ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗೌರ್ಮೆಂಟ್ ಬ್ರಾಹ್ಮಣ' ಪುರಾಣ

ಅಕ್ಷರ ಗಾತ್ರ

ಸಿನಿಮಾದಲ್ಲಿ ಜಾತಿ ಇಲ್ಲವೇ ಇಲ್ಲ ಎಂಬುದು ಸತ್ಯಕ್ಕೆ ದೂರವಾದುದು ಎಂಬುದು ನನಗೆ ಅನುಭವದಿಂದ ತಿಳಿದಿದೆ. ಅರವಿಂದ ಮಾಲಗತ್ತಿಯವರು ಬಾಲ್ಯದಿಂದ ಇತ್ತೀಚಿನವರೆಗೆ ಅನುಭವಿಸಿದ ಜಾತಿ ಆಧಾರಿತ ನೋವುಗಳನ್ನು ಅಕ್ಷರ ರೂಪದಲ್ಲಿರಿಸಿರುವ ಕೃತಿ `ಗೌರ್ಮೆಂಟ್ ಬ್ರಾಹ್ಮಣ'.

ಈ ಕೃತಿಯನ್ನು ಆಧರಿಸಿ ನಾನು ಸಿನಿಮಾ ಮಾಡಲು ಹೊರಟಾಗ ಮೊದಲು ಸಮಸ್ಯೆ ಎದುರಾದದ್ದು ವಾಣಿಜ್ಯ ಮಂಡಳಿಯಲ್ಲಿ. ಅವರು `ಗೌರ್ಮೆಂಟ್ ಬ್ರಾಹ್ಮಣ' ಟೈಟಲ್ ಕೊಡಲು ಸಾಧ್ಯವಿಲ್ಲ ಎಂದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕೃತಿಯನ್ನೇ ಆಧರಿಸಿ, ಅದೇ ಹೆಸರಿನಲ್ಲಿ ಸಿನಿಮಾ ಮಾಡಿದರೆ ತಪ್ಪೇನು? ಇದರಲ್ಲಿ ಯಾವ ಜಾತಿಯನ್ನೂ ಅವಹೇಳನ ಮಾಡುವಂಥದ್ದಿಲ್ಲ. ಇದಕ್ಕೂ ಮಿಗಿಲಾಗಿ ದಲಿತ ತಾನು ಅವಹೇಳನಕ್ಕೆ ತುತ್ತಾಗಿದ್ದನ್ನ ಅವನಾಗಿಯೇ ಆ ಹೆಸರಿನಲ್ಲಿ ಹೇಳಿಕೊಂಡಿರುವ ವಸ್ತು ಇದು ಎಂದು ದಲಿತ ಸಂಘಟನೆಗಳವರು ಸ್ಪಷ್ಟಪಡಿಸಿದರು.

ಇಂಥ ಹೆಸರು ನೀಡುವುದಿಲ್ಲ ಎನ್ನುತ್ತಿರುವುದು ಸಾಹಿತ್ಯ ವಲಯಕ್ಕೆ ಮಾಡುವ ಅಪಮಾನ ಎಂದು ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಘಟನೆಗಳು ಪತ್ರಗಳನ್ನು ಬರೆದು, ಟೈಟಲ್ ನೀಡದಿದ್ದರೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದ ಮೇಲೆಯೇ ಟೈಟಲ್ ಸಿಕ್ಕಿದ್ದು ಇದಕ್ಕಾಗಿ ನಾಲ್ಕು ತಿಂಗಳು ಚಿತ್ರೀಕರಣವನ್ನೇ ಮುಂದೂಡಿ, ಕಲಾವಿದರೆಲ್ಲರ ದಿನಾಂಕಗಳು ಹೊಂದಾಣಿಕೆಯಾಗದೆ ಕೆಲವು ಬದಲಾವಣೆಗಳೂ ಆದವು, ಹಣದ ನಷ್ಟವೂ ಆಯಿತು.

ಚಿತ್ರ ನಿರ್ಮಾಣಕ್ಕೆ ಅನುವಾಗುತ್ತಿದ್ದಂತೆಯೇ `ನಿರ್ದೇಶಕನೂ ದಲಿತನಾ' ಎಂಬ ಪ್ರಶ್ನೆಗಳು ಅಲ್ಲಲ್ಲಿ ಕೇಳಿಬಂದವು. ಹಾಗೆಯೇ ದಲಿತರ ಸಿನಿಮಾ ಮಾಡುತ್ತಿರುವುದು ಸರಿ, ಆದರೆ ಎಡಗೈಯವರ ಕೃತಿಯನ್ನೇ ಏಕೆ ತೆಗೆದುಕೊಳ್ಳಬೇಕಿತ್ತು, ಬಲಗೈಯವರು ಕೃತಿ ರಚಿಸಿಲ್ಲವೇ? ಅದನ್ನು ಯಾಕೆ ತೆಗೆದುಕೊಳ್ಳಲಿಲ್ಲ ಎಂದು ಒಂದೇ ಸಮಾಜದ ಆದರೆ ಎರಡು ಕವಲಾಗಿರುವ ಸಮುದಾಯಗಳಿಂದ ಟೀಕೆಗಳು ಬಂದವು.

ಇವುಗಳನ್ನೆಲ್ಲ ಮೀರಿಯೂ ಚಿತ್ರ ಸಿದ್ಧವಾಗಿ, ಬಿಡುಗಡೆಯಾದಾಗಲೂ ಆ ಗುಂಪಿನವರ ಕತೆಯ ಸಿನಿಮಾ ನೋಡುವುದೇಕೆ ಎಂದು ಒಂದು ಗುಂಪಿನವರೂ ಸಿನಿಮಾ ಮಂದಿರದತ್ತ ತಲೆಯನ್ನೇ ಹಾಕಲಿಲ್ಲ. ಮತ್ತೊಂದೆಡೆ ಮೇಲ್ವರ್ಗದ ಜನ ಅವರ ಕತೆಯನ್ನ ನೋಡುವ ದರ್ದು ತಮಗೇನಿದೆ ಎಂದು ಬಿಟ್ಟಿದ್ದೂ ಉಂಟು. ಹಾಗೂ ಹೀಗೂ ಬಂದವರು, `ಇದೆಲ್ಲ ಐವತ್ತು ವರ್ಷದ ಕತೆಯಾಯಿತು, ಆಗ ಆ ಸಮುದಾಯದವರು ಶೋಷಣೆಗೆ ಒಳಗಾಗಿದ್ದು ನಿಜ.

ಆದರೀಗ ಸ್ಥಿತಿ ಬದಲಾಗಿದೆ, ಅವರೇ ನಮ್ಮನ್ನ ಶೋಷಿಸುತ್ತಿದ್ದಾರೆ' ಎಂಬಂಥ ಈರ್ಷ್ಯೆಯ ಮಾತುಗಳನ್ನಾಡಿಬಿಟ್ಟದ್ದು ಮತ್ತೊಂದು ಕಥೆ. ಇದರಿಂದ ಜಾತಿ ವ್ಯವಸ್ಥೆ ಎಂಬುದು ಚಿತ್ರರಂಗದಲ್ಲಿ ಮಾತ್ರವಲ್ಲ, ನೋಡುವ ಪ್ರೇಕ್ಷಕರಲ್ಲಿ ಇನ್ನೂ ಇದೆ ಎಂಬುದು ಅರಿವಾಯಿತು.

ಸಮಾಧಾನದ ಅಂಶವೆಂದರೆ ಜಾತಿಯೊಳಗೊಂದು ಜಾತಿ, ಅವರೆಲ್ಲರಿಗಿಂತ ಮೇಲಿನವರು ಎಂದುಕೊಳ್ಳುತ್ತಿರುವವರಲ್ಲಿ ಕೆಲವರು ಯಾವೆಲ್ಲಾ ಅಭಿಪ್ರಾಯಗಳನ್ನು ಸಿನಿಮಾ ಬಗ್ಗೆ ಹೊರಹಾಕಿದರೋ, ಅದೇ ರೀತಿಯಲ್ಲಿ ನನ್ನ ಸಿನಿಮಾಗೆ ಕಲಾವಿದರಾಗಿ, ತಂತ್ರಜ್ಞರಾಗಿ ಕಾರ್ಯ ಮಾಡಿದವರಲ್ಲಿ ಹಲವರು ಇಂಥ ಸಿನಿಮಾಗಳಲ್ಲಿ ಮಾಡುವುದೇ ಸಾಮಾಜಿಕ ಜವಾಬ್ದಾರಿ ಎಂದು ಖುಷಿಯಿಂದಲೇ ಪಾಲ್ಗೊಂಡಿದ್ದು ಸಂತಸ ತರುವಂಥದ್ದು. ಇಂಥವರಲ್ಲಿ ರಮೇಶ್ ಭಟ್, ಮಂಡ್ಯ ರಮೇಶ್, ಪ್ರವೀಣ್ ಗೋಡ್ಖಿಂಡಿಯಂಥವರ ಹೆಸರನ್ನ ನೆನೆಯಲೇಬೇಕು.

ಜಾತಿ ಎಂಬುದು ಚಿತ್ರದ ಆರಂಭದಿಂದ ಪ್ರೇಕ್ಷಕನ ತನಕ ಇದೆ ಎಂಬ ನಗ್ನಸತ್ಯ ಅರಿವಾದಂತೆಯೇ, ಇಂಥ ಕೆಲ ಮಂದಿಯ ನಡುವೆಯೇ ಜಾತಿಯ ಲಗಾಮಿಲ್ಲದೆ ಆಸ್ಥೆ ತೋರುವ ಮಂದಿಯೂ ಇದೇ ರಂಗದಲ್ಲಿದ್ದಾರೆ ಎಂಬುದು ಕೂಡ ಅರಿವಾಯಿತು. ಅದೇ ಸಕಾರಾತ್ಮಕ ಅಂಶವನ್ನೇ ಮುಖ್ಯ ಮಾಡಿಕೊಂಡು ಹೊರಟರೆ ಸಿನಿಮಾ ಜಾತಿ  ಪಂಕ್ತಿ ಭೇದವಿಲ್ಲದ ರಂಗವಾಗಿ ಮುಂದಾದರೂ ಬಲವಾಗಿ ಬೆಳೆದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT