ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡಿಯಂಗಡಿ... ಮಕ್ಕಳಂಗಡಿ...

Last Updated 15 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘‘ಇವತ್ತು ನನ್ನ ಪಾಲಿಗೊಂದು ವಿಶೇಷ ಘಟಿಸಿತು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಗೆ ರಜೆಯಿತ್ತು. ನಾಟಕ ತಾಲೀಮಿಗೆಂದು ಮಕ್ಕಳಿಗೆ ಬರಹೇಳಿ ಶಾಲೆಗೆಂದು ಹೊರಟಿದ್ದೆ, ಸರ್ಕಾರಿ ಬಸ್ಸಲ್ಲಿ. ಕಂಡಕ್ಟರ್ ಟಿಕೇಟ್ ಕೇಳುತ್ತಾ ಒಂದೆರಡು ಬಾರಿ ನನ್ನನ್ನೇ ದಿಟ್ಟಿಸಿ ನೋಡಿದ. ಆಮೇಲೆ ಬಂದು ‘ನೀವು ಗುಡ್ಡಿಯಂಗಡಿಯವರಲ್ವಾ? ‘ಪ್ರಜಾವಾಣಿ’ಯಲ್ಲಿ ಕಥೆ ಬರಿತೀರಲ್ಲಾ, ಹೆಮ್ಮರಗಾಲದ ಮೇಷ್ಟ್ರು, ಪತ್ರಿಕೆ ಮಾಡ್ತೀರಲ್ಲ?’. ನನಗೆ ಆಶ್ಚರ್ಯ.

ಕಳೆದ ವರ್ಷ ಶಿಕ್ಷಕರ ದಿನಾಚರಣೆಯಂದು ‘ಪ್ರಜಾವಾಣಿ’ಯಲ್ಲಿ ಚಿದಾನಂದ ಸಾಲಿ ಅವರು ಬರೆದ ಲೇಖನದಲ್ಲಿ ನನ್ನ ಫೋಟೊ ಇತ್ತು. ಒಂದು ವರ್ಷದ ನಂತರ ನೆನಪಿಟ್ಟುಕೊಂಡು ಗುರುತು ಹಿಡಿದ ಆ ಕಂಡಕ್ಟರ್ ಬಗ್ಗೆ ನಿಜವಾಗಲೂ ಮಹದಾಶ್ಚರ್ಯವಾಯಿತು. ನನ್ನೆಲ್ಲಾ ಕಥೆ, ಲೇಖನಗಳನ್ನು ಓದಿ ನೆನಪಿಟ್ಟುಕೊಂಡು ಮಾತನಾಡಿಸಿದ ಅವರ ಹೆಸರು ರಾಜೇಂದ್ರ. ಚಾಮರಾಜನಗರ ಜಿಲ್ಲೆಯ ಉಮ್ಮತ್ತೂರಿನವರು. ಇಂಥದ್ದೊಂದು ಅನುಭವ ನನಗೆ ಇದೇ ಮೊದಲು. ನಂಜನಗೂಡು ತಾಲೂಕಿನ ಉತ್ತಮ ಶಿಕ್ಷಕ ಎಂದು ಸನ್ಮಾನಿಸಿದ್ದು ಇದರ ಮುಂದೆ ಮರೆತೇ ಹೋಯಿತು...’’

ಹೀಗೆ... ವೃತ್ತಿ–ಪ್ರವೃತ್ತಿಯ ಹಲವು ಅನುಭವಗಳನ್ನು ಸಂತೋಷ್‌ ಗುಡ್ಡಿಯಂಗಡಿ ತಮ್ಮ ಫೇಸ್‌ಬುಕ್‌ನ ಗೋಡೆಯ ಮೇಲೆ ದಾಖಲಿಸಿದ್ದಾರೆ. ಆ ಅಕ್ಷರಗಳು ಕೇವಲ ಫೇಸ್‌ಬುಕ್ಕಿನಲ್ಲಿ ತಮ್ಮ ಇರುವು ಸಾಬೀತುಪಡಿಸುವ ಬರಹವಾಗಿರದೆ ಪ್ರಚಾರದ ಹಂಬಲ ಮೀರಿದ ತುಡಿತವನ್ನು ಅನಾವರಣಗೊಳಿಸುತ್ತವೆ.

ಅಂದಹಾಗೆ ಈಗಾಗಲೇ ಕನ್ನಡದ ಅಕ್ಷರಲೋಕದಲ್ಲಿ ಪರಿಚಿತರಾಗಿರುವ ಸಂತೋಷ್ ಗುಡ್ಡಿಯಂಗಡಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹೆಗ್ಗಡಹಳ್ಳಿ ಸರ್ಕಾರಿ ಪ್ರೌಢಶಾಲೆಯ ರಂಗ ಶಿಕ್ಷಕ. ತಮಗೆ ಒಪ್ಪಿಸಿದ ಜವಾಬ್ದಾರಿಯನ್ನಷ್ಟೇ ಪೂರೈಸಿದ್ದರೆ, ತಿಂಗಳ ಪಗಾರಕ್ಕೆ ನಾಲ್ಕು ಗೋಡೆಗಳ ನಡುವೆ ಮಕ್ಕಳಿಗೆ ಪಾಠ ಹೇಳುವ ಶಿಕ್ಷಕರ ಸಾಲಿನಲ್ಲಿ ಅವರೂ ಇದ್ದಿದ್ದರೆ ಗುಡ್ಡಿಯಂಗಡಿಯವರ ಪ್ರತಿಭೆಯೂ ಮುದುಡಿಕೊಂಡು ಗೂಡಿನೊಳಗೆ ಬೆಚ್ಚಗಿರುತ್ತಿತ್ತು.

ಹಲವು ಮಕ್ಕಳ ಪ್ರತಿಭೆಗಳೂ ಮನೆಯ ಆಟ–ಪಾಠದ ಅಂಗಳಕ್ಕೆ ಸೀಮಿತವಾಗುತ್ತಿತ್ತು. ಆದರೆ ಮಕ್ಕಳ ಮನೋಭೂಮಿಕೆಯನ್ನು

ಸಾಂಸ್ಕೃತಿಕ ನೇಗಿಲಿನಲ್ಲಿ ಗೇಯ್ಮೆ ಮಾಡಿದ್ದರಿಂದ ಗುಡ್ಡಿಯಂಗಡಿ ‘ವಿಶಿಷ್ಟ ಶಿಕ್ಷಕ’ನ ಅಗ್ಗಳಿಕೆಯಲ್ಲಿ ನಿಲ್ಲುತ್ತಾರೆ. ತಮ್ಮ ಸಾಂಸ್ಕೃತಿಕ ಅಂಗಡಿಯಿಂದ ಮಕ್ಕಳಿಗೆ ಬೆಂಡು, ಸಕ್ಕರೆ ಬತ್ತಾಸು, ಪೆಪ್ಪರ್‌ಮೆಂಟ್‌ ಹಂಚುವ ಪ್ರಿಯ ಶಿಕ್ಷಕ ಈ ಗುಡ್ಡಿಯಂಗಡಿ! ಮಕ್ಕಳ ಮೇಲಿನ ಪ್ರೀತಿ ಮತ್ತು ಬಾಲ್ಯದಲ್ಲಿ ತಾವುಂಡ ನೋವು–ಬಡತನವೇ ಅವರ ಕಾರ್ಯಚಟುವಟಿಕೆಗಳಿಗೆ ಮೂಲ ಪ್ರೇರಣೆ.

ನಾ. ಡಿಸೋಜ ಅವರು ಮಡಿಕೇರಿಯಲ್ಲಿ ನಡೆದ ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿ ಆಯ್ಕೆಯಾದ ಸಂದರ್ಭದಲ್ಲಿ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢಶಾಲೆ ಮಕ್ಕಳು ಫೋನ್‌ ಮಾಡಿ ಅಭಿನಂದಿಸಿದರು. ಅವರ ಜತೆ ‘ಫೋನ್‌ ಇನ್’ ಸಂವಾದ ನಡೆಸಿದರು. ‘ನಮಸ್ಕಾರ ಸರ್, ಮಕ್ಕಳಿಗಾಗಿ ಸತತವಾಗಿ ಕತೆಗಳನ್ನು ಬರೀತಾ ಇದ್ದೀರಿ. ಮಕ್ಕಳ ಸಾಹಿತ್ಯ ಮತ್ತು ದೊಡ್ಡವರ ಸಾಹಿತ್ಯ ಅಂತ ಬೇರೆ ಬೇರೆ ಇದ್ಯಾ?, ಒಬ್ಬ ಸಾಹಿತಿ ಹೇಗಿರಬೇಕು ಸಾರ್? ಇತ್ಯಾದಿ ಪುಟ್ಟ ಪುಟ್ಟ ಅರ್ಥಗರ್ಭಿತ ಪ್ರಶ್ನೆಗಳನ್ನು ಕೇಳಿದ್ದರು.

ಮಗುವಿನ ತೊದಲ್ನುಡಿಯ ಇಂಪಂತೆ ಕಚಗುಳಿಯಿಟ್ಟ ಈ ಫೋನ್‌ ಇನ್ ಸಂವಾದದ ಹಿಂದಿನ ಪ್ರೇರಣೆ ಸಂತೋಷ್‌ ಗುಡ್ಡಿಯಂಗಡಿ. ಮಕ್ಕಳ ಸಾಹಿತಿ ಆನಂದ್ ಪಾಟೀಲ್‌, ರಂಗಕರ್ಮಿ ಮಂಡ್ಯ ರಮೇಶ್, ಚಿತ್ರಕಲಾವಿದ ಎಂ.ಎಫ್‌. ಹುಸೇನಿ, ವನ್ಯಜೀವಿಗಳ ಬಗ್ಗೆ ಕೆಲಸ ಮಾಡುತ್ತಿರುವ ಮನು ಕೃಷ್ಣಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಶಾಲೆಯ ಅಂಗಳಕ್ಕೆ ಕರೆತಂದು ಮಕ್ಕಳೊಂದಿಗೆ ಮುಖಾಮುಖಿಯಾಗಿಸಿದ್ದಾರೆ. ಈ ಸಂವಾದ–ಭೇಟಿ ಮಕ್ಕಳ ಮನಸ್ಸನ್ನು ಸಮೃದ್ಧಗೊಳಿಸಿದೆ.

ಹೆಮ್ಮರ, ಅಳ್ಳೀಮರ
ಹೊಸ ಸಾಂಸ್ಕೃತಿಕ ಬೀಜಗಳನ್ನು ಬಿತ್ತುವ ಹಂಬಲದ ಗುಡ್ಡಿಯಂಗಡಿ ಮೊದಲ ಬಾರಿಗೆ ನಂಜನಗೂಡು ತಾಲ್ಲೂಕಿನ ಹೆಮ್ಮರಗಾಲದ ಪ್ರೌಢಶಾಲೆಗೆ ಶಿಕ್ಷಕರಾಗಿ ಬಂದಾಗ ‘ಹೆಮ್ಮರ’ ಹೆಸರಿನ ಪತ್ರಿಕೆಯನ್ನು ಹೊರ ತಂದರು. ‘ಹೆಮ್ಮರ’ ಎನ್ನುವುದು ಹೆಮ್ಮರಗಾಲ ಹಳ್ಳಿಯನ್ನೂ ನೆನಪಿಸುತ್ತದೆ. ಮೂರೂವರೆ ವರುಷಗಳ ಕಾಲ ಅಲ್ಲಿ ಶಿಕ್ಷಕರಾಗಿದ್ದ ಅವಧಿಯಲ್ಲಿ ಒಟ್ಟು 17 ಸಂಚಿಕೆಗಳು ಹೊರ ಬಂದವು. ‘ಹೆಮ್ಮರದಲ್ಲಿ ಹಕ್ಕಿಗೂಡು’ ಎನ್ನುವ ವಿಶೇಷಾಂಕವೂ ಹೊರಬಂದಿತು.

ದೇವನೂರ ಮಹಾದೇವ, ಶ್ರೀನಿವಾಸ ವೈದ್ಯ, ನಾ. ಡಿಸೋಜ ಸೇರಿದಂತೆ ನಾಡಿನ ಸಾಹಿತ್ಯವಲಯದ ಖ್ಯಾತರು ಈ ವಿಶೇಷಾಂಕದಲ್ಲಿ ಮಕ್ಕಳಿಗಾಗಿ ಕಥೆ–ಕವನಗಳನ್ನು ಬರೆದರು. ‘ಹೆಮ್ಮರ’ವನ್ನು ರೂಪಿಸುವಲ್ಲಿ ಗುಡ್ಡಿಯಂಗಡಿ ಅವರ ಜತೆ ಕೈ ಜೋಡಿಸಿದ್ದು ಸಹ ಶಿಕ್ಷಕರಾದ ಜಯಣ್ಣ. ಹೆಮ್ಮರಗಾಲದಿಂದ ಹೆಗ್ಗಡಹಳ್ಳಿಗೆ ವರ್ಗವಾಗುತ್ತಲೇ ಆ ಪತ್ರಿಕೆಯೂ ನಿಂತು ಹೋಯಿತು.

ಆದರೆ ಸಂತೋಷ್‌ ಎದೆಯಲ್ಲಿನ ಅಕ್ಷರಪ್ರೀತಿಗೆ ನಿಲುಗಡೆಯಿರಲಿಲ್ಲ. ಹೆಗ್ಗಡಹಳ್ಳಿಗೆ ವರ್ಗವಾಗಿ ಬರುತ್ತಲೇ  ‘ಅಳ್ಳೀಮರ’ ಎಂಬ ಹೆಸರಿನಲ್ಲಿ ಚಿಗುರಿತು. ಶಾಲೆಯ ಆವರಣದಲ್ಲಿ ಅರಳೀಮರವಿದ್ದು, ಅದು ನೂರಾರು ಪಕ್ಷಿಗಳಿಗೆ ಆಶ್ರಯವಾಗಿದೆ. ಈ ಹಿನ್ನೆಲೆಯಲ್ಲಿ ಸಂತೋಷ್‌ ಆರಂಭಿಸಿದ ಹೊಸ ಪತ್ರಿಕೆಯೂ ಆ ಹೆಸರಿನಲ್ಲಿ ಅರಳಿತು. ‘ಅಳ್ಳೀಮರ’ ಬ್ಲಾಗ್ ಸಹ ಇದೆ. ಗುಡ್ಡಿಯಂಗಡಿ ರೂಪಿಸಿದ ಪ್ರತಿಕೆಗಳು ಮಕ್ಕಳ ಪ್ರತಿಭಾನ್ವೇಷಣೆ, ವಿಕಾಸ ಮತ್ತು ಅನಾವರಣಕ್ಕೆ ವೇದಿಕೆ ಒದಗಿಸಿಕೊಟ್ಟಿವೆ. ಈ ಮಕ್ಕಳ ಪತ್ರಿಕೆಯಿಂದ ಪ್ರಭಾವಿತರಾಗಿ ರಾಜ್ಯದ ಹಲವು ಕಡೆಗಳಲ್ಲೂ ಶಿಕ್ಷಕರು ಶಾಲೆಗಳಲ್ಲಿ ‘ಮಕ್ಕಳ ಪತ್ರಿಕೆ’ ರೂಪಿಸಿದ್ದಾರೆ.

‘ನನಗೆ ಬಾಲ್ಯದಿಂದಲೂ ಕಥೆ–ಕವನ ಹೇಳುವ ಹವ್ಯಾಸವಿತ್ತು. ನಾನು ಶಿಕ್ಷಕನಾಗಿ ಬಂದಾಗ ಇಲ್ಲಿನ ಮಕ್ಕಳಿಗೂ ಪದ್ಯ ಬರೆಯುವ ಹವ್ಯಾಸವಿತ್ತು. ಆ ಪದ್ಯಗಳನ್ನು ಒಟ್ಟು ಮಾಡಿ ಮೊದಲಿಗೆ ಗೋಡೆ ಪತ್ರಿಕೆ ಪ್ರಕಟಿಸಿದೆವು. ಆಯಾ ತರಗತಿಯಲ್ಲಿ ಈ ಪತ್ರಿಕೆಯನ್ನು ಹಚ್ಚಲಾಗುತ್ತಿತ್ತು. ಆ ನಂತರ ಇದನ್ನು ವಿಸ್ತಾರಗೊಳಿಸುವ ಪ್ರಯತ್ನದಲ್ಲಿ ಹುಟ್ಟಿದ್ದು ‘ಹೆಮ್ಮರ’, ‘ಅಳ್ಳೀಮರ’. ಮಕ್ಕಳಲ್ಲಿ ಸುಳ್ಳು ಸುಳ್ಳು ಬರಹಗಳನ್ನು ಬರೆಯುವ ಅಭ್ಯಾಸ ಮಾಡಿಸಿದೆ.

ಅವರಿಗೆ ಅನ್ನಿಸಿದ್ದನ್ನು ಇಲ್ಲವೆ ನಾನೇ ಒಂದು ವಿಚಾರವನ್ನು ಕೊಟ್ಟು ಅದರ ಮೇಲೆ ಸುಳ್ಳು ಸುಳ್ಳಾಗಿ ಬರೆಯುವುದೇ ಇಲ್ಲಿನ ವಿಶೇಷ. ಹೀಗೆ ಹಂತ ಹಂತವಾಗಿ ಮಕ್ಕಳನ್ನು ಬರವಣಿಗೆಗೆ ಹಚ್ಚುವ ಪ್ರಯತ್ನ ಮಾಡಿದೆ. ಈ ಸುಳ್ಳು ಕಥೆಗಳನ್ನು ಒಗ್ಗೂಡಿಸಿ ‘ಕುಣಿದಾಡುವ ಕಥೆಗಳು’ ಸಂಕಲನ ಮಾಡಿದೆವು. ಸಮಕಾಲೀನ ವಿಷಯಗಳ ಬಗ್ಗೆಯೂ ಈ ಪತ್ರಿಕೆಗಳಲ್ಲಿ ಮಾಹಿತಿ ಇರುತ್ತದೆ’ ಎಂದು ಮಕ್ಕಳು ‘ಹೆಮ್ಮರ’ ಮತ್ತು ‘ಅಳ್ಳೀಮರ’ದ ಕೆಳಗೆ ನಲಿದಾಡಿದ್ದನ್ನು ನೆನಪಿಸಿಕೊಳ್ಳುವರು ಸಂತೋಷ್‌ ಗುಡ್ಡಿಯಂಗಡಿ. 

‘ಕೆಲವು ಮಕ್ಕಳು ಸುಧಾ ಇತ್ಯಾದಿ ವಾರಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಚುಟುಕು, ಕವಿತೆಗಳನ್ನು ಕಾಪಿ ಮಾಡಿಕೊಂಡು ನಾನೇ ಬರೆದದ್ದು ಎನ್ನುತ್ತಿದ್ದರು. ‘ಇದು ಆ ಪತ್ರಿಕೆಯಲ್ಲಿ ಬಂದಿದ್ದು ಅಲ್ಲವೇ, ನಿಜ ಹೇಳು’ ಎಂದಾಗ ಒಪ್ಪಿಕೊಳ್ಳುತ್ತಿದ್ದರು. ಈ ಪದ್ಯಗಳನ್ನೂ ಸಂಗ್ರಹ ಎಂದು ಆ ಮಕ್ಕಳ ಹೆಸರಿನಲ್ಲಿ ಪ್ರಕಟಿಸುತ್ತಿದ್ದೆ. ಆಗ ಅವರಲ್ಲಿ ಭಯ ನಿವಾರಣೆಯಾಗಿ ಸ್ವರಚಿತ ಬರವಣಿಗೆ ಹೆಚ್ಚಾಯಿತು. ತಪ್ಪು ಇದ್ದರೆ ಮೇಷ್ಟ್ರು ತಿದ್ದುವರು ಎನ್ನುವ ಭರವಸೆ ಬಲಿಯಿತು’ ಎಂದು ಮಕ್ಕಳ ತೊದಲ್ನುಡಿಯ ಬರವಣಿಗೆಯ ಆರಂಭವನ್ನು ವಿವರಿಸುವರು. 
 
ಮೈನಾ ರಂಗ ಬಳಗ
ಮಕ್ಕಳ ಪತ್ರಿಕೆಯ ಜತೆಗೆ ಹೆಗ್ಗಡಹಳ್ಳಿಯ ಶಾಲೆಯಲ್ಲಿ ‘ಮೈನಾ ರಂಗ ಬಳಗ’ ಕಟ್ಟುವ ಮೂಲಕ ವಿದ್ಯಾರ್ಥಿಗಳನ್ನು ರಂಗಚಟುವಟಿಕೆಗೆ ಒಡ್ಡಿದ್ದಾರೆ ಗುಡ್ಡಿಯಂಗಡಿ. ‘ಮೈನಾ’ ರಂಗ ತಂಡ ವಿದ್ಯಾರ್ಥಿಗಳ ಪ್ರಯೋಗದ ವೇದಿಕೆ. ‘ಮೈನಾ ಪಕ್ಷಿ ಸಹ ಮಕ್ಕಳಂತೆ ಹೆಚ್ಚು ಗಲಾಟೆ ಮಾಡುತ್ತದೆ. ಆ ಕಾರಣಕ್ಕೆ ರಂಗತಂಡಕ್ಕೆ ಮೈನಾ ಹೆಸರಿಡಲಾಗಿದೆ’ ಎಂಬುದು ಅವರ ವಿವರಣೆ.

ಭಾರತ ಚುನಾವಣಾ ಆಯೋಗ ಏರ್ಪಡಿಸಿದ್ದ ಜಿಲ್ಲಾಮಟ್ಟದ ಹೆಣ್ಣುಮಕ್ಕಳ ನಾಟಕ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿನಿಯರ ತಂಡ ಮೊದಲ ಸ್ಥಾನ ಪಡೆದಿದ್ದು, ಮೈಸೂರು ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಮಕ್ಕಳು ಪ್ರಯೋಗಿಸಿದ ಕಾಂಕ್ವಾಂಬಾ ಅವರ ಜೀವನ, ಯಶೋಗಾಥೆ ಆಧಾರಿತ ‘ಕಪ್ಪು ವಜ್ರ’ ನಾಟಕ ತೃತೀಯ ಸ್ಥಾನ ಪಡೆದಿದ್ದು ಸೇರಿದಂತೆ ಮಕ್ಕಳ ಮೂಲಕ ಹಲವು ಯಶಸ್ಸುಗಳನ್ನು ಸಾಧಿಸಿದ್ದಾರೆ ಗುಡ್ಡಿಯಂಗಡಿ.

ಇತ್ತೀಚೆಗೆ ಮೈಸೂರಿನಲ್ಲಿ ನಡೆದ ‘ನಾಡಹಬ್ಬ’ದಲ್ಲಿ ಸಂಘಟಿಸಿದ್ದ ಮಕ್ಕಳ ದಸರೆಯಲ್ಲಿ ಮೈನಾ ರಂಗ ತಂಡ 35 ವಿದ್ಯಾರ್ಥಿಗಳನ್ನು ಬಳಸಿಕೊಂಡು ‘ಶಿಕ್ಷಣ ಹಕ್ಕು ಕಾಯಿದೆ’ ಮತ್ತು ‘ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ’ ವಿಷಯದ ಕುರಿತು ಎರಡು ಕಿರುನಾಟಕಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಪಡೆದುಕೊಂಡಿದೆ. ಮೈನಾ ರಂಗ ತಂಡ ಪ್ರಯೋಗಕ್ಕೆ ಆಯ್ಕೆ ಮಾಡಿಕೊಂಡ ನಾಟಕಗಳೆಲ್ಲವೂ ಸಾಮಾಜಿಕ ಸಂದೇಶವುಳ್ಳ ನಾಟಕಗಳು. ಗುಡ್ಡಿಯಂಗಡಿ ಅವರೇ ಬರೆದಿರುವ ‘ಕಾಮನ ಬಿಲ್ಲಿನ ಸೈನಿಕರು’, ‘ಶಿಕ್ಷಣ ಹಕ್ಕು ಕಾಯ್ದೆ’, ‘ಝಣ ಝಣ ಚುನಾವಣೆ’, ‘ಪ್ಲಾಸ್ಟಿಕ್‌ ಭೂತ’ ‘ತಿಕ್ಕಲ ರಾಜ್ಯ ತಿರುಬೋಕಿ ರಾಜ’ ಸೇರಿದಂತೆ ಆರು ನಾಟಕಗಳನ್ನು ಮಕ್ಕಳು ಪ್ರಯೋಗಿಸಿದ್ದಾರೆ.

‘ನಾಟಕ ಮಾಡುವುದಷ್ಟೆ ಅಲ್ಲ, ಆ ಮೂಲಕ ಸಮಾಜಕ್ಕೆ ತಿಳಿವಳಿಕೆ ನೀಡಬೇಕು. ಆ ರೀತಿಯ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅದು ಮಕ್ಕಳಿಗೂ ಪಾಠ ಆಗಬೇಕು’ ಎನ್ನುತ್ತಾರೆ ಈ ನಾಟಕ ಮೇಷ್ಟ್ರು. ಶಾಲೆಯಲ್ಲಿ ನಡೆದ ‘ಬಣ್ಣದ ಮೇಳ’ ಮಕ್ಕಳಷ್ಟೇ ಅಲ್ಲ ಜನರ ಗಮನವನ್ನೂ ಸೆಳೆದಿತ್ತು. ಕಳೆದ ದಸರಾ ರಜೆಯಲ್ಲಿ ನಾಲ್ಕು ದಿನಗಳ ಕಾಲ ನಡೆದ ಈ ‘ಬಣ್ಣದ ಮೇಳ’ದ ವಿಶೇಷವೆಂದರೆ ಯಾವುದೇ ಕಟ್ಟುಪಾಡುಗಳು, ಶಿಕ್ಷೆಯ ನಿಬಂಧನೆಗಳಿಗೆ ಒಳಪಡದೆ ಮಕ್ಕಳು ನಿರ್ಭಯವಾಗಿ ಶಾಲೆಯ ಅಂಗಳದಲ್ಲಿ ಬಣ್ಣದ ಓಕುಳಿ ಆಡುವುದು, ಕಿರುಚಾಡುವುದು, ಗದ್ದಲ ಮಾಡುವುದು ಸೇರಿದಂತೆ ತಮಗೆ ಇಷ್ಟವಾದ ಆಟ–ಕೂಗಾಟದಲ್ಲಿ ಮುಕ್ತವಾಗಿ ವಿಹರಿಸುವುದು. ‘ಬಣ್ಣದ ಮೇಳ’ದಲ್ಲಿ ಒಂದು ದಿನ ಪೂರ್ಣವಾಗಿ ಪ್ರಾಣಿಗಳ ಸಿನಿಮಾ ತೋರಿಸಿದರೆ, ಮತ್ತೊಂದು ದಿನ ಕಥೆ, ಕವಿತೆ ವಾಚನವೂ ನಡೆದಿತ್ತು. ಗುಡ್ಡಿಯಂಗಡಿ ಮೇಷ್ಟ್ರು ಸಹ ಇಲ್ಲಿ ಮಕ್ಕಳಾಗಿದ್ದರು!

ಎಲ್ಲರಂಥಲ್ಲ ನಮ್ಮ ಮೇಷ್ಟ್ರು...
‘ಸಂತೋಷ್‌ ಸರ್‌ ನಮ್ಮ ಶಾಲೆಗೆ ಬರುವ ಮುಂಚೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರೂ ಹೇಳಿಕೊಳ್ಳುವ ಕಾರ್ಯಕ್ರಮಗಳು ನಡೆಯುತ್ತಿರಲಿಲ್ಲ. ಆದರೆ ಅವರು ಬಂದ ನಂತರ ಕಳೆ ಬಂದಿತು. ನಮ್ಮ ಶಾಲೆ ಅವರಿಂದ ಎಲ್ಲಾ ಕಡೆಯೂ ಹೆಸರಾಯಿತು. ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿದೆವು. ‘ಅಳ್ಳೀಮರ’ ಪತ್ರಿಕೆ ಮೂಲಕ ಕಥೆ ಕವನ ಬರೆದೆವು. ಅವರೂ ಹೊಸ ವಿಚಾರಗಳನ್ನು ಪತ್ರಿಕೆಯಲ್ಲಿ ಬರೆದು ನಮಗೆ ತಿಳಿಸಿದರು.
–ಸಂಜನಾ ಎಚ್‌.ಆರ್.
ವಿದ್ಯಾರ್ಥಿನಿ

ರಜೆ ಇದ್ದಾಗಲೂ ನಮಗೆ ನಾಟಕಗಳನ್ನು ಮಾಡಿಸುತ್ತಾರೆ. ತಪ್ಪಿದ್ದರೆ ತಿದ್ದುತ್ತಾರೆ. ಸ್ನೇಹಿತನಂತೆ ಎಲ್ಲರ ಜತೆ ಬೆರೆಯುವರು. ಸ್ವಂತ ತಮ್ಮಂದಿರ ರೀತಿ ನಮ್ಮನ್ನು ಕಾಣುವ ಅವರ ಗುಣ ಎಲ್ಲರಿಗೂ ಅಚ್ಚು–ಮೆಚ್ಚು. ಗುಡ್ಡಿಯಂಗಡಿ ಸರ್ ಪ್ರೋತ್ಸಾಹದಿಂದಲೇ ಕಥೆ–ಕವಿತೆ ಬರೆಯುತ್ತೇವೆ. ಕವಿಗಳು, ನಾಟಕಕಾರನ್ನು ಶಾಲೆಗೆ ಕರೆಯಿಸಿ ಅವರಿಂದ ನಮಗೆ ಪಾಠ ಮಾಡಿದರು, ಕಥೆ ಹೇಳಿಸಿದರು. ಇವೆಲ್ಲ ನಮ್ಮ ಓದು, ಬರವಣಿಗೆಯ ಬೆಳೆವಣಿಗೆಗೆ ಅನುಕೂಲವಾಗುತ್ತಿದೆ.
–ಲೋಕೇಶ್,
ಒಂಬತ್ತನೇ ತರಗತಿ  ವಿದ್ಯಾರ್ಥಿ



ನೀನಾಸಂಗೆ ದಾರಿ ತೋರಿದ ಬಲ್ಲಾಳರು...
‘ಬಾಲ್ಯದಿಂದಲೂ ನಾನು ಚೆನ್ನಾಗಿ ಹಾಡುತ್ತಿದ್ದೆ. ಯಕ್ಷಗಾನದ ಪರಿಸರದಲ್ಲಿ ಬೆಳೆದ ನನಗೆ ಯಕ್ಷಗಾನದಲ್ಲಿ ತೊಡಗಬೇಕು ಎನ್ನುವ ಹಂಬಲವಿತ್ತು. ಆದರೆ ಜಾತಿಯ ಕಾರಣದಿಂದ ಅದು ಅಸಾಧ್ಯವಾಗಿತು. ಬಾಲ್ಯದಲ್ಲಿ ನಾನು ನೋಡಿಕೊಂಡು ಬರುತ್ತಿದ್ದ ಯಕ್ಷಗಾನ ಪ್ರಸಂಗಗಳನ್ನು ನಮ್ಮ ಮನೆಯಲ್ಲಿಯೇ ಅಕ್ಕ–ತಂಗಿ ಮತ್ತು ನಾನು ಮೀಸೆ, ವೇಷ ಕಟ್ಟಿಕೊಂಡು ಮಾಡುತ್ತಿದ್ದೆವು. ಅಮ್ಮನೇ ಶ್ರೋತೃ. ‘ನೀನು ಕಾಳಿಂಗ ನಾವಡರ ಹಾಗೆ ಭಾಗವತಿಕೆ ಮಾಡುತ್ತಿಯಾ ಕಣೋ’ ಎಂದು ಅಮ್ಮ ಹೇಳುತ್ತಿದ್ದಳು.

ಯಕ್ಷಗಾನದಲ್ಲಿ ಭಾಗವತಿಕೆ ಎಂದರೆ ನನಗೆ ಇಷ್ಟ. ಮನೆಯಲ್ಲಿ ತೀವ್ರ ಕಷ್ಟವಿದ್ದರೂ ಅಪ್ಪ ಶಾಲೆಗೆ ಕಳುಹಿಸುವುದನ್ನು ಬಿಡಲಿಲ್ಲ. ಅವರ ಮೊದಲ ಆದ್ಯತೆ ಶಿಕ್ಷಣ. ನನ್ನ ಇಂದಿನ ಕೆಲಸಗಳಿಗೆ ನೆರವಾಗುತ್ತಿರುವುದು ಅಂದಿನ ಕಷ್ಟದ ಅನುಭವಗಳೇ. ಯಕ್ಷಗಾನದಲ್ಲಿ ಅವಕಾಶವಿಲ್ಲದಾಗ ಹಿಮಕರ್ ಎನ್ನುವವರು ನಡೆಸುತ್ತಿದ್ದ ಬೀದಿನಾಟಕಗಳಲ್ಲಿ ತೊಡಗಿದೆ. ನಾಡಿನ ಸಾಂಸ್ಕೃತಿಕ ಚಿಂತಕರಾದ ಮುರಾರಿ ಬಲ್ಲಾಳರು ಒಮ್ಮೆ ನನ್ನ ಬೀದಿ ನಾಟಕ ನೋಡಿ ‘ನೀನು ನೀನಾಸಂಗೆ ಹೋಗು’ ಅಂದರು.

ಅಲ್ಲಿಂದ ತರಬೇತಿ ಪಡೆದಿದ್ದ ಶಿಕ್ಷಕರನ್ನು ಭೇಟಿ ಮಾಡಿ ಮಾಹಿತಿ ಪಡೆದೆ. ಮಕ್ಕಳು ನನಗೆ ಇಷ್ಟ. ಆದರೆ ತೀರ ಎತ್ತಿಕೊಂಡು ಆಡಿಸುವಷ್ಟು ಸಣ್ಣ ಮಕ್ಕಳಲ್ಲ! ನನ್ನ ಬಡತನದ ಬಾಲ್ಯದ ಕಾರಣ ಬಹುಶಃ ನಾನೂ ಈ ರೀತಿಯ ಕೆಲಸದಲ್ಲಿ ತೊಡಗಲು ಕಾರಣ ಅನ್ನಿಸುತ್ತದೆ. ಈ ಮಕ್ಕಳನ್ನೂ ಹೊರ ಜಗತ್ತಿಗೆ ಪರಿಚಯಿಸಬೇಕು, ಅವರ ಪ್ರತಿಭೆಯನ್ನು ಹೆಕ್ಕಿತೆಗೆಯಬೇಕು ಎನ್ನುವುದು ನನ್ನ ಉದ್ದೇಶ. ಹೆಮ್ಮರಗಾಲ ಶಾಲೆಗೆ ಬಂದಾಗ ಜಾತಿಯ ಕಾರಣದಿಂದ ನನಗೆ ಮನೆಯೂ ಸಿಕ್ಕಲಿಲ್ಲ. ಚಾಮರಾಜನಗರದಲ್ಲಿ ಕೆ. ವೆಂಕಟಸ್ವಾಮಿ ಅವರ ಮನೆಯಲ್ಲಿ ಉಳಿದುಕೊಂಡಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT