ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ಯತೆಗೆ ಭಂಗವಿಲ್ಲ: ಎಸ್‌ಐಟಿ ಅಭಯ

ಕಪ್ಪುಹಣ ತನಿಖೆ– ದೊಡ್ಡವರು, ಸಣ್ಣವರು ಎಲ್ಲರೂ ಒಂದೇ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):  ವಿದೇಶಿ ಬ್ಯಾಂಕುಗಳಲ್ಲಿ ಕಪ್ಪು­ಹಣದ ಖಾತೆ ಹೊಂದಿರುವ ಅನುಮಾನಕ್ಕೆ ಗುರಿ­ಯಾದ­ವರು ಯಾರೇ ಆಗಿದ್ದರೂ ತನಿಖೆಗೆ ಒಳ­ಪಡಿಸುವ ಜತೆಗೆ ಅಂತಹ ಖಾತೆದಾರರ ಗೋಪ್ಯತೆ­ಯನ್ನೂ ಕಾಯ್ದು­ಕೊಳ್ಳ­­ಲಾಗುವುದು ಎಂದು ಈ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸ್ಪಷ್ಟಪಡಿಸಿದೆ.

ಅಲ್ಲದೇ ಈ ಕುರಿತ ತನಿಖೆಯ ವಸ್ತುಸ್ಥಿತಿ ವರದಿ­ಯನ್ನು ಡಿಸೆಂಬರ್‌ ಮೊದಲ ವಾರದೊಳಗೆ ಸುಪ್ರೀಂ­­ಕೋರ್ಟ್‌ಗೆ ಸಲ್ಲಿಸಲಾಗುವುದು  ಎಂದೂ  ಎಸ್ಐಟಿ ಮುಖ್ಯಸ್ಥ ನ್ಯಾಯಮೂರ್ತಿ ಎಂ. ಬಿ. ಷಾ ಹೇಳಿದ್ದಾರೆ. ‘ಸ್ವಿಟ್ಜರ್‌ಲೆಂಡ್‌ನ ಜಿನೀವಾ ಎಚ್‌ಎಸ್‌ಬಿಸಿ ಬ್ಯಾಂಕಿನಲ್ಲಿ ಖಾತೆದಾರರಾಗಿರುವ ೬೨೭ ಜನರ ಪಟ್ಟಿ­ಯನ್ನು ಸರ್ಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿ­ಸಿದೆ. ಆದರೆ ನಾವು ಇನ್ನೂ ಹೆಚ್ಚಿನ ಖಾತೆದಾರರ ಹೆಸರು­­ಗಳನ್ನು ಕಲೆಹಾಕುತ್ತಿದ್ದೇವೆ’ ಎಂದು ಎಸ್‌ಐಟಿ ಉಪಾಧ್ಯಕ್ಷ ಅರಿಜಿತ್‌ ಪಸಾಯತ್‌ ಗುರುವಾರ ತಿಳಿಸಿದರು.

‘ನಮಗೆ ಯಾರೂ ದೊಡ್ಡವರೂ ಅಲ್ಲ, ಯಾರೂ ಸಣ್ಣವರೂ ಅಲ್ಲ; ಎಲ್ಲರೂ ಒಂದೇ. ಈ ದೇಶ­ವನ್ನು ಲೂಟಿ ಹೊಡೆದವರನ್ನು ಹಿಡಿದು ದಂಡ ವಿಧಿಸುವ ಜತೆಗೆ ಇನ್ನಿತರ ಶಿಕ್ಷೆಯನ್ನು ವಿಧಿಸ­ಲಾ­ಗುವುದು  ಎಂಬ ಮಾತನ್ನು ನಾವು ಕೊಡು­ತ್ತೇವೆ. ಬಹಳಷ್ಟು ಮಂದಿಗೆ ಕಿರಿಕಿರಿ ಆಗುವಂತಹ ಕೆಲಸ ಮಾಡುವುದಕ್ಕೆ ನಾವಿಬ್ಬರೂ  (ಎಸ್‌ಐಟಿ ಮುಖ್ಯಸ್ಥ­­ರಾದ ನ್ಯಾಯಮೂರ್ತಿ ಎಂ.ಬಿ.ಷಾ ಮತ್ತು ನಾನು) ಹೆಸರಾದವರು’ ಎಂದು ಸುದ್ದಿ­ವಾಹಿನಿ­ಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಅವರು ಹೇಳಿದರು.

  ನ್ಯಾಯಮೂರ್ತಿ ಷಾ ಅವರು ಮಾತನಾಡಿ,  ‘ಗೋಪ್ಯತೆ ಕಾಯ್ದುಕೊಳ್ಳುವಿಕೆಯು ಜಾಗತಿಕ ಒಪ್ಪಂದ­ವಾಗಿದೆ. ಈ ಒಪ್ಪಂದದ ನಿಬಂಧನೆ­ಗಳನ್ನು ಉಲ್ಲಂಘಿಸಲಾಗದು. ಒಂದೊಮ್ಮೆ ಉಲ್ಲಂ­ಘಿಸಿ­ದರೆ ಅನ್ಯದೇಶ­ಗಳು ಮುಂದೆ ಭಾರತ­ದೊಂದಿಗೆ ಮಾಹಿತಿ­­ಗಳನ್ನು ಹಂಚಿಕೊಳ್ಳು­ವುದಿಲ್ಲ. ನಾವು ಇಂತಹ ಖಾತೆದಾರರ ಗೋಪ್ಯ ವಿವರ­ಗಳನ್ನು ಬಹಿರಂಗಪಡಿಸಿದರೂ ಅದನ್ನು ಸಂಬಂಧ­ಪಟ್ಟ ವಿದೇಶವು ದೃಢೀಕರಿಸು­ವುದು ಅತ್ಯಗತ್ಯ. ಪಟ್ಟಿ­ಯಲ್ಲಿರುವ ವ್ಯಕ್ತಿ ತನ್ನಲ್ಲಿ ಖಾತೆದಾರ ಎಂಬುದಕ್ಕೆ ವಿದೇಶದಲ್ಲಿ ಸಾಕ್ಷ್ಯ ಇರುತ್ತದೆ. ಆದರೆ ಆ ಸಾಕ್ಷ್ಯ ನಮಗೆ ಸಿಗುವುದಿಲ್ಲ’ ಎಂದರು.

ವಿದೇಶಿ ಬ್ಯಾಂಕುಗಳ ಖಾತೆದಾರರ ಹೆಸರು ಬಹಿ­ರಂಗ­ಗೊಳಿಸಿದರೆ ಅನ್ಯದೇಶಗಳ ಜತೆಗಿನ ಒಪ್ಪಂದದ ಗೋಪ್ಯತೆಯ ಕರಾರನ್ನು ಉಲ್ಲಂಘಿಸಿ­ದಂತಾ­ಗುತ್ತದೆ ಎಂದು ಸರ್ಕಾರ ಬುಧವಾರ  ಸುಪ್ರೀಂ­ಕೋರ್ಟ್‌ನಲ್ಲಿ ಭೀತಿ ವ್ಯಕ್ತಪಡಿಸಿತ್ತು. ಆಗ ಸುಪ್ರೀಂ­ಕೋರ್ಟ್‌ ‘ಈ ಸಂಬಂಧ ನಿಮ್ಮದು ಏನೇ ಅಹವಾಲು ಇದ್ದರೂ ಅದನ್ನು ಎಸ್‌ಐಟಿ ಮುಂದೆ ಹೇಳಿ­ಕೊಳ್ಳಿ’ ಎಂದಿತ್ತು. ಈಗ ಸುಪ್ರೀಂಕೋರ್ಟ್‌ ರಚಿಸಿ­ರುವ ಎಸ್‌ಐಟಿ ಗೋಪ್ಯತೆ ಕಾಯ್ದುಕೊಳ್ಳು­ವು­ದ­­­ರಿಂದ ಸರ್ಕಾರ ಸಮಾಧಾನದ ನಿಟ್ಟುಸಿರು­ಬಿಟ್ಟಿದೆ.

ಕಪ್ಪುಹಣ ಖಾತೆದಾರರನ್ನು ನಿಗದಿತ ಸಮಯ­ದೊಳಗೆ ಹೆಚ್ಚಿನ ತನಿಖೆಗೆ ಒಳಪಡಿಸ­ಲಾಗುವುದು. ತನಿಖೆಗೆ ವೇಗ ನೀಡುವ ಸಲುವಾಗಿ ಎಸ್ಐಟಿ ಇತರ ಸಂಸ್ಥೆಗಳೊಂದಿಗೆ ಅಂಕಿ ಅಂಶಗಳನ್ನು ಕೂಡ ಹಂಚಿಕೊಳ್ಳುತ್ತಿದೆ ಎಂದರು. ‘ಸರ್ಕಾರ ೬೨೭ ಹೆಸರುಗಳ ಪಟ್ಟಿ ನೀಡಿದೆ. ಜತೆಗೆ ನಾವು ಇತರರ ಹೆಸರುಗಳನ್ನೂ ಕಲೆ ಹಾಕು­ತ್ತಿ­ದ್ದೇವೆ. ಇವೆಲ್ಲವುಗಳ ತನಿಖೆಯ ವರದಿಯು ವಿಸ್ತೃತವಾಗಿರಲಿದೆ’ ಎಂದ ಷಾ, ‘ಸರ್ಕಾರದ ಪಟ್ಟಿಯಲ್ಲಿರದ ಹೆಸರುಗಳ ಬಗೆಗೂ ತನಿಖೆ ನಡೆಸುತ್ತೇವೆ’ ಎಂದರು.

‘ಕಪ್ಪುಹಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ­ರಿಂದ ನಾವು ನಿರ್ದಿಷ್ಟವಾದ ಮಾಹಿತಿಗಳನ್ನು  ನಿರೀಕ್ಷಿ­ಸುತ್ತೇವೆ. ಯಾವುದೇ ಅನುಮಾನದ ಪ್ರಕರಣ­ಗಳ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಲು ಕೋರಿ ಜಾಹೀರಾತು ಫಲಕಗಳನ್ನು ಹಾಕುತ್ತೇವೆ’ ಎಂದು ಪಸಾಯತ್‌ ಹೇಳಿದರು. ಕೆಲವು ರಾಜ್ಯಗಳಲ್ಲಿ ಕೆಲವು ಕಂಪೆನಿಗಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಬಗ್ಗೆ ವರದಿಯಲ್ಲಿ ಪ್ರಸ್ತಾಪ­ವಿದ್ದು, ಆ ಬಗ್ಗೆಯೂ ತನಿಖೆ ನಡೆಸ­ಲಾ­ಗು­ವುದು ಎಂದರು.

‘ಮಾಹಿತಿ ಬಹಿರಂಗ ಬೇಡ’
ನವದೆಹಲಿ/ ಬರ್ನ್‌: ಸ್ವಿಟ್ಜರ್‌ಲೆಂಡ್‌– ಭಾರತ ತೆರಿಗೆ ಒಪ್ಪಂದದ ಅನ್ವಯ ಕಪ್ಪು­ಹಣಕ್ಕೆ ಸಂಬಂಧಿಸಿದಂತೆ ನೀಡಲಾಗಿ­ರುವ ಯಾವುದೇ ಮಾಹಿತಿ­ಯನ್ನು ಪ್ರಕ­ರಣದ ವಿಚಾರಣೆಯ ಸಂದರ್ಭದಲ್ಲಿ ‘ನಿರ್ದಿಷ್ಟ ಮತ್ತು ಸೂಕ್ತ’ ಕಾರಣಕ್ಕೆ ಮಾತ್ರ  ಬಹಿರಂಗ­ಪಡಿಸಬಹುದು. ಅದನ್ನು ಹೊರತು­ಪಡಿಸಿ ಬೇರ್‍್ಯಾವುದೇ ಸಂದರ್ಭದಲ್ಲಿ ನ್ಯಾಯಾ­ಲಯಕ್ಕೆ ಕೂಡ ಬಹಿರಂಗ­ಗೊಳಿಸ­ಬಾರದು ಎಂದು ಸ್ವಿಟ್ಜರ್‌ಲೆಂಡ್‌ ಗುರು­ವಾರ ಸ್ಪಷ್ಟಪಡಿಸಿದೆ.

ಧೈರ್ಯವಿದ್ದರೆ ಬಹಿರಂಗಪಡಿಸಿ
ಕೇಂದ್ರ ಸರ್ಕಾರಕ್ಕೆ ತುಸುವಾದರೂ ಧೈರ್ಯ­ವಿದ್ದರೆ ವಿದೇಶಿ ಬ್ಯಾಂಕ್‌ ಖಾತೆ­ಗಳಲ್ಲಿ  ಕಪ್ಪುಹಣವಿಟ್ಟ ಎಲ್ಲ ಭಾರತೀಯ ಖಾತೆದಾರರ ಹೆಸರುಗಳನ್ನು  ಬಹಿರಂಗ­ಪಡಿ­ಸಲಿ. ಆಯ್ದ ಕೆಲವು ಹೆಸರು ಬಹಿರಂಗ­ಪಡಿಸಿದರೆ ಸಾಲದು. ದೇಶದ ಜನತೆಗೆ ಸಂಪೂರ್ಣ ಮಾಹಿತಿ ನೀಡಿ.
– ದಿಗ್ವಿಜಯ್ ಸಿಂಗ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಆರು ತಿಂಗಳಾಗಿದೆ
ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ­ವರ  ಹೆಸರು ಬಹಿರಂಗಪಡಿಸು­ವಂತೆ ಗದ್ದಲ ಮಾಡುತ್ತಿರುವ ಕಾಂಗ್ರೆಸ್‌ನವರು ಆ ಕೆಲಸ ಅಷ್ಟು ಸುಲಭವಾಗಿದ್ದರೆ ಕಳೆದ 50 ವರ್ಷ­ಗಳಿಂದ ಏನು ಮಾಡುತ್ತಿದ್ದರು? ನಾವಿನ್ನೂ ಅಧಿಕಾರಕ್ಕೆ ಬಂದು ಆರು ತಿಂಗಳು ಆಗಿದೆ. ಖಂಡಿತ ಹೆಸರು ಬಹಿರಂಗಪಡಿಸುತ್ತೇವೆ. ಅದರ ಬಿಸಿ ಕಾಂಗ್ರೆಸ್‌ಗೆ ತಾಗುತ್ತದೆ. 
– ವೆಂಕಯ್ಯ ನಾಯ್ಡು, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT