ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಪ್ರಾರ್ಥನೆ

Last Updated 23 ನವೆಂಬರ್ 2015, 19:30 IST
ಅಕ್ಷರ ಗಾತ್ರ

ದಟ್ಟ ಕಟ್ಟಿದ ಮಂಜಿನ ಪರದೆಯನ್ನು ಸರಿಸಿ ಕಿರಣಪಾದಗಳನ್ನು ನೆಲದ ಮೇಲೆ ಊರುವ ಸೂರ್ಯನಿಗೂ ಈಗ ಮೊದಲಿನ ಧಾವಂತವಿಲ್ಲ. ಸಿಕ್ಕಸಿಕ್ಕಲ್ಲೆಲ್ಲ ಹೊಕ್ಕು ಸುಳಿಸುಳಿವ ಪರಮಪೋಲಿ ಸುಳಿಗಾಳಿ ಏನೆಲ್ಲ ಕಂಡಿತೋ, ಏನೇನ ತಾಕಿತೋ ಆ ದೇವನೇ ಬಲ್ಲ. ಚಳಿರಾಯನ ಕುಳಿರ್ಗಾಳಿಯ ದಾಳಿಗೆ ಸಿಕ್ಕು ಥಂಡಿಗೊಳ್ಳುತ್ತಿದೆ ಈ ಜಗವೆಲ್ಲ.

ಹಳ್ಳಿಮನೆಯಲ್ಲಿ ನಸುಕು ಬೆಳಗಲ್ಲಿ ಎದ್ದ ಅಮ್ಮನಿಗೆ ಬಚ್ಚಲೊಲೆಯಲ್ಲಿ ಬೆಂಕಿಹಚ್ಚುವ ಅವಸರವಾದರೆ, ಮಹಾನಗರದ ಬಾಡಿಗೆ ರೂಮಿನ ಪೋರನಿಗೆ ವೀಕೆಂಡಿನ ಬೆಚ್ಚನೆಯ ಬೆಳಗ ಸಡಗರ. ಚಳಿಗಾಲವೆಂದರೆ ಹಾಗೇ, ಅವಳ ರೂಮಿನ ಗಾಜಿನ ಕಿಟಕಿಯ ಮೇಲಿನ ಮಂಜಿನ ಹೊದಿಕೆ ಮತ್ತು ಅದರ ಮೇಲೆ ಮೃದುಬೆರಳಲ್ಲಿ ನಲ್ಲನ ಹೆಸರ ಬರೆವಾಗ ಅವಳ ತುಟಿಗಳಲ್ಲಿ ಮೂಡಿದ ಕಳ್ಳನಗೆ.

ಚಳಿಗಾಲದಲ್ಲಿ ಈ ಬೆಳಗು  ಎಂದಿಗಿಂತ ಹೆಚ್ಚು ಚೆಂದ. ಅಪಾರ್ಟ್‌ಮೆಂಟಿನ ಬಾಗಿಲಲ್ಲಿ ಎಸೆದು ಹೋದ ಪೇಪರ್‌ ಸದ್ದು, ಹಾಲಿನ ಹುಡುಗನ ಹಲ್ಲಿನ ಕಟಕಟ ಸದ್ದು, ಕಸದ ಗಾಡಿಯವಳ ಸೀಟಿ ಸದ್ದೂ ಈಗ ಚಳಿಗೆ ಕಂಪಿಸಿದೆ. ಅಡುಗೆ ಮನೆಯಲ್ಲಿ  ಕಾವಲಿಯ ಮೇಲೆ ಹಿಟ್ಟು ಹೊಯ್ಯುತ್ತಾ ಅಮ್ಮ ಹಾಡಿದ ಹಳೆ ಕನ್ನಡ ಸಿನಿಮಾಗೀತೆಗೂ ನೀರುದೋಸೆಯ ಕಂಪಿದೆ.

ಚಳಿಗಾಲದ ಸಂಜೆ ಕೂಡ ಸುಮ್ಮನೇ ಆಗಿಹೋಗುವುದಿಲ್ಲ. ಮೆಲ್ಲ ಮೆಲ್ಲನೇ ಇಳಿದ ಸೂರ್ಯ ಮರೆಯಾದದ್ದೇ ಮರೆಯಲ್ಲಿದ್ದ ಚಳಿರಾಯನ ಆಟ ಶುರುವಾಗುತ್ತದೆ. ಹಳ್ಳಿಮನೆಯ ಅಂಗಳದಲ್ಲಿ ಆಗಷ್ಟೇ ಅರಳಲು ಹವಣಿಸುತ್ತಿರುವ ಮೊಗ್ಗಿನಲ್ಲಿಯೂ ಇಬ್ಬನಿ ಹೆಸರಲ್ಲಿ ಅವನ ಗುರುತು ಮೂಡುತ್ತದೆ.  ತುಸು ಕತ್ತಲಲ್ಲಿ ಬೆಚ್ಚಗೆ ಸ್ವೆಟರ್‌ ತೊಟ್ಟು ಸುಮ್ಮನೇ ಕೈ ಕೈ ಹಿಡಿದು ನಡಿಗೆ ಹೊರಟ ಹೊಸ ಜೋಡಿಯ ಮುಖದಲ್ಲಿ ಚಳಿರಾಯ ಬರೆದ ಹೊಸ ಪದ್ಯದ ಸಾಲುಗಳಿರುತ್ತವೆ.

ಬ್ಯಾಚುಲರ್‌ ಪ್ರೇಮಿಗಳ ಚಳಿರಾತ್ರಿಯ ಸಂಕಟಗಳೇ ಬೇರೆ. ಯೋಗರಾಜ ಭಟ್ಟರ ಮಾತಿನಲ್ಲಿಯೇ ‘ಇಬ್ಬನಿಯು ಸುಡುತಿಹುದು, ತಂಗಾಳಿ ನಗುತಿಹುದು ಇನ್ನೆಷ್ಟು ಚಳಿಗಾಲ ಕಾಯೋದೆ ಹುಡುಗಿ..?’ ಎಂದು ಆರ್ತವಾಗಿ ಮೊರೆಯಿಡುವ ಅವರ ಹೃದಯದ ಕರಕರೆಯ ಕೇಳಿ ಚಳಿರಾಯನ ಮುಖದಲ್ಲೂ ಮಂದಸ್ಮಿತ.

ಹೀಗೆ ನಡುಗಿಸುತ್ತಲೇ ಮುದ ನೀಡುವ ಚಳಿಗಾಲದ ರಾತ್ರಿ ಅಮ್ಮ ಕೊಟ್ಟ ಬಿಸಿಯೂಟವನ್ನು ಉಂಡು ದಪ್ಪ ಹೊದಿಕೆಯಡಿ ಮಲಗಿದ ಆ ಹುಡುಗನಿಗೆ ಜೊಂಪು ನಿದ್ದೆಯಲ್ಲಿ ಚಳಿಯಷ್ಟೇ ತಣ್ಣನೆಯ ಕನಸೊಂದು ಬಿದ್ದಿದೆ. ತಾನು ಕಾಲೇಜಿಗೆ ಹೋಗುವ ದಾರಿಯ ಟ್ರಾಫಿಕ್‌ನಲ್ಲಿ ಬಟ್ಟೆ ಜಗ್ಗಿ ಭಿಕ್ಷೆ ಬೇಡುವ ಹರುಕು ಬಟ್ಟೆಯ ಹುಡುಗಿ ತನ್ನ ಹೊದಿಕೆಯನ್ನು ಜಗ್ಗಿದಂತೇ ಕಂಡು ಬೆಚ್ಚಿ ಎಚ್ಚರಾಗಿದ್ದಾನೆ ಹುಡುಗ. ಕಣ್ಣು ತೆರೆದು–ನೀರು ಕುಡಿದು ತಲೆಕೊಡವಿದರೂ ಮನಸ್ಸಲ್ಲಿನ್ನೂ ಅಚ್ಚೊತ್ತಿದೆ ಭಿಕ್ಷುಕ ಹುಡುಗಿಯ ಆಳ ಕಣ್ಣುಗಳು... ಮತ್ತದರ ಹಿಂದೆ ಅಂಥವೇ ಹತ್ತು ನೂರು ಸಾವಿರ ಕಣ್ಣುಗಳು... ಎಲ್ಲಿರಬಹುದು ಆ ಹುಡುಗಿ ಈ ಕೊರೆವ ಚಳಿಗಾಲದಲ್ಲಿ...?

ಗೊತ್ತು ಪ್ರಾರ್ಥನೆಯಿಂದ ಏನೂ ಬದಲಾಗದು. ಆದರೂ ಈ ನಡುರಾತ್ರಿ ಅರೆಯೆಚ್ಚರದಲ್ಲಿ ಮಂಡಿಯೂರಿ ಬೇಡಿಕೊಳ್ಳುತ್ತಿದೆ ಹುಡುಗನ ಮನ. ಚಳಿಯೇ... ಹೊದ್ದುಕೊಳ್ಳಲು ಬಟ್ಟೆ ಇಲ್ಲದ, ಎಂದೂ ಪೂರ್ತಿ ತುಂಬಿಯೇ ಇರದ ಹೊಟ್ಟೆ ಹೊತ್ತವರ ಬಗೆಗೆ ಕೊಂಚ ಕರುಣೆಯಿಡು... ಗೋಪುರದ ಭದ್ರತೆಯಲಿ, ಗರ್ಭಗುಡಿಯ ಕತ್ತಲಲಿ ಶತಮಾನಗಳಿಂದ ಮಿಸುಕದೇ ಕುಳಿತ ಜಗದ ಎಲ್ಲ ದೇವತೆಗಳ ವಸ್ತ್ರಗಳು ತಂತಾನೆಯೇ ಬಿಚ್ಚಿಕೊಳ್ಳಲಿ...

ಮಾಯದ ಗಾಳಿಯೊಂದು ಆ ವಸ್ತ್ರಗಳನೆಲ್ಲ ತೇಲಿತಂದು ಹೊದ್ದಿಸಲಿ ರಸ್ತೆಬದಿ ನಡುನಡುಗುತ ಮಲಗಿರುವ ಹಸಿ ಕಂದಮ್ಮಗಳ ಬಿರುಕು ಚರ್ಮದ ಮೈಮೇಲೆ ಮತ್ತು ಕಂಪಿಸುವ ಗದ್ದಗಳ ಬೊಚ್ಚುಬಾಯಿ ಮುತ್ತಜ್ಜಿಯರ ಮೇಲೆ... ಆ ನಿರ್ಗತಿಕ ತುಂಬಿದ ಬಸುರಿ ಹೆಂಗಸಿಗೆ ಸರ್ಕಾರಿ ಆಸ್ಪತ್ರೆಯಲ್ಲೊಂದು ಸಣ್ಣ ಜಾಗ ಸಿಗಲಿ... ಹುಟ್ಟುವ ಕೂಸಿನ ಪಕ್ಕ ಅಕಸ್ಮಾತ್‌ ಪ್ರತ್ಯಕ್ಷವಾಗಿಬಿಡಲಿ ಬಣ್ಣದ ಕುಲಾವಿ ಮತ್ತು ಒಂದು ಚಂದದ ಹೆಸರು... ಈ ಇಡೀ ಚಳಿಗಾಲ ಹೀಗೆ ಕಳೆದುಬಿಡಲಿ ಬೆತ್ತಲ ದೇವರ ವಸ್ತ್ರಗಳನ್ನು ನಿರ್ಗತಿಕರು ಹೊದ್ದು ಬೆಚ್ಚಗಾಗುವ ಪವಾಡದಲಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT