ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ತೋಟಕ್ಕೆ ಹುಲ್ಲುಹಾಸಿನ ಮೆರುಗು

ಕಬ್ಬನ್‌ ಉದ್ಯಾನದ ಕೇಂದ್ರ ಗ್ರಂಥಾಲಯದ ಮುಂಭಾಗ
Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧ ವಿಧ ಬಣ್ಣ ಬಣ್ಣದ ಗುಲಾಬಿ ಹೂಗಳ ಜತೆಯಲ್ಲಿ ಹಚ್ಚ ಹಸುರಿನ ಹುಲ್ಲುಹಾಸು ಇದ್ದರೆ ನೋಡುಗರ ಕಣ್ಣಿಗೆ ಚೆಂದ.
ಕಬ್ಬನ್‌ ಉದ್ಯಾನದಲ್ಲಿ ಇಂತಹ ನೂತನ ಪ್ರಯೋಗಕ್ಕೆ ತೋಟಗಾರಿಕೆ ಇಲಾಖೆ ಮುಂದಾ­ಗಿದೆ. ಕಬ್ಬನ್‌ ಉದ್ಯಾನದಲ್ಲಿನ ಕೇಂದ್ರ ಗ್ರಂಥಾಲ­ಯದ ಮುಂಭಾಗದಲ್ಲಿರುವ ಗುಲಾಬಿ ತೋಟ­ದಲ್ಲಿನ ಖಾಲಿಯಿರುವ ಜಾಗದಲ್ಲಿ ‘ಮೆಕ್ಸಿಕನ್‌ ಹುಲ್ಲು­ಹಾಸು’ ಹಾಕುವ ಮೂಲಕ ತೋಟಕ್ಕೆ ಮೆರುಗು ನೀಡಲು ಇಲಾಖೆ ಕಾರ್ಯ ಪ್ರವೃತ್ತವಾಗಿದೆ.

‘ಕಬ್ಬನ್‌ ಉದ್ಯಾನದಲ್ಲಿ ಒಟ್ಟಾರೆ 3.5 ಎಕರೆ ವಿಸ್ತೀರ್ಣದ ಜಾಗದಲ್ಲಿ ಒಂದೂವರೆ ವರ್ಷದ ಹಿಂದೆಯೇ ಗುಲಾಬಿ ಹೂವಿನ ಗಿಡಗಳನ್ನು ನೆಡಲಾಗಿದೆ’ ಎಂದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ (ಕಬ್ಬನ್‌ ಉದ್ಯಾನ) ಮಹಾಂತೇಶ ಮುರಗೋಡ ಹೇಳಿದರು
ಗುಲಾಬಿಯಲ್ಲಿ ಫ್ಲೋರಿ ಬಂಡಾಜ್‌, ಹೈಬ್ರೀಡ್‌ ಟೀಜ್‌, ಮಿನಿಯೇಚರ್‌, ಗ್ರಾಂಡಿ ಫ್ಲೋರಾ, ಶ್ರಬ್ಧ ಗೋಜಿಸ್‌ಗಳೆಂಬ ಐದು ಬಗೆಯಿದೆ.  ಇಲ್ಲಿ ವಿವಿಧ ತಳಿಯ ಗುಲಾಬಿ ಗಿಡಗಳ ವನ ಜನರನ್ನು ಆಕರ್ಷಿಸುತ್ತದೆ. ಈಗಾಗಲೇ ಎರಡು ಫಸಲು ಹೂವು ಬಂದಿದೆ. ಆದರೆ, ಗುಲಾಬಿ ತೋಟದ ಮಧ್ಯಭಾಗ ಖಾಲಿಯಿತ್ತು. ಜತೆಗೆ ಗಿಡಗಳ ನಡುವಿನ ಅಂತರದ ಜಾಗವೂ ಖಾಲಿ ಇದ್ದುದರಿಂದ ಗುಲಾಬಿ ತೋಟದಲ್ಲಿ ಹೆಚ್ಚಿನ ಬೇರೆ ರೀತಿಯ ಕಳೆಯು ಬೆಳೆದಿತ್ತು ಎಂದರು.

‘ಈಗ ಗುಲಾಬಿ ತೋಟವನ್ನು ಸುಂದರಗೊಳಿಸಿ ಅದಕ್ಕೆ ಒಂದು ಮೆರುಗು ನೀಡಲು ಒಟ್ಟು ರೂ 11 ಲಕ್ಷ ವೆಚ್ಚದಲ್ಲಿ ‘ಮೆಕ್ಸಿಕನ್‌ ಹುಲ್ಲು ಹಾಸು’ ಹಾಕಲು ನಿರ್ಧರಿಸಲಾಗಿದೆ. ತೋಟದಲ್ಲಿನ ಖಾಲಿ­ಯಿರುವ ಜಾಗದಲ್ಲಿ ಅಂದರೆ, ಒಟ್ಟು 6,200 ಚದರ ಮೀಟರ್ (ಒಂದೂವರೆ ಎಕರೆ) ಜಾಗದಲ್ಲಿ ಮೆಕ್ಸಿಕನ್ ಹುಲ್ಲು ಹಾಸು ನೆಡಲಾಗುವುದು. ಇದರಲ್ಲಿ ರೂ 4 ಲಕ್ಷ ವೆಚ್ಚದಲ್ಲಿ ತುಂತುರು ನೀರಾ­ವರಿ ವ್ಯವಸ್ಥೆ ಕಲ್ಪಿಸಲಾಗುವುದು. ಗುಲಾಬಿ ಹೂವಿನ ಗಿಡಗಳಿಗೆ ಹನಿ ನೀರಾವರಿಯನ್ನು ಒದಗಿ­ಸಲಾ­ಗುವುದು. ಇನ್ನು ರೂ 7 ಲಕ್ಷದಲ್ಲಿ ಹುಲ್ಲು ಅಭಿವೃದ್ಧಿ, ಮಣ್ಣು ಹದಗೊಳಿಸಲು, ಗೊಬ್ಬರಕ್ಕೆ ಬಳಸಲಾಗುವುದು’ ಎಂದು ಅವರು ವಿವರಿಸಿದರು.

‘ಈಗಾಗಲೇ ಹಲವು ದಿನಗಳಿಂದ ಮಣ್ಣು ಹದಗೊಳಿಸುವ ಕೆಲಸ ನಡೆದಿದೆ. ಅಲ್ಲದೇ, ಇಲ್ಲಿ ಬೆಳೆಯುವ ಕಳೆಗಳದೇ ದೊಡ್ಡ ಸಮಸ್ಯೆಯಾಗಿದೆ. ಮೆಕ್ಸಿಕನ್‌ ಹುಲ್ಲುಹಾಸು ಹಾಕಿದ ನಂತರ ಕಳೆಗಳೇ ಬೆಳೆದು ಬಿಟ್ಟರೆ ಎಂದು ಕಳೆಗಿಡಗಳನ್ನು ಬೇರುಸಮೇತ ಕಿತ್ತು ಹಾಕುವ ಕಾರ್ಯ ನಡೆದಿದೆ. ಇನ್ನು ಸುಮಾರು ಹತ್ತು ದಿನಗಳಲ್ಲಿ ಹುಲ್ಲುಹಾಸು ನಾಟಿಯನ್ನು ಮಾಡಲಾಗುವುದು’ ಎಂದರು.

‘ಮೆಕ್ಸಿಕನ್‌ ಹುಲ್ಲು ಹಾಸು ಬೆಳೆದು ಗುಲಾಬಿ ತೋಟವು ಸುಂದರವಾಗಿ ಕಾಣಲು ಸುಮಾರು ಮೂರು ತಿಂಗಳು ಬೇಕಾಗುತ್ತದೆ. ಇದು ಕೇಂದ್ರ ಗ್ರಂಥಾಲಯಕ್ಕೆ ಒಂದು ಸೊಬಗು ನೀಡಲಿದೆ’ ಎಂದು ತಿಳಿಸಿದರು.
‘ಗುಲಾಬಿ ಹೂವಿನ ಪ್ರತ್ಯೇಕ ಗಿಡಗಳಿಗೆ ಅವುಗಳ ಹೆಸರು, ವೈಜ್ಞಾನಿಕ ಹೆಸರು, ಅವುಗಳ ಮೂಲ, ಆ ತಳಿಯ ವಿಶೇಷತೆ ಇತ್ಯಾದಿಗಳ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು’ ಎಂದರು.

ಗುಲಾಬಿ ತೋಟ
ಕಬ್ಬನ್‌ ಉದ್ಯಾನದ ಕೇಂದ್ರ ಗ್ರಂಥಾಲ­ಯದ ಮುಂಭಾಗದಲ್ಲಿ 3.5 ಎಕರೆ ಜಾಗದಲ್ಲಿ ಗುಲಾಬಿ ತೋಟವಿದೆ. ಇಲ್ಲಿ 183 ವಿಧ–ವಿಧ ಬಣ್ಣದ ಗುಲಾಬಿ ಹೂವು ಬಿಡುವ 4,642 ಗುಲಾಬಿ ಗಿಡಗಳಿವೆ. 258 ವಿದೇಶಿ ತಳಿ, 140 ಹೈಬ್ರೀಡ್, 78 ಫ್ಲೋರಿ­ಬಂಡ ಗಿಡಗಳಿರುವುದು ಈ ಗುಲಾಬಿ ತೋಟದ ವಿಶೇಷತೆ.

ಗಿಡಗಳಿಗೆ ಮಾಹಿತಿ ಫಲಕ
ಇನ್ನು ಮುಂದೆ ಹಚ್ಚನೆಯ ಹುಲ್ಲು ಹಾಸಿ­ನಿಂದ ಕೂಡಿದ ಗುಲಾಬಿ ತೋಟವು ಕಬ್ಬನ್‌ ಉದ್ಯಾನಕ್ಕೆ ಹಾಗೂ ಕೇಂದ್ರ ಗ್ರಂಥಾಲಯಕ್ಕೆ ಮೆರುಗು ನೀಡಲಿದೆ. ಗುಲಾಬಿ ತೋಟಕ್ಕೆ ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸುವುದ­ರಿಂದ ನೀರು ವ್ಯರ್ಥವಾಗುವುದನ್ನು ತಪ್ಪಿಸ­ಬಹುದು. ಗಿಡಗಳಿಗೆ ಮಾಹಿತಿ ಫಲಕ ಹಾಕುವ ಮೂಲಕ ಗುಲಾಬಿಯ ಬಗ್ಗೆ ಅಧ್ಯಯನ ಮಾಡು­ವವರಿಗೆ  ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗುವುದು.
– ಮಹಾಂತೇಶ ಮುರಗೋಡ,
ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ
(ಕಬ್ಬನ್‌ ಉದ್ಯಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT