ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರವ್ಯೂಹದಲ್ಲಿ ಡಿಂಪಲ್ ಕ್ವೀನ್

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಪುನೀತ್‌  ನಟನೆಯ ‘ಚಕ್ರವ್ಯೂಹ’ ಇಂದು ತೆರೆಕಂಡಿದೆ. ‘ಪುನೀತ್ ಹಾಗೂ ನನ್ನ ಜೋಡಿಯನ್ನು ತೆರೆಯ ಮೇಲೆ ನೋಡಲು ಚಿತ್ರರಸಿಕರು ಕಾಯುತ್ತಿದ್ದಾರೆ’ ಎನ್ನುವ ಪುಲಕ ಚಿತ್ರದ ನಾಯಕಿ ರಚಿತಾ ಅವರದ್ದು.

* ಪುನೀತ್ ಜೊತೆ ಮೊದಲ ಬಾರಿ ಡುಯೆಟ್ ಹಾಡಿದ್ದು ಹೇಗಿತ್ತು?
ಖುಷಿ ಆಗಿದೆ. ರಾಜಕುಮಾರ್ ಅವರನ್ನು ನಾನು ‘ಅಭಿನಯದ ದೇವರು’ ಅಂದುಕೊಂಡಿದ್ದೇನೆ. ಅವರನ್ನಂತೂ ನೋಡಿಲ್ಲ. ಅವರ ಮಗನ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿತು. ಅದಕ್ಕಾಗಿ ದೇವರಿಗೆ ಋಣಿ. ಅಪ್ಪು ತುಂಬಾ ಸಿಂಪಲ್ ಅಂತ ಸಾಕಷ್ಟು ಜನ ಹೇಳಿದ್ದರು. ಆದರೆ ಸ್ವತಃ ಅವರ ಜೊತೆ ಕೆಲಸ ಮಾಡುವಾಗ ಅದು ನನಗೂ ಗೊತ್ತಾಯಿತು.

ಮೊದಲ ದಿನ ಅವರೊಂದಿಗೇ ನನ್ನ ಕಾಂಬಿನೇಶನ್ ಇತ್ತು. ನಾನು ತುಂಬಾ ಉತ್ಸಾಹದಲ್ಲಿದ್ದೆ. ಯಾವ ರೀತಿ ಅಭಿನಯ ಬೇಕು ಎಂದರೂ ಪುನೀತ್ ‘ಮಾಡ್ತೀನಿ’ ಅನ್ನುತ್ತಿದ್ದರು. ಮುಂದೆ ಮತ್ತೆ ಅವರೊಂದಿಗೆ ಅಭಿನಯಕ್ಕೆ ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ.

* ಸಿನಿಮಾದಲ್ಲಿ ಏನಿದೆ?
ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ. ಒಬ್ಬ ರಾಜಕಾರಣಿಗೆ ಸಮಸ್ಯೆ ಆದರೆ ಅವರ ಬೆಂಬಲಕ್ಕೆ ರಾಜಕಾರಣಿಗಳು ನಿಲ್ಲುತ್ತಾರೆ. ಅದೇ ಸಾರ್ವಜನಿಕರಿಗೆ ತೊಂದರೆ ಆದರೆ ಯಾರೂ ಬರುವುದಿಲ್ಲ. ಪಕ್ಕದ ಮನೆಯವರೇ ಸಹಾಯಕ್ಕೆ ಬಾರದ ಸ್ಥಿತಿ ಇದೆ. ನಮ್ಮ ನಮ್ಮ ಕಷ್ಟಗಳನ್ನು ಬಗೆಹರಿಸಲು ಯಾರಿಗೂ ಕಾಯದೇ ನಾವೇ ಒಂದಾಗಬೇಕು ಎಂಬ ಸಂದೇಶವಿದೆ. ಜೂನಿಯರ್ ಎನ್‌ಟಿಆರ್, ಕಾಜಲ್ ಅಗರ್ವಾಲ್ ಸಿನಿಮಾಕ್ಕೆ ಹಾಡಿದ್ದಾರೆ. ಸಿನಿಮಾದಲ್ಲಿ ಭರಪೂರ ಮನರಂಜನೆ ಇದೆ.

* ನಿಮ್ಮ ಅಭಿಮಾನಿಗಳಿಗೆ ಏನಿದೆ?
ಆರಂಭದಲ್ಲಿ ನಿರ್ದೇಶಕರು ಕಥೆ ಹೇಳುವಾಗ ನನ್ನ ಪಾತ್ರಕ್ಕೆ ಅಷ್ಟೊಂದು ಮಹತ್ವ ಇಲ್ಲ ಎಂದುಕೊಂಡಿದ್ದೆ. ಆದರೆ ಚಿತ್ರೀಕರಣದ ಅವಧಿಯಲ್ಲಿ– ಇದು ಈವರೆಗಿನ ನನ್ನ ಎಲ್ಲ ಪಾತ್ರಗಳಿಂತ ಹೆಚ್ಚು ಕೆಲಸ ತೆಗೆಸಿದ ಪಾತ್ರ ಅನ್ನಿಸಿತು. ಚಿತ್ರದಲ್ಲಿ ಅಂಜಲಿ ಎಂಬ ಪಾತ್ರ ನಿರ್ವಹಿಸಿದ್ದೇನೆ. ನಾಯಕನಿಗೆ ಸಮಾನವಾದ ಪಾತ್ರ ಅದು.

ಎಲ್ಲರೊಂದಿಗೆ ಖುಷಿಯಾಗಿರುವ, ತರ್ಲೆ ಮಾಡುವ, ನಾಯಕನ ಬೆನ್ನು ಹತ್ತುವ ಗುಣಗಳು ಪಾತ್ರಕ್ಕಿದ್ದರೂ ಎರಡನೇ ಭಾಗದಲ್ಲಿ ಗಾಂಭೀರ್ಯವೂ ಇದೆ. ಎರಡು ಸಾಹಸ ದೃಶ್ಯಗಳಲ್ಲಿ ಪುನೀತ್ ಜೊತೆ ನಾನೂ ಇದ್ದೇನೆ. ರೋಪ್ ಶಾಟ್‌ನಲ್ಲೂ ಕಾಣಿಸಿಕೊಂಡಿದ್ದೇನೆ. ಅದು ಎಷ್ಟು ಕಷ್ಟ, ನಾಯಕರು ಎಷ್ಟು ಕಷ್ಟ ಪಟ್ಟು ಅಂಥ ದೃಶ್ಯಗಳಲ್ಲಿ ಅಭಿನಯಿಸುತ್ತಾರೆ ಎಂದು ಆಗಲೇ ತಿಳಿದಿದ್ದು.

‘ರಚಿತಾ ಇನ್ನುಮುಂದೆ ಡಿಂಪಲ್ ಕ್ವೀನ್ ಅಲ್ಲ, ಆ್ಯಕ್ಷನ್ ಕ್ವೀನ್’ ಎಂದು ಪುನೀತ್ ಹೇಳಿದ್ದರು. ಮೊದಲ ಬಾರಿ ನನಗೆಂದೇ ಒಂದು ಹಾಡಿದೆ. ಆರಂಭದಿಂದ ಕೊನೆಯವರೆಗೆ ಎಲ್ಲ ರೀತಿಯ ಭಾವಗಳನ್ನೂ ಪಾತ್ರದಲ್ಲಿ ಮೂಡಿಸಿದ್ದೇನೆ.

* ರಚಿತಾ ಸ್ಟಾರ್ ನಟರೊಂದಿಗಷ್ಟೇ ತೆರೆ ಹಂಚಿಕೊಳ್ಳುತ್ತಾರೆ ಎಂಬ ಆರೋಪ ಇದೆಯಲ್ಲ?
ಕೆಲವರು ಆ ರೀತಿ ಮಾತನಾಡುತ್ತಾರೆ. ಜನಪ್ರಿಯ ನಾಯಕರೊಂದಿಗೆ ನಟಿಸುತ್ತಿದ್ದೇವೆ ಎಂಬುದು ನಮಗೆ ಪ್ಲಸ್ ಪಾಯಿಂಟ್ ಅಂತೂ ಹೌದು. ಆದರೆ ನಾನು ನನ್ನ ಪ್ರತಿಭೆಯನ್ನು ಸರಿಯಾಗಿ ತೋರಿಸದಿದ್ದರೆ ನನ್ನ ಐದೂ ಸಿನಿಮಾಗಳಿಗೆ ಸ್ಟಾರ್ ನಟರ ಜೊತೆ ಅವಕಾಶ ಸಿಗುತ್ತಿರಲಿಲ್ಲ.

ಸ್ಟಾರ್ ನಟರ ಪಕ್ಕ ನಿಂತು ಅಭಿನಯಿಸುವುದು ಸುಲಭವಲ್ಲ. ನಾಯಕನ ಸಮಾನವಾಗಿ ಅಭಿನಯಿಸಬೇಕು ಎಂಬ ಒತ್ತಡ ಇರುತ್ತದೆ. ಚಿತ್ರದಲ್ಲಿ ನಾನೂ ಇದ್ದೇನೆ ಎಂಬುದು ಪ್ರೇಕ್ಷಕನಿಗೆ ಗೊತ್ತಾಗಬೇಕೆಂದರೆ ಚೆನ್ನಾಗಿ ಅಭಿನಯಿಸಲೇಬೇಕು.

* ‘ಚಕ್ರವ್ಯೂಹ’ಕ್ಕೆ ರಚಿತಾ ನಾಯಕಿ ಎಂದಾಗ ಪುನೀತ್ ಅಭಿಮಾನಿಗಳು ವಿರೋಧಿಸಿದ್ದರು. ಈಗ ಸಿನಿಮಾ ಮುಗಿದಿದೆ. ನಿಮ್ಮ ಪ್ರತಿಕ್ರಿಯೆ ಏನು?
ವಿರೋಧಿಸಿದವರು ಯಾರೇ ಆಗಿರಬಹುದು, ಇವತ್ತು ತೆರೆಯ ಮೇಲೆ ನಮ್ಮನ್ನು ನೋಡಿದರೆ ಅವರೆಲ್ಲ ಖುಷಿಯಾಗುತ್ತಾರೆ. ಈಗಾಗಲೇ ಒಳ್ಳೆಯ ಜೋಡಿ, ಕ್ಯೂಟ್ ಕಪಲ್ ಎಂಬೆಲ್ಲ ಮಾತುಗಳು ಕೇಳಿಬಂದಿವೆ. ಯಾವಾಗ ಈ ಜೋಡಿಯನ್ನು ತೆರೆಯ ಮೇಲೆ ನೋಡುತ್ತೇವೆ ಎಂದು ಚಿತ್ರರಸಿಕರು ಕಾಯುತ್ತಿದ್ದಾರೆ.

ಯಾರಾದರೂ ಟೀಕಿಸಿದಾಗ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ ಟೀಕೆಯ ಬದಲಾಗಿ ಅವರೇ ನಮ್ಮನ್ನು ಮೆಚ್ಚಿಕೊಳ್ಳುವಂತೆ ಮಾಡಬೇಕು. ಅದರಿಂದ ನಾವೂ ಖಷಿಯಾಗಿರುತ್ತೇವೆ, ಟೀಕಿಸಿದವರಿಗೂ ಖುಷಿಯಾಗುತ್ತದೆ. ಈಗ ಆಗಿರುವುದೂ ಅದೇ. ಅಂದಹಾಗೆ, ಚಿತ್ರರಂಗದಲ್ಲಿ ಯಾವುದೇ ಗುಂಪುಗಾರಿಕೆ ಇರುವುದು ನನಗಂತೂ ಗೊತ್ತಿಲ್ಲ. ನಾನು ಯಾವುದೇ ಗುಂಪಿಗೆ ಸೇರಿದವಳಲ್ಲ.

ನಾನು ಯಾವುದೋ ಒಂದು ಗುಂಪಿನಲ್ಲಿ ಗುರ್ತಿಸಿಕೊಳ್ಳುವುದಾದರೆ ನನಗೆ ಎಲ್ಲ ಪ್ರಮುಖ ನಾಯಕರೊಂದಿಗೆ ಅಭಿನಯಿಸುವ ಅವಕಾಶ ಸಿಗುತ್ತಿರಲಿಲ್ಲ. ನಾನು ಕನ್ನಡ ಸಿನಿಮಾ ಉದ್ಯಮದ ಭಾಗ. ಎಲ್ಲರೊಂದಿಗೂ ಕೆಲಸ ಮಾಡಲು ಬಯಸುತ್ತೇನೆ.

* ಬೇರೆ ಸಿನಿಮಾಗಳು?
‘ಚಕ್ರವ್ಯೂಹ’ದ ನಂತರ ‘ಪುಷ್ಪಕ ವಿಮಾನ’ ಬಿಡುಗಡೆಯಾಗುತ್ತದೆ. ಅದಾದ ನಂತರ ‘ಭರ್ಜರಿ’. ‘ಪುಷ್ಪಕ ವಿಮಾನ’ ಮಾತಿನ ಭಾಗ ಮುಗಿದಿದ್ದು ಜುಲೈನಲ್ಲಿ ಬಿಡುಗಡೆಯ ನಿರೀಕ್ಷೆ ಇದೆ. ‘ಭರ್ಜರಿ’ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಈ ವರ್ಷ ಈವರೆಗೆ ನಾನು ಸಹಿ ಮಾಡಿರುವ ಒಂದೇ ಚಿತ್ರ ‘ಪುಷ್ಪಕ ವಿಮಾನ’. ಈ ಚಿತ್ರದ ಮೇಲೆ ನನಗೆ ತುಂಬಾ ನಿರೀಕ್ಷೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT