ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುರ ಸಾರಿಗೆ ವ್ಯವಸ್ಥೆ: ನಾಳೆ ಚಾಲನೆ

Last Updated 23 ಮೇ 2016, 19:44 IST
ಅಕ್ಷರ ಗಾತ್ರ

ಬೆಂಗಳೂರು: ಬಿಎಂಟಿಸಿ ಸಂಚಾರ ವ್ಯವಸ್ಥೆಯನ್ನು ಸುಧಾರಿಸಿ, ಆದಾಯದಲ್ಲಿ ಗಣನೀಯ ಹೆಚ್ಚಳ ಮಾಡುವ ಉದ್ದೇಶ ಹೊಂದಿರುವ  ‘ಚತುರ ಸಾರಿಗೆ ವ್ಯವಸ್ಥೆ (‘ಇಂಟೆಲಿಜೆಂಟ್‌ ಟ್ರಾನ್ಸ್‌ಪೋರ್ಟ್‌ ಸಿಸ್ಟಮ್‌–ಐಟಿಎಸ್‌’)  ಬುಧವಾರದಿಂದ ಜಾರಿಗೆ ಬರಲಿದೆ.

ಒಂದೂವರೆ ವರ್ಷದಿಂದ ಯಲಹಂಕ ಡಿಪೊದಲ್ಲಿ (ಡಿಪೊ ಸಂಖ್ಯೆ 11) ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿದೆ. ಬಿಎಂಟಿಸಿಯಲ್ಲಿ ಬುಧವಾರ ಮಧ್ಯಾಹ್ನ 12.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಟಿಎಸ್‌ಗೆ ಚಾಲನೆ ನೀಡಲಿದ್ದಾರೆ.

ಐಟಿಎಸ್ ಅನುಷ್ಠಾನದ ಸಂಬಂಧ 2014ರ ಮಾರ್ಚ್‌ನಲ್ಲಿ ಸಂಸ್ಥೆ ಟೆಂಡರ್‌ ಕರೆದಿತ್ತು. ಐದು ವರ್ಷ­ಗಳ ಐಟಿಎಸ್‌ ಕಾರ್ಯಾಚರಣೆಗೆ ಮುಂಬೈಯ ಟ್ರೈಮ್ಯಾಕ್ಸ್ ಕಂಪೆನಿ ಜತೆ ಒಪ್ಪಂದ ಮಾಡಿಕೊಳ್ಳ­ಲಾಗಿತ್ತು. ಯೋಜನೆಯ ಮೊತ್ತ ₹ 79 ಕೋಟಿ.  ಟ್ರೈಮ್ಯಾಕ್ಸ್‌  ಸಂಸ್ಥೆ ಯೋಜನೆಯ ವಿನ್ಯಾಸ ರೂಪಿಸುವ ಕೆಲಸ ಮಾಡಿದೆ. ಜೊತೆಗೆ ಅಭಿವೃದ್ಧಿ, ಪರೀಕ್ಷೆ, ತಪಾಸಣೆ, ಅಳವಡಿಕೆ, ಕಾರ್ಯ­ನಿರ್ವಹಣೆ, ಸಂವಹನ, ಜಾಲ, ತರಬೇತಿ, ನಿರ್ವಹಣೆ­ಯನ್ನು ಹೊರಬೇಕಿದೆ.
ಬಿಎಂಟಿಸಿ ನಿರ್ದೇಶಕರಾಗಿದ್ದ (ಮಾಹಿತಿ ತಂತ್ರಜ್ಞಾನ) ಕುಮಾರ್‌ ಪುಷ್ಕರ್‌ ಅವರು ಅನುಷ್ಠಾನಕ್ಕೆ ಹೆಚ್ಚಿನ ಕಾಳಜಿ ತೋರಿದ್ದರು. ಬಳಿಕ ಅನುಷ್ಠಾನ ಸ್ವಲ್ಪ ವಿಳಂಬವಾಗಿತ್ತು. ಸಿಬ್ಬಂದಿಗೆ ತರಬೇತಿ ನೀಡುವಾಗ ವಿಳಂಬವಾಯಿತು ಎಂಬುದು ಅಧಿಕಾರಿಗಳ ಸಮಜಾಯಿಷಿ.

ಈಗಿನ ಸಮಸ್ಯೆ ಏನು: ಸಂಸ್ಥೆಯ ಆಡಳಿತ ವ್ಯವಸ್ಥೆ, ಪ್ರಯಾಣಿಕರು–ನಿರ್ವಾಹಕರ ನಡುವಿನ ಕಿತ್ತಾಟ, ಬಸ್‌­ಗಳ ವೇಳಾಪಟ್ಟಿ ಬದಲು, ಬಸ್‌ಗಳ ವಿಳಂಬ ಮತ್ತಿತರ ವಿಷಯಗಳ ಬಗ್ಗೆ ಪ್ರತಿನಿತ್ಯ ನೂರಾರು ಮಂದಿ ದೂರುತ್ತಿದ್ದಾರೆ. ಅಲ್ಲದೆ ಬಸ್‌ಗಳ ಕಾರ್ಯಾ­ಚ­ರಣೆಯ ಸಮಗ್ರ ನಿರ್ವಹಣೆಗೆ ಕಣ್ಗಾವಲು ವ್ಯವಸ್ಥೆಯೂ ಇರಲಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಂಸ್ಥೆ ಮುಂದಾಗಿದೆ.

ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್: ‘ಈ ವ್ಯವಸ್ಥೆಯ ಮೂಲಕ 6,400 ಬಸ್‌­ಗಳಿಗೂ ಜಿಪಿಎಸ್ ಅಳವಡಿಸಿ ಕೇಂದ್ರ ಕಚೇರಿ­­ಯಲ್ಲಿರುವ ನಿಯಂತ್ರಣಾ ಕೊಠಡಿಯಿಂದಲೇ ಮೇಲ್ವಿಚಾರಣೆ ನೋಡಿಕೊಳ್ಳುತ್ತೇವೆ. ಬಸ್‌­ಗಳಲ್ಲಿ ಆಗುವ ಕ್ಷಣ ಕ್ಷಣದ ಬೆಳವಣಿಗೆಗಳನ್ನು ನಿಯಂತ್ರಣ ಕೊಠಡಿಯಲ್ಲೇ ಇದ್ದುಕೊಂಡು ವೀಕ್ಷಿಸಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಈ ವ್ಯವಸ್ಥೆ ಮೂಲಕ ಬಸ್ ಎಲ್ಲಿದೆ, ಎಷ್ಟು ಪ್ರಯಾಣಿಕರು ಇದ್ದಾರೆ ಎಂಬುದೂ ಸೇರಿದಂತೆ ಬಸ್‌ನ ಸಮಗ್ರ ಚಿತ್ರಣ ದೊರಕಲಿದೆ. ಇಲ್ಲಿ ದ್ವಿಮುಖ ಸಂವಹನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಬಹುತೇಕ ಬಸ್‌ಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ’ ಎಂದರು.

ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳು (ಇಟಿಎಂ): ‘ಎಲ್ಲ ಬಸ್‌ಗಳ ನಿರ್ವಾಹಕರಿಗೂ ಇಟಿಎಂ­ಗಳನ್ನು ನೀಡಲಾಗು­ವುದು. ಚಿಲ್ಲರೆ ಹಣಕ್ಕಾಗಿ ನಿರ್ವಾ­ಹಕರು ಹಾಗೂ ಪ್ರಯಾಣಿಕರ ನಡುವಿನ ಜಗಳಕ್ಕೂ ಇಟಿಎಂ ಕೊನೆ ಹಾಡಲಿದೆ. ಒಟ್ಟು 10 ಸಾವಿರ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮೆಷಿನ್‌ಗಳನ್ನು ಸಂಸ್ಥೆ ಒದಗಿಸಲಿದೆ’ ಎಂದು ಅವರು ಹೇಳುತ್ತಾರೆ.

ಮೊಬೈಲ್‌ ಆ್ಯಪ್‌ಗೆ ನವರೂಪ: ಬಿಎಂಟಿಸಿಯ ಮೊಬೈಲ್‌ ಆ್ಯಪ್‌ಗೂ ನವರೂಪ ಸಿಗಲಿದೆ.

ಪ್ರಯಾಣಿಕರ ದೂರು ದುಮ್ಮಾನಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ www.mybmtc.com ವೆಬ್‌ಸೈಟ್‌ ಅನ್ನು 2013ರ ಮಾರ್ಚ್‌ನಲ್ಲಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಬಸ್‌ಗಳ ಬಗ್ಗೆ 2014ರ ಸೆಪ್ಟೆಂಬರ್‌ನಲ್ಲಿ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ದೊರಕಲು ಆರಂಭವಾಗಿತ್ತು. ಓಲಾ, ಉಬರ್ ಟ್ಯಾಕ್ಸಿ ಕಂಪೆನಿಗಳ ಮೊಬೈಲ್‌ ಆ್ಯಪ್‌ಗೆ ಹೋಲಿಸಿದರೆ ಇದು ತೀರಾ ಹಿಂದುಳಿದಿದೆ ಎಂಬ ಆಕ್ಷೇಪ ಪ್ರಯಾಣಿಕರಿಂದ ವ್ಯಕ್ತವಾಗಿತ್ತು. ಹೀಗಾಗಿ ಮೊಬೈಲ್‌ ಆ್ಯಪ್‌ಗೆ ಹೊಸ ರೂಪ ನೀಡಲು ಸಂಸ್ಥೆ ನಿರ್ಧರಿಸಿದೆ. ಇದರಲ್ಲಿ ಬಸ್‌ಗಳ ಸಂಚಾರದ ನೈಜ ಮಾಹಿತಿ ಲಭ್ಯವಾಗಲಿದೆ.

‘ಆರಂಭಿಕ ಹಂತದಲ್ಲಿ ಸಾವಿರ ಬಸ್‌ಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಕೆಲವೇ ವಾರಗಳಲ್ಲಿ 6400 ಬಸ್‌ಗಳ ಬಗ್ಗೆಯೂ ವಿವರ ಸಿಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮುಖ್ಯಾಂಶಗಳು
* ಒಂದೂವರೆ ವರ್ಷದಿಂದ ಯಲಹಂಕ ಡಿಪೊದಲ್ಲಿ ಪ್ರಾಯೋಗಿಕ ಜಾರಿ
* 6400 ಬಸ್‌ಗಳಿಗೂ ಜಿಪಿಎಸ್‌ ಅಳವಡಿಕೆ
* ಮೊಬೈಲ್‌ ಆ್ಯಪ್‌ಗೆ ಸಿಗಲಿದೆ ನವರೂಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT