ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಭಾರತದ ಭಾಗವಲ್ಲವೇ?: ಸುಪ್ರೀಂ

ಆಹಾರ ಸುರಕ್ಷತಾ ಕಾಯ್ದೆ ಜಾರಿಗೊಳಿಸದ ಬಗ್ಗೆ ತರಾಟೆ
Last Updated 1 ಫೆಬ್ರುವರಿ 2016, 10:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆಯನ್ನು ಜಾರಿಗೆ ತರದ ಗುಜರಾತ್‌ ರಾಜ್ಯದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌, ‘ಗುಜರಾತ್‌ ಭಾರತದ ಭಾಗವಲ್ಲವೇ?’ ಎಂದು ಪ್ರಶ್ನಿಸಿದೆ.

‘ಇಡೀ ದೇಶಕ್ಕೆ ಜಾರಿಯಾದ ಕಾಯ್ದೆ ಗುಜರಾತ್‌ನಲ್ಲಿ ಏಕೆ ಜಾರಿಯಾಗಿಲ್ಲ? ಗುಜರಾತ್‌ ಭಾರತದ ಭಾಗವಲ್ಲವೇ? ಇದು ಹೀಗೇ ಮುಂದುವರಿದರೆ ನಾಳೆ ಸಿಆರ್‌ಪಿಸಿ, ಐಪಿಸಿ ಕಾಯ್ದೆಗಳ ಜಾರಿಗೂ ಇತರರು ಹಿಂದೇಟು ಹಾಕಬಹುದು’ ಎಂದು ನ್ಯಾಯಮೂರ್ತಿ ಮದನ್‌ ಬಿ. ಲೋಕೂರ್‌ ನೇತೃತ್ವದ ನ್ಯಾಯಪೀಠ ಹೇಳಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಎಂಜಿನರೇಗಾ),ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ಮಧ್ಯಾಹ್ನದ ಬಿಸಿಯೂಟ ಯೋಜನೆ ಸೇರಿದಂತೆ ಹಲವು ಸಮಾಜ ಕಲ್ಯಾಣ ಯೋಜನೆಗಳನ್ನು ಬರಪೀಡಿತ ರಾಜ್ಯಗಳಲ್ಲಿ ಯಾವ ರೀತಿ ಜಾರಿಗೆ ತರಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಸಂಗ್ರಹಿಸಿದ ಮಾಹಿತಿಯನ್ನು ತಾಳೆ ನೋಡುವಂತೆ ಕೇಂದ್ರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್‌ ಈ ಬಗ್ಗೆ ಫೆಬ್ರುವರಿ 10ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ತಿಳಿಸಿದೆ. ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಲಾಗಿದೆ.

ಬರಕ್ಕೆ ತುತ್ತಾಗಿರುವ ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಬಿಹಾರ, ಗುಜರಾತ್‌, ಒಡಿಶಾ, ಹರಿಯಾಣ ಮತ್ತು ಚತ್ತೀಸಗಡ ರಾಜ್ಯಗಳಲ್ಲಿ ಪರಿಹಾರ ವಿತರಣೆ ಸಮರ್ಪಕವಾಗಿ ಆಗಿಲ್ಲ ಎಂದು ದೂರಿ ‘ಸ್ವರಾಜ್‌ ಅಭಿಯಾನ್‌’ ಸ್ವಯಂಸೇವಾ ಸಂಸ್ಥೆಯು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಈ ಎಲ್ಲ ರಾಜ್ಯಗಳಲ್ಲಿ ಸಮಾಜ ಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿವೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ನೀಡುವಂತೆ ಜನವರಿ 18ರಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT