ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗಳು ಅಗತ್ಯ

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ
ADVERTISEMENT

ಎಲ್ಲಾ ಪ್ರಶಸ್ತಿ­ಗಳೂ ವಿವಾದ ಆಗು­ವುದಿಲ್ಲ. ಅದರ ಬಗ್ಗೆ ಚರ್ಚೆಯೂ ನಡೆಯುವುದಿಲ್ಲ. ಕೆಲವೊಮ್ಮೆ ಪ್ರಶಸ್ತಿಯ ಮಾನ ಮುಕ್ಕಾಗುವಂತೆ ನೀಡಿದಾಗ ಆಗಲೂ ಕೆಲವರು ಬೇಸತ್ತು ಸುಮ್ಮನಾಗು­ತ್ತಾರೆಯೇ ವಿನಾ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಸಾಮಾಜಿಕ ಸ್ವಾಸ್ಥ್ಯ ಅಲ್ಲ ಎಂದು ಮೌನ ತಾಳುತ್ತಾರೆ. ಅನರ್ಹರಿಗೆ ಪ್ರಶಸ್ತಿ ದೊರೆತರೂ ಅರ್ಹರು ಅದನ್ನು ವಿರೋಧಿಸುವುದಿಲ್ಲ. ಅದು ಸೌಜನ್ಯದ ಪ್ರತೀಕ.

ಕೆಲವೊಮ್ಮೆ ಪ್ರಶಸ್ತಿಯ ಅರ್ಹತೆಗೆ ಅವರ ಸಾಧನೆಯ ಗುಣಮಟ್ಟ ಸರಿಸಾಟಿಯಾಗದಿರುವುದು ವಿಪರ್ಯಾಸ. ಸಾಮಾಜಿಕ ನ್ಯಾಯ ಎಂಬ ಹಣೆಪಟ್ಟಿ, ಜಾತಿ, ಲಿಂಗಭೇದ ಇವೆಲ್ಲವೂ ಇಲ್ಲಿ ಕೆಲಸ ಮಾಡುತ್ತವೆ.

ಬಸವ ಪ್ರಶಸ್ತಿಯ ವಿವಾದ ಭಿನ್ನ ರೀತಿಯದು. ಇದಕ್ಕೆ ಅಪಾರ್ಥವೇ ಕಾರಣ. ಅಬ್ದುಲ್‌ ಕಲಾಂ ಅವರು ಬಸವಣ್ಣನ ಕುರಿತು ಕೆಲಸ ಮಾಡಿದವರಲ್ಲ. ಬಸವಣ್ಣನ ತತ್ವಗಳನ್ನು ಅನುಸರಿಸಿ ಬದುಕಿದ್ದಾರೆ. ಆ ಕಾರಣಕ್ಕಾಗಿ ಅವರು ಪ್ರಶಸ್ತಿಗೆ ಅರ್ಹರಾಗಿದ್ದರು.

ಅರ್ಹತೆಯೊಂದೇ ಪ್ರಶಸ್ತಿಯ ಮಾನದಂಡವಾಗಬೇಕು. ಈ ಬಗ್ಗೆ ಸರ್ಕಾರಗಳು ಲಕ್ಷ್ಯ ಕೊಟ್ಟಿಲ್ಲ. ಪ್ರಶಸ್ತಿಗೆ ಅದರದೇ ಆದ ಪಾವಿತ್ರ್ಯ ಇರುತ್ತದೆ. ಅದನ್ನು ಉಳಿಸಬೇಕು. ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಸುಮ್ಮನಿರುವುದೂ ಸರಿಯಲ್ಲ. ಪ್ರಶಸ್ತಿಗಳು ಏಕೆ ವಿವಾದ ಉಂಟುಮಾಡಬಾರದು? ಏಕೆ ಅದರ ಬಗ್ಗೆ ಬೇರೆಯವರು ಅಭಿಪ್ರಾಯ ತಿಳಿಸಬಾರದು? ಅಭಿಪ್ರಾಯ ತಿಳಿಸಲು ಅವರಿಗೆ ಸ್ವಾತಂತ್ರ್ಯವಿದೆ. ಅದರ ತಪ್ಪು ಸರಿಗಳನ್ನು ತಿಳಿಯಲು ಚರ್ಚೆಯ ಮಾರ್ಗ ಇದೆಯಲ್ಲ? ಈ ಬಗೆಯ ಪ್ರತಿಕ್ರಿಯೆಗಳು, ಚರ್ಚೆಗಳು ನಡೆಯುವ ಅಗತ್ಯವಿದೆ.
– ಹೇಮಾ ಪಟ್ಟಣಶೆಟ್ಟಿ

                                                                  ***
ಸಮಿತಿಯ ಆಯ್ಕೆ ಸರಿಯಾಗಿರಲಿ

ಪ್ರಶಸ್ತಿಯ ವಿಷಯದಲ್ಲಿ ನಾವು ಆಯ್ಕೆ­ಯನ್ನು ಮನ್ನಿಸ­ಲೇಬೇಕು. ಆಯ್ಕೆ ಸಮಿತಿ ಮಾಡು­ವಾಗಲೇ ಅಂಥ ತಜ್ಞರನ್ನು, ಪಾಂಡಿತ್ಯ ಇರುವವರನ್ನು, ಅರ್ಹ ನಿಷ್ಪಕ್ಷಪಾತ ಮನೋಭಾವದವ­ರನ್ನು ಆಯ್ಕೆ ಮಾಡಬೇಕು. ಅದರಲ್ಲಿ ಸರ್ಕಾರದ ಹಸ್ತಕ್ಷೇಪ, ಪ್ರಭಾವ ಯಾವುದೂ ಇರಬಾರದು. ಅವರ ಆಯ್ಕೆಯೇ ಅಂತಿಮ. ಅದನ್ನು ಗೌರವಿಸಬೇಕು. ಪ್ರಶಸ್ತಿಗಾಗಿ ಏನೂ ಸಾಧನೆ ಮಾಡದೇ ಇರುವವರನ್ನು ಆಯ್ಕೆ ಮಾಡುವುದಿಲ್ಲ ತಾನೆ. ಲಾಬಿ ನಡೆಸಿ ಆಯ್ಕೆಯಾದವರ ಅಥವಾ ಆ ಪ್ರಶಸ್ತಿ ಪಡೆಯಲು ಇರಬೇಕಾದ ಅರ್ಹತೆಯ ನಿರೀಕ್ಷೆಯನ್ನು ತಲುಪದವರಿಗೆ ನೀಡಿದಾಗ ಅದನ್ನು ವಿರೋಧ ಮಾಡಲು ಅವಕಾಶವಿದೆ.

ಅದು ತಾತ್ವಿಕ ವಿರೋಧ ಮತ್ತು ಎಲ್ಲರೂ ವಿರೋಧಿಸಲೇಬೇಕಾಗು­ತ್ತದೆ. ಹಾಗಿಲ್ಲದೆಯೇ ಇದ್ದ ಸಂದರ್ಭದಲ್ಲಿ ಪರಸ್ಪರ ದೂಷಣೆ ಮಾಡುವುದರಲ್ಲಿ ಅರ್ಥವಿಲ್ಲ.
–ಮಾಧವಿ ಭಂಡಾರಿ

                                                                 ***

ವಿವಾದ ಇದ್ದಿದ್ದೇ...

ಸರ್ಕಾರ ನೇಮಿಸಿ­ರುವ ಆಯ್ಕೆ ಸಮಿತಿ­ಯ­ವರು ಅಂತಿಮ ತೀರ್ಪು ಎಂದು ಪಟ್ಟಿ ಕೊಡು­­ತ್ತಾರೆ. ಅವರು ಎಷ್ಟರ­ಮಟ್ಟಿಗೆ ಪ್ರಾಮಾ­­­ಣಿಕ­­ರಾಗಿರು­ತ್ತಾರೆ ಎನ್ನುವುದರ ಬಗ್ಗೆಯೇ ವಿವಾದ ಇರುವುದು. ಪ್ರಶಸ್ತಿಗಳ ಆಯ್ಕೆ ವಿಚಾರ­ದಲ್ಲಿ ವಿವಾ­ದಾತೀತವಾಗಿ ಸರಿಯಾದ ತೀರ್ಮಾನ ತೆಗೆದುಕೊಳ್ಳು­ವುದು ಸಾಧ್ಯವೇ ಇಲ್ಲ ಎನಿಸುತ್ತದೆ.

ಕೆಲವು ಪ್ರಶಸ್ತಿಗಳು ಒಳ್ಳೆಯವರಿಗೆ ಹೋಗುತ್ತವೆ, ಇನ್ನು ಕೆಲವು ಪ್ರಭಾವಿಗಳಿಗೆ ಹೋಗುತ್ತಿವೆ. ಎಷ್ಟೇ ಕಟ್ಟುನಿಟ್ಟಾಗಿ ಮಾಡಿದರೂ ಎಲ್ಲಿಯೋ ಒಂದುಕಡೆ ದೋಷ ಕಂಡುಬ­ರುತ್ತದೆ. ಅದಕ್ಕೆ ಈಗಿರುವ ನಿಯಮಗಳ ಪ್ರಕಾರ ಸಮಿತಿ ಇರುತ್ತದೆ, ಅವರ ಆಯ್ಕೆಯನ್ನು ಪರಿಗಣಿಸಲಾಗು­ತ್ತದೆ. ಇದರಾಚೆಗೆ ಏನು ಮಾಡಲು ಸಾಧ್ಯ? ನಿಯಮಗಳು ಚೆನ್ನಾ­ಗಿಯೇ ಇರುತ್ತವೆ. ಅದನ್ನು ಓದುವವರು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳುತ್ತಾರೆ. ಯಾರಿಗೆ ಕೊಡಬೇಕಾ­ಗಿರು­ತ್ತದೆಯೋ ಅವರಿಗೆ ಅನುಕೂಲವಾಗಿರುವಂತೆ ನಿಯಮ­ಗಳನ್ನು ಗ್ರಹಿಸುತ್ತಾರೆ. ಆಯ್ಕೆ ಸಮಿತಿ ಮತ್ತು ಅದಕ್ಕೆ ಇರುವ ನಿಯಮಗಳು ಇಂಟರ್‌ಪ್ರಿಟೇಷನ್‌ ಮೇಲೆ ಹೋಗುತ್ತವೆ. ಇವುಗಳನ್ನು ವಿವಾದದ ಮಟ್ಟಕ್ಕೆ ತೆಗೆದುಕೊಂಡು ಹೋಗುವುದ­ರಲ್ಲಿ ಅರ್ಥವಿಲ್ಲ. ಸರ್ಕಾರಕ್ಕೆ ಬೇಕಾದವರಿಗೆ ಅವು ಸಲ್ಲುತ್ತವೆ, ಕೆಲವು ಆಕಸ್ಮಿಕವೋ ಏನೋ ನ್ಯಾಯಯುತವಾಗಿ ಅರ್ಹರಿಗೆ ಸಲ್ಲುತ್ತವೆ. ತುಂಬಾ ಅನ್ಯಾಯ ಆಗಿದ್ದರೆ ಅಂಥವುಗಳ ಬಗ್ಗೆ ಚರ್ಚೆ ಮಾಡಬಹುದು. ಅರ್ಹರೆನಿಸಿದರೂ ಅದಕ್ಕಿಂತಲೂ ಅರ್ಹತೆ ಹೊಂದಿದವರಿದ್ದಾರಲ್ಲ ಎಂಬ ಪ್ರಶ್ನೆ ಏಳುತ್ತದೆ.

ಕನ್ನಡ ನೆಲದಲ್ಲಿ ಅಪಾರ ಸಂಖ್ಯೆಯ ವಿದ್ವಾಂಸರು ಇರುವುದರಿಂದ ಈ ವಿವಾದ ಇದ್ದಿದ್ದೇ. ವಿವಾದಾತೀತವಾಗಿ ಆಯ್ಕೆ ಮಾಡಲು ಅವಕಾಶಗಳೇ ಇಲ್ಲ ಎನಿಸುತ್ತದೆ. ಕೆಲವು ಪ್ರಶಸ್ತಿಗಳಿಗೆ ಕನ್ನಡ ಸಂಸ್ಕೃತಿ ಇಲಾಖೆ ರಚಿಸಿದ ಸಮಿತಿಗಳಿವೆ. ಆದರೆ ರಾಜ್ಯೋತ್ಸವ ಪ್ರಶಸ್ತಿಯಂಥ ಪ್ರಶಸ್ತಿಗಳಿಗೆ ಯಾವ ಸಮಿತಿಗಳಿವೆ? ಅಕಾಡೆಮಿಗಳಿಗೆ ಸದಸ್ಯರನ್ನು ಮಾಡುತ್ತಾರಲ್ಲ ಅವುಗಳಿಗೆ ಎಲ್ಲಿದೆ ಸಮಿತಿ? ಕೆಲವರು ಮತ್ತೆ ಮತ್ತೆ ಸದಸ್ಯರಾಗುತ್ತಿರುತ್ತಾರೆ. ತುಂಬಾ ದೊಡ್ಡ ಬರಹಗಾರರು ಎನಿಸಿಕೊಂಡ­ವರು ಎಷ್ಟೋ ಮಂದಿ ಯಾವ ಅಕಾಡೆಮಿಗೂ ಸದಸ್ಯರಾಗಿಲ್ಲ. ಆ ರೀತಿ ಲಾಬಿ ಮಾಡಿ ಮಾಡುವುದರಿಂದ ಏನು ಸಾಧಿಸುತ್ತಾರೆ? ಬಯೊಡೇ­ಟಾದಲ್ಲಿ ಹಾಕಿಕೊಳ್ಳ­ಬಹುದಷ್ಟೇ. ಬುದ್ಧಿ­ವಂತರು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
– ಅಮರೇಶ ನುಗಡೋಣಿ
                                                        ***

ಲಾಬಿಗಳಿಗೆ ಮಣಿಯಬಾರದು

ನಾವು ಬರೆ­ಯುವ ಕಾಲಕ್ಕೆ ಪ್ರಶಸ್ತಿಗಳಿಗೆ ಬೆಲೆ ಇತ್ತು. ಈಗ ಪ್ರಶ­ಸ್ತಿ­ಗಳು ಮೌಲ್ಯ ಕಳೆದು­ಕೊಂಡಿವೆ. ಇಂಥ ಪ್ರಶಸ್ತಿ­ಗಳನ್ನು ತಿರಸ್ಕರಿ­ಸುವುದು ಒಳಿತು. ಈಗ ಅರ್ಹರಿಗೆ ಸಿಗಲೂ ಲಾಬಿ ನಡೆಸಬೇಕಾದ ಅನಿ­ವಾರ್ಯ ಉಂಟಾಗಿದೆ. ಅರ್ಹ ತೀರ್ಪು­ಗಾ­ರರನ್ನು ಆಯ್ಕೆ ಮಾಡುವುದರ ಅಗತ್ಯವಿದೆ. ಸರ್ಕಾರ ಅವರ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡದಿದ್ದರೆ ಖಂಡಿತಾ ವಿವಾದಗಳಿಂದ ಪ್ರಶಸ್ತಿಗ­ಳನ್ನು ಮುಕ್ತವಾಗಿಸಬಹುದು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಲ್ಲಿ ವಿವಾದ ಉದ್ಭವಿ­ಸುವುದಿಲ್ಲ. ನಾನು ಆಯ್ಕೆ ಸಮಿತಿಯ­ಲ್ಲಿದ್ದಾಗ ನಮ್ಮ ಮೂವರ ಆಯ್ಕೆಯೂ ಒಂದೇ ಆಗಿತ್ತು. ಮತ್ತು ಯಾರೂ ಅದರಲ್ಲಿ ಪ್ರಭಾವ ಬೀರಲು ಪ್ರಯತ್ನಿಸಿ­ರಲಿಲ್ಲ. ಹೀಗಾಗಿ ವಿವಾದ­ರಹಿತವಾಗಿ ಆಯ್ಕೆ ಮಾಡಲು ಸಾಧ್ಯವಾ­ಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿ 20–25 ವರ್ಷ ದುಡಿದ­ವರಿಗೆ ಸಾಹಿತ್ಯ ಲೋಕದ ಬೆಳವಣಿಗೆಯ ಸ್ಪಷ್ಟ ಅರಿವು ಇರುತ್ತದೆ.

ಅಂಥವರನ್ನು ತೀರ್ಪುಗಾರರನ್ನಾಗಿ ಆಯ್ಕೆ ಮಾಡಬೇಕು. ಮತ್ತು ಅವರಿಗೆ ಸ್ವಾತಂತ್ರ್ಯ ನೀಡಬೇಕು. ಲಾಬಿ, ಪ್ರಭಾವ ಬೀರುವ ವ್ಯಕ್ತಿಗಳ ಹೆಸರನ್ನು ಅದಕ್ಕೆ ಮಣಿಯದೆ ಕಟ್ಟುನಿಟ್ಟಾಗಿ ತೆಗೆದುಹಾಕು­ವಂಥ ಮನೋಸ್ಥಿತಿಯ­ವರು ಬೇಕು. ಸಾಮಾಜಿಕ ನ್ಯಾಯದ ಕಣ್ಣಿನಲ್ಲಿಯೂ ಅರ್ಹರು ಮತ್ತು ಅನರ್ಹರು ಕಾಣಿಸು­ತ್ತಾರೆ. ಅಲ್ಲಿಯೂ ಈ ಲಾಬಿಗಳಿಗೆ ಮಣಿಯಬಾರದು.
– ಸವಿತಾ ನಾಗಭೂಷಣ
                                                     ***

ಯಾಂತ್ರಿಕ ಆಯ್ಕೆಗಳಾಗಬಾರದು
ಯಾರದೇ ಹೆಸರಿ­ನಲ್ಲಿ ಪ್ರಶಸ್ತಿ ನೀಡು­ವಾಗ ಆ ವ್ಯಕ್ತಿಯ ವಿಶಾಲ ಆಶಯಗ­ಳನ್ನು ತಮ್ಮ ಕೃತಿಗ­ಳಲ್ಲಿ ಅಥವಾ ಕ್ರಿಯೆ­ಗಳಲ್ಲಿ ಬಿಂಬಿಸಿರುವ

ಅಥವಾ ಆ ವಲಯ­ದಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಶ್ರೇಷ್ಠ ಲೇಖಕ ಲೇಖಕಿಯರನ್ನು, ಸಾಧಕ ಸಾಧಕಿಯರನ್ನು ಆ ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಹಾಗೆ ಆಯ್ಕೆ ಮಾಡಲು ಸಾಧ್ಯವಾಗುವಂತೆ ಖಚಿತ ಮಾನದಂಡ­ಗಳನ್ನು ರೂಪಿಸಬೇಕು.

ಈಗ ಇರುವಂತೆ, ಸರ್ಕಾರ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಪ್ರಶಸ್ತಿ ನೀಡುವ ಕೆಲವೇ ದಿನಗಳ ಹಿಂದೆ ಅವಸರದಲ್ಲಿ ಸಭೆ ಕರೆದು ಅಲ್ಲಿ ತೇಲಿ ಬರುವ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡುವ ಪದ್ಧತಿಯನ್ನು ಬಿಡಬೇಕು. ಬದಲಿಗೆ, ಹಲವು ಸುತ್ತಿನ ಚರ್ಚೆಗಳಿಗೆ ಅನುವಾಗುವಂತೆ ಹಲವು ಸಲ ಆಯ್ಕೆ ಸಮಿತಿಯ ಸಭೆಗಳನ್ನು ನಡೆಸಬೇಕು. ಈ ಸಮಿತಿಯಲ್ಲಿ ಆಯಾ ಪ್ರಶಸ್ತಿಯನ್ನು ಆಯ್ಕೆ ಮಾಡಲು ಸಮರ್ಥರಾದ, ವಿವಿಧ ಜನವರ್ಗಗಳಿಗೆ ಸೇರಿದ ತಜ್ಞರಿರಬೇಕು. ಆ ತಜ್ಞರು ಪೂರ್ವಗ್ರಹಗಳನ್ನು ಮೀರಿ ಹಲವು ನಿಟ್ಟಿನಿಂದ ಅರ್ಹರನ್ನು ಆಯ್ಕೆ ಮಾಡಬಲ್ಲ ದಕ್ಷತೆ ಹಾಗೂ ಸಮಗ್ರತೆಯುಳ್ಳವರಾ­ಗಿರಬೇಕು. ಈ ಪ್ರಶಸ್ತಿಗಳು ಸವಕಲು ಯಾಂತ್ರಿಕ ಆಯ್ಕೆಗಳಾಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಈ ಪ್ರಶಸ್ತಿಗಳಿಗೆ ಘನತೆ ಬರಬೇಕೆಂದರೆ, ಅವನ್ನು ಸುಲಭವಾದ ಚರ್ಚೆಯ ಮೂಲಕ ಹಾಗೂ ಮೂರು ನಾಲ್ಕು ಜನರ ತಕ್ಷಣದ ಅಭಿಪ್ರಾಯಗಳ ಮೂಲಕ ನಿರ್ಧರಿಸ­ಬಾ­ರದು. ‘ಜ್ಞಾನಪೀಠ’, ‘ಕಬೀರ್ ಸಮ್ಮಾನ್’, ‘ಸರಸ್ವತಿ ಸಮ್ಮಾನ್’ ರೀತಿಯ ಪ್ರಶಸ್ತಿ­ಗಳನ್ನು ಕೊಡುವ ಮೊದಲು ಮಾಡುವಂತೆ ವ್ಯಾಪಕ ಸಿದ್ಧತೆಯ ಮೂಲಕ ವಿವಿಧ ಪ್ರದೇಶಗಳ ಸೂಕ್ಷ್ಮಜ್ಞರಿಂದ ಅಭಿಪ್ರಾಯ ಸಂಗ್ರಹ ಮಾಡುವ ಕೆಲಸ ಆಗಬೇಕು.

ಇವೆಲ್ಲದರ ಜೊತೆಗೆ, ಪ್ರಶಸ್ತಿಗಳ ಸುತ್ತ ಹುಟ್ಟುವ ವಿವಾದಗಳು ಅವೈಯಕ್ತಿಕವಾದ ಹಾಗೂ ದೊಡ್ಡ ತಾತ್ವಿಕ ಕಾರಣಗಳಿಂದ ಹುಟ್ಟಿದರೆ ಮಾತ್ರ ಅವಕ್ಕೆ ಅರ್ಥವಿರುತ್ತದೆ. ತಾವು ಆಯಾ ಪ್ರಶಸ್ತಿಗಳಿಗೆ ಅರ್ಹರೆಂದು ತಿಳಿದ ಅತೃಪ್ತರಿಂದ ಈ ವಿವಾದಗಳು ಹುಟ್ಟಿ­ದರೆ ಅವು ಅರ್ಥಹೀನವಾಗುತ್ತವೆ. ಆ ಬಗ್ಗೆ ವಿವಾದಗಳಿಗೆ ಕಾರಣವಾಗುವ ಎಲ್ಲರೂ ಸಾಧ್ಯವಾದಷ್ಟೂ ಆಳವಾದ ಆತ್ಮಪರೀಕ್ಷೆಯ ಮೂಲಕವೇ ಈ ಪ್ರಶ್ನೆಗಳನ್ನು ಎತ್ತಿದರೆ ಭಿನ್ನಾಭಿಪ್ರಾಯ­ಗಳಿಗೂ ಘನತೆ ಇರುತ್ತದೆ.
-ಡಾ. ನಟರಾಜ್ ಹುಳಿಯಾರ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT