ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಸಾಂಗತ್ಯ

Last Updated 2 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಚಳಿಗಾಲ, ಮೈ ಕೊರೆವ ಕುಳಿರ್ಗಾಳಿ ಕಲ್ಲೆದೆಯನ್ನೂ ಕಂಪಿಸುವ ಹೊತ್ತು. ಒಂದರ ಮೇಲೊಂದು ಕಂಬಳಿ ಹೊದ್ದರೂ ನುಸುಳಿ ಬರುವ ತಣ್ಣನೆ ನೆನಪುಗಳ ಸ್ಪರ್ಶ. ಚಳಿಗಾಲದಲ್ಲಿ ಬೆಚ್ಚನೆಯ–ಕಾವೇರಿದ ನೆನಪುಗಳು ಎಲ್ಲರಲ್ಲೂ ಸಾಕಷ್ಟಿವೆ. ಇಬ್ಬನಿ ಸೋಕಿದ ಮಸುಕು ದಾರಿಯಲ್ಲಿ ಪ್ರಕೃತಿ, ಮನುಷ್ಯ ಎಲ್ಲವೂ ಚೆಂದಗೊಳ್ಳುವ ಅನುಭವವೇ ಸುಂದರ. ಹೀಗೆ ಚಳಿಗಾಲದ ಸಾಂಗತ್ಯದ ಕುರಿತು ‘ಕಾಮನಬಿಲ್ಲು’ ಓದುಗರಿಂದ ಬರಹಗಳನ್ನು ಆಹ್ವಾನಿಸಿತ್ತು. ಬೆಚ್ಚನೆ  ಅನುಭವಗಳನ್ನು ಹಂಚಿಕೊಂಡ ಹಲವಾರು ಪತ್ರಗಳು ಬಂದಿವೆ. ಅವುಗಳಲ್ಲಿ ಆಯ್ದ ಪತ್ರಗಳು ಇಲ್ಲಿವೆ...

ಮನದೊಳಗೊಂದು ಚಳಿಗಾಲ... 
ಚಳಿಗಾಲ ಎಂದರೆ ನನಗೆ ತುಂಬಾ ಇಷ್ಟ. ಸಾಮಾನ್ಯವಾಗಿ ನಾನು ಕಥೆ ಬರೆಯುವಾಗ ಮಳೆ, ಚಳಿ, ಹಸಿರು ಇಂಥ ದೃಶ್ಯಗಳೇ ಕಣ್ಣಮುಂದೆ ಕಟ್ಟಿಕೊಳ್ಳುತ್ತದೆ. ‘ರಂಗಿತರಂಗ’ದಲ್ಲೂ ಅದೇ ಪರಿಕಲ್ಪನೆ ಇರುವುದು. ಮಳೆ–ಚಳಿಗೆ ಹೆಸರಾದ ಮಲೆನಾಡ ಮಡಿಲಲ್ಲೇ ಚಿತ್ರೀಕರಣ ಮಾಡಿದ್ದು.

ಚಳಿಗಾಲ ಎಂದಾಗ ಮೊದಲು ನೆನಪಾಗುವುದು ಮಡಿಕೇರಿ. ಮಂಜಿನ ವಾತಾವರಣದಲ್ಲಿ ಡ್ರೈವ್ ಮಾಡುವ ಅನುಭವವೇ ಬೇರೆ. ಮೈಸೂರಿನಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿ ನಾವು ಯಾವಾಗಲೂ ಹೋಗುವ ಒಂದು ಹೋಟೆಲ್ ಇದೆ. ಅಲ್ಲಿ ಬಿಸಿಬಿಸಿ ಕಾಫಿ ಕುಡಿಯುವಾಗ ಅಮೃತ ಎನ್ನಿಸುತ್ತದೆ. ಈಗಂತೂ ಕಡು ಚಳಿಯಲ್ಲಿ ಒಂದು ಕಂಬಳಿ ಹೊದ್ದು ಕುಟುಂಬದ ಜೊತೆ ಒಳ್ಳೆ ಸಿನಿಮಾ ನೋಡುವ ಮನಸಾಗುತ್ತಿದೆ.

ಚಿಕ್ಕಂದಿನಿಂದಲೂ ಹಿಮ ಬೀಳುವುದನ್ನು ನೋಡಬೇಕೆಂಬ ಆಸೆ ಇತ್ತು. ಆ ಆಸೆ ಪೂರೈಸಿದ್ದು ಅಮೆರಿಕಕ್ಕೆ ಹೋದಮೇಲೆ. 2008ರಲ್ಲಿ ಅಮೆರಿಕಕ್ಕೆ ಹೋದ ದಿನವೇ ಹಿಮಪಾತವೂ ಆರಂಭವಾಗಿತ್ತು. ಅದನ್ನು ನೋಡಿ ಎಷ್ಟು ಖುಷಿ ಪಟ್ಟಿದ್ದೇನೆ ಎಂದು ವಿವರಿಸುವುದು ಕಷ್ಟ. ಆಮೇಲೆ ಚಳಿಗಾಲದ ಪ್ರತಿ ದಿನವೂ ಕಾರಿನ ಮೇಲೆ ಬೀಳುವ ಅಚ್ಚ ಬಿಳುಪಿನ ಹಿಮವನ್ನು ತೆಗೆದು ತೆಗೆದೇ ಸುಸ್ತಾಗುತ್ತಿದ್ದೆ. ಅಲ್ಲಿರುವಾಗ ಚಳಿಗಾಲದಲ್ಲೂ ಫ್ಯಾನ್ ಹಾಕಿಕೊಂಡೇ ಮಲಗುತ್ತಿದ್ದೆ!
–ಅನೂಪ್ ಭಂಡಾರಿ,
ಚಿತ್ರ ನಿರ್ದೇಶಕ

ರೈತರಿಗೆ ಚಳಿ ಎಂದರೆ

ಮಾಗಿ ಕಾಲ ಎಂದಾಕ್ಷಣ ನನಗೆ ನನ್ನ ಹದಿಹರೆಯ ನೆನಪಿಗೆ ಬಂತು. ಆಗ ನಮ್ಮದು ಆರು ಎಕರೆ ಎರೆ ಹೊಲವಿತ್ತು. ಸಾಮಾನ್ಯವಾಗಿ ಎರೆಭೂಮಿಯಲ್ಲಿನ ರೈತರ ಬದುಕೆಲ್ಲಾ ಬೆಳಗಿನ ನಾಲ್ಕು ಗಂಟೆಗೇ ಶುರುವಾಗುತ್ತದೆ. ಅದರಲ್ಲೂ ಚಳಿಗಾಲವೆಂದರೆ ಎರೆಭೂಮಿಯ ರೈತರ ಒಕ್ಕಣೆ ಕಾಲ.

ಎರೇ ಹೊಲಕ್ಕೆ ಬಿತ್ತಿದ ಬಿಳಿಜೋಳ, ತೊಗರಿ, ಕರಿಕಡಲೆ, ದನಿಯಾ, ಅಗಸೆ, ಕುಸುಬೆ ಮೊದಲಾದ ಬೆಳೆಗಳೆಲ್ಲಾ ಚಳಿಗಾಲದಲ್ಲೇ ಕಟಾವಿಗೆ ಬರುತ್ತವೆ. ಹೀಗೆ ನಮ್ಮ ಎರೆಹೊಲದಲ್ಲಿನ ಪೈರು ಕೊಯ್ಲಿಗೆ ಬಂದಾಗ ನಮ್ಮ ತಂದೆಯವರು ನಮ್ಮನ್ನು ಬೆಳಗಿನ ಮೂರು ಗಂಟೆಗೇ ಎಬ್ಬಿಸುತ್ತಿದ್ದರು.

ನಾವು ಏಳುವ ಹೊತ್ತಿಗಾಗಲೇ ಅವರು ನಮ್ಮ ಹೋರಿಗಳನ್ನು ಹೊಟ್ಟೆ ತುಂಬುವಂತೆ ಹೊಟ್ಟು ಹಾಕಿ ಮೇಯಿಸಿರುತ್ತಿದ್ದರು. ನಾನು ಹೋರಿಗಳನ್ನು ಬಂಡಿಗೆ ಹೂಡಿ ಕೆಲಸಕ್ಕೆ ಬರುವ ಆಳು ಕಾಳುಗಳನ್ನು ಬಂಡಿಗೆ ಹತ್ತಿಸಿಕೊಂಡು ಎರೇ ಹೊಲಕ್ಕೆ ಹೋಗಿ ಬಂಡಿ ಕೊರಳು ಹರಿದು ಬಿಳಿಜೋಳ ಕೀಳಲು ಮುಂಬು ಹಿಡಿಯುವ ಹೊತ್ತಿಗೆ ನಾಲ್ಕು ಗಂಟೆ ಆಗಿನಿಂದ ಬಿಳಿಜೋಳದ ದಂಟಿನ ಬುಡದ ಮಣ್ಣಿಗೆ ಝಾಡಿಸಿ ಹಿಮ್ಮಡಿಯಿಂದ ಒದ್ದು ನೆಲ ಸಡಿಲಗೊಡಿಸಿ ಬಿಳಿಜೋಳದ ಬೆಳೆಯನ್ನು ಕಿತ್ತು ಹಾಕುತ್ತಿದ್ದೆವು. ಹೀಗೆ ನಾವೆಲ್ಲಾ ಹೊಲದಲ್ಲಿ ಕೆಲಸಕ್ಕೆ ನಿಂತೆವೆಂದರೆ ಅಂತಹ ಕೊರೆಯುವ ಚಳಿಯಲ್ಲಿಯೂ ಸೆಖೆಯಾಗಬೇಕು ಹಾಗಿರುತ್ತಿತ್ತು. ಆಗ ನಮ್ಮ ಜೊತೆಗೆ ಕೆಲಸಕ್ಕೆ ಬರುತ್ತಿದ್ದ ಚಂದ್ರಪ್ಪ ಹಾಡಲು ಶುರುವಿಟ್ಟುಕೊಳ್ಳುತ್ತಿದ್ದ.

ಗುದ್ದಲಿ ಹಿಡಿಯಾದಿದ್ದರೆ ನಿನ ಹೊಲ ಗೆದ್ದಲು ಹಿಡಿತೈತೋ ನೇಗಿಲು ಹೊಡೆಯಾದಿದ್ದರೆ ನಿನ ಹೊಲ ಸಾಗೆಂಗಾಗುತೈತೋ ಚಿತ್ತವಿಟ್ಟು ಕೇಳಿರಿ ಮೊಲದ ಸಂಧಾನ...

ಯಾಕೆ ಒಳ್ಳೇ ನೋಡುತೀ ನೋಡೀ ಮರುಳು ಮಾಡುತೀ ಹೇಳೋ
ನಿನ್ನ ಹೆಸರಾ ಚಿಗುರು ಮೀಸೀ ಸರದಾರಾ...!


ಹಾಡುಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿತ್ತು. ಕೆಲ ಸಲ ಆತನ ಹಾಡಿಗೆ ನಾವು ಹಿಮ್ಮೇಳ ಹಾಡುವುದೂ ಇತ್ತು. ಚಂದ್ರಪ್ಪನೊಂದಿಗೆ ಎರೇ ಹೊಲದ ಕೆಲಸಕ್ಕೆ ಹೋಗುವುದೆಂದರೆ ಅಂತಹ ಚಳಿಗಾಲದಲ್ಲಿಯೂ ನಮಗೆ ಹುರುಪು ಬರುತ್ತಿತ್ತು. ಚಂದ್ರಪ್ಪನ ಹಾಡುಗಳೂ ಒಂದು ರೀತಿ ನನ್ನಲ್ಲಿ ಸಾಹಿತ್ಯ ಪ್ರೀತಿ ಹುಟ್ಟಲು ಕಾರಣವಾಯಿತು.

ನಮ್ಮ ಹೊಲಕ್ಕೆ ಹತ್ತಿಕೊಂಡಂತೆ ನೆಲ್ಲುಕುದುರೆ, ಮಾಲವಿ ಊರುಗಳ ಹೊಲಗಳೂ ಇದ್ದವು. ಅವರೂ ನಮ್ಮಂತೆ ಬೆಳಗಿನ ನಾಲ್ಕು ಗಂಟೆಗೆ ಹೊಲದ ಕೆಲಸ ಪ್ರಾರಂಭಿಸುತ್ತಿದ್ದರು. ನಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗಂಡು ಹಾಗೂ ಪಕ್ಕದ ನೆಲ್ಲುಕುದುರೆಯವರ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಹೆಣ್ಣುಗಳ ಜೋಡಿಯೊಂದನ್ನು ನಾವೇ ಮದುವೆಯಾಗಲು ಒಪ್ಪಿಸಿ ಎರಡೂ ಕಡೆಯ ಹಿರಿಯರ ಗಮನಕ್ಕೆ ತಂದು ಅವರ ಮದುವೆಯೂ ನಡೆದುಹೋಗಿತ್ತು.

ಮರುವರ್ಷದ ಚಳಿಗಾಲಕ್ಕೆ ಆ ಜೋಡಿ ನಮ್ಮ ಹೊಲಕ್ಕೆ ಬಂದು ಜೊತೆಯಲ್ಲೇ ಕೆಲಸ ಮಾಡುವಾಗ ಅವರನ್ನು ನಾವೆಲ್ಲಾ ಕೀಟಲೆ ಮಾಡಿ ಸಾಕಷ್ಟು ನಗುತ್ತಿದ್ದೆವು. ಹೀಗೆ ಚಳಿಗಾಲವೆನ್ನುವುದು ರೈತರ ಬದುಕಿನಲ್ಲಿ ಒಂದು ಪಾತ್ರವೇ ಆಗಿಬಿಡುತ್ತಿತ್ತು. ಒಂದು ವರ್ಷ ಮಳೆಗಾಲ ತುಂಬಾ ಜಾಸ್ತಿಯಾಗಿ ಭೂಮಿಯಲ್ಲಿನ ನೀರಿನ ಮಟ್ಟ ತುಂಬಾ ಮೇಲೆ ಬಂದು ನಮ್ಮೂರ ಮುಂದಿನ ಹಳ್ಳದ ಪ್ರದೇಶವೆಲ್ಲಾ ಜವುಗಾಗಿ ಆ ಪ್ರದೇಶವೆಲ್ಲಾ ಹುದುಲು ಬಿದ್ದು ಹೋಯಿತು.

ಆ ಹುದುಲಿನಿಂದ ನೀರು ಉಕ್ಕಿ ಹರಿಯುತ್ತಿತ್ತು. ಹುದುಲು ಎಂದರೆ ಬಹಳ ಅಪಾಯಕಾರಿ. ಭೂಮಿಯಲ್ಲಿನ ನೀರಿನ ಮಟ್ಟವು ನೆಲದ ಮಟ್ಟದವರೆಗೂ ಏರಿ ಭೂಮಿಯನ್ನು ಸಡಿಲ ಮಾಡಿ ಅಲ್ಲಿಂದ ನೀರು ಉಕ್ಕಿ ಹರಿಯತೊಡಗುತ್ತದೆ. ಆಗ ಅದರೊಳಗೆ ಕಾಲಿಟ್ಟರೆ ಸಾಕು ದನ. ಕರು, ಮನುಷ್ಯರು ಯಾರೇ ಹೋದರೂ ಆ ಹುದುಲಿನಲ್ಲಿ ಮುಳುಗಿ ಮೇಲೆ ಮತ್ತೆ ಕೆಸರು ಸಾಪಾಗಿ ಮುಚ್ಚಿಕೊಂಡು ಸಮಾಧಿಯಾಗಿ ಹೋಗುತ್ತಾರೆ. ಹಾಗಾಗಿ ಆ ಸಮಯದಲ್ಲಿ ಆ ಕಡೆಗೆ ದನ, ಕರು, ಮನುಷ್ಯರು, ಮಕ್ಕಳು ಹೋಗದಂತೆ ನಮ್ಮ ಹಳ್ಳಿಯ ಜನ ಆಗ ಜಾಗ್ರತರಾಗಿರುತ್ತಿದ್ದರು.

ಆ ವರ್ಷ ಊರ ಮುಂದಿನ ಹಳ್ಳದ ದಂಡೆಯ ಬಯಲೆಲ್ಲಾ ಜವುಗಾದಾಗ ಚಳಿಯ ಮಟ್ಟವೂ ಅಸಾಧ್ಯವಾಗಿ ಏರಿತ್ತು. ಆ ಅಸಾಧ್ಯವಾದ ಚಳಿಯನ್ನು ತಡೆಯಲಾರದೇ ಜನರು ಸಂಜೆಯೇ ಒಣಗಿದ್ದ ಈಚಲುಗರಿ, ತಾಳೇಗರಿ, ತೊಗರಿಪುಳ್ಳಿ, ಹತ್ತಿಪುಳ್ಳಿ ಮೊದಲಾದವುಗಳನ್ನು ಕೂಡಿಟ್ಟುಕೊಂಡು ಬೆಳಗಿನ ನಾಲ್ಕು ಗಂಟೆಗೇ ಮನೆಗಳ ಅಂಗದಲ್ಲಿ ಅವುಗಳಿಗೆ ಬೆಂಕಿ ತಾಗಿಸಿ ಉರಿ ಹಾಕಿ ಆ ಉರಿಯ ಸುತ್ತ ಮನೆಯ ಎಲ್ಲರೂ ಮೈ ಕಾಯಿಸಿಕೊಳ್ಳುತ್ತಾ ಕುಳಿತುಬಿಡುತ್ತಿದ್ದರು.

ಕುಂಟರಾಮಪ್ಪ ಎನ್ನುವ 55 ವಯಸ್ಸಿನ ಸ್ವಲ್ಪ ಅಸ್ತಮಾ ಇದ್ದ ಒಬ್ಬಾತ ಆ ಅಸಾಧ್ಯ ಚಳಿಯನ್ನು ತಡೆಯಲಾರದೇ ಸತ್ತು ಹೋಗಿದ್ದ. ಆಗ ಅಬ್ಬಾ ಈ ಚಳಿಯಿಂದ ಏನೇನೆಲ್ಲಾ ಆಗುತ್ತಿದೆಯಲ್ಲಾ ಎಂದು ನನ್ನಲ್ಲಿ ವಿಷಾದ ಹುಟ್ಟಿತ್ತು. ಈಗಲೂ ಹಿಂದಿನ ಆ ಚಳಿಗಾಲದ ನೆನಪು ಬಂದಾಗ ಚಂದ್ರಪ್ಪನ ಜನಪದ ಹಾಡುಗಳನ್ನು ಕೇಳುವ ಸಂತೋಷ, ಹೊಲಗೆಲಸದಲ್ಲಿನ ಹುರುಪು, ನವ ಜೋಡಿಯನ್ನು ಛೇಡಿಸುತ್ತಿದ್ದ ಖುಷಿ ಅಲ್ಪಸ್ವಲ್ಪ ವಿಷಾದ ಹೀಗೆ ಎಲ್ಲವೂ ನನ್ನಲ್ಲಿ ಮೇಳೈಸುತ್ತದೆ.
- ಎ.ಆರ್.ಪಂಪಣ್ಣ,
ವಟ್ಟಮ್ಮನಹಳ್ಳಿ


ಗಿರಿಧಾಮದ ತಪ್ಪಲಿನಲ್ಲಿ ನಡುಗಿ ನಡುಗಿ...
ನಂದಿ ಬೆಟ್ಟದ ಗಿರಿಧಾಮದ ತಪ್ಪಲಿನಲ್ಲಿ ನಮ್ಮ ಊರು. ಮಳೆಯ ಪ್ರಮಾಣಕ್ಕಿಂತ ಚಳಿಯ ಹೊಡೆತವೇ ಹೆಚ್ಚಾಗಿರುತ್ತಿತ್ತು. ಮುಂಜಾನೆ 7.30ಕ್ಕೆಲ್ಲ ನಮ್ಮ ಶಾಲೆ ಪ್ರಾರಂಭ. ಮನೆಯಿಂದ 2 ಮೈಲಿ ಶಾಲೆಗೆ ನಡೆಯಬೇಕು. ಸ್ವೆಟರ್ ಇದ್ದರೆ ಇರುತ್ತಿತ್ತು, ಕೆಲವರಲ್ಲಿ ಇರುತ್ತಿರಲಿಲ್ಲ. ತಲೆಗೆ ಒಂದು ಹಳೆಯ ಟವಲ್ಲನ್ನು ಕಿವಿಮುಚ್ಚುವಂತೆ ಕಟ್ಟಿಕೊಂಡು ತೇನ್ ಸಿಂಗ್, ಹಿಲರಿಗಳಂತೆ ನಮ್ಮ ಪ್ರಯಾಣ 6.30ಕ್ಕೆ ಸಾಗುತ್ತಿತ್ತು. ಚಳಿಗೆ ಹೊಟ್ಟೆಯಲ್ಲಿನ ಕರುಳುಗಳೆಲ್ಲ ಗಂಟು ಕಟ್ಟಿದಂತಿರುತ್ತಿತ್ತು. ಮುಂಜಾನೆ ಮಂಜು ಕವಿದು ಒಬ್ಬರಿಗೊಬ್ಬರು ಅಸ್ಪಷ್ಟವಾಗಿ ಕಾಣುತ್ತಿದ್ದರು. ಬಾಯಿಂದ ಬಿಳಿ ಹೊಗೆಯನ್ನು ಉಫ್ ಉಫ್ಎಂದು ಬಿಡುತ್ತಾ ನಡೆಯುತ್ತಿದ್ದೆವು. ನೆಲದ ಕಲ್ಲು ಹಾಸಿನ ಮೇಲೆ ರಾತ್ರಿ ಸುರಿದ ಇಬ್ಬನಿಯಿಂದ ನೆಲ ಒದ್ದೆ ಒದ್ದೆಯಾಗಿರುತ್ತಿತ್ತು.

ಆಗೆಲ್ಲ ಕಾಲುಚೀಲ ಧರಿಸುವ ಅಭ್ಯಾಸವಿರಲಿಲ್ಲ. ಕಾಲಿಗೆ ಚಪ್ಪಲಿಯೊಂದೇ ಆಧಾರ. ಶಾಲೆಗೆ ಹೋಗಿಬಂದು ಆಟವಾಡಿ ಮೈ, ಕೈಗಳೆಲ್ಲ ಬಿರಿದು ಚರ್ಮವು ಪ್ರಾಣಿಗಳ ಚರ್ಮದಂತೆ ಒರಟಾಗಿರುತ್ತಿತ್ತು. ಪಾದಗಳ ಚರ್ಮವು ಹೆಜ್ಜೆಯೂರದಂತೆ ಬಿರುಕು ಬಿದ್ದು ರಕ್ತ ಕಾಣುವಂತಿರುತ್ತಿತ್ತು. ಶಾಲೆಯ ಬಿಡುವಿನ ವೇಳೆಯಲ್ಲಿ ಬಿಸಿಬಿಸಿಯಾಗಿ ಬೇಯಿಸಿದ, ಹುರಿದ ಕಡಲೆಕಾಯಿ ಕೊಂಡು ತಿನ್ನುತ್ತಿದ್ದೆವು. ಅಲ್ಲಿ ಚಳಿಗಾಲದಲ್ಲಿ ಮಲ್ಲಿಗೆ ಹೂವಿನ ಕಾಲ ನಾವು ಎಷ್ಟೇ ಚಳಿಯಾದರೂ ಮಧ್ಯಾಹ್ನ ಮಲ್ಲಿಗೆ ಮೊಗ್ಗು ಬಿಡಿಸಲು ಹಾಗೂ ಅವರೆಕಾಯಿ ಬಿಡಿಸಲು ತೋಟಕ್ಕೆ ಹೋಗುತ್ತಿದ್ದೆವು.

 ಚಳಿಚಳಿಯೆಂದು ಸುಮ್ಮನೆ ಕೂಡದೆ ನೀರು ಸೇದುವುದು, ಬಟ್ಟೆ ಒಗೆಯುವುದು, ಅವರೆಕಾಯಿ ಸುಲಿಯುವ ಕೆಲಸಗಳಿದ್ದು ಎಲ್ಲರೂ ಚುರುಕಾಗೇ ಇರುತ್ತಿದ್ದೆವು. ಆದರೆ ರಾತ್ರಿಯಾಗುತ್ತಿದ್ದಂತೆ ಚಳಿಯು ಹೆಚ್ಚಿ ಹಲ್ಲುಗಳೆಲ್ಲ ಕಟ ಕಟಿಸುತ್ತಿದ್ದರೆ ಬಿಸಿ ಬಿಸಿ ಅವರೆಕಾಳಿನ ಊಟವನ್ನುಂಡು ಪಾದದ ಬಿರುಕಿಗೆ ಅಮ್ಮ ಕಾಯಿಸಿಟ್ಟ ಜೇನುಮೇಣವನ್ನು ಹಚ್ಚಿಕೊಂಡು ಬೆಚ್ಚಗೆ ಕೋಲಾರದ ಕಂಬಳಿಹೊದ್ದು ಮಲಗಿದರೆ ಬೆಳಗಿನವರೆಗೂ ಪಟ್ಟಾಗಿ ನಿದ್ರೆ. ಮತ್ತೆ ಬೆಳಿಗ್ಗೆ ಚಳಿಯ ಸಾಂಗತ್ಯದಲ್ಲಿ ಎಲ್ಲ ಕೆಲಸಗಳೂ ಪ್ರಾರಂಭವಾಗುತ್ತಿತ್ತು.
 - ಎಸ್. ವಿಜಯಗುರುರಾಜ,
ಬೆಂಗಳೂರು


ನಡುಕ ಹುಟ್ಟಿಸಿತು ಕ್ಯಾಂಪ್ ಸ್ನಾನ
ನನಗೆ ಚಿಕ್ಕಂದಿನಿಂದಲೂ ಒಂದಾಸೆ. ನಾನು ಎನ್‌ಸಿಸಿ ಸೇರಬೇಕಂತ. ಆದ್ರೆ ನಮ್ಮಪ್ಪ ಮಾತ್ರ ಯಾವಾಗ್ಲೂ ‘ನೀನು ಕುಳ್ಳಿ ನಿನ್ನ ಸೇರಸ್ಕೋಳ್ಳಲ್ಲ’ ಅಂತಿದ್ರು. ನಾನು ಮಾತ್ರ ಅವರಿಗೆ ‘ನೀನ್ ಕಲಿತ ಕಾಲೇಜಿನಲ್ಲೇ ನೀನ್ ತೊಟ್ಟ ಎನ್‌ಸಿಸಿ ಸಿನಿಯರ್ ಅಂಡರ್‌ ಆಫೀಸರ್ ರ‍್ಯಾಂಕ್‌ ನನ ಭುಜದ ಮೇಲೆನು ಇರುತ್ತೆ’ ಅಂತಾ ಚಾಲೆಂಜ್ ಮಾಡ್ತಿದ್ದೆ. ಅದೃಷ್ಟ ಕೈ ಹಿಡಿದಿತ್ತು. ಅದೇ ಕಾಲೇಜನಲ್ಲಿ ನಾ ಬಯಸಿದ್ದೇ ಆಗಿತ್ತು.

ಇದೇ ಜೋಶ್‌ನಲ್ಲಿ ಮೊದಲನೆ ಕ್ಯಾಂಪ್‌ಗೆ ಹೋದೆ. ಆದ್ರೆ ಏನ್ ಹೇಳ್ಲಿ ನನ್ ಗೋಳು. ನನಗೆ ಕಷ್ಟ ಕೊಡೋಕಂತಾನೆ ಕಾಯ್ದು ಕುಳಿತಿರೋ ಆ ಚಳಿಗಾಲ ತಡಕೊಳ್ಳಕ್ಕಾಗದೇ ಇರುವಷ್ಟು ನಡಗಿಸ್ತಿದ್ವು. ಬೆಳಗಾವಿ ಎ.ಪಿ.ಎಮ್. ಸಿ ರೋಡ್ ಪಕ್ಕ ನಮ್ ಕ್ಯಾಂಪ್. ಅಲ್ಲಿ ಬಿಸಿನೀರಿನ ವ್ಯವಸ್ಥೆ ಇರಲಿಲ್ಲ. ಕೊರೆವ ನೀರು. ಆ ನೀರಿನ ಟ್ಯಾಂಕ್ ಮೇಲೆ ನೀರನ್ನು ಮಿತವಾಗಿ ಬಳಸಿ ಅಂತಾ ಬರೆದಿದ್ರು.  ಅಯ್ಯೋ ನಿನ್ ಮಿತವಾಗಿ ಮನೆ  ಹಾಳಾಗ್ಲಿ ಅದನ್ನ ಮುಟ್ಟೋಕು ಆಗಲ್ಲ ಅಂತಾ ಬೈಕೊಂಡೆ.

ನಾನು ತಣ್ಣೀರಿಂದ ಕೈ ಕಾಲು ತೊಳಕೊಳ್ಳಕ್ಕಾಗ್ದೆ ಇರೋಳು ಸ್ನಾನ ಮಾಡ್ತಿನಾ ಇಲ್ಲವೇ ಇಲ್ಲ ಅಂತ ನಿರ್ಧಾರ ಮಾಡಿದ್ದೆ. ಆದ್ರೆ ಪಿ.ಟಿ, ಡ್ರಿಲ್ಲು, ಆಟ ಅಂತ ಮಾಡಿ ಬಟ್ಟೆ ಎಲ್ಲಾ ವಾಸನೆ ಬರೋಕೆ ಶುರು ಮಾಡ್ತು. ಇದಕ್ಕಾದ್ರು ಸ್ನಾನ ಮಾಡಬೇಕಲ್ಲಪ್ಪ ಅಂತಾ 3 ದಿನಗಳ ನಂತರ ದೇವರೆ ನೀನೆ ಕಾಪಾಡಪ್ಪಾ ಅಂತಾ ಜಪಿಸ್ತಾ ಸ್ನಾನ ಮಾಡಿದ್ದಾಯ್ತು. ಹತ್ತು ದಿನಗಳಲ್ಲಿ ನನ್ನದು ಇದೇ ಕೋನೇ ಸ್ನಾನ ಆಗಿತ್ತು.

ಆ ತಂಪು ನೀರು ನನ್ನನ್ನ ಮೂಲೆ ಹಿಡಿದು ಕುಳಿತುಕೊಳ್ಳೋ ಹಾಗೇ ಮಾಡಿತ್ತು. ಯಾಕಾದ್ರು ಕ್ಯಾಂಪ್‌ಗೆ ಬಂದೆ ಅನ್ಸಿತ್ತು. ಇರಲಾರದವರು ಇರುವೆ ಬಿಟ್ಕೊಂಡ್ರಂತೆ ಹಾಗಾಯಿತು ನನ್ ಪರಿಸ್ಥಿತಿ ಅನ್ಕೊಂಡು ನನಗೆ ನಾನೇ ಬೈಯ್ಕೊಂಡೆ. ಮಲಗಬೇಕಾದ್ರೆ ದೇವರೆ ನಾನು ನಿನ್ನ ನಿಜವಾದ ಭಕ್ತೆ ಆಗಿದ್ರೇ ಬೇಗ ಬೆಳಕಾಗ್ದೆ ಇರೋ ಹಾಗ್ ಮಾಡಪ್ಪಾ ಯಾಕಂದ್ರೆ ಬೆಳಿಗ್ಗೆ ಐದು ಗಂಟೆಗೆ ಎದ್ದು ಓಡಬೇಕಲ್ಲ ಅಂತಾ ಪ್ರಾರ್ಥಿಸುತ್ತಿದ್ದೆ. ದೇವರು ಮಾತ್ರ ನೀನು ನಿಜವಾದ ಭಕ್ತೆ ಅಲ್ಲ ತಾಯಿ ಅಂತಾ ಅಷ್ಟೇ ಪ್ರೀತಿಯಿಂದ ಬೇಗ ಬೆಳಕು ಹರಿಸ್ತಿದ್ದ.

ದಿನ ಬೆಳಗಾದ್ರೆ ಅದೇ ಡ್ರಿಲ್ಲು, ಆಟ, ಪಿ.ಟಿ ಪಿರಿಯಡ್ ಅಂತಾ ತಲೆ ತಿನ್ನೋ ಆರ್ಮಿಯವರು ಇದೆಲ್ಲದರ ಜೊತೆಗೆ ಚಳಿ ಜೊತೆಗೆ ಗುದ್ದಾಡಿ ಮಳೇಯೋ ಬರ ಸಿಡಿಲೋ ನೀ ನಡಿಯುತಿರು ಅಂತಾ ಮನಸ್ಸಿಗೆ ಹೇಳಿ ಸಮಾಧಾನ ಪಡ್ತಿದ್ದೆ. ಆ ಹತ್ತು ದಿನದ ಕ್ಯಾಂಪ್‌ನಲ್ಲಿ ಹರಸಾಹಸ ಪಟ್ಟು ಒಂದೇ ದಿನ ಸ್ನಾನ ಮಾಡಿ ಸಾಧನೆ ಮಾಡಿದಂಗಾಯ್ತು. ಚಳಿಗಾದ ಅನುಭವ  ಜೀವನದಲ್ಲಿ ಮಾಸದ ನೆನಪಾಗಿತ್ತು. ನನ್ನ 23  ವರ್ಷದಲ್ಲಿ ಹತ್ತು ದಿನಗಳವರೆಗೆ ಸ್ನಾನ ಮಾಡದೆ ಇರೋ ಹಾಗೇ ಮಾಡಿದ ಚಳಿಗಾಲ ಅದಾಗಿತ್ತು.
- ಸುಧಾ. ಡಿ. ಪಾಟೀಲ,
ಧಾರವಾಡ


ಬಿಸಿರಕ್ತದ ಹುಡುಗನಾಗಿದ್ದು
ಜಗತ್ತನ್ನು ಬದಲಿಸಿದ ನೂರಾ ಒಂದು ಆವಿಷ್ಕಾರಗಳಲ್ಲಿ ಚಳಿಯಿಂದ ರಕ್ಷಣೆಗೆ ಆದಿಮಾನವರು ಶೋಧಿಸಿದ  ಬೆಂಕಿಯದ್ದು ಐದನೇ ಸ್ಥಾನ!  ಆಧುನಿಕ  ತಂತ್ರಜ್ಞಾನಗಳಾದ  ಸ್ಟೀಮರ್, ಎಲೆಕ್ಟ್ರಿಕ್  ಹೀಟರ್‌ಗಳು  ಕೂಡ  ಅಗ್ಗಿಷ್ಟಿಕೆ  ಕೊಡುವ  ಕಾಲವನ್ನು  ಒಂದು  ಕ್ಷಣ ನಿಲ್ಲಿಸುವ, ಆನಂದಮಯವಾಗಿ  ಸ್ವರ್ಗದಲ್ಲಿ  ತೇಲಾಡುವಂಥ,  ಸ್ಥಿತಪ್ರಜ್ಷನಂತಿರುವ ಅನುಭವವನ್ನು  ಕೊಡಲಾರದು .

ಎಳೆಯನಾಗಿದ್ದಾಗ ಚಳಿಯ  ತೀವ್ರತೆಯಲ್ಲಿ ಗಡಗಡ ನಡುಗುತ್ತಿದ್ದಾಗ ತರುಣರನ್ನು ನೋಡಿ ನಾನೂ ಅವರಂತೆ ಅರ್ಧ ತೋಳಿನ  ಶರ್ಟ್ ಹಾಕಿಕೊಂಡು, ತ್ರೀ ಬೈ ಫೋರ್ ಪ್ಯಾಂಟ್ ಹಾಕಿಕೊಂಡು , ಚಳಿಯ  ಅನುಭವವೇ ಆಗದಂತೆ ಅಡ್ಡಾಡಬೇಕೆಂದು ಆಸೆ  ಹುಟ್ಟಿದ್ದಿದೆ.  ಆ ಸುಪ್ತ  ಆಸೆಯಿಂದಾಗಿಯೇ ಬಿಸಿರಕ್ತದ ಹುಡುಗನ ಮುಖವಾಡ ಧರಿಸಿದೆ. ಸ್ನೇಹಿತರು, ನೆಂಟರಿಷ್ಟರು ಮನೆಗೆ ಬಂದಾಗ ಸ್ವೆಟರ್, ಜರ್ಕಿನ್, ಟೋಪಿ  ತೆಗೆದಿಟ್ಟು ಚಳಿಯೇ ಆಗದವನಂತೆ ವರ್ತಿಸುವುದು, ಚಳಿಗಾಲದಲ್ಲಿ  ಈಜುವಿಕೆ ಬಗ್ಗೆ ಮಾತನಾಡುವುದು, ಫ್ರಿಡ್ಜ್‌ನಲ್ಲಿನ  ತಣ್ಣೀರನ್ನು ತಂದು ಅವರೆದುರು ಕುಡಿಯುವುದು, ಕೂಲ್‌ಡ್ರಿಂಕ್ಸ್  ಕುಡಿಯುವುದು, ಯಾರಾದರೂ  ಚಳಿ ಆಗುತ್ತಿಲ್ಲವೇ? ಎಂದು  ಪ್ರಶ್ನಿಸಿದರೆ, ಮೊನ್ನೆ ಬಹಳ ಚಳಿಯಿತ್ತು, ಈವತ್ತಿಲ್ಲ  ಎಂದು ಉತ್ತರ ಕೊಟ್ಟು ಒಳಗೊಳಗೆ ಬೀಗುತ್ತಿದ್ದೆ. ಚಳಿ  ಜಾಸ್ತಿಯಾಗಿ  ಹಲ್ಲು  ಕಂಪಿಸಲು ಮೈ ನಡುಗಲು  ಶುರುವಾದರೆ ಮನೆಯೊಳಗೆ  ಓಡಿ ಒಲೆ ಮುಂದೆ  ಒಂದಷ್ಟು  ಕುಳಿತು ಮೈ ಕಾಯಿಸಿಕೊಂಡು ಮತ್ತೆ  ಹೊರಬಂದು ಬಿಸಿರಕ್ತದ ಹುಡುಗನ ಪಾತ್ರ ನಿರ್ವಹಿಸುತ್ತಿದ್ದೆ.

ಚಳಿಗಾಲದಲ್ಲಿ  ಸ್ನೇಹಿತರ ಜೊತೆ  ಪ್ರವಾಸಕ್ಕೆ  ಹೋದ  ಸಂದರ್ಭದಲ್ಲಿ  ಶಿಬಿರಾಗ್ನಿಯ ಸುತ್ತ  ಕುಳಿತು  ದೆವ್ವದ ಕತೆ ಹೇಳುವುದು, ಕೇಳುವುದು ಮನಸ್ಸಿಗೆ ಮುದ ನೀಡುತ್ತಿತ್ತು. ದೆವ್ವದ  ಕತೆಯ ರಸಾನುಭವದ  ತುತ್ತತುದಿಯಲ್ಲಿರಬೇಕಾದರೆ ತಂಗಾಳಿಯೊಂದು  ಬೀಸಿದರೆ ದೆವ್ವ ನಮ್ಮ ಹತ್ತಿರದಲ್ಲಿಯೇ  ಎಲ್ಲೋ  ಇದೆ ಎಂಬ ರೋಮಾಂಚನಕಾರಿ  ಅನುಮಾನ  ನಮ್ಮನ್ನು ಕಾಡುತ್ತಿತ್ತು. ಚಳಿಯ  ಸಾಂಗತ್ಯ ನನ್ನನ್ನು ಕೆಲವೊಮ್ಮೆ ತತ್ವಶಾಸ್ತ್ರದ ಚಿಂತನೆಗೆ ಇಳಿಸಿದ್ದಿದೆ. ಜಗತ್ತು ಯಾಕೆ ಬದಲಾಗುತ್ತಿದೆ? ಎಂಬಂಥ ಪ್ರಶ್ನೆಗಳು  ಕಾಡಿದಿದ್ದೆ.

ಮುಂಜಾನೆ ಎದ್ದು  ಬಿಸಿ ಬಿಸಿ ಟೀ  ಜೊತೆಗೆ ಪತ್ರಿಕೆ  ಓದುವ ರುಚಿಯನ್ನು ಚಳಿಗಾಲ ಹೆಚ್ಚಿಸಿದೆ ಮತ್ತು ಚಳಿಯಲ್ಲಿ  ಬಿಸಿನೀರಿನ ಸ್ನಾನದ  ಖುಷಿಯಂತೂ  ಹೇಳಲಾಗದು. ಚಳಿಗಾಲದಲ್ಲಿ  ಬಾಯಿಯಿಂದ ಬರುವ ಹಬೆಯಿಂದ  ಕಾರಿನ  ಗಾಜಿನ  ಮೇಲೆ ಬರೆದದ್ದು, ಏಕಾಂತದಲ್ಲಿ  ಕೂತು  ಬಣ್ಣಬಣ್ಣದ ವಿಚಿತ್ರ ಕನಸುಗಳನ್ನು ಕಂಡಿದ್ದು . ಹೀಗೆ ಅಸಂಖ್ಯ ಅನುಭವಗಳನ್ನು ಚಳಿಯ ಸಾಂಗತ್ಯದಲ್ಲಿ ಪಡೆದಿದ್ದೇನೆ;  ಪಡೆಯುತ್ತಿದ್ದೇನೆ .
- ಮಜೀಧ್ ಎಚ್.ಎನ್,
ತುಮಕೂರು 


ಕಾವಿಗೆ ಕೂತ ಬೆಕ್ಕಿನಂತೆ
ಚಳಿ ಅಂದರೆ ನೆನಪಾಗೋದು ಈಗ್ಗೆ ಐದು ವರ್ಷಗಳ ಹಿಂದೆ ಕಾಲೇಜಿನ ದಿನಗಳಲ್ಲಿ ನಾನು ಪೇಪರ್ ಹಾಕುತ್ತಿದ್ದಾಗಿನ ದಿನಗಳು. ಇವತ್ತಿಗೂ ಆ ಅಮೂಲ್ಯ ಕ್ಷಣಗಳು ಬೆಂಕಿ ಮುಂದೆ ಕುಳಿತು ಕೈ ಉಜ್ಜಿ ಕೆನ್ನೆಗೆ ಒತ್ತಿಕೊಂಡಷ್ಟೇ ಆಪ್ತವಾಗಿ ನೆನಪಾಗುತ್ತದೆ. ನಡುಗುವ ಚಳಿ. ಐದು ಗಂಟೆಗೆ ಅಲಾರಂ ಕಿರುಗುಟ್ಟುವಾಗ ಆಗತಾನೆ ಬೀಳುತ್ತಿದ್ದ ಕನಸುಗಳನ್ನು ಮೊಟಕುಗೊಳಿಸಿ ಏಳುತ್ತಿದ್ದೆ. ಅದೆಷ್ಟೇ ಚಳಿ ಇದ್ದರು ರೂಮಿನ ಎದುರಿಗಿನ ಮೋಟಾರ್ ಸ್ಟಾರ್ಟ್ ಮಾಡಿದಾಗ ಭೂಮಿ ತಾಯಿ ಒಡಲಿನಿಂದ ಆಹಾ! ಅದೆಷ್ಟು ಬೆಚ್ಚಗಿನ ನೀರು. ಪೇಪರ್ ಆಫೀಸಿಗೆ ಹೋಗಲು ದಾರಿಯುದ್ದಕ್ಕೂ ಸೈಕೆಲ್ ಪೆಡಲ್ ಮಾಡುತ್ತಿದ್ದಾಗ ಪ್ರತಿ ಲೈಟ್‌ ಕಂಬ ದಾಟಿದಾಗಲೂ ನನ್ನನ್ನು ಬೆನ್ನು ಬಿದ್ದು ಓಡುತ್ತಿದ್ದ ನನ್ನದೇ ನೆರಳನ್ನು ನೋಡಿ ಅದನ್ನು ಮೀರಿ ಹೋಗಬಲ್ಲನೇ ಎಂದುಕೊಳ್ಳುತ್ತಿದ್ದೆ. ಇವತ್ತಿಗೂ ನನ್ನ ನೆರಳನ್ನು ಮೀರಿ ಬೆಳೆಯಲಾಗಿಲ್ಲ. ಅದು ಜಗತ್ತಿನ ಮೇಲೆ ಮೆರೆಯುವ ಯಾವ ಮಾನವ ಹುಳುವಿಗೂ ಸಾಧ್ಯವಿಲ್ಲ. 

ಬೆಳಿಗ್ಗೆ ಎದ್ದು ನನ್ನ ರೂಮಿನ ಪಕ್ಕದ ಓಣಿ ತಿರುಗಿ ಮುಂದೆ ಹೋದಾಗಲೆಲ್ಲಾ ಅವರು ಕಾಣುತ್ತಿದ್ದರು. ಗಂಡ ಹೆಂಡತಿ. ಕರೀ ಶಾವಿಗೆಯಂತಹ ಉದ್ದನೆಯ ಗಡ್ಡ. ಕೈಯಲ್ಲಿ ಸವೆದ ಚೀಲ. ಜೊತೆಯಲ್ಲಿ ಆತನ ಹೆಂಡತಿ. ನಿಶಾಚರ ಬೆಳಗ್ಗಿನ ಜಾವದಲ್ಲಿ ಆಕಾಶದಿಂದ ಬುಗ್ಗನೆದ್ದು ಬಂದ ಅಗೋಚರ ಜೀವಿಗಳಂತೆ ಕಾಣುತ್ತಿದ್ದ ಅವರನ್ನ ನೋಡಿ ಆಶ್ಚರ್ಯಗೊಳ್ಳುತ್ತಿದ್ದೆ. ಟೊಳ್ಳಾದ ನನ್ನ ದೇಹಕ್ಕೆ  ಬನಿಯನ್ನು, ಅದರ ಮೇಲೆ ಶರ್ಟು, ಅದರ ಮೇಲೆ ಸ್ಪೆಟರ್ ಒಂದು, ಅದರ ಮೇಲೆ ಇನ್ನೊಂದು ಮತ್ತೂ ಅದರ ಮೇಲೆ ಜರ್ಕಿನ್ ಹಾಕಿಕೊಂಡು ಬಡದೇಹದ ಚಳಿಯಾಕಾಂಕ್ಷೆ ನೀಗಿಕೊಂಡಿದ್ದ ನನಗೆ, ತೊಗಲು ಚರ್ಮದ ಒಳಗೆ ಕಾಣಲೆದ್ದ ಮೂಲೆಗಳ ರಾಶಿ, ಅದರ ಮೇಲೆ ಶತಮಾನದ ಹಿಂದೆ ಬಿಳಿಯದಾಗಿ ಜನ್ಮವೆತ್ತಿ, ಈಗ ತಿಪಟೂರಿನ ಸಕಲ ಚರಾಚರ ಕೊಳೆಯನ್ನ ಮೈವೆತ್ತಿಕೊಂಡತಿದ್ದ ಆತನ ಅಂಗಿ. ನೋಡಿ ಅಪಮಾನವಾಗುತ್ತಿತ್ತು. ಬೆರಳು ಮರಗಟ್ಟುವ ಚಳಿಗೆ ಬೆದರದೇ ಬಂದ ಅವರು ಪ್ರಕೃತಿ ಎದುರೇ ಸಮರಕ್ಕೆ ನಿಂತಿದ್ದರು ಅನ್ನಿಸುತ್ತೆ.

ಇವತ್ತಿಗೂ ನನ್ನ ಕಾಡುವುದೆಂದರೆ ಆ ಮೈ ನಡುಗಿಸುವ ಚಳಿಯಲ್ಲಿ ಗಂಡ ಹೆಂಡಿರಿಬ್ಬರು ಕಸದ ರಾಶಿಯಲ್ಲಿ ಆಯ್ದು ತುಂಬಿಕೊಳ್ಳುತ್ತಿದ್ದ ಖಾಲಿ ಡಬ್ಬಿ, ಮರದ ಡಬ್ಬ, ಬಿಲ್ಟಿ, ಕ್ಯಾಪು ರಟ್ಟುಗಳಲ್ಲಿ. ಕಸದ ಒಳಗೂ ರಸ ಹುಡುಕುವ ಆ ಜೋಡಿಯಲ್ಲಿ ಇದ್ದ ಆ ಅನ್ಯೋನ್ಯತೆ. ಆಕೆಯಲ್ಲಿ ನಮ್ಮೂರಿನ ಅಕ್ಕಯ್ಯಳ ಹಾಗೆ ಕಾಣುವ ಮುಗ್ಧ ಭಾವ. ಕಸ ಆಯುವಾಗ ಗಂಡ ಆ ಸಿಮೆಂಟಿನ ರಿಂಗಿನೊಳಗೆ ಇಳಿದು ಸಣ್ಣ ಪುಟ್ಟ ಪ್ಲಾಸ್ಟಿಕ್‌ಗಳನ್ನು ಆಯ್ದು ಕೊಡುತ್ತಿದ್ದ, ಅದನ್ನು ಆಕೆ ಅಷ್ಟೇ ವೇಗವಾಗಿ ಆಯ್ದು ಚೀಲಕ್ಕೆ  ತುಂಬಿಕೊಳ್ಳುತ್ತಿದ್ದಳು.

ಅವರ ಮದ್ಯೆ ಅವರದೇ ಭಾಷೆಯಲ್ಲಿ ಹರಟೆ! ಆತ ಕಿಸಕ್ಕೆಂದರೆ ಆಕೆಯಲ್ಲೂ ಅದೊಂದು ನಾಚಿಕೆ ಮೂಡುತ್ತಿತ್ತು. ಆ ರಿಂಗಿನಲ್ಲಿ ರಸ ಆಯ್ದು ಮುಗಿಸಿದರೆ ರಿಂಗಿನಿಂದ ಎದ್ದು ಬಂದು ಆಕೆಯ ಹೆಗಲಮೇಲೆ ಅನಾಮತ್ತಾಗಿ ಕೈ ಹಾಕಿಕೊಂಡು ಮುಂದಿನ ರಿಂಗಿನವರೆಗೂ ರಾಜಾರೋಷದ ನಡಿಗೆ. ಆ ನಡಿಗೆಯಲ್ಲಿ ತುಂಬಿದ್ದ ಆತ್ಮಾಭಿಮಾನ, ಅಂತಃಶಕ್ತಿ. ನನಗೆ ನೀನು ನಿನಗೆ ನಾನು ಎನ್ನುವ ಭಾವ.

ಆ ಜೋಡಿ ಇವತ್ತಿಗೂ ತಿಪಟೂರಿನ ಓಣಿಗಳಲ್ಲಿ ಕಸ ಆಯ್ದುಕೊಂಡು ಹಾಗೇ ಇದೆ. ಹಾಸ್ಯಕ್ಕೆ ಆಕೆ ಗಂಡನ ಮೂತಿ ತಿವಿದಾಗ ಆತನಲ್ಲಿ ಉಂಟಾಗುತ್ತಿದ್ದ ಸಂತಸದ ಬುಗ್ಗೆ ಹೆಗಲಲ್ಲಿ ಹೊತ್ತಿದ ಚಿಂದಿಯ ಭಾರವನ್ನು ಮರೆಸುತ್ತಿತ್ತು. ಅದೇ ಗಂಡ ಕುಡಿದು ತೂರಾಡಿ ಆಕೆಗೆ ಒದೆಯುತ್ತಿದ್ದಾಗಲೂ ನೋಡಿದ್ದೇನೆ. ಒದೆ ತಿಂದಲೂ ತೆಪ್ಪಗಿರುವ ಆಕೆಯದ್ದು ಅದೆಷ್ಟು ಸಹನೆ. ಚಳಿಗಾಲ ಬಂದಾಗಲೆಲ್ಲಾ ಆ ಜೋಡಿ ನೆನಪಾಗುತ್ತೆ.

ಚಳಿಗಾಲ ಅಂದರೆ ಹಾಗೇ ಅಲ್ಲವೆ, ಮನೆಯಲ್ಲಿ ಒಲೆ ಮುಂದೆ ಕಾವಿಗೆ ಕೂತ ಬೆಕ್ಕಿನಂತೆ ಮನೆಯೊಳಗೇ ನಮ್ಮನ್ನು ಕೂರಿಸುವುದು. ಪಾಪ್ ಕಾರ್ನ್‌ನಂಥ ನೆನಪುಗಳ ಗರಂ ಗರಂ ಗುಟ್ಟಿಸುವುದು.  ಮತ್ತೆ ನೆನಪಾಗಿಸುವುದು ಎಲ್ಲವನ್ನು... ಎಲ್ಲರನ್ನು...
- ಭೈರೇಶ್.ಎಂ.ಬಿ,
ತುಮಕೂರು

ದಸ್ತಗಿರಿಗೊಳಗಾದ ಚಳಿ

ಊರಿನ ಯಾವ ಉಸಾಬರಿಗೂ ಕಿವಿಗೊಡದೆ ನಿತ್ಯ ನಿಯಮಿತವಾಗಿ ಕಾರ್ಯನಿರ್ವಹಿಸಿಕೊಂಡು ‘ಕಾಯಕವೇ ಕೈಲಾಸ’ ಅನ್ನುವ  ಮಾತನ್ನು ನಂಬಿಕೊಂಡು ಬದುಕುತ್ತಿದ್ದ ನಮ್ಮಿಬ್ಬರ ಹೃದಯದ ಮೇಲೂ ಪಾಪಿ ಚಳಿಗಾಲದ ಕಣ್ಣು ಬಿದ್ದುಬಿಟ್ಟಿದೆ.

ಥೇಟು ಖಡಕ್ಕು ಕೋಟೆಯಂತಿದ್ದ ಹೃದಯದ ನಾಲ್ಕೂ ಕವಾಟಗಳನ್ನು  ತನ್ನ ಕೀಟಲೆ, ಕಿತಾಪತಿಯ ಪಾರುಪತ್ಯದ ಮುಖೇನ ಚಳಿಗಾಲವೆಂಬ ಸರ್ವಾಧಿಕಾರಿಯು ಮುತ್ತಿಗೆ ಹಾಕುವಲ್ಲಿ ಯಶಸ್ವಿಯಾಗಿಬಿಟ್ಟಿದೆ. ಪ್ರತಿಯೊಂದು ಮಿನೀಟಿಗೂ, ವಿರಹವೆಂಬ  ಮಿನಿ ಈಟಿಗಳಿಂದ ನಮ್ಮನ್ನು ತಿವಿದು-ತಿವಿದು ಘಾಸಿಗೊಳಿಸುತ್ತಿದೆ. ಈ ನೋವಿಗೆ ಹುಡುಗನಾಗಿ ನಾನೇ ಅಸಹಾಯಕನಾಗಿರುವಾಗ ಇನ್ನೂ ಪಾಪ ಹೆಣ್ಣು ಜೀವ, ಅವಳ ಪಾಡು ಹೇಗಾಗಿರಬೇಡ? ಒಟ್ಟಿನಲ್ಲಿ ಹೇಳಬೇಕೆಂದರೆ ನಾವಿಬ್ಬರೂ ಚಳಿಗಾಲಕ್ಕೆ ಸಾಮಂತರಾಗಿಬಿಟ್ಟಿದ್ದೇವೆ.

ಸಂಜೆ ವೇಳೆಯಲ್ಲಿ ಸುಮ್ಮನೆ ಕುಳಿತ ನಮ್ಮಿಬ್ಬರ ಮೌನ-ಧ್ಯಾನಗಳನ್ನೆಲ್ಲ, ಚಳಿಯೂ  ಮಾರುವೇಷದಲ್ಲಿ  ಬಂದು ಚಿಂದಿ ಮಾಡುತ್ತಿದೆ. ರೋಸಿ ಹೋಗಿ ನಾನು ಸೇಡು ತೀರಿಸಿ ಕೊಳ್ಳಬೇಕೆಂಬ ಹಟಕ್ಕೆ ಬಿದ್ದು  ನೀಲಿ ನಕ್ಷೆ ತಯಾರಿಸುತ್ತಿದ್ದೇನೆ. ಮತ್ತೂ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತಿನಲ್ಲಿ ನಂಬಿಕೆ ಇರುವುದರಿಂದಲೇ ಅವಳ ಸಹಾಯ ಹಸ್ತವನ್ನು ನಿರೀಕ್ಷಿಸುತ್ತಿದ್ದೇನೆ. ನನಗೆ ಚೆನ್ನಾಗಿ ಗೊತ್ತು ನನ್ನ ಕರಿ ಕೈಗಳು ಮತ್ತು ಅವಳ ಫೇರ್ ಅಂಡ್ ಲವ್ಲೀಯಂಥ ಬೆಳ್ಳನೆಯ ಕೈಗಳೇನಾದರೂ ಪರಸ್ಪರ ವರ್ಣಬೇಧವನ್ನು ಮರೆತು ಕೈ-ಕೈ ಮಿಲಾಯಿಸಿ ಬಿಟ್ಟರೆ, ನಮ್ಮಿಬ್ಬರ ಬೆರಳುಗಳಿಂದಲೇ ಬೆಚ್ಚನೆಯ ನಾಕಾಬಂಧಿ ಹಾಕಿ ಚಳಿಯನ್ನು ಕೂಡ ದಸ್ತಗಿರಿ ಮಾಡಿಬಿಡುತ್ತೀವೆಂದು.

ಈ ಮಹಾಯೋಜನೆಗೆ ಸಾಥ್ ನೀಡಲು ಕೆಲಸವಿಲ್ಲದೆ ಇಷ್ಟೂ ದಿನ ಅಟ್ಟದ ಮೇಲೆಯೇ ಮಲಗಿದ್ದ ನಮ್ಮ ಮನೆಯ ಕಂಬಳಿಯು ಕೂಡ ಮೈ ಕೊಡವಿ ಎದ್ದು ಹೊರ ಬಂದಿದೆ. ನಮ್ಮ ಮುಂದೆಯೇ ತೊಡೆ ತಟ್ಟಿ ನಿಲ್ಲುವ ಚಳಿಯನ್ನು ಕಿಂಚಿತ್ತೂ, ಕರುಣೆಯಿಲ್ಲದೆ ಮಟಾಷ್ ಮಾಡಲು ರೂಪಿಸಿರುವ ಸುಪಾರಿಯ ಬಗ್ಗೆ ಅವಳಿಗೆ ಅಧಿಕೃತವಾಗಿ ತಿಳಿಸಿ ಮನವರಿಕೆ ಮಾಡುತ್ತೇನೆ.

ನನಗೆ ಖುಲ್ಲಂ ಖುಲ್ಲಾ ಗೊತ್ತು, ವರ್ಷದಲ್ಲಿ ಕೇವಲ ನಾಲ್ಕೇ ತಿಂಗಳುಗಳ ಜೀವಿತಾವಧಿಯ ಚಳಿಗಾಲವೆಂಬ ಕೊರಮನನ್ನು ಕೂಡ, ನಮ್ಮಿಬ್ಬರ ಅನುಗಾಲದ ಅನುರಾಗದ ಅಕ್ಷೋಹಿಣಿ ಸೈನ್ಯವನ್ನು ಕಟ್ಟಿ ಅಡ್ಡಡ್ಡ ಮಲಗಿಸಿಬಿಡುತ್ತೀವೆಂದು ಮತ್ತೂ ಕೊನೆಗೆ ಚಳಿಯೆ ಮಂಡಿಯೂರಿ ನಮ್ಮ ಮುಂದೆ ಶಾಂತಿ ಬಾವುಟವನ್ನು ಹಾರಿಸುತ್ತದೆ ಕೂಡ ಎಂದು.                                
- ಡಾ. ಮಹೇಂದ್ರ ಎಸ್,
ತೆಲಗರಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT