ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದಲ್ಲಿ ಚಂದ್ರಬಿಂಬ

Last Updated 21 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಹತ್ತಾರು ಕನಸುಗಳನ್ನು ಹರಡಿಕೊಂಡು ಕುಳಿತಿರುವ ಈ ಯುವಕ, ಮೊದಲ ಪ್ರಯತ್ನದಲ್ಲೇ ವಿಶಿಷ್ಟ ಹೆಜ್ಜೆ ಮೂಡಿಸಿದ್ದಾನೆ. ‘ಸಿನಿಮಾ ಅಂದರೆ ಬರೀ ಮನರಂಜನೆಯಷ್ಟೇ ಅಲ್ಲ. ಅದು ಪ್ರೇಕ್ಷಕನಲ್ಲಿ ಭಾವನೆ ಸೃಷ್ಟಿಸಿ, ಅಚ್ಚಳಿಯದಂತೆ ಅಲ್ಲೇ ಉಳಿಸುವ ಮಾಧ್ಯಮ’ ಎಂದು ಬಲವಾಗಿ ನಂಬಿರುವವರು ಚಂದ್ರಕಾಂತ. ಅವರ ನಿರ್ದೇಶನದ ‘143’ ಚಿತ್ರವು ಪ್ರೇಕ್ಷಕರಿಗಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಪಾಲಿಗೆ ವಿಸ್ಮಯದ ಪ್ರಯೋಗವೂ ಹೌದು.

ಒಂದು ದಿನದ ಘಟನೆಗಳನ್ನು ಎರಡೇ ಪಾತ್ರಗಳೊಂದಿಗೆ– ಅದೂ ಒಂದೇ ಸ್ಥಳದಲ್ಲಿ– ಕಟ್ಟಿಕೊಡುವ ಸಿನಿಮಾ ಬಹು ದೊಡ್ಡ ಸವಾಲು. ಇಂಥದೊಂದು ವಿಭಿನ್ನ ಚಿತ್ರದೊಂದಿಗೆ ತಮ್ಮ ಸಿನಿಮಾ ಪಯಣ ಆರಂಭಿಸಲು ಚಂದ್ರಕಾಂತ ನಿರ್ಧರಿಸಿದ್ದರು. ಕಮರ್ಷಿಯಲ್ ಸ್ವರೂಪದ ಚಿತ್ರಕ್ಕಿಂತ ಬೇರೆಯೇ ಆದ ಈ ಚಿತ್ರಕಥೆಗೆ ಯಾವ ನಿರ್ಮಾಪಕರೂ ಹಣ ಹಾಕುವುದಿಲ್ಲ ಎಂಬುದು ಅರಿವಾಗಿ, ತಾವೇ ನಿರ್ಮಿಸಿ, ನಿರ್ದೇಶಿಸಿ ತೆರೆಗೆ ತಂದಿದ್ದಾರೆ. ‘ಸಿನಿಮಾ ನೋಡಿದ ಬಳಿಕ ಇದು ಹೀಗಿರಬೇಕಿತ್ತು; ಹೀಗಾಗಬೇಕಿತ್ತು ಎಂದೆಲ್ಲ ಪ್ರೇಕ್ಷಕ ವಿಮರ್ಶೆ ಮಾಡುತ್ತಾನೆ. ನಾನು ಚಿತ್ರ ಮಾಡುವ ಮುನ್ನ ಪ್ರೇಕ್ಷಕನಾಗಿಯೂ ಯೋಚಿಸಿದೆ. ಸಿನಿಮಾ ಅಂದರೆ ದೃಶ್ಯ–ಕಥೆ ಸತತ ಓಡುತ್ತಲೇ ಇರಬೇಕು. ಬೇಕಿಲ್ಲದೇ ಇರುವುದನ್ನು ಹಾಕಲೇಬಾರದು ಎಂಬ ಮುನ್ನೆಚ್ಚರಿಕೆ ನನ್ನಲ್ಲಿತ್ತು. ಹೀಗಾಗಿ ನೋಡುಗನಿಗೆ ಬೇಸರವಾಗದಂತೆ ಸಿನಿಮಾ ಮಾಡಿದ್ದೇನೆ’ ಎನ್ನುತ್ತಾರೆ ಚಂದ್ರಕಾಂತ.

ಹೊಸ ಪ್ರಯೋಗ
ಎರಡೇ ಪಾತ್ರಗಳು ನಡೆಸುವ ಸಂಭಾಷಣೆ ಆಧರಿಸಿದ ಈ ಚಿತ್ರ ಹೊಸ ಪ್ರಯೋಗಗಳ ಸಾಲಿಗೆ ಸೇರುವಂಥದು. ಆದರೆ ಇದನ್ನು ಮಾಡುವ ಮುನ್ನ ಚಂದ್ರಕಾಂತ ಅವರಲ್ಲಿ ಬೇರೆ ಯೋಚನೆ ಇತ್ತಂತೆ. ಅದು, ಬರೀ ಪಾತ್ರಗಳ ನೆರಳುಗಳನ್ನು ಇಟ್ಟುಕೊಂಡೇ ಚಿತ್ರ ಮಾಡುವುದು! ಬಜೆಟ್ ಹೆಚ್ಚಾಗುವ ಸಾಧ್ಯತೆಯಿಂದಾಗಿ ಅದನ್ನು ಪಕ್ಕಕ್ಕಿಟ್ಟರು. ಬಳಿಕ ಬಂದ ಯೋಚನೆ– ಒಂದೇ ಪಾತ್ರವನ್ನು ಇಟ್ಟುಕೊಂಡು ಮಾಡುವ ಸಿನಿಮಾ. ಅದು ಬೇಸರ ತರಿಸಬಹುದು ಅನಿಸಿತು. ಕೊನೆಗೆ ಎರಡು ಪಾತ್ರಗಳ ಈ ಚಿತ್ರ ಸಿದ್ಧಗೊಂಡಿತು. ಆರಂಭದ 20 ನಿಮಿಷ ಮಾತಿಲ್ಲದೇ ಚಿತ್ರ ಸಾಗುವುದು, ಅರ್ಧ ಭಾಗದ ತನಕ ಮುಖಪರದೆ ಹಾಕಿಕೊಂಡ ನಾಯಕಿ ಕಣ್ಣುಗಳಲ್ಲಿ ಮಾತಾಡುವುದು, ಆಕೆಯ ಹಿಂದಿಮಿಶ್ರಿತ ಕನ್ನಡ ಭಾಷೆ, ನಾಯಕನ ಒರಟು ಚಹರೆ, ಗ್ಯಾರೇಜ್‌ನಲ್ಲಿ ಆತ ಕ್ರಿಯಾಶೀಲತೆಯಿಂದ ನಿರ್ಮಿಸಿಕೊಂಡ ಉಪಕರಣಗಳು... ಹೀಗೆ ಒಂದೊಂದು ಅಂಶವೂ ಪ್ರೇಕ್ಷಕನಿಗೆ ಹೊಸತನದ ಅನುಭವ ನೀಡುತ್ತವೆ.

‘ಮೊದಲಿಗೆ ನಾಯಕ ಕಾಣಿಸಿಕೊಳ್ಳುವಂತೆ ಮಾಡುವ ಅಲಾರ್ಮ್ ವಿಧಾನ, ಜಿರಲೆ ಅಂತ್ಯಸಂಸ್ಕಾರ, ಕೋಡುಬಳೆ ಮದುವೆಯಂಥ ದೃಶ್ಯಗಳೂ ಪ್ರೇಕ್ಷಕನಿಗೆ ಇಷ್ಟವಾಗಿವೆ. ಪ್ಲಾಸ್ಟಿಕ್ ಬಾಟಲಿ ಬಳಸಿ ಮಾಡಿದ ದೋಣಿ ಹಾಡಿಗೆ ಖರ್ಚಾಗಿರುವುದು ಬರೀ ಎಂಟು ಸಾವಿರ ರೂಪಾಯಿ. ಆದರೆ ಅದು ಅದ್ದೂರಿಯೆಂಬಂತೆ ಕಾಣಿಸುವುದರ ಹಿಂದೆ ಕ್ಯಾಮೆರಾಮನ್ ರಾಜಶೇಖರ್ ಚಮತ್ಕಾರವಿದೆ’ ಎನ್ನುತ್ತಾರೆ.

ಚಿತ್ರ ನೋಡಿದ ಕಲಾವಿದರು, ತಂತ್ರಜ್ಞರು ಚಂದ್ರಕಾಂತ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ. ಇಂಥ ಹಲವು ಹೊಸ ಪ್ರಯೋಗಗಳು ಅವರ ಮನದಲ್ಲಿವೆ. ಮೊದಲ ಕನಸು ನನಸಾಗಿರುವುದು ಅವರಲ್ಲಿ ಖುಷಿಯನ್ನೇನೋ ಮೂಡಿಸಿದೆ. ಆದರೆ ಚಿತ್ರ ಪ್ರದರ್ಶನಕ್ಕೆ ಆಗುತ್ತಿರುವ ತೊಂದರೆಗಳು ಆತಂಕ ತಂದೊಡ್ಡಿವೆ. ‘ಕನಸು ಯಾವತ್ತೂ ಕನಸಾಗಿ ಉಳಿಯಬಾರದು. ನಾನು ಕಂಡ ಕನಸನ್ನು ನನಸು ಮಾಡಲು ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಹೊಸ ಅನುಭವ ಕೊಡುವಂತೆ ಈ ಸಿನಿಮಾ ನಿರ್ಮಿಸಿದ್ದೇನೆ. ಸೀಮಿತ ಬಜೆಟ್‌ನ ಕಾರಣದಿಂದಾಗಿ ಹೆಚ್ಚು ಪ್ರಚಾರ ಮಾಡಲು ಆಗಲಿಲ್ಲ. ಆದರೆ ಮಾಧ್ಯಮಗಳು ಹಾಗೂ ಪ್ರೇಕ್ಷಕ ವರ್ಗದ ಶ್ಲಾಘನೆ ನಮ್ಮ ಚಿತ್ರತಂಡಕ್ಕೆ ಖುಷಿ ಕೊಟ್ಟಿದೆ. ಇದೆಲ್ಲದರ ಮಧ್ಯೆ, ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಬೇಕೆಂದರೆ ಚಿತ್ರಮಂದಿರಗಳೇ ಸಿಗುತ್ತಿಲ್ಲ ಎಂಬ ನೋವು ಕಾಡುತ್ತಿದೆ’ ಎಂಬುದು ಚಂದ್ರಕಾಂತ ಅಳಲು.

ಚಿತ್ರವೊಂದಕ್ಕೆ ಇರುವ ಸಿದ್ಧಸೂತ್ರಗಳನ್ನು ಬಿಟ್ಟು ಚಿತ್ರ ನಿರ್ಮಿಸುವ ಇರಾದೆ ಅವರದು. ಇಂಥ ಕಥೆಗಳು ಅವರಲ್ಲಿ ಸಾಕಷ್ಟು ಇವೆಯಂತೆ. ‘ನನ್ನ ಕಲ್ಪನೆ ಏನೆಂಬುದನ್ನು ತೋರಿಸಲು ಇಂಥ ಕಥಾವಸ್ತುವಿನ ಮೊದಲ ಸಿನಿಮಾವನ್ನು ತಂದಿದ್ದೇನೆ. ಚಿತ್ರರಂಗದ ಹಲವರು ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಯತ್ನ ಎಲ್ಲಿಗೆ ಕರೆದೊಯ್ಯುತ್ತದೋ ಗೊತ್ತಿಲ್ಲ... ನೋಡಬೇಕು’ ಎನ್ನುತ್ತಾರೆ.

ಚಿತ್ರದುರ್ಗದ ಜೋಗಿಮಟ್ಟಿಯ ಚಂದ್ರಕಾಂತ ಎಂಬಿಎ ಪದವೀಧರ. ವನ್ಯಜೀವಿ ಛಾಯಾಗ್ರಹಣದತ್ತ ಅದಮ್ಯ ಆಸಕ್ತಿ. ಸಿನಿಮಾ ಬಗ್ಗೆ ಯಾವುದೇ ತರಬೇತಿಯನ್ನು ಅವರು ಪಡೆದುಕೊಂಡಿಲ್ಲ. ‘ದೃಶ್ಯ ಅಥವಾ ಚಿತ್ರವೊಂದನ್ನು ಎಷ್ಟು ಸುಂದರವಾಗಿ ಫ್ರೇಮಿಂಗ್ ಮಾಡಬಹುದು ಎಂಬುದು ನನಗೆ ಚೆನ್ನಾಗಿ ಗೊತ್ತು. ಸಿನಿಮಾಕ್ಕೂ ಬೇಕಿರುವುದು ಅದೇ. ಉಳಿದಂತೆ ಪ್ರೇಕ್ಷಕನಿಗೆ ಹೊಸ ಅನುಭವ ಕೊಡುವ, ಆತನಲ್ಲಿ ಚಿಂತನೆ–ಭಾವನೆಗಳನ್ನು ಸೃಷ್ಟಿಸುವ ಕಥೆ, ಅದಕ್ಕೆ ಪೂರಕವಾಗಿ ಸಹಜ ಸಂಭಾಷಣೆ ಇರಬೇಕು. ಎಲ್ಲೂ ಬೇಸರವೆನಿಸದಂತೆ ಸಿನಿಮಾ ವೇಗವಾಗಿ ಓಡಿ ಓಡಿ, ದಿಢೀರೆಂದು ಮುಕ್ತಾಯ ಕಂಡುಬಿಡಬೇಕು. ‘143’ ಸಿನಿಮಾ ಗಮನ ಸೆಳೆಯಲು ಇವೆಲ್ಲ ನೆರವಾಗಿವೆ’ ಎಂಬ ಅಭಿಪ್ರಾಯ ಅವರದು.

ಸಿನಿಮಾ ಅಂದರೆ ಜನರನ್ನು ಚಿಂತನೆಗೆ ಪ್ರೇರೇಪಿಸುವ ಒಂದು ಮಾರ್ಗ ಎಂದು ನಂಬಿರುವ ಚಂದ್ರಕಾಂತ, ಈವರೆಗೆ ನೂರಾರು ಸಿನಿಮಾಗಳನ್ನು ವೀಕ್ಷಿಸಿದ್ದಾರೆ. ದೇಶ, ಭಾಷೆ, ಕಥೆ ಏನೇ ಇರಲಿ... ಎಲ್ಲ ಬಗೆಯ ಸಿನಿಮಾಗಳನ್ನೂ ಅವರು ನೋಡುತ್ತಾರೆ. ‘ನಾನು ಚಿತ್ರ ನೋಡುವುದು ಬೇರೆ ಥರ. ಹೇಗೆ ಗೊತ್ತೇ? ಧ್ವನಿಯನ್ನು ಮ್ಯೂಟ್ ಮಾಡಿ! ಇದರಿಂದ ಸಿನಿಮಾ ಮೇಕಿಂಗ್ ಹೇಗೆ ಆಗಿದೆ ಎಂಬ ರಹಸ್ಯ ತಿಳಿಯುತ್ತದೆ!’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT