ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿಗಿರಿಯಲ್ಲಿ ಅರಳಿದ ಶಾಲೆ

Last Updated 1 ಅಕ್ಟೋಬರ್ 2014, 19:51 IST
ಅಕ್ಷರ ಗಾತ್ರ

ಶರಣ ಸಿರಸಗಿಯ ತಾಂಡಾದಲ್ಲೊಂದು ಸರ್ಕಾರಿ ಶಾಲೆ ಇದೆ. ಇಲ್ಲಿಯ ವಿದ್ಯಾರ್ಥಿಗಳಿಗೆ ಸೀಟು ಕೊಡುವುದಕ್ಕೆ ಖಾಸಗಿ ಪ್ರೌಢಶಾಲೆಗಳು ಮೇಲಾಟ ನಡೆಸುತ್ತವೆ. ತಾಂಡಾದಲ್ಲಿರುವ ಶಾಲೆಗೆ ಊರಿನ ಮೇಲ್ಜಾತಿ ಮಕ್ಕಳೂ ಬರುತ್ತಾರೆ. ಈ ಶಾಲೆಯನ್ನು ನೋಡುವುದಕ್ಕೆ ವಿದೇಶಗಳಿಂದಲೂ ಜನರು ಬಂದಿದ್ದಾರೆ. ಈ ಶಾಲೆಯನ್ನು ಕಟ್ಟಿ ಬೆಳೆಸಿದ್ದರ ಹಿಂದಿರುವುದು ಉತ್ಸಾಹಿ ಮಹಿಳೆಯರ ಗಾಂಧಿಗಿರಿ.

ಅದು ಗುಲ್ಬರ್ಗ–ಅಫಜಲಪುರ ರಸ್ತೆಯಲ್ಲಿ ಇರುವ ಊರು. ಹೆಸರು ಶರಣ ಸಿರಸಗಿ. ಗುಲ್ಬರ್ಗದಿಂದ ಕೇವಲ ಏಳು ಕಿಲೋಮೀಟರ್‌ ಕ್ರಮಿಸಿದರೆ ಸಿಗುತ್ತದೆ. ಅಲ್ಲಿಂದ ಅರ್ಧ ಕಿಲೋಮೀಟರ್ ಸಾಗಿದರೆ ರಸ್ತೆ ಪಕ್ಕದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶರಣ ಸಿರಸಗಿ ತಾಂಡಾ’ ಎನ್ನುವ ನಾಮಫಲಕ ಕಾಣಿಸುತ್ತದೆ. ಅದರಲ್ಲಿ ಶಾಲೆಗೆ ದಾರಿ ತೋರಿಸಲಾಗಿದೆ. ಅದರ ಜಾಡು ಹಿಡಿದು ಸ್ವಲ್ಪ ದೂರ ಹೋದೆವು. ನಾವು ಹುಡುಕುತ್ತಿದ್ದ ಶಾಲೆ ಸಿಕ್ಕಿತು. ಅಂದು ಶಾಲೆಗೆ ಸ್ಥಳೀಯ ರಜೆ ಘೋಷಿಸಲಾಗಿತ್ತು. ನಾವು ಶಾಲೆಯನ್ನು ಕುತೂಹಲದಿಂದ ನೋಡುವುದನ್ನು ಕಂಡ ವ್ಯಕ್ತಿಯೊಬ್ಬರು ‘ಏನ್‌ ಸಮಾಚಾರ’ ಎಂದು ವಿಚಾರಿಸಿದರು. ‘ಶೋಭಾ, ಆಶಾ, ಪ್ರಮೀಳಾ ಅವರು ಕಲಿಸುವ ಶಾಲೆ ಇದೇನಾ?’ ಎಂದು ಕೇಳಿದೆ. ‘ನೀವು ಕೇಳಿದ ಶೋಭಾ ನನ್ನ ಪತ್ನಿ’ ಎಂದವರೇ, ನಮ್ಮನ್ನು ಸಮೀಪದಲ್ಲೇ ಇದ್ದ ತಮ್ಮ ಮನೆಗೆ ಕರೆದುಕೊಂಡು ಹೊರಟೇಬಿಟ್ಟರು. ಶೋಭಾ (ಕಾಶಿಬಾಯಿ) ಅವರ ಮುಂದೆ ‘ನಿಮ್ಮ ಶಾಲೆ’ ಎನ್ನುವಷ್ಟರಲ್ಲೇ ‘ಅದೊಂದು ದೊಡ್ಡ ಕಥೆ. ಇದೇ ಮನೆಯಲ್ಲಿ, ಇಲ್ಲಿಯೇ ಐದು ವರ್ಷ ಶಾಲೆ ನಡೆಸಿದೆವು’ ಎಂದವರು, ‘ನಡೆಯಿರಿ, ನಮ್‌ ಶಾಲೆ ತೋರಿಸುತ್ತೇನೆ’ ಎಂದು ದಾಪುಗಾಲು ಹಾಕುತ್ತಲೇ ಹೊರಟರು. ನಾವು ಅವರನ್ನು ಹಿಂಬಾಲಿಸಿದೆವು.


ನಾವು ಮುಖ್ಯ ಶಿಕ್ಷಕಿ ಅವರ ಕೊಠಡಿಯಲ್ಲಿ ಕುಳಿತು ಐದು ನಿಮಿಷವೂ ಆಗಿರಲಿಲ್ಲ. ಮಹಿಳೆಯೊಬ್ಬರು ಬಂದರು. ಅವರನ್ನು ‘ಜ್ಯೋತಿ ಮೇಡಂ’ ಎಂದು ಶೋಭಾ ಪರಿಚಯಿಸಿದರು. ಅವರ ಹಿಂದೆ ಮತ್ತೊಬ್ಬರ ಆಗಮನವಾಯಿತು. ಅವರ ಮುಖ ನೋಡುತ್ತಿದ್ದಂತೆಯೇ ಶೋಭಾ ‘ಆಶಾ ಮೇಡಂ’ ಎಂದು ಖುಷಿಯಿಂದಲೇ ಕೂಗಿದರು. ಸ್ವಲ್ಪ ಹೊತ್ತಿನಲ್ಲೇ ಮುಖ್ಯ ಶಿಕ್ಷಕಿ ಪ್ರಮೀಲಾ ಬಾಯಿ ಡಿಗ್ಗಾಂವಿ ಬಂದರು. ಒಂದು ಮೂಲೆಯಲ್ಲಿ ಶೋಭಾ ಪತಿ ಸುಭಾಷ್‌ಲಾಲು ಜಾಧವ್ ಇದ್ದರು. ಇಷ್ಟಕ್ಕೇ ಕೊಠಡಿ ಭರ್ತಿಯಾಗಿತ್ತು. ಒಮ್ಮೆಗೆ ಏನೋ ನೆನಪಾದವರಂತೆ ಶೋಭಾ ‘ನಾನು ಮನೆಯಲ್ಲಿ ಶಾಲೆಯ ಕಥೆಯನ್ನು ಅರ್ಧಕ್ಕೆ ನಿಲ್ಲಿಸಿದ್ದೆ. ನಾವು ಮನೆ ತುಂಬಾ ಕೋಳಿ ಸಾಕುತ್ತಿದ್ದೆವು. ಶಾಲೆ ಶುರು ಮಾಡಿದ ನಂತರ ನಿಲ್ಲಿಸಿಬಿಟ್ಟೆವು. ಕೋಳಿಗಳು ಹೊಲಸು ಮಾಡುತ್ತಿದ್ದವು. ಎಳೆಕಂದಮ್ಮಗಳು ಪಾಠ ಕೇಳಲು ಆಗುತ್ತಿರಲಿಲ್ಲ’ ಎಂದು ನಗುತ್ತಲೇ ಹೇಳಿದರು. 

ಇದೊಂದು ಶ್ಯಾಮ್ ಬೆನೆಗಲ್ ಚಿತ್ರಕಥೆ
ಈ ಶಾಲೆಗೆ ಭೇಟಿ ನೀಡಿದ್ದ ಅಜೀಮ್ ಪ್ರೇಂಜಿ ವಿಶ್ವವಿದ್ಯಾಲಯದ ಕುಲಪತಿ ಅನುರಾಗ್ ಬೆಹರ್ ‘ಮಿಂಟ್’ ಪತ್ರಿಕೆಯ ಅಂಕಣದಲ್ಲಿ ಬರೆದದ್ದು ಹೀಗೆ ‘ಈ ಶಾಲೆಯನ್ನು ಕಟ್ಟಲು ನಡೆಸಿದ ಪ್ರಯತ್ನದ ವಿವರಗಳು ಸಹಜವಾಗಿಯೇ ಶ್ಯಾಮ್ ಬೆನೆಗಲ್ ಸಿನಿಮಾವೊಂದರ ಚಿತ್ರಕತೆಯಾಗುತ್ತದೆ. ನಾನಾಗಿದ್ದರೆ ಸ್ಮಿತಾರನ್ನು ಶೋಭಾ ಪಾತ್ರಕ್ಕೂ, ನೂತನ್‌ರನ್ನು ಆಶಾ ಅವರ ಪಾತ್ರಕ್ಕೂ ಆರಿಸಿಕೊಳ್ಳುತ್ತಿದೆ. ಈ ಇಬ್ಬರು ಮಹಿಳೆಯರು ಮೂರು ವರ್ಷ ನಿರಂತರವಾಗಿ ಹೋರಾಟ ನಡೆಸಿದ್ದಾರೆ. ಶೋಭಾ ನಾಯಕತ್ವ ವಹಿಸಿ ತಮಗೇನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡಿದರು. ಕೊನೆಗೂ ಗ್ರಾಮ ಪಂಚಾಯಿತಿ ಶಾಲೆ ಕಟ್ಟಲು ಜಾಗ ಕೊಟ್ಟಿತು. ಮಳೆಗಾಲದಲ್ಲಿ ನೀರು ಹರಿಯುವ ಕಾಲುವೆಯ ಮೇಲಿತ್ತು. ಕೊಟ್ಟದ್ದನ್ನೇ ತೆಗೆದುಕೊಂಡು ಶಿಕ್ಷಣ ಇಲಾಖೆಯೊಂದಿಗೆ ಸೇರಿ ಮಳೆಗಾಲದಲ್ಲಿ ಹರಿಯುವ ನೀರಿನ ಸಮಸ್ಯೆಯನ್ನು ನಿವಾರಿಸುವಂಥ ಕಟ್ಟಡದ ವಿನ್ಯಾಸ ಮಾಡಿಸಿದರು. ಸರಳ, ಆದರೆ ಪರಿಣಾಮಕಾರಿ ವಿನ್ಯಾಸದಿಂದ ಮಳೆಯ ನೀರು ಶಾಲೆಯ ಅಡಿಯಲ್ಲಿ ಹರಿದು ಹೋಗುತ್ತದೆ’.

ಸ್ವಯಂ ಸೇವಕಿ ಶೋಭಾ
ಎಸ್‌ಎಸ್‌ಎಲ್‌ಸಿ ಫೇಲ್‌ ಆಗಿದ್ದ ಶೋಭಾ ಸಾಕ್ಷರತಾ ಆಂದೋಲನದಲ್ಲಿ ಸ್ವಯಂ ಸೇವಕಿಯಾಗಿದ್ದರು. ನಂತರ ಪ್ರೇರಕಿಯೂ ಆಗಿದ್ದರು. ಒಂದು ದಿನ ಏನೋ ತಳಮಳ. ಏನು, ಏಕೆ ಎನ್ನುವುದು ಅರ್ಥವಾಗಲೇ ಇಲ್ಲ. ಒಂಟಿಯಾಗಿ ಕುಳಿತು ಯೋಚಿಸಿದರು. ‘ನಮ್ಮ ತಾಂಡಾದಲ್ಲಿ ಸರ್ಕಾರಿ ಶಾಲೆ ಏಕಿಲ್ಲ?’ ಎಂಬ ಪ್ರಶ್ನೆ ಎದ್ದಿತು, ಉತ್ತರ ಕಂಡುಕೊಳ್ಳಲು ಯತ್ನಿಸಿದರು. ಶರಣ ಸಿರಸಗಿ ಮೇಲ್ಜಾತಿಯವರೇ ಹೆಚ್ಚಾಗಿರುವ ಊರು. ಅಲ್ಲಿ ಶಾಲೆ ಇತ್ತು. ತಾಂಡಾ ಮಕ್ಕಳು ಅಲ್ಲಿಗೆ ನಡೆದುಕೊಂಡು ಹೋಗಬೇಕಿತ್ತು. ಒಂದು ದಿನ ಬಾಲಕಿಯೊಬ್ಬಳು ತಮ್ಮನೊಂದಿಗೆ ಶಾಲೆಗೆ ಹೋಗುತ್ತಿದ್ದಳು. ಆಗ ವಾಹನವೊಂದು ಆಕೆಯ ತಮ್ಮನಿಗೆ ಡಿಕ್ಕಿ ಹೊಡೆಯಿತು. ಈ ಘಟನೆ ಶೋಭಾ ಅವರನ್ನು ಬಹುವಾಗಿ ಅಲ್ಲಾಡಿಸಿತು. ‘ನಮ್ಮ ತಾಂಡಾದಲ್ಲಿ ಸರ್ಕಾರಿ ಶಾಲೆ ಏಕಿಲ್ಲ?’ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದ ಶೋಭಾ ತಾವೇ ಏಕೆ ಶಾಲೆ ಆರಂಭಿಸಬಾರದು ಎನ್ನುವ ನಿರ್ಧಾರಕ್ಕೆ ಬಂದರು.

ಅದು 1995. ಶೋಭಾ ಪತಿಯ ಜೊತೆ ತಾಂಡಾದ ಮನೆ ಮನೆ ಸುತ್ತಾಡಿದರು. ಮೂರರಿಂದ ಐದು ವರ್ಷದ ಮಕ್ಕಳನ್ನು ಕರೆತಂದು ತಮ್ಮ ಮನೆಯಲ್ಲೇ ‘ಬಾಲವಾಡಿ’ಯನ್ನು ತೆರೆದೇ ಬಿಟ್ಟರು. ಒಂದು ದಿನ ತಾಂಡಾದಲ್ಲಿ ಶಿಕ್ಷಣ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನವಿತ್ತು. ನಾಟಕ ನೋಡುತ್ತಲೇ ಕುದಿಯುತ್ತಿದ್ದ ಶೋಭಾ ತುಂಬಿದ ಸಭೆಯಲ್ಲಿ ಎದ್ದುನಿಂತು ‘ಬಡವರು, ಕೂಲಿ ಮಾಡುವವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಎಲ್ಲಿ ಸಿಗುತ್ತಿದೆ? ನಮ್ಮ ತಾಂಡಾದಲ್ಲಿ ಶಾಲೆಯೇ ಇಲ್ಲ’ ಎಂದು ತಂಡದಲ್ಲಿದ್ದವರನ್ನು ತರಾಟೆಗೆ ತೆಗೆದುಕೊಂಡರು. ಶೋಭಾ ಅವರ ಗಟ್ಟಿಧ್ವನಿ ಮುಟ್ಟಬೇಕಾದವರನ್ನೇ ಮುಟ್ಟಿತು. ತಾಂಡಾದಲ್ಲಿ ‘ಚಿಣ್ಣರ ಅಂಗಳ’ ಆರಂಭವಾಯಿತು. ಒಂಬತ್ತು ವರ್ಷಗಳ ಹಿಂದೆ ತಾಂಡಾಕ್ಕೆ ‘ಸರ್ಕಾರಿ ಶಾಲೆ’ ಮಂಜೂರಾಯಿತು. ಇದರ ಹಿಂದೆ ಶೋಭಾ, ಪತಿ ಸುಭಾಷ್‌ಲಾಲೂ ಜಾಧವ್, ಇವರ ಅಣ್ಣ ಮಾನಸಿಂಗ್‌ ಎಲ್‌.ಜಾಧವ್ ಅವರ ಬೆವರು ಇತ್ತು.

ಆಶಾ ಮೇಡಂ ಬಂದ್ರು
ಉತ್ತರ ಕನ್ನಡ ಜಿಲ್ಲೆ ಕಡತೋಡಾ ಗ್ರಾಮದ ಆಶಾ ವಿ. ಹೆಗಡೆ ತಾಂಡಾ ಶಾಲೆಗೆ 2005ರಲ್ಲಿ ಶಿಕ್ಷಕಿಯಾಗಿ ಬಂದರು. ಕೆಲಸಕ್ಕೆ ಹಾಜರಾಗುವ ದಿನ ಗುಲ್ಬರ್ಗದ ದಕ್ಷಿಣ ವಲಯದ ಬಿಇಒ ಕಚೇರಿಯಲ್ಲಿ ಆತಂಕದಲ್ಲೇ ಕುಳಿತಿದ್ದರು. ಇವರಿಗೆ ಗುಲ್ಬರ್ಗದ ಜನರು ಮಾತನಾಡುವುದು ಅರ್ಥವಾಗುತ್ತಿರಲಿಲ್ಲ. 

‘ನಾನು ಏನೇನೋ ಅಂದುಕೊಂಡು ತಾಂಡಾಕ್ಕೆ ಹೋದೆ. ಅಲ್ಲಿನ ವ್ಯವಸ್ಥೆ ನೋಡಿ ಗಾಬರಿಯಾದೆ. ಶೋಭಾ ಅವರ ಮನೆಯಲ್ಲಿ ಶಾಲೆ ಇತ್ತು. ಮಕ್ಕಳ ಮಧ್ಯೆ ಕೋಳಿ ಹಿಂಡು, ಅವುಗಳ ಹೊಲಸು ವಾಸನೆ ವಾಂತಿ ಬರುವಂತೆ ಮಾಡಿತು. ಕೋಳಿಯೊಂದು ಹಾರಿ ಬಂದು ನನ್ನ ತಲೆ ಮೇಲೆ ಕುಳಿತುಕೊಂಡು ಬಿಟ್ಟಿತು!’– ಇಷ್ಟು ಹೇಳಿ ಆಶಾ ನಗುವರಳಿಸಿದರು. ಉತ್ಸಾಹದ ಚಿಲುಮೆಯಂತಿರುವ ಆಶಾ ‘ನಲಿ ಕಲಿ’ ಶಿಕ್ಷಕಿ. ಹಾಡು, ಅಭಿನಯ, ಪಾಠೋಪಕರಣಗಳ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದರು. ಸ್ವಲ್ಪ ದಿನಗಳಲ್ಲಿ ಆಶಾ ಅವರಿಗೆ ಬಳ್ಳಾರಿಯ ಶೀಲಾ ಸಿ.ದಾಸ್‌ ಜೊತೆಯಾದರು. ಇವರದು ಅಪರೂಪದ ಜೋಡಿ. ಮನೆ, ಶಾಲೆ ಎರಡೂ ಒಂದೇ ಎನ್ನುವಂತೆ ಕೆಲಸ ಮಾಡತೊಡಗಿದರು. ಶೀಲಾ ಭಾನುವಾರವೂ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಇಬ್ಬರೂ ಪಾಠ ಹೇಳುವುದರಲ್ಲಿ ಖುಷಿ ಪಡುತ್ತಿದ್ದರು. ತಾಂಡಾ ಮಕ್ಕಳ ಪಾಲಿಗೆ ಇವರು ತಾಯಿಯಂತಾದರು. ತಾಂಡಾ ಶಾಲೆಗೆ ಮೊದಲ ವರ್ಷ 25 ಮಕ್ಕಳು ದಾಖಲಾಗಿದ್ದವು. ಈಗ 140 ಮಕ್ಕಳು ಇವೆ. ಹೆಣ್ಣು ಮಕ್ಕಳು ಹೆಚ್ಚಾಗಿವೆ. ಶಾಲೆ ಮಕ್ಕಳ ಪಾಲಿಗೆ ಆಕಳಿಕೆ, ತೂಕಡಿಕೆ ಬರಿಸುವ ಸ್ಥಳವಾಗಲಿಲ್ಲ. ಉತ್ಸಾಹದ ತಾಣವಾಯಿತು. ‘ನಮ್‌ ಶಾಲೆ ಮೇಲೆ ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಶೀಲಾ ಮೇಡಂ ವರ್ಗವಾದರು. ನಮ್‌ ಅದೃಷ್ಟ ನೋಡಿ. ಶೀಲಾ ಥರನೇ ಸ್ವಭಾವ ಹೊಂದಿರುವ ಜ್ಯೋತಿ ಮೇಡಂ ಬಂದ್ರು’ ಎಂದು ಶೋಭಾ ಮಧ್ಯ ಬಾಯಿ ಹಾಕಿದರು.

ಮಕ್ಕಳಿಗೆ ‘ಜ್ಯೋತಿ’ಯಾದರು
ಜ್ಯೋತಿ ಯಾದವ್‌ ತಾಂಡಾದಲ್ಲೇ ಮನೆ ಮಾಡಿಕೊಂಡಿದ್ದಾರೆ. ಮಕ್ಕಳಿಗೆ ಸುಲಭವಾಗಿ ಪಾಠವನ್ನು ಅರ್ಥ ಮಾಡಿಸಲು ಪಾಠೋಪಕರಣಗಳನ್ನು ಮಾಡಿದ್ದಾರೆ, ಮಕ್ಕಳಿಂದಲೂ ಮಾಡಿಸಿದ್ದಾರೆ. ಜ್ಯೋತಿ ನಮ್ಮನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋದರು. ಅಲ್ಲಿ ಪಾಠೋಪಕರಣಗಳು, ಬಗೆ ಬಗೆಯ ಮಾದರಿ (ಮಾಡೆಲ್‌) ಗಳು ತುಂಬಿಕೊಂಡಿದ್ದವು! ಈ ಶಾಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಪ್ರಗತಿಯನ್ನು ದಾಖಲಿಸಲು ಪ್ರತ್ಯೇಕ ಕಡತವನ್ನು ಇಡಲಾಗಿದೆ.

ಪ್ರಮೀಲಾ ಬಾಯಿ ಡಿಗ್ಗಾಂವಿ, ಆಶಾ ಹೆಗಡೆ, ಜ್ಯೋತಿ ಯಾದವ್‌ ಜೊತೆಗೆ ಇಂದುಮತಿ ವರ್ಧಮಾನ್‌, ಸುನಂದಾ ದೇಶಪಾಂಡೆ ಇದ್ದಾರೆ. ‘ಮನಸಾಕ್ಷಿ, ಮಕ್ಕಳ ಸಾಕ್ಷಿಗಿಂತ ದೊಡ್ಡ ಸಾಕ್ಷಿ ನಮಗೆ ಬೇಕಾಗಿಲ್ಲ. ನಮಗೆ ಪೋಷಕರೇ ಅಧಿಕಾರಿಗಳು. ಹೀಗಾಗಿ ನಮ್ಮ ಶಾಲೆಗೆ ಯಾರು, ಯಾವಾಗ ಬೇಕಾದರೂ ಬಂದು ವೀಕ್ಷಿಸಬಹುದು’ ಎನ್ನುತ್ತಾರೆ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಆಗಿರುವ ಮುಖ್ಯ ಶಿಕ್ಷಕಿ ಪ್ರಮೀಲಾ ಬಾಯಿ ಡಿಗ್ಗಾಂವಿ.

ಅಂತಿಥ ಕಟ್ಟಡ ಇದಲ್ಲ!
ಶೋಭಾ ಅವರ ಮನೆಯಲ್ಲಿ ಐದು ವರ್ಷ ಶಾಲೆ ನಡೆಯಿತು. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತಲೇ ಹೋಯಿತು. ಜಾಗದ ಸಮಸ್ಯೆ ಎದುರಾಯಿತು. ಶಾಲಾ ಕಟ್ಟಡಕ್ಕೆ ಜಾಗ ಹುಡುಕಾಟ ಶುರುವಾಯಿತು. ಗುಲ್ಬರ್ಗದ ಸೆರಗಿನಲ್ಲಿಯೇ ಇರುವ ತಾಂಡಾ ಸುತ್ತಮುತ್ತ ಭೂಮಿ ಬೆಲೆ ಕೈಸುಡುವಷ್ಟಿದೆ. ಆದ್ದರಿಂದ ಯಾರೂ ಶಾಲೆಗೆ ಭೂಮಿ ಕೊಡಲು ಮುಂದಾಗಲೇ ಇಲ್ಲ. ಶೋಭಾ ಪತಿ ಸುಭಾಸ್‌ ಜಾಧವ್ ಅವರು ಕಚೇರಿಗಳಿಗೆ ಅಲೆದು 100 ಅಡಿ ಉದ್ದ, 30 ಅಡಿ ಅಗಲ ಇರುವ ಜಾಗವನ್ನು ಪಡೆದರು. ಅದು ಹಳ್ಳ ಹರಿಯುವ ಜಾಗ. ಅಲ್ಲಿ ಕಟ್ಟಡ ನಿರ್ಮಿಸುವುದೇ ದೊಡ್ಡ ತಲೆ ನೋವಾಯಿತು. ಏಕೆಂದರೆ ಪ್ರತಿ ವರ್ಷ ಮಳೆಗಾಲದಲ್ಲಿ ಇದೇ ಹಳ್ಳದಲ್ಲಿ ನೀರು ತುಂಬಿ ಹರಿಯುತ್ತಿರುತ್ತದೆ. ಹೀಗಾಗಿ ಸರ್ವ ಶಿಕ್ಷ ಅಭಿಯಾನದವರು ಮನಸ್ಸು ಮಾಡಲಿಲ್ಲ. ಆದರೆ, ಶೋಭಾ ದಂಪತಿ ಶಾಲೆಗೆ ಕಟ್ಟಡ ಕಟ್ಟಿಸಬೇಕು ಎನ್ನುವ ಹಟಕ್ಕೆ ಬಿದ್ದರು.

ಇಷ್ಟು ಹೊತ್ತು ನಮ್ಮ ಜೊತೆ ಕೊಠಡಿಗಳಲ್ಲಿಯೇ ಮಾತನಾಡುತ್ತಿದ್ದ ಶೋಭಾ, ‘ಹೊರಗೆ ಬನ್ನಿ. ನಮ್ಮ ಶಾಲೆ ಕಟ್ಟಡ ಹೇಗಿದೆ ಅಂತ ತೋರಿಸುತ್ತೇವೆ. ಇಂಥ ಕಟ್ಟಡವನ್ನು ನೀವು ಬೇರೆ ಎಲ್ಲೂ ನೋಡಿರಲು ಸಾಧ್ಯವೇ ಇಲ್ಲ’ ಎನ್ನುತ್ತ ಹೊರಗೆ ಕರೆತಂದರು. ಇಡೀ ಕಟ್ಟಡ ಕಾಂಕ್ರೀಟಿನ ಕಂಬಗಳ ಮೇಲೆ ನಿಂತಿದೆ. ‘ಹೀಗೇಕೆ?’ ಎಂದು ಎಸ್‌ಡಿಎಂಸಿ ಅಧ್ಯಕ್ಷರಾಗಿದ್ದ ಸುಭಾಷ್‌ ಜಾಧವ್‌ ಅವರನ್ನು ಕೇಳಿದರೆ,‘ಶಾಲೆಗೆ ಇಷ್ಟು ಜಾಗ ಸಿಕ್ಕಿದ್ದೇ ನಮ್ಮ ಪುಣ್ಯ. ಬೇರೆ ದಾರಿ ಇರಲಿಲ್ಲ. ಹಳ್ಳದಲ್ಲೇ ಕಟ್ಟಡ ನಿರ್ಮಿಸಬೇಕಿತ್ತು. ಕಾಲಂಗಳನ್ನು ಹಾಕಿ ಎತ್ತರಕ್ಕೆ ಕಟ್ಟಡ ಕಟ್ಟಿರುವುದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುತ್ತದೆ’ ಎಂದು ವಿವರಿಸಿದರು. ‘ಈ ಕಟ್ಟಡದ ಜಾಗ ಎದುರಿಗೆ ಇರುವ ಮುಳ್ಳುಕಂಟಿ, ಹಳ್ಳದಂತೆಯೇ ಇತ್ತು. ಇಲ್ಲಿ ತಾಂಡಾ ಜನರು ಮಲ ವಿಸರ್ಜನೆಗೆ ಬರುತ್ತಿದ್ದರು. ಶೋಭಾ ದಂಪತಿ ಹಾಗೂ ತಾಂಡಾದ ಕೆಲವರು ಕೈಯಿಂದ ರಕ್ತ ಸೋರುವುದನ್ನು ಲೆಕ್ಕಿಸದೇ ಸ್ವಚ್ಛ ಮಾಡಿದರು. ಕಟ್ಟಡ ನಿರ್ಮಾಣಕ್ಕಾಗಿ ಪಣ ತೊಟ್ಟರು. ಅವರಿಂದಾಗಿಯೇ ಇಲ್ಲೊಂದು ಮಾದರಿ ಶಾಲೆ ಉಸಿರಾಡುತ್ತಿದೆ’ ಎಂದು ಶಿಕ್ಷಕಿಯೊಬ್ಬರು ಭಾವುಕರಾದರು.

ಶರಣ ಸಿರಸಗಿ ತಾಂಡಾದ ಈ ಶಾಲೆ ಕೇವಲ ಆರು ಕೊಠಡಿಗಳ ಕಟ್ಟಡವಾಗಿದ್ದರೆ ನಾವು ಅಲ್ಲಿ ಆರು ಗಂಟೆ ಇರಲು ಸಾಧ್ಯವಾಗುತ್ತಲೇ ಇರಲಿಲ್ಲ. ಅಲ್ಲಿ ಕನಸಿತ್ತು, ಬೆವರಿತ್ತು, ಬದ್ಧತೆ ಇತ್ತು, ಮಮತೆ ಇತ್ತು, ಉತ್ಸಾಹವಿತ್ತು, ಮುಗ್ಧ ಮಕ್ಕಳ ನಗುವಿತ್ತು. ಇವೆಲ್ಲವುಗಳಿಂದ ನಮ್ಮ ಮನ ತುಂಬಿತ್ತು. ಅಲ್ಲಿಂದ ಹಿಂದಿರುಗುವ ಮುನ್ನ ಕಂಬಗಳ ಮೇಲೆ ನಿಂತಿರುವ ಕಟ್ಟಡವನ್ನು ಮತ್ತೊಮ್ಮೆ ನೋಡಿದರೆ ಒಂದೊಂದು ಕಂಬವೂ ಒಬ್ಬೊಬ್ಬ ಶಿಕ್ಷಕಿ ಎನಿಸತೊಡಗಿತು. 

ಉಲ್ಟಾಪಲ್ಟಾ ಕಥೆ
ತಾಂಡಾದಲ್ಲಿ ಲಂಬಾಣಿಗಳು ಹೆಚ್ಚಾಗಿದ್ದಾರೆ. ಇವರ ನಡುವೆ ಬೇಡರು, ಇತರರು ಇದ್ದಾರೆ. ಈ ವರ್ಗದ ಮಕ್ಕಳು ಹೆಚ್ಚಾಗಿ ಬರುತ್ತಿವೆ. ಆದರೆ ಮೇಲ್ಜಾತಿಯವರು ಅಧಿಕವಾಗಿರುವ ಶರಣ ಸಿರಸಗಿಯಿಂದಲೂ 25 ಮಕ್ಕಳು ಬರುತ್ತಿವೆ.

‘ಪ್ರಮೀಳಾ’ ಶಾಲೆ/ಅಂಗನವಾಡಿ!
ಈ ಶಾಲೆಯಲ್ಲಿ ಐದು ಮಂದಿ ಶಿಕ್ಷಕಿಯರು, ಇಬ್ಬರು ಬಿಸಿಯೂಟದ ಸಿಬ್ಬಂದಿ ಇದ್ದಾರೆ. ಜೊತೆಯಲ್ಲೇ ಇರುವ ಅಂಗನವಾಡಿ ಕೇಂದ್ರದಲ್ಲೂ ಮಹಿಳೆಯರೇ ಇದ್ದಾರೆ. ಮುಖ್ಯ ಶಿಕ್ಷಕಿಯಿಂದ ಅಡುಗೆ ಸಹಾಯಕಿ ತನಕ ಎಲ್ಲರೂ ಮಹಿಳೆಯರೇ! ‘ಎರಡು ಜಡೆ ಒಟ್ಟಿಗೆ ಸೇರಿದರೆ ಜಗಳ ಖಾತ್ರಿ ಎನ್ನುವ ಮಾತಿದೆ. ಆದರೆ ಇಲ್ಲಿ ಎಲ್ಲರೂ ಮಹಿಳೆಯರೇ. ಆದರೆ ಒಮ್ಮೆಯೂ ಒಬ್ಬರ ಮುಖ ಮತ್ತೊಬ್ಬರು ನೋಡದಂತಹ ಘಟನೆ ನಡೆದಿದ್ದೇ ಇಲ್ಲ’ ಎಂದು ಆಶಾ ಹೇಳಿದರು. ಪಕ್ಕದಲ್ಲೇ ಇದ್ದ ಜ್ಯೋತಿ ತಮ್ಮನ್ನು ‘ನವದುರ್ಗೆ’ಯರು ಎಂದು ಕರೆದುಕೊಂಡರು.

ಹೋರಾಟ ಅಂದ್ರೆ ಶೋಭಾ
ಶೋಭಾ ಅವರದು ದೊಡ್ಡ ಗಂಟಲು. ಎದುರಿಗೆ ಯಾರೇ ಕುಳಿತಿದ್ದರೂ ಮುಲಾಜಿಲ್ಲದೆ ಮಾತನಾಡುತ್ತಾರೆ. ತಾಂಡಾಕ್ಕೆ ಶಾಲೆಯನ್ನು ತಂದಿರುವ ಇವರು ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಈ ನೇಮಕಾತಿ ಸಂದರ್ಭದಲ್ಲಿ ರಾಜಕಾರಣಿಯೊಬ್ಬರು ಪ್ರಭಾವ ಬೀರಿ ಬೇರೆ ಗ್ರಾಮದವರನ್ನು ನೇಮಕ ಮಾಡಿದರು. ಅದರ ವಿರುದ್ಧ ಶೋಭಾ ಸಿಡಿದೆದ್ದರು. ಕೋರ್ಟ್ ಮೆಟ್ಟಿಲೇರಿದರು. ತಾಂಡಾದ ಜನರು ಶೋಭಾ ಪರವಾಗಿ ನಿಂತರು. ಹೋರಾಟದ ನಂತರ ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡರು. ಈಗ ಅಂಗನವಾಡಿಯೂ ಶಾಲಾ ಕಟ್ಟಡದಲ್ಲೇ ಇದೆ. 36 ವರ್ಷದ ಶೋಭಾ ಈಗ ಡಿಗ್ರಿ ಕಲಿಯಲು ಹೊರಟಿದ್ದಾರೆ. ಶೋಭಾಗೆ ಓದುವ ಹಂಬಲ. ಆದ್ದರಿಂದ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದರು. ನಂತರ ಆಶಾ ಮೇಡಂ ಅವರಿಂದ ಪಾಠ ಹೇಳಿಸಿಕೊಂಡು ಪಿಯುಸಿ ಪಾಸ್‌ ಮಾಡಿದ್ದಾರೆ!‌

ಮೂರು ಬೇಡಿಕೆ ಅಷ್ಟೆ
ಇದು ಮಾದರಿ ಶಾಲೆ ಎಂದು ಹೆಸರಾಗಿದೆ. ಅಧಿಕಾರಿಗಳು, ಡಯಟ್‌ನವರು, ವಿದೇಶಿಯರು ಸೇರಿದಂತೆ ಎಲ್ಲರೂ ಇದೇ ಶಾಲೆಗೆ ಭೇಟಿ ಕೊಡುತ್ತಾರೆ. ಎಲ್ಲರೂ ಶಾಲೆ ಒಳ–ಹೊರಗನ್ನು ಕಂಡು ಪ್ರಶಂಸಿಸಿದ್ದಾರೆ. ಆದರೆ ಈ ಶಾಲೆಗೆ ಆಟದ ಮೈದಾನವೇ ಇಲ್ಲ! ಮಕ್ಕಳು ಪ್ರಾರ್ಥನೆಯನ್ನು ಕಾರಿಡಾರ್‌ನಲ್ಲಿಯೇ ಮಾಡುತ್ತಾರೆ. ಶಾಲಾ ಕಟ್ಟಡದ ಮೇಲೆ ಪ್ಯಾರಫಿಟ್‌ ವಾಲ್ ಇಲ್ಲ. ಮಕ್ಕಳು ಶಿಕ್ಷಕಿಯರ ಕಣ್ಣು ತಪ್ಪಿಸಿ ಆಟವಾಡಲು ಮೇಲೆ ಹೋದರೆ ಅಪಾಯ ಗ್ಯಾರಂಟಿ. ಹೀಗಾಗಿ ಅಲ್ಲೊಂದು ಪ್ಯಾರಫಿಟ್‌ ವಾಲ್ ಬೇಕು ಹಾಗೂ ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆಯಾಗಬೇಕು ಎನ್ನುವುದು ಸ್ಥಳೀಯರ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT