ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಯ ಕನವರಿಕೆಯಲಿ...

Last Updated 30 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಹರ್ಷ ಮತ್ತು ತಂಡ
ಹೋಟೆಲ್ಸ್ ಅರೌಂಡ್‌ ಯು (hotelsaroundyou) ಆ್ಯಪ್‌ ರೂಪಿಸುವ ಮೂಲಕ ಹರ್ಷ ಮತ್ತು ಗೆಳೆಯರ ತಂಡ ದಕ್ಷಿಣ ಭಾರತದಲ್ಲಿ ಗುರುತಿಸಿಕೊಂಡಿದೆ. ತುರ್ತಾಗಿ ಕಚೇರಿ ಅಥವಾ ಕಂಪೆನಿ ಕೆಲಸದ ನಿಮಿತ್ತ ದೂರದ ಪ್ರದೇಶಗಳಿಗೆ ತೆರಳುವ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ ಸಿದ್ಧಪಡಿಸಲಾಗಿದೆ.

ವಸತಿ ಹಾಗೂ ಆಹಾರ ಬುಕ್‌ ಮಾಡುವುದು ಈ ಆ್ಯಪ್‌ನ ಮುಖ್ಯ ಕಾರ್ಯವೈಖರಿ. ರೂಮ್‌, ಊಟ, ತಿಂಡಿ ಬುಕ್‌ ಮಾಡುವ ನೂರಾರು ಮೊಬೈಲ್‌ ಆ್ಯಪ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ‘ಹೋಟೆಲ್ಸ್‌ ಅರೌಂಡ್‌ ಯು’ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆ್ಯಪ್‌ಗಳಿಗಿಂತ ಭಿನ್ನವಾಗಿದೆ.

 ಈ ಆ್ಯಪ್‌ ಮೂಲಕ ಬುಕ್‌ ಮಾಡುವುದರಿಂದ ರಿಯಾಯಿತಿ ಮತ್ತು ಉಚಿತ ಕೊಡುಗೆಗಳ ಸೌಲಭ್ಯ ಪಡೆಯಬಹುದು. ಹಾಗಾಗಿ ಇದು ಗ್ರಾಹಕಸ್ನೇಹಿ ಆ್ಯಪ್‌ ಆಗಿದೆ. ಹೋಟೆಲ್‌ ಕೋಣೆಗಳನ್ನು 12 ಗಂಟೆ ಅಥವಾ 24 ಗಂಟೆ ಅವಧಿಗೆ ಬುಕ್‌ ಮಾಡುವುದು ಸಾಮಾನ್ಯ. ಆದರೆ ಈ ಆ್ಯಪ್‌ನಲ್ಲಿ 4 ಗಂಟೆ ಅವಧಿಯವರೆಗೂ ರೂಮ್‌ ಬುಕ್‌ ಮಾಡುವ ಅವಕಾಶವನ್ನು ಕಲ್ಪಿಸಿರುವುದು ವಿಶೇಷ. ದಿನದ 24 ಗಂಟೆಯು ರೂಮ್‌, ಊಟ ತಿಂಡಿ ಬುಕಿಂಗ್ ಸೌಲಭ್ಯವಿದೆ. ಈ ಆ್ಯಪ್‌ ಮೂಲಕ ರೂಮ್‌ಗಳನ್ನು ಬುಕ್‌ ಮಾಡಿದವರಿಗೆ ಕೋಳಿ ಮಾಂಸದ ಖಾದ್ಯಗಳಲ್ಲಿ ವಿಶೇಷ ರಿಯಾಯಿತಿ ನೀಡಲಾಗುವುದು ಎನ್ನುತ್ತಾರೆ ಹರ್ಷ. ಮೋಸಿನ್‌ ದಿಂಡಿಕರ್‌, ಅನಿಮೇಶ್‌ ಚೌಧರಿ ಮತ್ತು ಹರ್ಷ ನಲ್ಲೂರು ಈ ಆ್ಯಪ್‌ ತಯಾರಿಸಿದ್ದಾರೆ.

   ಇದರಲ್ಲಿ 350ಕ್ಕೂ ಹೆಚ್ಚು ಹೋಟೆಲ್‌ಗಳು, ಲಾಡ್ಜ್‌ಗಳ ಮಾಹಿತಿ ನೀಡಲಾಗಿದೆ. ಇವುಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ‘ಹೋಟೆಲ್ಸ್‌ ಅರೌಂಡ್‌ ಯು’ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಯಶಸ್ವಿಯಾಗಿದೆ. ಕಳೆದ ಫೆಬ್ರುವರಿಯಲ್ಲಿ ಆಂಡ್ರಾಯ್ಡ್‌ ಆ್ಯಪ್‌ ಬಿಡುಗಡೆ ಮಾಡಿದ್ದು ಇಲ್ಲಿಯವರೆಗೂ 22 ಸಾವಿರಕ್ಕೂ ಹೆಚ್ಚು ಗ್ರಾಹಕರು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಪ್ರಸ್ತುತ ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿ ಮಹಾನಗರಗಳಲ್ಲಿ ಮಾತ್ರ ‘ಹೋಟೆಲ್ಸ್‌ ಅರೌಂಡ್‌ ಯು’ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ನಗರಗಳಿಗೂ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಕನಸು ಈ ಯುವಕರದ್ದು. ತಂತ್ರಜ್ಞಾನ ಬಳಸಿಕೊಂಡು ಶೂನ್ಯ ಬಂಡವಾಳದಲ್ಲಿ ಉದ್ಯಮ ಆರಂಭಿಸಿದ ಈ ಯುವಕರ ಸಾಧನೆ ನಿಜಕ್ಕೂ ಅನನ್ಯ.
www.hotelsaroundyou.com
*
ಶರತ್‌ ಎಂ ಗಾಯಕ್‌ವಾಡ್‌

ಪ್ಯಾರಾಒಲಿಂಪಿಕ್‌ ಈಜುಪಟು ಶರತ್‌ ಎಂ ಗಾಯಕ್‌ವಾಡ್‌ ಅವರ ಯಶಸ್ವಿ ಸಾಧನೆಯ ಕಥೆ ಇದು. ಒಂದು ಕೈ ಇಲ್ಲದಿದ್ದರೆ ಏನಂತೆ, ಈಜಿನಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ಶರತ್‌ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಶರತ್‌ ಇಷ್ಟಪಟ್ಟು ಈಜು ಪಟುವಾಗಲಿಲ್ಲ! ಅವರು ಕಷ್ಟಪಟ್ಟು ಈಜು ಪಟುವಾದರು!. ಶರತ್‌ ಓದುವ ಶಾಲೆಯಲ್ಲಿ ಈಜು ಕಲಿಯುವುದನ್ನು ಕಡ್ಡಾಯ ಮಾಡಲಾಗಿತ್ತು. ಇದರಿಂದಾಗಿಯೇ ಶರತ್‌ ಈಜು ಕಲಿಯುವುದು ಅನಿವಾರ್ಯವಾಯಿತು.

ಆರಂಭದಲ್ಲಿ ಶರತ್‌ ಪೋಷಕರು ಈಜು ಕಲಿಯುವುದನ್ನು ವಿರೋಧಿಸಿದ್ದರು. ದೈಹಿಕ ಅಂಗವಿಕಲರು ಹೇಗೆ ತಾನೇ ಈಜು ಕಲಿಯಲು ಸಾಧ್ಯ ಎಂದು ಶಾಲಾ ಮಂಡಳಿಯ ವಿರುದ್ಧ ಶರತ್‌ ಪೋಷಕರು ಕಿಡಿಕಾರಿದ್ದರು. ಆದರೆ ಎಲ್ಲಾ ಸಂಕಷ್ಟಗಳನ್ನು ಮೆಟ್ಟಿ ನಿಂತು ಶರತ್‌ ಉತ್ತಮ ಈಜುಪಟುವಾಗಿ ಬೆಳೆದರು.

ಶರತ್‌ 2012ರಲ್ಲಿ ಮೊಟ್ಟ ಮೊದಲು ಪ್ಯಾರಾಒಲಿಂಪಿಕ್‌ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ನಂತರ 2014ರ ಏಷ್ಯನ್‌ ಟೂರ್ನಿಯಲ್ಲಿ ಹಲವಾರು ಪದಕಗಳನ್ನು ಮುಡಿಗೇರಿಸಿಕೊಂಡರು. ಇವರ ಸಾಧನೆಗೆ 2015ರಲ್ಲಿ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿತು. ಇವರು ಈಜುಪಟು ಮಾತ್ರವಲ್ಲ, ಕೋಚ್‌ ಹಾಗೂ ಉದ್ಯಮಿಯೂ ಹೌದು. ಶರತ್‌ ಗೆಳೆಯರ ಜೊತೆ ಸೇರಿ ಈಜು ತರಬೇತಿಗೆ ಸಂಬಂಧಪಟ್ಟ ವಸ್ತುಗಳ ಮಾರಾಟದ ಕಂಪೆನಿ ಆರಂಭಿಸಿದ್ದಾರೆ. ಈಜು ಉಡುಪುಗಳು, ಕನ್ನಡಕಗಳು ಸೇರಿದಂತೆ ಈಜಲು ಬೇಕಾಗಿರುವ ಎಲ್ಲ ರೀತಿಯ ಸರಕುಗಳು ಇಲ್ಲಿ ಲಭ್ಯ. ಕಂಪೆನಿಯ ವೆಬ್‌ಪೋರ್ಟಲ್‌ ಮೂಲಕವೂ ಗ್ರಾಹಕರು ವಸ್ತುಗಳನ್ನು ತರಿಸಿಕೊಳ್ಳಬಹುದು.

   ಈ ಕಂಪೆನಿ ಪ್ರತಿ ತಿಂಗಳು 45 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆ. ಶರತ್‌ ಗಾಯಕ್‌ವಾಡ್‌ ಕ್ರೀಡಾಪಟು ಹಾಗೂ ಉದ್ಯಮಿಯಾಗಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಮಾಜಿ ಓಟಗಾರ್ತಿ ಪಿ.ಟಿ ಉಷಾ ಅವರು ಪಡೆದ ಪದಕಗಳಿಗಿಂತಲೂ ಶರತ್‌ ಹೆಚ್ಚಿನ ಪದಕಗಳನ್ನು ಮುಡಿಗೇರಿಸಿಕೊಂಡಿರುವುದು ವಿಶೇಷ. ಸಾಧನೆಗೆ ಅಂಗವೈಕಲ್ಯ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಶರತ್‌ ಸಾಧಿಸಿ ತೋರಿಸಿದ್ದಾರೆ.
 www.gamatics.in
*
ವಿಶಾಲ್‌ ಜೈನ್‌
ಇಂದು ಮನೆ ವಾತಾವರಣದ ವೃದ್ಧರ ಹೆಲ್ತ್‌ಕೇರ್‌ ಕೇಂದ್ರಗಳಿಗೆ ಭಾರಿ ಬೇಡಿಕೆ ಇದೆ. ಈ ಹೆಲ್ತ್‌ಕೇರ್‌ ಸೆಂಟರ್‌ಗಳು ವಯೋವೃದ್ಧರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಆರೈಕೆ ಮಾಡುತ್ತಿವೆ. ಹೈಟೆಕ್‌ ವಾತಾವರಣವಿರುವ ಈ ಕೇಂದ್ರಗಳು ಒಬ್ಬರಿಗೆ ತಿಂಗಳಿಗೆ 15 ಸಾವಿರ ರೂಪಾಯಿಗಳಿಂದ ಹಿಡಿದು 75 ಸಾವಿರ ರೂಪಾಯಿವರೆಗೂ ಶುಲ್ಕ ವಿಧಿಸುತ್ತವೆ. ಕಳೆದ ವರ್ಷ ಭಾರತದಲ್ಲಿ ಈ ಹೆಲ್ತ್‌ಕೇರ್‌ ಸೆಂಟರ್‌ಗಳ ವಹಿವಾಟು 65 ಬಿಲಿಯನ್‌ ಡಾಲರ್‌ (ಅಮೆರಿಕನ್‌ )ನಷ್ಟು ನಡೆದಿದೆ.

ದೆಹಲಿಯ ವಿಶಾಲ್‌ ಜೈನ್‌ ಎಂಬ ಯುವಕ  ಬಡವರಿಗಾಗಿ ‘ಪ್ರಮತಿ ಹೆಲ್ತ್‌ಕೇರ್‌ ಸೆಂಟರ್‌’ ತೆರೆಯುವ ಮೂಲಕ ಮಾದರಿಯಾಗಿದ್ದಾರೆ. ಈ ಹೆಲ್ತ್‌ಕೇರ್‌ ಕೇಂದ್ರವನ್ನು ತೆರೆಯುವ ಹಿಂದೆ ಒಂದು ಕಥೆ ಇದೆ. ವಿಶಾಲ್‌ ಜೈನ್‌ಗೆ ಅಜ್ಜಿ ಎಂದರೆ ಅತೀವ ಪ್ರೀತಿ. ಕಳೆದ 25 ವರ್ಷಗಳಿಂದ ಅವರು ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು. ಇವರನ್ನು ನೋಡಿಕೊಳ್ಳುವುದೇ ವಿಶಾಲ್‌ ತಂದೆ ತಾಯಿಗೆ ಒಂದು ಕೆಲಸವಾಗಿತ್ತು. ಕೆಲಸದ ನಿಮಿತ್ತ ವಿಶಾಲ್‌ ಕುಟುಂಬ ದುಬೈಗೆ ತೆರಳಬೇಕಾದ ಅನಿವಾರ್ಯತೆ ಎದುರಾಯಿತು. ಅವರು ಅಜ್ಜಿಯನ್ನು ಖಾಸಗಿ  ಹೆಲ್ತ್‌ಕೇರ್‌ ಸೆಂಟರ್‌ನಲ್ಲಿ ಬಿಟ್ಟು ದುಬೈಗೆ ತೆರಳಿದರು. ಆದರೆ ಅಲ್ಲಿ ಸರಿಯಾದ ಆರೈಕೆ ಇಲ್ಲದೆ ವಿಶಾಲ್‌ ಅಜ್ಜಿ ನರಕಯಾತನೆ ಅನುಭವಿಸಿದರು.  ಅವರ ವಸ್ತುಗಳನ್ನು ಕಳವು ಮಾಡಲಾಗಿತ್ತು. ಅಲ್ಲಿನ ಸಿಬ್ಬಂದಿಗೆ  ಫೋನ್‌  ಮಾಡಿದರೂ ಅವರು  ಸಮರ್ಪಕವಾಗಿ ಉತ್ತರಿಸುತ್ತಿರಲಿಲ್ಲ.


ಕೊನೆಗೆ 2012ರಲ್ಲಿ ವಿಶಾಲ್‌ ಭಾರತಕ್ಕೆ ಮರಳಿದರು. ಹೆಲ್ತ್‌ಕೇರ್‌ ಸೆಂಟರ್‌ಗಳ ಅವ್ಯವಸ್ಥೆ ಕಂಡು ಮರುಗಿದರು. ಮುಂದೆ ಅಜ್ಜಿಯ ಹೆಸರಿನಲ್ಲಿ ಪ್ರಮತಿ ಹೆಲ್ತ್‌ ಸೆಂಟರ್‌ ತೆರೆಯುವ ಮೂಲಕ ಬಡವರಿಗೆ ಅನುಕೂಲ ಕಲ್ಪಿಸಿದ್ದಾರೆ. ಇಂದು ಈ ಹೆಲ್ತ್‌ ಕೇರ್‌ ಸೆಂಟರ್‌ನಲ್ಲಿ ನೂರು ಜನ ವಯೋವೃದ್ಧರಿದ್ದಾರೆ. ಇವರನ್ನು ನೋಡಿಕೊಳ್ಳುವ ಪರಿಚಾರಕಿಯರಿಗೆ ವೈಜ್ಞಾನಿಕವಾಗಿ ತರಬೇತಿ ನೀಡಲಾಗಿದೆ. ಈ ಪ್ರಮತಿ ಹೆಲ್ತ್‌ಕೇರ್‌ ಸೆಂಟರ್‌ ದೆಹಲಿ ಮತ್ತು ಗುರ್‌ಗಾಂವ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ದೇಶದೆಲ್ಲೆಡೆ ವಿಸ್ತರಿಸುವ ಕನಸು ವಿಶಾಲ್‌ ಅವರದ್ದು.
www.pramaticare.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT