ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮ ಮೃದಂಗಕ್ಕೆ ಪರ್ಯಾಯ ‘ಶ್ರೀ ಮೃದಂಗ’

Last Updated 4 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಅನಿವಾರ್ಯದಿಂದಾಗಿ ಚರ್ಮದ ಮೃದಂಗವನ್ನು ಬಳಸುತ್ತಿದ್ದ ಪ್ರಾಣಿ ಪ್ರಿಯ ವ್ಯಕ್ತಿ ಈಗ ಅದಕ್ಕೆ ಪರ್ಯಾಯವಾಗಿ ಫೈಬರ್‌ ಮೃದಂಗವನ್ನು ಸಿದ್ಧಪಡಿಸಿದ್ದಾರೆ.  ಚರ್ಮದ ಮೃದಂಗಕ್ಕಿಂತ ಕಡಿಮೆ ಬೆಲೆ ಹಾಗೂ ಹೆಚ್ಚು ಕಾಲ ಬಾಳಿಕೆ ಬರುವ ಇದು ಬಹಳ ಬೇಗ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ಸಂಗೀತ ಕ್ಷೇತ್ರದಲ್ಲಿ ಹಿಂದಿನಿಂದಲೂ ಬಳಕೆಯಲ್ಲಿ ಇರುವುದು ಚರ್ಮ ವಾದ್ಯ ಮೃದಂಗ. ಇದು ಮುಖ್ಯವಾದ ಲಯ ವಾದ್ಯ ಎಂದೇ ಸಂಗೀತ ಕ್ಷೇತ್ರದಲ್ಲಿ ಪ್ರಖ್ಯಾತಿ ಪಡೆದಿದೆ. ಈ ವಾದ್ಯವಿಲ್ಲದೆ ಯಾವುದೇ ಸಂಗೀತ ಕಛೇರಿ ನಡೆದರೂ ಅದು ಸಂಪೂರ್ಣ ಎನ್ನಿಸಿಕೊಳ್ಳದು. 

ಚರ್ಮದ ಮೃದಂಗ ಪ್ರಾಣಿದಯೆ ಇರುವ ಡಾ. ಕೆ. ವರದರಂಗನ್‌ ಚರ್ಮದ ಬದಲು ಫೈಬರ್‌ ಮೃದಂಗವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದನ್ನೂ ಚರ್ಮ ಮೃದಂಗಕ್ಕೆ ಸರಿಸಮವಾಗಿ ನುಡಿಸಬಹುದು. ಇದಕ್ಕೆ ಅವರು ‘ಶ್ರೀ ಮೃದಂಗ’ ಎಂದು ಹೆಸರಿಟ್ಟಿದ್ದಾರೆ.

ವರದರಂಗನ್‌ ಅವರಿಗೆ  ಚಿಕ್ಕಂದಿನಿಂದಲೂ ಸಂಗೀತ, ವಿಜ್ಞಾನ ಹಾಗೂ ಸಂಶೋಧನೆ ಎಂದರೆ ಎಲ್ಲಿಲ್ಲದ ಪ್ರೀತಿ ಹಾಗೂ ಆಸಕ್ತಿ.  ಇವರ ವಿಶೇಷ ಆಸಕ್ತಿಗಳ ಸಮ್ಮಿಲನದಿಂದ ಶ್ರೀ ಮೃದಂಗ ರೂಪುತಳೆದಿದೆ.

ಮೈಸೂರು ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಹಾಗೂ ಐಐಟಿ ಮದ್ರಾಸ್‌ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ‘ವೈರ್‌ಲೆಸ್‌ ಕಮ್ಯುನಿಕೇಷನ್‌’ ವಿಷಯದ ಕುರಿತು ಪಿಎಚ್‌ಡಿ ಪಡೆದಿರುವ ಇವರು  ಸಂಗೀತಗಾರರು. ಚಿಕ್ಕಮ್ಮ ಜಾಹ್ನವಿಯ ಪ್ರೇರಣೆಯಿಂದ ಸಂಗೀತದ ಮೇಲೆ ಒಲವು ಮೂಡಿ, ವೆಂಕಟೇಶಯ್ಯ, ಟಿ.ಪುಟ್ಟಸ್ವಾಮಯ್ಯ, ಆರ್‌. ವಿಶ್ವೇಶ್ವರನ್‌, ತಂಜಾವೂರ್‌ ಎಸ್‌. ಕಲ್ಯಾಣರಾಮನ್‌ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಇವರ ಗರಡಿಯಲ್ಲಿ ಸಂಗೀತ ಕಲಿತ   ಅನೇಕರು ಇಂದು ಖ್ಯಾತ ಗಾಯಕರಾಗಿದ್ದಾರೆ.

ಸಂದಿಗ್ಧ ಪರಿಸ್ಥಿತಿ ನಿರ್ಮಾಣ
ಮೃದಂಗವನ್ನು ಹಸು, ಆಡು, ಎಮ್ಮೆಯ ಚರ್ಮಗಳನ್ನು  ಬಳಸಿ ತಯಾರಿಸಲಾಗುತ್ತದೆ. ಆದರೆ ಪ್ರಾಣಿಹಿಂಸೆಯನ್ನು ವಿರೋಧಿಸುವ ಇವರು ಸ್ವತಃ ಸಂಗೀತಗಾರರಾಗಿ ತಮ್ಮ ಎಲ್ಲ ಸಂಗೀತ ಕಛೇರಿಗಳಲ್ಲೂ ಪಕ್ಕವಾದ್ಯವಾಗಿ ಮೃದಂಗವನ್ನು ಬಳಸುವ ಅನಿವಾರ್ಯ  ಇತ್ತು. ಹೀಗಾಗಿಯೇ ಪರ್ಯಾಯ ವಾದ್ಯದ ಸಂಶೋಧನೆಗೆ ಮುಂದಾದರು.

ಯಾವುದೇ ಪ್ರಾಣಿಯ ಪ್ರಾಣಕ್ಕೆ ತೊಂದರೆ ಆಗಬಾರದು ಹಾಗೂ ಪ್ರಕೃತಿಯನ್ನೂ ರಕ್ಷಿಸಬೇಕು. ಜೊತೆಗೆ ಸಂಗೀತದ ಅಗತ್ಯ ವಾದ್ಯವಾಗಿ ಮೃದಂಗವೂ ಉಳಿಯಬೇಕು ಎಂಬುದು ಅವರ ಧ್ಯೇಯ. ಸತತ ಐದು ವರ್ಷಗಳ  ಪರಿಶ್ರಮದಿಂದ ಶ್ರೀ ಮೃದಂಗ ರೂಪುಗೊಂಡಿದೆ.

ಎದುರಾದ ಸವಾಲುಗಳು
‘ಇದಕ್ಕೆ ಪರ್ಯಾಯ ಮತ್ತೊಂದು ವಾದ್ಯ ಸಾಧ್ಯವೇ? ಎಂಬ ಗೊಂದಲದ ನಡುವೆಯೇ ಪ್ರಾರಂಭವಾದ ಸಂಶೋಧನೆಗೆ  ಹಲವಾರು ಸವಾಲುಗಳು ಎದುರಾಗಿದ್ದವು. ಹಲವು ಮೃದಂಗ ವಿದ್ವಾನ್‌, ಪರಿಣಿತರು, ಹಾಗೂ ತಯಾರಕರ ಬಳಿ ಮಾಹಿತಿ ಪಡೆದು ನಡೆಸಿದ ಸಾಕಷ್ಟು ಪ್ರಯತ್ನಗಳು ವಿಫಲವಾದವು. ಅಲ್ಲದೇ, ಶ್ರುತಿಯಲ್ಲಿನ ಏರಿಳಿತಗಳು, ಅವುಗಳ ಹೊಂದಾಣಿಕೆ ಈ ಮೃದಂಗದಲ್ಲಿ ಸಾಧ್ಯವೇ, ಚರ್ಮ ಮೃದಂಗದಷ್ಟು ಸಹಕರಿಸಬಲ್ಲುದೇ ಎಂಬ ಹಲವಾರು ಪ್ರಶ್ನೆಗಳಿಗೆ ಈಗ ಸಕಾರಾತ್ಮಕ ಉತ್ತರ ದೊರಕಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ವರದರಂಗನ್‌.

ಶ್ರೀ ಮೃದಂಗದ ಪ್ರಯೋಜನಗಳು
ಚರ್ಮದ ಮೃದಂಗಕ್ಕಿಂತ ಇದು ಅರ್ಧದಷ್ಟು ಕಡಿಮೆ ತೂಕವನ್ನು ಹೊಂದಿದೆ. ಚರ್ಮದ ಮೃದಂಗದಲ್ಲಿ ವಾತಾವರಣಕ್ಕೆ ತಕ್ಕಂತೆ ಶ್ರುತಿ ಬದಲಾಗುತ್ತದೆ, ಆದರೆ ಫೈಬರ್‌ ಮೃದಂಗದಲ್ಲಿ ಇದರ ಪ್ರಮಾಣ ಕಡಿಮೆ ಇರುತ್ತದೆ. ಇದರಲ್ಲಿ ಶ್ರುತಿಯನ್ನು ಸುಲಭವಾಗಿ ಏರಿಳಿಸಿಕೊಳ್ಳಬಹುದಾಗಿದೆ. 

ಕೆಲವು ಸಣ್ಣಪುಟ್ಟ ಬದಲಾವಣೆಯನ್ನು ನುರಿತ ಹಿರಿಯ ಕಲಾವಿದರು ತಿಳಿಸಿದ್ದರು. ಅವುಗಳನ್ನೂ ‘ಶ್ರೀ ಮೃದಂಗ’ದಲ್ಲಿ ಅಳವಡಿಸಿದ್ದೇನೆ. ಚರ್ಮದ ಮೃದಂಗದಷ್ಟೇ ಅಥವಾ ಅದಕ್ಕಿಂತ ಹೆಚ್ಚು ನಿಖರತೆಯನ್ನು ಶ್ರೀ ಮೃದಂಗ ಹೊಂದಿದೆ ಹಾಗೂ ಹಲವಾರು ಮೃದಂಗ ವಿದ್ವಾನ್‌ಗಳೂ ಸಹ ಇದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ವರದರಂಗನ್‌.

ಶ್ರುತಿ ಲಕ್ಷಣ ಪ್ರಕಾಶಿನಿ, ಶ್ರುತಿ  ಮತ್ತು ಶ್ರುತಿ ಭೇದ, ನಾದ ವಿಜ್ಞಾನ ಸಂಪದ ಎಂಬ ಮೂರು ಕೃತಿಗಳು ಇವರು ಸಂಗೀತ ಕ್ಷೇತ್ರಕ್ಕೆ  ನೀಡಿದ ಕೊಡುಗೆಗಳು.
ಮುಂದೆ ಇತರೆ ಚರ್ಮವಾದ್ಯಗಳಾದ ತಬಲಾ, ಪಖ್ವಾಜ್‌, ನಾಲ್‌ ವಾದ್ಯಗಳಿಗೂ ಇದೇ ರೀತಿ ಪರ್ಯಾಯವನ್ನು ಸಂಶೋಧಿಸುವ ಆಸಕ್ತಿಯನ್ನೂ ವರದರಂಗನ್‌  ಹೊಂದಿದ್ದಾರೆ. ಸಂಪರ್ಕಿಸಲು ಇ–ಮೇಲ್ ವಿಳಾಸ: kvrangan@karunyamusicals.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT