ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ಕಾಡುವ ಮಂಡಿ ನೋವು

Last Updated 11 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಚಳಿ ಹೆಚ್ಚಾಗಿದೆಯೆಂದು ನಿಮ್ಮ ಕೀಲುಗಳ ನೋವಿನಿಂದ ಅರಿವಾಗುತ್ತಿದೆಯೇ ಅಥವಾ ಮೋಡಮುಸುಕಿದ ವಾತಾವರಣದಲ್ಲಿ ಬೆಚ್ಚಗಿರಬೇಕೆನಿಸಿದೆಯೇ? ನಿಮ್ಮ ಕೀಲುಗಳ (ಜಾಯಿಂಟ್ಸ್) ನೋವು ಹವಾಮಾನ ಮುನ್ಸೂಚನೆಯನ್ನು ನೋಡಿಕೊಂಡು ಬರುತ್ತದೆಯಾ? ಆದರೆ ದುರಾದೃಷ್ಟವೇನೆಂದರೆ ಸಂಧಿವಾತ ಅಥವಾ ಇತರ ಉರಿಯೂತ ಉಂಟುಮಾಡುವ ಕಾಯಿಲೆಗಳಿಂದ ಬಳಲುತ್ತಿರುವವರು ಹವಾಮಾನ ವೈಪರೀತ್ಯದಿಂದ ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಈಗಾಗಲೇ ಸಮಸ್ಯೆಗೆ ಸಿಲುಕಿರುವ ನಿಮ್ಮ ದೇಹದ ಅಂಗಾಂಗಗಳು ಚಳಿಗಾಲದಲ್ಲಿ ಮತ್ತಷ್ಟು ಹಾನಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ನೋವಿಗೆ ಕಾರಣವೇನು?
ಚಳಿಗಾಲದಲ್ಲಿ ವಾಯುಭಾರ ಕುಸಿಯುತ್ತದೆ. ಹೀಗೆ ವಾಯುಭಾರ ಕುಸಿತ ಉಂಟಾದಾಗ ನಮ್ಮ ದೇಹದಲ್ಲಿ ಉರಿಯೂತಕ್ಕೆ ಒಳಗಾಗಿರುವ ಅಂಗಗಳು ಅಂದರೆ ಮೊಣಕಾಲು, ಕೈಗಳು, ಮೊಣಕೈ, ಭುಜ ಮತ್ತು ಚಪ್ಪೆ (ಹಿಪ್ಸ್) ಭಾಗಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಈ ಊತ ನರಗಳಿಗೆ ಕಿರಿಕಿರಿ ಅಥವಾ ತೊಂದರೆ ಕೊಡುವುದರಿಂದ ನೋವು ಹೆಚ್ಚಾಗಬಹುದು.

ನೋವು ನಿವಾರಿಸುವುದು ಹೇಗೆ?
ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ನಿಮ್ಮ ಕೀಲು ನೋವು ನಿವಾರಣೆಯಾಗುತ್ತದೆ ಹಾಗೂ ಈ ಬಾರಿ ಚಳಿಗಾಲ ಎಲ್ಲರಿಗೂ ಸುಖ ಮತ್ತು ಸಂತೋಷದಾಯಕವಾಗಿರಲಿದೆ.

ಆಹಾರ ಪದ್ಧತಿಯಲ್ಲಿ ಸಮತೋಲನವಿರಲಿ
ಚಳಿಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಆರೋಗ್ಯಕರವಾಗಿರಲಿ. ಅಂದರೆ ನೀವು ಸೇವಿಸುವ ಆಹಾರದಲ್ಲಿ ಆ ಸೀಸನ್‌ನಲ್ಲಿ ಸಿಗುವ ಹಣ್ಣುಗಳು, ಧಾನ್ಯ, ದ್ವಿದಳ ಧಾನ್ಯಗಳು, ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳು ಹೇರಳವಾಗಿರಲಿ. ಈಗಾಗಲೇ ಕೀಲು ಮತ್ತು ಮಂಡಿ ನೋವಿನಿಂದ ಬಳಲುತ್ತಿರುವವರು ಈ ರೀತಿಯ ಆಹಾರ ಪದ್ಧತಿಯನ್ನು ಅನುಸರಿಸುವುದು ಅತಿ ಮುಖ್ಯ. ಜೊತೆಗೆ ವಿಟಮಿನ್ ‘ಕೆ’, ‘ಡಿ’ ಮತ್ತು ’ಸಿ’ ಅಂಶವು ಹೇರಳವಾಗಿರುವ ಕಿತ್ತಳೆ ಹಣ್ಣು, ಪಾಲಕ್ ಸೊಪ್ಪು, ಎಲೆಕೋಸು ಮತ್ತು ಟೊಮೆಟೊ ರೀತಿಯ ಹಣ್ಣು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

ಈ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ಕಾರ್ಟಿಲೇಜ್ ಅಥವಾ ಮೃದ್ವಸ್ಥಿಯ ಉತ್ಪತ್ತಿ ವೃದ್ಧಿಸುವ ಮೂಲಕ ದೇಹವು ಹೆಚ್ಚು ಹೆಚ್ಚು ಕ್ಯಾಲ್ಷಿಯಂ ಅನ್ನು ಪಡೆಯಲು ಅನುವು ಮಾಡುತ್ತದೆ. ಇದರಿಂದ ದೇಹದ ಮೂಳೆಗಳಿಗೆ ಬಲ ಬರುತ್ತದೆ. ಡಿಹೈಡ್ರೇಷನ್‌ನಿಂದ (ನಿರ್ಜಲೀಕರಣ) ದೇಹದ ಅಂಗಾಂಗಗಳ ಫ್ಲೆಕ್ಸಿಬಲಿಟಿ ಅಥವಾ ನಮ್ಯತೆ ಕಡಿಮೆಯಾಗುವುದರಿಂದ ಕೀಲುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿಟಮಿನ್ ’ಡಿ’ ಅಥವಾ ಮೀನಿನ ಎಣ್ಣೆಯಂತಹ ಪೋಷಕಾಂಶಗಳು ಒಮೇಗಾ 3 ಅಂಶದಿಂದ ಶ್ರೀಮಂತವಾಗಿದ್ದು, ಇವುಗಳು ಉರಿಯೂತವನ್ನು ನಿಯಂತ್ರಣಕ್ಕೆ ತರುತ್ತವೆ.

ಅನಾರೋಗ್ಯಕರ ಪೇಯ, ಪಾನೀಯಗಳಿಂದ ಸಾಧ್ಯವಾದಷ್ಟು ದೂರವಿರಿ. ಆಲ್ಕೋಹಾಲ್, ಟೀ, ಕಾಫಿ ಮತ್ತು ಇತರ ಪಾನೀಯ, ಪೇಯಗಳು ನಿಮ್ಮ ದೇಹದಲ್ಲಿ ಶೇಖರಣೆಯಾಗುವ ಕ್ಯಾಲ್ಷಿಯಂ ಅಂಶವನ್ನು ಬರಿದಾಗಿಸಿ, ಮೂಳೆಗಳನ್ನು ದುರ್ಬಲವಾಗಿಸುತ್ತವೆ. ಕೆಫೈನ್ ಅಂಶವನ್ನು ಒಳಗೊಂಡಿರುವ ನಿಮ್ಮ ಎಲ್ಲ ಪಾನೀಯಗಳ ಬದಲಿಗೆ ಶುದ್ಧ ನೀರು ಮತ್ತು ಹಣ್ಣಿನ ರಸಗಳನ್ನು ಸೇವಿಸಿ.

ಚಟುವಟಿಕೆಯಿಂದ ಇರಿ
ನಿರಂತರ, ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ, ಕೀಲು ಮತ್ತು ಮೊಣಕಾಲನ್ನು ಶಕ್ತಿಯುತಗೊಳಿಸುವ ಸ್ನಾಯುಗಳಿಗೆ ಬೆಂಬಲವಾಗಿ ನಿಲ್ಲುತ್ತವೆ. ವ್ಯಾಯಾಮದಲ್ಲಿ ಏರೊಬಿಕ್ಸ್, ವಾಕಿಂಗ್, ಈಜು ಅಥವಾ ಸೈಕ್ಲಿಂಗ್ ಸೇರಿದ್ದರೆ ಉತ್ತಮ. ನೀವು ನಡೆದಾಡುವಾಗ ನಿಮ್ಮ ಮೊಣಕಾಲುಗಳಿಗೆ ನಿಮ್ಮ ದೇಹದ ತೂಕಕ್ಕಿಂತಲೂ ಮೂರು ಪಟ್ಟು ತೂಕದಷ್ಟು ಒತ್ತಡ ಬಿದ್ದ ಅನುಭವವಾಗುತ್ತದೆ. ಆದಕಾರಣ ನಿಮ್ಮ ಮೊಣಕಾಲುಗಳಿಗೆ ನೆರವಾಗಲು ತೂಕವನ್ನು ಇಳಿಸಿಕೊಳ್ಳಿ. ಆರೋಗ್ಯಕರ ತೂಕವನ್ನು ನಿರ್ವಹಿಸಿ.

ಸೂರ್ಯನ ಬಿಸಿಲಿಗೆ ಹೋಗಿ
ಸೂರ್ಯನ ಬಿಸಿಲಿನಿಂದ ನಮಗೆ ವಿಟಮಿನ್ ‘ಡಿ’ ದೊರೆಯುತ್ತದೆ. ಮೂಳೆಗಳು ಶಕ್ತಿಶಾಲಿಯಾಗಲು ಮತ್ತು ದೇಹದ ಇತರ ಚಟುವಟಿಕೆಗಳಿಗೆ ವಿಟಮಿನ್ ‘ಡಿ’ ಅತ್ಯಗತ್ಯವಾಗಿದೆ. ಹೀಗಾಗಿ ಮುಂಜಾನೆ ಅಥವಾ ಸಂಜೆ ಹೊತ್ತಿನಲ್ಲಿ ಸೂರ್ಯನ ಬಿಸಿಲಿನಲ್ಲಿ ನಿಲ್ಲುವುದು ಉತ್ತಮ. ಇದರಿಂದ ನಮ್ಮ ದೇಹ ಸಹಜವಾಗೇ ವಾರ್ಮ್-ಅಪ್ ಆಗುವ ಜೊತೆಗೆ ನಮಗೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ. ಮಧ್ಯಾಹ್ನದ ಸುಡು ಬಿಸಿಲು ಕಾಯಿಸುವುದು ಬೇಡ.

ಬಿಸಿಯಾಗಿರುವುದನ್ನೇ ಬಳಸಿ ಮತ್ತು ಬೆಚ್ಚಗಿರಿ
ನಿಮ್ಮ ಕೀಲುಗಳು ಸುಸ್ಥಿತಿಯಲ್ಲಿರಲು ಬೆಚ್ಚಗಿನ ನೀರು ಸಹಕಾರಿ. ಬೆಚ್ಚಗಿನ ನೀರಿರುವ ಪೂಲ್‌ನಲ್ಲಿ ಇಳಿದು ಮೈ ನೆನೆಸಿಕೊಳ್ಳಿ ಇಲ್ಲವೇ ಬಿಸಿ ಬಿಸಿ ನೀರಿನಿಂದ ಬೆಚ್ಚಗಿನ ಸ್ನಾನ ಮಾಡಿ. ಅಲ್ಲದೆ ನೋವಿರುವ ಜಾಗಕ್ಕೆ ಹೀಟಿಂಗ್ ಪ್ಯಾಡ್‌ನಿಂದ ಶಾಖ ಕೂಡ ಕೊಟ್ಟುಕೊಳ್ಳಬಹುದು.

ಆದರೆ 20 ನಿಮಿಷಕ್ಕಿಂತಲೂ ಹೆಚ್ಚು ಹೊತ್ತು ಶಾಖ ಕೊಟ್ಟುಕೊಳ್ಳುವಂತಿಲ್ಲ. ಮಂಡಿಗಳಲ್ಲಿ ನೋವು ಕಾಣಿಸಿಕೊಂಡಾಗ ಅವುಗಳನ್ನು ಆದಷ್ಟು ಬೆಚ್ಚನೆ ಬಟ್ಟೆ ಅಥವಾ ಇನ್ನಾವುದೇ ವಸ್ತುವನ್ನು ಬಳಸಿ ಬೆಚ್ಚಗಿಡಲು ಪ್ರಯತ್ನಿಸಿ. ನಿಮ್ಮ ದೇಹವನ್ನು ಬೆಚ್ಚಗಿಡಲು ಗ್ಲೌಸ್, ಸಾಕ್ಸ್, ಸ್ವೆಟರ್‌ಗಳನ್ನು ಧರಿಸಿ. ಬಿಸಿ ನೀರಿನಲ್ಲೇ ಸ್ನಾನ ಮಾಡಿ. ಇದರಿಂದ ನಿಮ್ಮ ದೇಹದಲ್ಲಿನ ಕೀಲುಗಳನ್ನು ಬೆಚ್ಚಗಿಡಲು ಮತ್ತು ಕೀಲುಗಳ ನೋವು ಕಿರಿಕಿರಿಯಿಂದ ದೂರವಿರಲು ಅನುವಾಗುತ್ತದೆ. ಸಂಧಿವಾತ ಮತ್ತು ಇತರ ತೊಂದರೆಗಳಿಂದ ಮುಕ್ತಿ ಸಿಗುತ್ತದೆ.

ಈ ನೋವು ನಿಮ್ಮನ್ನು ಅಸಹಾಯಕರನ್ನಾಗಿಸುತ್ತದೆಯೇ?
ಉರಿಯೂತ ಮತ್ತು ಕೀಲು ನೋವಿನ ತೊಂದರೆಗಳು ನೀವು ಅತ್ತಿಂದಿತ್ತ ಓಡಾಡದಂತೆ ತಡೆಯುತ್ತವೆ ಮತ್ತು ದೀರ್ಘಕಾಲದ ನೋವಿಗೆ ಕಾರಣವಾಗುತ್ತವೆ. ಇಂಥ ಸಂದರ್ಭಗಳಲ್ಲಿ ರೋಗಿಯು ಹೆಚ್ಚು ಸಮಯದವರೆಗೆ ನಡೆಯುವುದು, ಒಂದೇ ಕಡೆ ಕುಳಿತುಕೊಳ್ಳುವುದು ಸಾಧ್ಯವಾಗುವುದಿಲ್ಲ. ಜೊತೆಗೆ ನಿತ್ಯ ಚಟುವಟಿಕೆಗಳಿಗೂ ಅಡ್ಡಿ ಉಂಟಾಗುತ್ತದೆ. ಇದರಿಂದ ಜೀವನದ ಗುಣಮಟ್ಟ ಕ್ಷೀಣಿಸುತ್ತದೆ.

ವಿಶೇಷವಾಗಿ ಚಳಿಗಾಲದಲ್ಲಿ ನೋವು ವಿಪರೀತ ಹೆಚ್ಚಾಗುವುದರಿಂದ ರಾತ್ರಿ ವೇಳೆ ನಿದ್ರಾಹೀನತೆ ಮತ್ತಿತರ ಸಮಸ್ಯೆಗಳು ತಲೆದೋರುತ್ತವೆ. ಬಹುತೇಕರು ಈ ರೀತಿಯ ನೋವನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಜೊತೆಗೆ ಪೇನ್ ಕಿಲ್ಲರ್ (ನೋವು ನಿವಾರಕ) ಮಾತ್ರೆಗಳನ್ನು ತೆಗೆದುಕೊಂಡು ಸುಮ್ಮನಾಗುತ್ತಾರೆ. ಯಾವಾಗ ನೋವು ನಿಯಂತ್ರಣಕ್ಕೆ ಬರುವುದಿಲ್ಲವೋ, ಆಗ ವೈದ್ಯರ ಬಳಿ ಹೋಗುತ್ತಾರೆ.

ಹೀಗೆ ವೈದ್ಯರ ಬಳಿ ಹೋದಾಗ ಅವರು ಶಸ್ತ್ರಚಿಕಿತ್ಸೆ ಮಾಡಿಸುವಂತೆ ಶಿಫಾರಸು ಮಾಡಿದರೆ ಪರಿಸ್ಥಿತಿ ಕೈ ಮೀರಿದೆ, ಜೊತೆಗೆ ಇನ್ನು ಮುಂದೆ ರೋಗಿ ಮತ್ತು ಆತನ ಕುಟುಂಬಕ್ಕೆ ತೊಂದರೆಗಳು ಹೆಚ್ಚುತ್ತವೆ ಅಂತಲೇ ಅರ್ಥ. ಯಾವುದೇ ಶಸ್ತ್ರಚಿಕಿತ್ಸೆಗೆ ಮುಂದಾಗುವ ಮೊದಲು ರೋಗಿಯ ಕುಟುಂಬದವರು ಶಸ್ತ್ರಚಿಕಿತ್ಸೆಯ ಕುರಿತು ವಿಚಾರಣೆ, ಅಧ್ಯಯನ ನಡೆಸಬೇಕಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಮಂಡಿ, ಚಪ್ಪೆ (ಹಿಪ್) ಮತ್ತು ಕೀಲು ನೋವಿಗೆ ಸಂಬಂಧಿಸಿದಂತೆ ನಡೆಸುವ ಶಸ್ತ್ರಚಿಕಿತ್ಸೆ ವಿಧಾನಗಳಲ್ಲಿ ಹಲವಾರು ಕ್ರಾಂತಿಕಾರಿ ತಂತ್ರಜ್ಞಾನ, ತಾಂತ್ರಿಕತೆಗಳ ಪರಿಚಯವಾಗಿದೆ. ಮುಂದಿನ ಜೀವನದೊಂದಿಗೆ ರಾಜಿ ಮಾಡಿಕೊಂಡು ಬದುಕಲು ಇಷ್ಟವಿಲ್ಲದ ರೋಗಿಗಳು, ಮಂಡಿ ಅಥವಾ ಚಪ್ಪೆ (ಹಿಪ್) ಬದಲಾವಣೆ (ರಿಪ್ಲೇಸ್‌ಮೆಂಟ್) ಸರ್ಜರಿಗೆ ಒಳಗಾಗಬಹುದು.

ತಾಂತ್ರಿಕವಾಗಿ ಸಲಹೆ ಮಾಡಬಹುದಾದ ಆಕ್ಸಿಡೈಸ್ಡ್ ಝಿರ್ಕೋನಿಯಮ್ (ಆಕ್ಸಿನಿಯಮ್) ಮೊಣಕಾಲು ಮತ್ತು ಹಿಪ್ ರಿಪ್ಲೇಸ್‌ಮೆಂಟ್‌ನಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುವಲ್ಲಿ ಯಶಸ್ವಿಯೆನಿಸಿರುವ ಶಸ್ತ್ರಚಿಕಿತ್ಸೆಯಾಗಿದೆ. ಇಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡ ಸರ್ಜರಿಗಳಿಂದಾಗಿ ರೋಗಿಗಳು ಬಹು ಬೇಗ ತೊಂದರೆಯಿಂದ ಮುಕ್ತರಾಗುತ್ತಾರೆ. ಆಕ್ಸಿನಿಯಮ್ ಅನ್ನು 30 ವರ್ಷಗಳ ಕಾಲ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಶಸ್ತ್ರಚಿಕಿತ್ಸೆಯ ನಂತರವೂ ವ್ಯಕ್ತಿಯೊಬ್ಬರು ಚಟುವಟಿಕೆಯಿಂದ ಕೂಡಿದ ಜೀವನವನ್ನು ನಡೆಸಲು ಅನುಕೂಲವಾಗುವಂತಹ ಸರ್ಜರಿ ಇದಾಗಿದೆ.

(ಲೇಖಕರು ಕನ್ಸಲ್ಟಂಟ್ ಆರ್ಥೋಪೆಡಿಕ್ ಸರ್ಜನ್, ಸಾಕ್ರ ವರ್ಲ್ಡ್ ಹಾಸ್ಪಿಟಲ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT