ್ಟಿಕೊಂಡು ಸವದಿಯವರ ಪರ ಹಳ್ಳಿಹಳ್ಳಿಗೆ ಪ್ರಚಾರಕ್ಕೆ ಹೋಗುತ್ತಿದ್ದರು. ಈ ಬಾರಿ ಅವರ ಪ್ರಚಾರ ತಂಡದಲ್ಲಿ ಮಹಿಳಾ ಮುಖಗಳು ಕಾಣುತ್ತಿಲ್ಲ ಎಂದು ಅಥಣಿಯ ಸಂಜು ತೋರಿ ಹೇಳುತ್ತಾರೆ.

ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಶಹಜಹಾನ್ ಡೊಂಗರಗಾಂವ್ ಪ್ರಯತ್ನದಿಂದ ಹಿಪ್ಪರಗಿ ಬ್ಯಾರೇಜ್, ಕರಿಮಸೂತಿ ಏತ ನೀರಾವರಿ ಮತ್ತು ಅಥಣಿಯ ಕೃಷ್ಣಾ ಸಕ್ಕರೆ ಕಾರ್ಖಾನೆಯ ಕೆಲಸ ಚುರುಕು ಪಡೆದಿತ್ತು ಎನ್ನುವ ಕಾಂಗ್ರೆಸ್ ಅಭ್ಯರ್ಥಿ ಕುಮಟಳ್ಳಿ, ಅದರ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ.

2008ರಲ್ಲಿ ಪೂರ್ಣಗೊಂಡ ಹಿಪ್ಪರಗಿ ಬ್ಯಾರೇಜ್‌ನ ಯಶಸ್ಸು ಸವದಿ ಅವರಿಗೆ ಸೇರುತ್ತದೆ ಎಂಬುದು ಅವರ ಬೆಂಬಲಿಗರ ವಾದ. ಈ ಇಬ್ಬರೂ ಲಿಂಗಾಯತರಲ್ಲಿ ಪ್ರಬಲರಾದ ಪಂಚಮಸಾಲಿ ಜನಾಂಗಕ್ಕೆ ಸೇರಿದವರಾಗಿದ್ದರಿಂದ ಜಾತಿ ಲೆಕ್ಕಚಾರ ಇಲ್ಲಿ ಗೌಣ.

ತಮ್ಮ ಬೆಂಬಲಿಗರಿಗೆ, ತಮ್ಮ ಭಾಗದ ಹಳ್ಳಿಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಮಾಡಿಕೊಡುವ ಶಾಸಕರು, ಕ್ಷೇತ್ರದ ಉಳಿದ ಭಾಗಗಳನ್ನು ನಿರ್ಲಕ್ಷಿಸಿದ್ದಾರೆ ಎಂಬ ಅಸಮಾಧಾನ ಅನೇಕ ಗ್ರಾಮಗಳಲ್ಲಿದೆ. ಕರಿಮಸೂತಿ ಏತ ನೀರಾವರಿ ಯೋಜನೆಯಿಂದ ಅಥಣಿ ತಾಲ್ಲೂಕಿನ ಹಳ್ಯಾಳ, ಐನಾಪುರಕ್ಕೆ ನೀರಿನ ವ್ಯವಸ್ಥೆಯಾಗಿದೆ. ಆದರೆ, ತೆಲಸಂಗ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿಗೆ ಕುಡಿಯುವ ನೀರು ಪೂರೈಸುವ ಸಾವಳಗಿ-ತುಂಗಳ ಏತ ನೀರಾವರಿ ಯೋಜನೆ ದಶಕಗಳಿಂದ ಪ್ರಸ್ತಾವದ ಹಂತದಲ್ಲೆೀ ಇದೆ.

ಚುನಾವಣೆ ಹೊತ್ತಿಗೆ ಮಾತ್ರ ಬರುವ, ಆಯ್ಕೆಯಾದ ಮೇಲೆ ತಮ್ಮನ್ನು ಮರೆಯುವ ರಾಜಕಾರಣಿಗಳು, ತಮ್ಮ ಊರಿಗೆ ಎಂದೂ ಭೇಟಿ ನೀಡದ ಜಿಲ್ಲಾ ಮಟ್ಟದ ಅಧಿಕಾರಿಗಳ ಬಗ್ಗೆ ಈ ಭಾಗದ ಜನರಲ್ಲಿ ಅಸಹನೆ ಇದೆ. ತಪ್ಪದ ನೀರಿನ ಬವಣೆಗೆ ಶಾಶ್ವತ ಪರಿಹಾರ ದೊರಕಿಸದ ಜನಪ್ರತಿನಿಧಿಗಳ ಕುರಿತು ಆಕ್ರೋಶವೂ ಕಾಣಿಸುತ್ತದೆ. ಆದರೆ, ಅಸಹನೆ, ಆಕ್ರೋಶ ಜನಾಭಿಪ್ರಾಯವಾಗಿ ರೂಪುಗೊಳ್ಳದಿರುವುದು ಮಾತ್ರ ಇಲ್ಲಿನ ದುರಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT