ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶನ ತಮಟೆಯಲ್ಲಿ ಸಾಮರಸ್ಯದ ಸದ್ದು

Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಗಣಪತಿ ಬಪ್ಪ ಮೋರಯಾ..’ ಶ್ರೀ ಗಣೇಶ ಮಹಾರಾಜ್ ಕೀ ಜೈ..’ ಜೀವದ ಕಸುವನ್ನೆಲ್ಲ ಕೂಡಿಸಿಕೊಂಡು ಗಂಟಲ ನರವುಬ್ಬಿಸಿ ಕೂಗುವ ಹುಡುಗರ ಘೋಷಣೆಗಳು ಮೊಳಗುತ್ತಿದಂತೆಯೇ ಮಂಟಪದಲ್ಲಿ ಕೂತು ದರ್ಶನ, ನೈವೇದ್ಯಗಳಲ್ಲಿ ಕಾಲ ಬುಡದ ಇಲಿಯನ್ನೂ ಮರೆತು ಹೊಟ್ಟೆಯುಬ್ಬಿಸಿ ಕೂತಿದ್ದ ಗಣಪನಿದ್ದ ಪೀಠ ಮೆಲ್ಲಗೆ ಅಲ್ಲಾಡುತ್ತದೆ. ಹಟ ಹಿಡಿದ ಮಗುವನ್ನು ಎತ್ತಿಕೊಳ್ಳುವಂತೆ ಕೂತಿದ್ದ ಗಣಪನನ್ನು ಕೂತಿದ್ದಂತೇ ಎತ್ತಿಕೊಂಡು ಸಿಂಗರಿಸಿದ್ದ ಟ್ರಾಕ್ಟರಿನಲ್ಲೋ, ಮಿನಿ ಲಾರಿಯಲ್ಲಿಯೋ ಕುಳ್ಳಿಸಿದರೆಂದರೆ ವಿಘ್ನನಿವಾರಕನಿಗೆ ಗತಿಕಾಲ ಬಂದಿದೆ ಅಂತಲೇ ಅರ್ಥ.

ಲಾರಿಯಲ್ಲಿ ಇಟ್ಟ ವಿನಾಯಕನ ಅಕ್ಕಪಕ್ಕದಲ್ಲಿ ಕೂರಲು ಸುತ್ತಮುತ್ತಲಿನ ಮಕ್ಕಳಲ್ಲಿ ಪೈಪೋಟಿ. ಮೂರ್ತಿಯನ್ನು ಹಿಡಿದುಕೊಳ್ಳುವ ನೆಪದಲ್ಲಿ ವಾಹನವನ್ನೇರುವ ಇವರ ಸಂಖ್ಯೆ ಹೆಚ್ಚಾಗುತ್ತ ಕೊನೆಗೆ ಗಣೇಶನಿಗೇ ಜಾಗವಿಲ್ಲದಂತಾಗುತ್ತದೆ. ಗಣಪನ ಪಕ್ಕ ಕೂರುವುದಕ್ಕೆ ನೆಪಗಳೇನೇ ಇದ್ದರೂ ರಸ್ತೆಯಲ್ಲಿ ನೋಡುವವರಿಗೆಲ್ಲ ತಾನು ಕಾಣಬೇಕು ಎಂಬ ಹಂಬಲವೇ ಅಸಲಿಯತ್ತು.

ಗಣಪನ ಹೊತ್ತ ಲಾರಿ ಚಕ್ರ ಎರಡು ಸುತ್ತು ಸುತ್ತಿದ್ದೇ ಎದುರಿಗೆ ನಿಂತಿದ್ದ ಹುಡುಗ ಕೈಯಲ್ಲಿನ ತೆಂಗಿನ ಕಾಯಿಯನ್ನು ಎತ್ತಿ ನೆಲಕ್ಕೆ ಬಡಿಯುವನು. ಡಾಂಬರು ರಸ್ತೆಗೆ ಬಡಿದು ನೂರು ಚೂರಾಗಿ ಸಿಡಿದ ಕಾಯಿಭಾಗವನ್ನು ಹೆಕ್ಕುವ ಮಕ್ಕಳ ನೂಕು ನುಗ್ಗಲಲ್ಲಿ ಸಿಕ್ಕಿದ್ದಷ್ಟೇ ಪ್ರಸಾದ. ಅಷ್ಟರಲ್ಲಿಯೇ ಈ ಗುಂಪಿನಿಂದ ಮಾರುದೂರದಲ್ಲಿ ಉದ್ದೋ ಉದ್ದ ಪಟಾಕಿ ಸರವನ್ನು ರಸ್ತೆಮೇಲೆ ಇಟ್ಟು ಕಿಡಿ ಹಚ್ಚುವರು. ಸಿಡಿದ ಸದ್ದಿಗೆ, ಎದ್ದ ಹೊಗೆಗೆ ಮುಳುಗಲು ಸನ್ನದ್ಧನಾದ ಗಣಪನೂ ಕಿವಿ, ಮೂಗು ಮುಚ್ಚುವಂತಾಗುವುದು. ಉಮೇದಿಯ ಭರದಲ್ಲಿ ಇದ್ಯಾವುದರ ಪರಿವೆಯೇ ಇಲ್ಲದ ಇನ್ನೊಬ್ಬ ಕೈಯಲ್ಲಿಯೇ ಪಟಾಕಿ ಸರವನ್ನು ಹಚ್ಚಿ ಗಿರಗಿರ ತಿರುಗಿಸಿ ಹೀರೋ ಆಗಲು ಸಿದ್ಧನಾಗುವನು.

ಈ ಎಲ್ಲ ಗದ್ದಲಗಳನ್ನು ಮೀರಿಸುವಂತೆ ಕೇಳಿಬಂದ ತಮಟೆ ಸದ್ದಿಗೆ ಗಣಪನ ಪಕ್ಕ ಕೂತ ಅರ್ಚಕರೂ ಒಮ್ಮೆ ಬೆಚ್ಚುವರು. ‘ಡಂ ಡಟ್ಟ ಡಂ ಡಟ್ಟ ಟರ್ರಾ ಟರ್ರಾ ಟಂ ಟಂ ಟಂ..’ ಎಂದು ನಿಧಾನಗತಿಯಲ್ಲಿ ತಮಟೆಗಳನ್ನು ಹಿಡಿದ ಹುಡುಗರ ಗುಂಪು ಮುಂದೆ ಬಂದಂತೆ ಜನರೆಲ್ಲ ತಾವಾಗಿ ಸರಿದು ಅವರಿಗೆ ದಾರಿ ಕೊಡುವರು.

ಕ್ಷಣಕ್ಷಣಕ್ಕೂ ವೇಗ ಹೆಚ್ಚುತ್ತಲೇ ಹೋಗುವ ಆ ತಮಟೆ ಸದ್ದಿಗೆ ಸುತ್ತ ನೆರೆದವರ ಕೆಳದುಟಿ ತಂತಾನೆಯೇ ಕಚ್ಚಿಕೊಳ್ಳುವುದು. ಮುಷ್ಟಿ ಬಿಗಿಯುವುದು. ತಲೆ ಕೈ ಕಾಲುಗಳು ಅರಿವಿಲ್ಲದೆಯೇ ಆಡಲು ಶುರು. ಎದುರಿನ ತಮಟೆಯೊಟ್ಟಿಗೆ ಎದೆಯೊಳಗಿನ ತಮತಮತಮಟೆ ಸದ್ದು ಏಕತಾನ ಹೊಂದಿದ್ದೇ ಮೈಮರೆತು ಕುಣಿತಕ್ಕೆ ಬಿದ್ದ ಅವರನ್ನು ತಡೆಯಲು ಸ್ವತಃ ಗಣಪನಿಗೂ ಸಾಧ್ಯವಿಲ್ಲವೇನೋ. ಕಣ್ಣಲ್ಲಿ ಕಟ್ಟಿನಿಂತ ನಿದ್ದೆ ಜೋಂಪು, ಮುಖವನ್ನು ಮುತ್ತಿಕೊಂಡ ಅಸಾಧ್ಯ ದಣಿವು, ನೆತ್ತಿ ಒದ್ದೆಯಾಗಿ ಕಿವಿ ಪಕ್ಕದಿಂದ, ಕತ್ತಿನ ಗುಂಟ ದೀಪದ ಬೆಳಕಲ್ಲಿ ಫಳಫಳ ಹೊಳೆಯುತ್ತ ಇಳಿಯುತ್ತಿರುವ ಬೆವರ ಹನಿಗಳು, ಮನದಲ್ಲಿ ತುಂಬಿನಿಂತ ಹಬ್ಬದ ಖರ್ಚುವೆಚ್ಚಗಳ ಭಾರ ಲೆಕ್ಕಾಚಾರ... ಎಲ್ಲವೆಂದರೆ ಎಲ್ಲವನ್ನೂ ಮೀರಿದ ತಮಟೆ ಸದ್ದೆಂಬ ಈ ಕ್ಷಣದ ಅಖಂಡ ಸತ್ಯದಲ್ಲಿ ತಾದಾತ್ಮ್ಯ ಹೊಂದಿದ ಸಾರ್ಥಕ ಕುಣಿತವದು. ಭಕ್ತಿಯ ಗುಂಗಿನಲ್ಲಿ ಕೊಂಚ ‘ಪರಮಾತ್ಮ’ನನ್ನು ಹೊಟ್ಟೆಯೊಳಗೆ ಬಿಟ್ಟುಕೊಂಡಿದ್ದರಂತೂ ಈ ನಾನ್ ಸ್ಟಾಪ್ ಟಪ್ಪಾಂಗುಚಿಗೆ ಕೊನೆಯೆಂಬುದೇ ಇರುವುದಿಲ್ಲ.

ತಮಟೆಯೆದುರು ಸಾಂಗು ಸಪ್ಪೆ
ಗಣಪನನ್ನು ಕೂರಿಸುವ ದಿನದಿಂದ ಮುಳುಗಿಸುವ ದಿನದವರೆಗೂ ಜೋರು ವಾಲ್ಯೂಮ್ ಕೊಟ್ಟು, ಹಾಡುಗಳನ್ನು ಹಾಕುವುದು ಸಾಮಾನ್ಯ. ಆದರೆ ಗಣಪನನ್ನು ಮುಳುಗಿಸಲು ಕೊಂಡೊಯ್ಯುವಾಗ ಮಾತ್ರ ಕ್ಯಾಸೆಟ್‌ಗಳಿಗೆ ನಿಷೇಧ. ಸಾಂಗಿಗೆ ಅಲ್ಲಿ ಸ್ಥಾನವಿರುವುದಿಲ್ಲ.
ಕಣ್ಣೆದುರು ಎದೆಗೆ ಗುರಿಯಿಟ್ಟ ಗುಂಡಿನಂತೆ ಬೀಳುವ ತಮಟೆ ಬೀಟಿನ ಶಕ್ತಿ ಯಾವ ರೆಕಾರ್ಡೆಡ್ ಹಾಡಿಗೂ ಬರಲು ಸಾಧ್ಯವಿಲ್ಲ ಎಂಬುದು ಬಹುತೇಕ ಹುಡುಗರ ಅಭಿಪ್ರಾಯ.

ತಮಟೆ ವಾದ್ಯಕ್ಕೆ ಬಲು ಬೇಡಿಕೆ
ಗಣೇಶನ ಮುಳುಗಿಸುವ ಸಮಯದಲ್ಲಿ ತಮಟೆ ವಾದ್ಯದ ತಂಡಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬರೀ ಬೆಂಗಳೂರಿನವರಷ್ಟೇ ಅಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದಲೂ ತಮಟೆ ಬಾರಿಸಲೆಂದೇ ಬಂದು ಹೋಗುವ ತಂಡಗಳೂ ಸಾಕಷ್ಟಿವೆ. ಗಾಯತ್ರಿ ನಗರದ ಗಣಪನ ಮುಂದೆ ತಮಟೆ ಬಾರಿಸುತ್ತಿದ್ದ ‘ಆಂಜನೇಯ ಡೊಳ್ಳು ಯುವಕರ ಸಂಘ’ ಶಿವಮೊಗ್ಗದಿಂದ ತಮಟೆ ಬಾರಿಸಲೆಂದೇ ನಗರಕ್ಕೆ ಬಂದಿದ್ದು. ‘ಜನರಿಗೆ ಗಣಪನ ಮುಳುಗಿಸುವ ಟೈಮಲ್ಲಿ ಎಂಜಾಯ್‌ಮೆಂಟ್‌ ಬೇಕಾಗ್ತದೆ. ಅದಕ್ಕಾಗಿಯೇ ನಮ್ಮನ್ನು ಕರೆಸಿಕೊಳ್ಳುತ್ತಾರೆ. ನಮಗೆ ತಮಟೆ ಬಾರಿಸುವ ಕ್ರೇಜಾದ್ರೆ ಅವರಿಗೆ ಕುಣಿಯುವ ಕ್ರೇಜು’ ಎನ್ನುತ್ತಾರೆ ನಿತಿನ್‌.

ರಸ್ತೆ ಮಧ್ಯದ ಜಿದ್ದುಗಳು
ಗಣಪನ ಮುಳುಗಿಸಲು ಸಾಗಿಸುವ ದಾರಿಯ ತುಂಬ ತಮಟೆ ಸದ್ದಿನೊಂದಿಗೆ ಹತ್ತು ಹಲವು ಕಸರತ್ತುಗಳು, ಸವಾಲು– ಜವಾಬು ಜುಗಲ್‌ಬಂದಿಗಳು ನಡೆಯುತ್ತಲೇ ಇರುತ್ತವೆ. ನೆಲದ ಮೇಲೆ ನೂರು ರೂಪಾಯಿ ನೋಟನ್ನಿಟ್ಟು ಸವಾಲೆಸೆಯುವುದು. ತಮಟೆ ಬಡಿಯುವ ಹುಡುಗ ತಮಟೆ ಬಡಿಯುತ್ತಲೇ ಬಾಗಿ ಅದನ್ನು ಕಣ್ಣ ರೆಪ್ಪೆಗಳಿಂದಲೇ ಎತ್ತಿಕೊಳ್ಳುವುದು, ಸರದಿ ಪ್ರಕಾರ ಗೆಳೆಯರ ಹೆಗಲ ಮೇಲೆ ನಿಂತು, ರಸ್ತೆಯಲ್ಲಿ ಮಲಗಿ, ತಲೆಕೆಳಗಾಗಿ ನಿಂತು ನಾನಾ ಪ್ರಕಾರದ ಹೆಜ್ಜೆ ಹಾಕುವುದು. ಕೈಯಲ್ಲಿಯೇ ಹಿಡಿದು ಪಟಾಕಿ ಸಿಡಿಸುವುದು ಹೀಗೆ ದಾರಿಯುದ್ದಕ್ಕೂ ಮೋಜಿನ ಕ್ಷಣಗಳೇ ತುಂಬಿರುತ್ತವೆ.

ತಮಟೆ ಸದ್ದಿಗೆ ಧರ್ಮದ ಹಂಗೆಲ್ಲಿ?
ಅಲಂಕೃತ ಗಣಪನ ರಥದೆದುರು ಮೈಮರೆವಿನಿಂದ ಕುಣಿಯುತ್ತಿದ್ದ ಆ ಹುಡುಗನ ಹೆಸರು ಹಸನ್‌. ಇದೇನು ಗಣಪನ ಹಬ್ಬದಲ್ಲಿ ಹಸನ್‌ ಎಂದು ಅಚ್ಚರಿಯಿಂದ ದಿಟ್ಟಿಸಿದರೆ ನನ್ನ ಮನಸ್ಸಿನ ಭಾವ ಅರಿತವನಂತೇ ಜೋರು ನಕ್ಕು ಹಣೆಯ ಬೆವರೊರೆಸಿಕೊಂಡ ಹಸನ್‌ ‘ಡಾನ್ಸ್‌ಗೆ ಎಂಥ ಧರ್ಮ ಸಾರ್‌. ಈ ಏರಿಯಾದಲ್ಲಿ ಗಣಪನ ಕೂರಿಸಿದವರೆಲ್ಲರೂ ನನ್ನ ಸ್ನೇಹಿತರೇ. ನಾನೂ ಅವರ ಜತೆ ಸೇರಿದ್ದೇನೆ. ಇದೊಂದೇ ಅಂತಲ್ಲ, ಎಲ್ಲ ಹಬ್ಬಗಳಲ್ಲಿಯೂ ನಾವು ಒಟ್ಟಾಗಿಯೇ ಸಂಭ್ರಮಿಸುತ್ತೇವೆ. ಈ ತಮಟೆ ಸದ್ದಿನ ಮಧ್ಯ ಧರ್ಮ ಯಾರು ಕೇಳ್ತಾರೆ?’ ಎಂದು ನನ್ನನ್ನೇ ಪ್ರಶ್ನಿಸಿ ಮತ್ತೆ ಕೈಯೆತ್ತಿ, ತುಟಿ ಕಚ್ಚಿ ಸ್ಟೆಪ್ಪು ಹಾಕತೊಡಗಿದ.

ನಮ್ಮ ತಂಡದಲ್ಲಿ 50 ಜನ ಸದಸ್ಯರಿದ್ದೀವಿ. ಗಣಪನ ಹಬ್ಬದಲ್ಲಿ ಹಲವಾರು ಕಡೆ ತಮಟೆ ಬಾರಿಸಲು ಕರೆಯುತ್ತಾರೆ. ಹೆಚ್ಚು ಕಾರ್ಯಕ್ರಮ ಇದ್ದಾಗ ತಂಡವನ್ನು ಹಲವು ಗುಂಪುಗಳನ್ನಾಗಿ ಮಾಡಿಕೊಂಡು ಒಂದೊಂದು ಗುಂಪು ಒಂದೊಂದು ಕಡೆಗೆ ಹೋಗುತ್ತೇವೆ. ಮುಖ್ಯವಾಗಿ ನಮ್ಮ ತಂಡದಲ್ಲಿ ಯಾರೂ ತಮಟೆ ಬಾರಿಸುವ ಟೈಮಲ್ಲಿ ಕುಡಿಯಲ್ಲ. ಕುಡಿಯುವುದಿದ್ದರೂ ಕಾರ್ಯಕ್ರಮ ಮುಗಿದ ಮೇಲೆಯೇ ಕುಡಿಯುತ್ತೇವೆ. ನಿಗದಿ ಮಾಡಿದ ಸಮಯಕ್ಕಿಂತ ಕೊಂಚ ಜಾಸ್ತಿ ಸಮಯ ಆದರೂ ಬೇಸರ ಮಾಡಿಕೊಳ್ಳದೇ ತಮಟೆ ಬಾರಿಸುತ್ತೇವೆ. ಇದರಿಂದ ಜನರು ಖುಷಿಪಡ್ತಾರೆ. ಕೆಲವು ಕಡೆಗೆ ನಮ್ಮನ್ನು ಬಹಳ ಚೀಪ್‌ ಆಗಿ ನೋಡ್ತಾರೆ. ಆಗ ನೋವಾಗುತ್ತದೆ. ಆದ್ರೂ ಹಣ ಕೊಟ್ಟು ಕರೆಸಿಕೊಂಡಿರುತ್ತಾರಲ್ಲ. ಅದಕ್ಕೇ ಸಹಿಸ್ಕೋತಿವಿ. ಆದ್ರೆ ಇನ್ನು ಕೆಲವರು ಕಲಾವಿದರು ಎಂಬ ಗೌರವದಿಂದ ನಡೆಸಿಕೊಳ್ತಾರೆ. ಅಂಥ ಕಡೆ ನಾವೂ ಖುಷಿಯಿಂದ ಪಾಲ್ಗೊಳ್ಳುತ್ತೇವೆ.

–ಎಂ.ದೀಪು, ಬ್ಯಾಂಡ್‌ ಮಣಿ ಗ್ರೂಪ್ಸ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT