ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆಯ ಗಂಟು ಬಿಚ್ಚುವ ಅಪಾಯಗಳ ಅನಾವರಣ

Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಇಲ್ಲಿ ಬಣ್ಣಗಳೇ ಇಲ್ಲ; ಹೆಣೆದ ಈ ಹಾಡು ನೀವು ತೊಡಲೆಂದಲ್ಲ; ನೋವ ಅಳೆಯುವ ಮಾಪು ಇನ್ನೂ ಬಂದಿಲ್ಲ; ಕಳಂಕ ಮಮತೆಗಳೆಲ್ಲ ಅದಲು ಬದಲು ಎಲ್ಲದಕ್ಕೂ ಇಲ್ಲಿ ಪ್ರತ್ಯಕ್ಷದರ್ಶಿಗಳಿಲ್ಲ; ಪದವಿದು ನಂಬಿಕೆಯ ರಿಯಾಯಿತಿ ಬೇಡುವುದಿಲ್ಲ; ಬರೆದವನ ಬಡಬಡಿಕೆಯಲ್ಲ; ಕಣ್ಣಹನಿಯ ಸ್ವಗತ ತೋರಿ ತಾಕುವ ತಾಕತ್ತು ಯಾವುದರಲ್ಲೂ ಇಲ್ಲ– ಎತ್ತ ನೋಡಿದರೂ ಈ ಕವಿಗೆ ಅಲ್ಲ ಇಲ್ಲಗಳೇ  ಕಣ್ಣಿಗೆ ರಾಚುತ್ತಿವೆ. ಕೆಳಸ್ತರದವನೊಬ್ಬನ ಸ್ಮೃತಿಕೋಶದಲ್ಲಿ ಅಲ್ಲ–ಇಲ್ಲಗಳ ಹೊರತು ಬೇರೇನು ಇರಲು ಸಾಧ್ಯ?

ಒಣಮರ ಈ ಊರು
ಹುಟ್ಟಿದ್ದೇ ಹೀಗೆ ಎಂಬಂತೆ ನಿಂತಿದೆ
ಎಲ್ಲದಕ್ಕೂ ಸಾಕ್ಷಿಯಾಗಿ
ಹುಡುಕಿದರೂ ಸಿಗುವುದಿಲ್ಲ
ಒಂದು ಹನಿ ಜೀವ...
. . . . . . . .
ವರ್ತಮಾನದ ಕೇಡುಗಳನ್ನು ಪಟ್ಟಿಹಾಕಿಕೊಂಡು ಹೊರಟವನಂತೆ ಕಾಣುವ ಈ ಕವಿಗೆ ಪರಿಹಾರವಾಗಿ ಬುದ್ಧಗುರುವಿನ ಕರುಣಾಮೈತ್ರಿಯ ಬೆಳಕು ಒಂದು ಆಶಯವಾಗಿ ಗೋಚರಿಸುತ್ತದೆ. ಅಲ್ಲಲ್ಲಿ ಬಿಡಿಬಿಡಿಯಾಗಿ ಅದು ಕಾಣಿಸುತ್ತದೆ. ಬುದ್ಧಗುರುವಿನ ಲೋಕಜೀವಿಗಳ ಪರವಾದ ಈ ನಿಲುವು ಕೇವಲ ಉಪದೇಶವಾಗಿ ಬರಲಿಲ್ಲ. ಬದಲಿಗೆ ಅದೊಂದು ಜೀವನ ವಿಧಾನವಾಗಲು ಬೇಕಾದ ವಿಸ್ತಾರವಾದ ತಾತ್ವಿಕತೆಯ ಉತ್ಪನ್ನವಾಗಿ ಬಂತು. ಅದು ಕಾವ್ಯದ ತತ್ವರಾಜಕಾರಣ ಆಗಬೇಕಾದರೆ ಆ ತತ್ವಸಂಹಿತೆ ಕಾವ್ಯದ ಒಡಲನ್ನು ತುಂಬಿಕೊಳ್ಳಬೇಕು. ಅಂತಹ ಸಿದ್ಧತೆಗಳಾಗಲೀ, ಗಂಭೀರ ಪ್ರಯತ್ನಗಳಾಗಲೀ ಕಾವ್ಯದ ಅಂತಸ್ಸತ್ವವಾಗದೇ ಹೋದರೆ ಅವೆಲ್ಲ ಮೇಲ್ಪದರದ ಮಾತುಗಳಾಗಿ ಪರಿಣಾಮಹೀನವಾಗುತ್ತವೆ.

ಕನ್ನಡ ಕಾವ್ಯದ ಉದ್ದಕ್ಕೂ ಇಂತಹ ಗಂಭೀರ ತತ್ವರಾಜಕಾರಣ ಚಾಲ್ತಿಯಲ್ಲಿದೆ. ಉದಾಹರಣೆಯೊಂದನ್ನು ಗಮನಿಸುವುದಾದರೆ, ಆಧುನಿಕ ಕನ್ನಡ ಕಾವ್ಯದ ಒಂದು ವರ್ಗದ ಕವಿಗಳು ಇಂದಿಗೂ ಕೃಷ್ಣತತ್ವವನ್ನು ತಮ್ಮ ಕಾವ್ಯದಲ್ಲಿ ತತ್ವರಾಜಕಾರಣದ ಉದ್ಯೋಗಕ್ಕೆ ಯಶಸ್ವಿಯಾಗಿ ಬಳಸಿಕೊಂಡಿದ್ದಾರೆ. ಕೃಷ್ಣನನ್ನು ಕುರಿತು ನೂರಾರು ಕವನಗಳನ್ನು ರಚಿಸಿದ್ದಾರೆ. ಅವೆಲ್ಲ ಕೃಷ್ಣನ ಲೋಕಪ್ರೇಮದ ಮಹತ್ವವನ್ನು ಸಾರುವುದಕ್ಕೆಂದು ಮೇಲ್ಪದರದಲ್ಲಿ ಗೋಚರಿಸಿದರೂ ಅದರಿಂದ ಬರುತ್ತಿರುವ ಜಾತಿರಾಜಕಾರಣದ ವಾಸನೆಯನ್ನು ಗಮನಿಸದೆ ಇರಲು ಸಾಧ್ಯವಿಲ್ಲ. ಯಾಕೆಂದರೆ ಇವರು ಯಾರೂ ಶೈವ ತತ್ವದ ಹತ್ತಿರವೂ ಸುಳಿಯುವುದಿಲ್ಲ.

ಈ ಮೌನಕ್ಕೆ ಮಾತಿಗಿಂತ ಹೆಚ್ಚಿನ ದನಿಯಿದೆ. ವಚನ, ಜೈನ, ಬೌದ್ಧ ಮುಂತಾದ ದರ್ಶನಗಳ ತಾತ್ವಿಕತೆಯನ್ನು ಕಾವ್ಯ ತತ್ವವನ್ನಾಗಿಸಿಕೊಳ್ಳುವ ಹಂಬಲಕ್ಕೆ ಇರಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳದೆ ಅವುಗಳ ಪರವಾದ  ಸಾಂಸ್ಕೃತಿಕ ರಾಜಕಾರಣವನ್ನು ಕಾವ್ಯದ ಮೂಲಕ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಸಾಲುಗಳು ಹೊರಗೇ ನಿಲ್ಲುತ್ತವೆ:
.....
ಸಹೃದಯಿ
ಬುದ್ಧ ಗಂಟೆಯ ಸದ್ದಿನಲಿ
ಹೃದಯ ನುಡಿಸುತ್ತಿರಲಿ
ಕರುಣ ಗೀತ

ಕಲಿಗಾಲಕ್ಕೆಂದೇ
ಇರುವುದು
ಬೋಧಿ ನೆರಳಿನ ಹಾದಿ
ಬೆಳಕು ನಡೆದ ದಾರಿಯಲಿ
ಹೆಜ್ಜೆಗುರುತು
ಕರೆಯುತಿವೆ ಎದೆ ಹಾಸಿ
ತಥಾಗತನಿಗೆ ನಮಿಸಿ

ವಸಂತ ಮತ್ತು ಶ್ರಾವಣ– ಆಧುನಿಕ ಕನ್ನಡ ಕಾವ್ಯದಲ್ಲಿ ಅನೇಕ ಸಾರಿ ಬಂದುಹೋಗಿವೆ. ಈ ಸಂಭ್ರಮಗಳ್ಯಾವುವೂ ಈ ನೆಲದಲ್ಲಿ ಈಗ ಉಳಿದಿಲ್ಲ. ನಿಗಿ ನಿಗಿ ಉರಿಯುತ್ತಿರುವ ವರ್ತಮಾನದ ವ್ಯಾಪಾರೀ ಜಗತ್ತು ಇವುಗಳನ್ನು ಜಾತ್ರೆಯಲ್ಲಿ ಮೈಸೂರುಪಾಕನ್ನು ಜೋಡಿಸಿಟ್ಟು ಮಾರುವಂತೆ ಮಾರುತ್ತಿದೆ. ಹಾಗಾಗಿ ಕವಿದುಕೊಳ್ಳುವ ದಟ್ಟ ವಿಷಾದದಿಂದ ಯಾವ ಕವಿಯೂ ಮುಕ್ತನಾಗಿ ಬದುಕಲೂ ಬರೆಯಲೂ ಸಾಧ್ಯವಿಲ್ಲ. ಆದರೆ ಇಂತಹ ಕೇಡುಗಾಲದ ನಿರಂತರ ಸರಣಿಯೇ ನಮ್ಮ ಚರಿತ್ರೆಯಾಗಿರುವಾಗ, ಹಿಂದೆ ಹೋಗಿ ಒಳಿತನ್ನು ಹುಡುಕುವ ಪ್ರಯತ್ನವೂ ನಿರಾಶಾದಾಯಕವೇ ಹೊರತು ಮತ್ತೇನೂ ಆಗಲು ಸಾಧ್ಯವಿಲ್ಲ. ಸುಸ್ಥಿರ ಬದುಕಿನ ಮಾದರಿಯೊಂದನ್ನು ಚರಿತ್ರೆಯಲ್ಲಿ ಹೆಕ್ಕಿ ತರಲು ಸಾಧ್ಯವೆ? ಯಾವ ಭರವಸೆಯಿಂದ ಹಿಂಪಯಣವೊಂದನ್ನು ಶುರುಮಾಡಲಿ? ಚರಿತ್ರೆಯ ಕಿಂಡಿಯಲ್ಲಿ ಇಣುಕಿದರೆ ಕಾಣುವುದೇನು? ಚರಿತ್ರೆಯ ಗಂಟನ್ನು ಬಿಚ್ಚಿದರೆ ಹರಡಿಕೊಳ್ಳುವ ಕೊಳಕನ್ನು ಮತ್ತೆ ಹಾಗೇ ತುಂಬಿ ಕಟ್ಟಲು ಸಾಧ್ಯವೆ? ಅದು ಹೇಗೋ ಅಸ್ಪೃಶ್ಯತೆಯ ಭಯಾನಕ ದೃಶ್ಯಗಳು, ಜಾತಿ ಅಸಮಾನತೆಯ ಮಹಾನ್ ಕೇಡುಗಳು, ಹೆಣ್ಣನ್ನು ಮನುಷ್ಯಳಂತೆ ಕಾಣದ ಗಂಡು ಸಮಾಜ, ವರ್ಣವ್ಯವಸ್ಥೆಯ ಹೀನ ಆಚರಣೆಗಳು, ಇತ್ಯಾದಿಗಳ ನರಕವನ್ನು ಒಂದು ಹಂತಕ್ಕೆ ದಾಟಿ ಬಂದಿದ್ದೇವೆ. ಇನ್ನೂ ತೊಳೆಯಬೇಕಾದದ್ದು ತುಂಬಾ ಇದೆ. ಅಂಥದ್ದರಲ್ಲಿ ಮತ್ತೆ ಒಂದೆರಡು ಹೆಜ್ಜೆ ಹಿಂದಕ್ಕೆ ಇಡಲು– ಅಲ್ಲಿ ಏನೇ ಒಳಿತು ಇದೆಯೆಂದರೂ– ಮನಸ್ಸು ಒಪ್ಪುವುದು ಕಷ್ಟ.

ವೀರಣ್ಣ ಮಡಿವಾಳರ ಈ ಖಂಡಕಾವ್ಯದ ಓದು ಮತ್ತೊಂದು ಗಂಭೀರ ಪ್ರಶ್ನೆಯನ್ನು ಮುಂದಿಡುತ್ತದೆ. ತನ್ನ ಕಾವ್ಯವನ್ನು ಕುರಿತಾದ ಮಹತ್ವಾಕಾಂಕ್ಷೆಯ ಗೀಳೊಂದು ಏಕತಾರಿಯಂತೆ ಈ ಖಂಡಕಾವ್ಯದುದ್ದಕ್ಕೂ ಗುಯ್‌ಗುಡುತ್ತಲೇ ಇರುತ್ತದೆ. ಕಾವ್ಯದ ಬಗೆಗಿನ ಮಹತ್ವಾಕಾಂಕ್ಷೆ ತಪ್ಪೇನೂ ಅಲ್ಲ. ಆದರೆ ಕನ್ನಡ ಕಾವ್ಯದ ಇದಿರಿಗೆ ನಿಂತು ಹಾಡುವ ಕವಿಗೆ ತನಗೆ ಸಾಥ್ ನೀಡುವ ಪರಂಪರೆಯ ದನಿಗಳ ಅರಿವಿರಬೇಕು. ಈ ನೆರವನ್ನು ಒದಗಿಸಿಕೊಳ್ಳಲಾರದ ಕವಿಗೆ ಪರಂಪರೆಯ ಗುರುಬಲವಿರುವುದಿಲ್ಲ. ಹಾಗಾಗಿ ಇವೆಲ್ಲ ನಡುವಯಸ್ಸು ಮೀರಿದ ಹೆಂಗಸೊಬ್ಬಳು ನಡುಬೀದಿಯಲ್ಲಿ ನಿಂತು ಸಾಪಳಿಸುತ್ತಿರುವಂತೆ ಕೇಳಿಸುತ್ತವೆ.

ಆಧುನಿಕತೆ, ತಂತ್ರಜ್ಞಾನದ ಬಗೆಗಿನ ಏಕಾಕಾರೀ ನಿಲುವು ಕೂಡ ಅನೇಕ ತೊಡಕುಗಳನ್ನೊಡ್ಡುತ್ತದೆ. ಇವುಗಳೆಲ್ಲ ಜೀವವಿರೋಧಿ ಎನ್ನುವ ಸರಳ ಸಮೀಕರಣಗಳಿಗೆ ಸಮರ್ಥನೆ ಒದಗಲಾರದು. ಪ್ರಾಚೀನತೆಯ ಮೋಹ ಕೂಡ ಸಮಾಜಕ್ಕೆ ದೊಡ್ಡ ಪ್ರಮಾಣದ ಕೇಡನ್ನು ತುಂಬುತ್ತಿದೆ. ತಂತ್ರಜ್ಞಾನಕ್ಕೆ ತನ್ನ ಕೇಡಿನ ಅರಿವಾದರೂ ಇದೆ, ಪ್ರಾಚೀನತೆಗೆ ಅದೂ ಇಲ್ಲ. ವರ್ತಮಾನದ ಈ ಎಚ್ಚರವೂ ಕವಿಗೆ ಅಗತ್ಯ.

ಆಧುನಿಕತೆಯ ವಾರಸುದಾರರ
ತಂತ್ರಜ್ಞಾನದ ಮಂತ್ರ
ಜಗ ಸಮ್ಮೋಹನಗೊಳಿಸುತ್ತಿರುವ
ಈ ಸಮಯ
ನೀನು ನೆಲದ ಹಾಡಿನ ಬೀಜ ಊರುತ್ತಿರುವೆ
ಎಲ್ಲವೂ ಸತ್ತ ಮಣ್ಣಿನಲ್ಲಿ ಹೌದು ಎಲ್ಲ ಅಳಿದ ಮೇಲೆಯೇ
ಎಲ್ಲ ಹುಟ್ಟುವುದು...
.......
ಅಳಿವು ಸಹಜವೆನ್ನುವ ಮಾತು
ತಂತ್ರಜ್ಞರು ಮಾತ್ರ ಅಡಲು ಸಾಧ್ಯ.

ಹಾಗೆಯೇ ವರ್ತಮಾನದ ನಿಸರ್ಗದ ನೋವಿನ ರೂಪಕಗಳು, ಜೀವಪರವಾದ ನಿಲುವುಗಳು, ಕೆಳಸ್ತರದ ಅಪಮಾನಿತರ ಸಂಕಟಗಳು ಅವೆಷ್ಟೇ ವಿಶಿಷ್ಟವಾದರೂ ಕಾವ್ಯದ ಪರಿಕರಗಳಾಗಬಲ್ಲವೇ ಹೊರತು ಅವೆಲ್ಲ ನಿರ್ದಿಷ್ಟ ಸಾಂಸ್ಕೃತಿಕ ರಾಜಕಾರಣಕ್ಕೆ ದುಡಿವ ಕಥನಗಳಾಗಲು, ಬೇಕಾಗುವ ತಾತ್ವಿಕ ಎಚ್ಚರವನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಹಾಗಾಗದಿದ್ದುದರಿಂದಲೇ ಇಂದು ದಲಿತ ಬಂಡಾಯ ಕಾವ್ಯದ ಮಾದರಿಗಳು ಆಕಾಶದಲ್ಲಿ ಹರಿದ ಗಾಳಿಪಟಗಳಾಗಿವೆ.

ಇದೆಲ್ಲ ನಾವಾಗಿ ಮಾಡಿಕೊಂಡ ಕೇಡೇನಲ್ಲ. ಇಲ್ಲಿ ನಿರಂತರವಾಗಿ ಸಮೂಹದೊಳಕ್ಕೆ ಕೇಡನ್ನು ಸರಬರಾಜು ಮಾಡುವ ಸಾಂಸ್ಕೃತಿಕ ರಾಜಕಾರಣವೊಂದು ಕ್ರಿಯಾಶೀಲವಾಗಿದೆ. ಅದರ ಮಾದರಿಗಳು ನಮ್ಮ ಕಣ್ಣೆದುರಿಗೆ ಇವೆ. ಅದರ ಕಾವ್ಯ ಮಾದರಿಗಳೂ ನಮ್ಮ ಕಣ್ಣೆದುರಿಗೆ ಇವೆ. ಅವುಗಳನ್ನು ಪ್ರತಿರೋಧಿಸಿದ ಮಾದರಿಗಳೂ ಇವೆ. ಇವುಗಳ ಜೊತೆಗೆ ಸಮೂಹವನ್ನು ನಾನಾ ಸಂಕಟಗಳಿಂದ ಬಿಡಿಸುತ್ತಿರುವ ಅನೇಕ ಸಂಗತಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ನಗರೀಕರಣಗಳೂ ಇವೆ. ಅಂಬೇಡ್ಕರ್ ಇವುಗಳನ್ನು ಇಡಿಯಾಗಿ ನಿರಾಕರಿಸಲಿಲ್ಲ ಎಂಬುದನ್ನು ಕೂಡ ಮರೆಯಲಾಗದು. ನಿಜ, ಯಾವುದರ ಅತಾರ್ಕಿಕ ವ್ಯಾಮೋಹವೂ ಒಳಿತನ್ನು ತರುವುದಿಲ್ಲ. ನಮ್ಮ ನಡೆಯ ಒಳಿತು ಕೆಡುಕುಗಳನ್ನು ನಿರ್ಧರಿಸಲು ನಿಸರ್ಗವನ್ನು ಮಾದರಿಯೆಂದು ಭಾವಿಸುವುದು ಸರಿಯಾದ ಮಾರ್ಗ. ಇದನ್ನು ಈ ಕವಿ ದೃಢವಾದ ದನಿಯಲ್ಲಿ ಹೇಳುತ್ತಿದ್ದಾನೆ. ನಿಸರ್ಗ ನಮ್ಮನ್ನು ಉಳಿಸಬಲ್ಲುದು ಎಂಬ ಆರೋಗ್ಯಕರ ನಿಲುವಿನಿಂದ ಕಾವ್ಯ ಕಟ್ಟುತ್ತಿದ್ದಾರೆ.

ಸಾಕಪ್ಪಾ ಸಾಕು ಈ ಭಂಡ ಬದುಕು
ಇದು ಒಂದು ಬಾರಿ ತಪ್ಪಾಯಿತು
ವಸಂತನನ್ನೊಮ್ಮೆ ಹಡೆದು ನೋಡಬೇಕು
ಈ ಎದೆಯಲೀಗ
ಸಕಲ ಜೀವದ ನೋವಿನ
ವಾರಸುದಾರನ ಗೈರತ್ತು.

ನಿಸರ್ಗಕ್ಕೆ ಹತ್ತಿರವಾಗಿ ಬಾಳುವ, ಅರ್ಧ ಜಗತ್ತನ್ನು ಕಂಡ ಹಕ್ಕಿ ಪಿಕ್ಕಿಯವನೊಬ್ಬ ವಸ್ತು ವ್ಯಾಮೋಹದ ಲಂಪಟತನದಿಂದ ತುಂಬಿಹೋಗಿರುವ ಈ ಆಧುನಿಕ ಸಮಾಜಕ್ಕೆ ಕೇಳಿದ ಪ್ರಶ್ನೆ ಇದು: ನಿಮ್ಮಲ್ಲಿರುವ ಏನೇನನ್ನೋ ತೆಗೆದುಕೊಂಡು ನಾನೇನು ಮಾಡಲಿ? ನನಗೆ ಬೇಕಾದ್ದು ನಿಮ್ಮಲ್ಲಿ ಏನಿದೆ? 

ಎಲ್ಲೋ ಹಾಳಾಗಿ ಹೋಗಿದ್ದಾನೆ ವಸಂತ
ಲೇ:
ವೀರಣ್ಣ ಮಡಿವಾಳರ
ಪು:108, ರೂ. 99
ಪ್ರ: ಜಾನೂ ಪ್ರಕಾಶನ, ಗಾವಡ್ಯಾನ ವಾಡಿ, ಕೇರೂರ ಅಂಚೆ, ಚಿಕ್ಕೋಡಿ ತಾಲ್ಲೂಕ, ಬೆಳಗಾವಿ ಜಿಲ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT