ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದ ಹೊಸ ‘ವಿದ್ಯಾರ್ಥಿ’

ಪಂಚರಂಗಿ
Last Updated 29 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹಾಗೇ ಗಾಂಧಿನಗರವನ್ನು ಒಮ್ಮೆ ಸುತ್ತಿದರೆ ಸಿನಿಮಾ ಕ್ಷೇತ್ರಕ್ಕೆ ಜಿಗಿಯಲು ಅಣಿಯಾಗಿ ನಿಂತ ಅನೇಕರು ಕಣ್ಣಿಗೆ ಬೀಳುತ್ತಾರೆ. ಅವರಲ್ಲಿ ಕೆಲವರು ಬಣ್ಣ ಹಚ್ಚುವ ಆಸೆಯಿಂದ ನಿರ್ದೇಶಕರ ಕಚೇರಿ ಬಾಗಿಲು ತಟ್ಟಿದರೆ ಕೆಲವರು ಕಥೆ ಹಿಡಿದು ನಿರ್ಮಾಪಕರ ಮನೆ ಗೇಟು ಕಾದವರೂ ಇದ್ದಾರೆ. ಇನ್ನೂ ಕೆಲವರಿರುತ್ತಾರೆ, ಅವರಿಗೆ ಯಾವುದೇ ಕೆಲಸವಾದರೂ ಪರವಾಗಿಲ್ಲ, ಒಟ್ಟಿನಲ್ಲಿ ಸಿನಿಮಾ ಎಂಬ ಕ್ರಿಯಾಶೀಲ ಮತ್ತು ಕಲ್ಪನಾ ಜಗತ್ತಿನಲ್ಲಿ ವಿಹರಿಸುವುದೇ ಮುಖ್ಯವಾಗಿರುತ್ತದೆ.  ಈ ಗುಂಪಿಗೆ ಸೇರುವವರು ‘ಸ್ಟೂಡೆಂಟ್’ ಚಿತ್ರದ ನಿರ್ದೇಶಕ ಸಂತೋಷ್‌ ಕುಮಾರ್.

ಶಿವಮೊಗ್ಗದವರಾದ ಸಂತೋಷ್‌ ನಟನೆಯಲ್ಲಿ ಆಸಕ್ತಿ ಹೊಂದಿದ್ದರೂ ಓದಿದ್ದು ‘ಹೋಟೆಲ್ ಮ್ಯಾನೇಜ್‌ಮೆಂಟ್’. ಅದಾದ ನಂತರ ಮುಂಬೈನ ‘ಕಿಶೋರ್ ನಮಿತ್ ಫಿಲ್ಮ್ ಇನ್ಸ್‌ಟಿಟ್ಯೂಟ್’ನಲ್ಲಿ ನಟನೆಯ ತರಬೇತಿ ಪಡೆದರು. ಅಲ್ಲಿಂದ ವಾಪಸಾದ ಅವರು ನಟನಾಗಿ ಗಾಂಧಿನಗರ ಪ್ರವೇಶಿಸಿದವರು. ‘ಸಿರಿವಂತ’, ‘ಹೋಗಿ ಬಾ ಮಗಳೆ’ ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

ಈ ಚಿಕ್ಕಪುಟ್ಟ ಪಾತ್ರಗಳಿಂದ ತೃಪ್ತರಾಗದೆ ಇನ್ನೂ ಒಳ್ಳೆಯ ಪಾತ್ರಗಳಿಗಾಗಿ ಕಾಯುತ್ತಿದ್ದ ಅವರಿಗೆ ಅಂಥ ಅವಕಾಶಗಳೇನೂ ಸಿಗಲಿಲ್ಲ. ಮತ್ತೆ ಶಿವಮೊಗ್ಗಕ್ಕೆ ತೆರಳಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಲೇ ಎಂಬಿಎ ಪೂರೈಸಿದರು. ಅದಕ್ಕೆ ಮತ್ತೊಂದು ಕಾರಣವೆಂದರೆ ಮನೆಯ ಜವಾಬ್ದಾರಿ ಹೊರುವ ಹೊಣೆಯೂ ಅವರ ಬೆನ್ನಿಗಿತ್ತು.

ಎಂಬಿಎ ಮುಗಿಸಿದ ನಂತರ ದಯಾಳ್ ಪದ್ಮನಾಭನ್ ಅವರ ‘ಹರಿಕಥೆ’ ಚಿತ್ರಕ್ಕೆ ಸಹಾಯಕನಾಗಿ ದುಡಿದ ಸಂತೋಷ್, ತಾನೇ ಒಂದು ಸಿನಿಮಾ ಮಾಡುವ ಆಸೆ ಹೊತ್ತು ಹಲವು ನಿರ್ಮಾಪಕರ ಮನೆಗೆ ಅಡ್ಡಾಡಿದ್ದಾರೆ. ಎಲ್ಲರೂ, ‘ಎಷ್ಟು ಸಿನಿಮಾ ಮಾಡಿದ್ದೀಯಾ, ನಿನ್ನ ಅನುಭವ ಏನು ಎಂದು ಕೇಳಿದರೇ ಹೊರತು ಯಾರೂ ನನ್ನ ಕೈಲಿದ್ದ ಕಥೆಯನ್ನು ಕಣ್ಣೆತ್ತಿ ನೋಡುವ ಉತ್ಸಾಹ ತೋರಲಿಲ್ಲ. ಸುಮಾರು ಒಂದು ವರ್ಷ ನಿರ್ಮಾಪಕರಿಗಾಗಿ ಹುಡುಕಾಡಿದ್ದೇನೆ’ ಎನ್ನುತ್ತಾರೆ ಸಂತೋಷ್.

‘ಸ್ಟೂಡೆಂಟ್ಸ್’ಗೆ ಜನ ಧನ
‘ಲೂಸಿಯಾ’ ಚಿತ್ರಕ್ಕೆ ಪವನ್ ಕುಮಾರ್ ಜನ ಧನ (ಕ್ರೌಡ್ ಫಂಡಿಂಗ್) ಪೇರಿಸಿದ್ದರು. ಸಂತೋಷ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ. ಅಲೆದಾಡಿರೆ ಬರೀ ಕಾಲ ಹರಣವೇ ಎಂದುಕೊಂಡ ಅವರು ‘ಫ್ಯಾಷನ್ ಮೂವಿ ಮೇಕರ್ಸ್’ ಎಂಬ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಮೂವರು ಸ್ನೇಹಿತರ ಜೊತೆಗೂಡಿ ಒಂದಷ್ಟು ಹಣ ಪೇರಿಸಿ ಕ್ಯಾಮೆರಾ ಖರೀದಿಸಿ, ಚಿತ್ರೀಕರಣಕ್ಕೂ ತೊಡಗಿಕೊಂಡಿದ್ದಾರೆ. ಅದರ ಹೊರತಾಗಿ ಪ್ರೇಕ್ಷಕರಿಂದ ಹಣ ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ. ಇವರ ನಿರೀಕ್ಷೆಗೆ ಒಂದೆರಡು ಖಾಸಗಿ ಸಂಸ್ಥೆಗಳು ಸ್ಪಂದಿಸಿವೆ.

ಅದರಲ್ಲಿ ಕೆಲವರು ಉಡುಗೆಗಳಿಗೆ, ಕೆಲವರು ಲೊಕೇಶನ್‌ಗೆ, ಮತ್ತೆ ಕೆಲವರು ಹಾಡುಗಳಿಗೆ ಹಣ ಒದಗಿಸಲು ಮುಂದಾಗಿವೆ.
ಅವರ ಸಿನಿ ಮೋಹ ಯಾವ ರೀತಿಯದ್ದೆಂದರೆ, ನಟನಾಗಲಿ, ಕ್ಯಾಮೆರಾ ಸಹಾಯಕನಾಗಲಿ ಅಥವಾ ಕೊನೆಗೆ ಲೈಟ್‌ಬಾಯ್ ಆಗಿದ್ದರೂ ಪರವಾಗಿಲ್ಲ. ಒಟ್ಟಿನಲ್ಲಿ ಒಂದೊಳ್ಳೆ ಸಿನಿಮಾದ ಭಾಗವಾದರೆ ಅಷ್ಟೇ ಸಾಕು ಎಂಬುದು. ತನ್ನ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತದೆ, ಶತದಿನೋತ್ಸವ ಆಚರಿಸುತ್ತದೆ ಎಂಬೆಲ್ಲ ನಿರೀಕ್ಷೆಗಳು ಅವರಿಗಿಲ್ಲ. ಆದರೆ ಜನ ಮೆಚ್ಚುವಂಥ ಚಿತ್ರ ಮಾಡಿ ತೆರೆಕಾಣಿಸಬೇಕು ಎಂಬುದಷ್ಟೇ ಅವರ ಆಶಯ. ಉಳಿದವು ಪ್ರೇಕ್ಷಕರಿಗೆ ಬಿಟ್ಟಿದ್ದು ಎನ್ನುತ್ತಾರೆ.

ಸ್ಟೂಡೆಂಟ್ಸ್ ಲೈಫ್ ಈಸ್ ಗೋಲ್ಡನ್ ಲೈಫ್
ಪ್ರೇಮ ವೈಫಲ್ಯದಿಂದಾಗಿ ಜೀವನದಲ್ಲಿ ಜಿಗುಪ್ಸೆ ಬಂದ ಮೂವರು ಯುವಕರು ಕಾಲೇಜು ಜೀವನಕ್ಕೆ ಮರಳಿ ಬಾಳಿನಲ್ಲಿ ಖುಷಿ, ನೆಮ್ಮದಿ ಹೊಂದುವುದನ್ನೇ ಸಿನಿಮಾ ಮೂಲಕ ಹೇಳುತ್ತಿದ್ದಾರೆ ಸಂತೋಷ್. ಮೊದಲ ಬಾರಿ ನಿರ್ದೇಶನಕ್ಕೆ ಇಳಿದ ಅವರು ಕನ್ನಡ ಚಿತ್ರಕ್ಕೆ ಇಂಗ್ಲಿಷ್ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ಕೇಳಿದರೆ, ಕಾಲೇಜಿನ ಹಿನ್ನೆಲೆಯೇ ಮುಖ್ಯವಾದ್ದರಿಂದ ಕನ್ನಡದ ‘ವಿದ್ಯಾರ್ಥಿಗಳು’ ಶಬ್ದಕ್ಕಿಂತ ಇಂಗ್ಲಿಷ್‌ನ ‘ಸ್ಟೂಡೆಂಟ್ಸ್’ ಪದ ಹೆಚ್ಚು ಕ್ಯಾಚಿ ಆಗಿದೆ ಎಂಬ ಸಮರ್ಥನೆ ನೀಡುತ್ತಾರೆ. ಆ ಮೂಲಕ ‘ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎಂದು ಸಾರಲು ಹೊರಟಿದ್ದಾರೆ.

ಹೊಸಬರಾದ ಎಡ್ವರ್ಡ್ ಷಾ ಸಂಗೀತ ನೀಡಲಿದ್ದಾರೆ. ಒಟ್ಟು ಐದು ಹಾಡುಗಳಿವೆ. ಇದುವರೆಗೆ ಒಂದು ಹಾಡೂ ಸೇರಿ ಬೆಂಗಳೂರಿನ ಸುತ್ತಮುತ್ತ ಹತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದ್ದು ಇನ್ನೂ ಹದಿನೆಂಟು ದಿನಗಳ ಚಿತ್ರೀಕರಣ ಬಾಕಿ ಇದೆ. ‘ಡೆಡ್ಲಿ ಸೋಮ’, ‘ಕೇರ್ ಆಫ್ ಫುಟ್‌ಪಾಥ್’ ಚಿತ್ರಗಳನ್ನು ಸೆರೆಹಿಡಿದ ಮ್ಯಾಥ್ಯೂ ರಾಜನ್ ಈ ಚಿತ್ರದ ಛಾಯಾಗ್ರಾಹಕ. ಸಂತೋಷ್ ಸ್ನೇಹಿತ ಹೇಮಂತ್ ಸಂಭಾಷಣೆಗಳನ್ನು ಬರೆದಿದ್ದಾರೆ. ದಿಲೀಪ್ ಪೈ ಮತ್ತು ನಕುಲ್ ಮಾತ್ರ ನಟನೆಯ ಅನುಭವವಿರುವವರು. ಉಳಿದ ಬಹುತೇಕ ಕಲಾವಿದರನ್ನು ಆಡಿಷನ್ ಮೂಲಕ ಆಯ್ದುಕೊಳ್ಳಲಾಗಿದೆ. ನಿರ್ದೇಶಕರ ಎಣಿಕೆಯಂತೆ ಎಲ್ಲವೂ ನಡೆದರೆ ಆಗಸ್ಟ್‌ನಲ್ಲಿ ಚಿತ್ರ ತೆರೆಗೆ
ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT