ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ನೆತ್ತಿಯ ಮೇಲೆ ಜಗವೇ ಕಾಲ ಕೆಳಗೆ

ಸುತ್ತಾಣ
Last Updated 17 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಶುಕ್ರವಾರ ಹೊರಟಿದ್ದ ೨೦ ಜನರ ನಮ್ಮ ಗುಂಪು ಚಾರ್ಮಾಡಿ ತಲುಪಿದ್ದು ಶನಿವಾರದ ಬೆಳಿಗ್ಗೆ ೪:೩೦ರ ಸುಮಾರಿಗೆ. ಸೂರ್ಯನಿನ್ನೂ ಮಲಗಿಯೇ ಇದ್ದ. ನಾವು ಮಾತ್ರ ಹಿಂದಿನ ದಿನ ರಾತ್ರಿ ಇಡೀ ಕಣ್ಣು ಮುಚ್ಚಿರಲಿಲ್ಲ. ಅಂತ್ಯಾಕ್ಷರಿ ಆಟ ಆಡುತ್ತಾ ಕಳೆದಿದ್ದೆವು. ಅಷ್ಟು ಸಂಭ್ರಮವಿತ್ತು. ದಾರಿ ಮಧ್ಯದ ಕೊಟ್ಟಿಗೆಹಾರದಲ್ಲಿ ಮಧ್ಯರಾತ್ರಿ ತಿಂದ ನೀರು ದೋಸೆಯ ಸವಿ ಇನ್ನೂ ನಾಲಿಗೆಯಲ್ಲಿತ್ತು.

ನಿಧಾನವಾಗಿ ಅರುಣನ ಆಗಮನ. ಈಗಷ್ಟೇ ಕತ್ತಲಲ್ಲಿ ಮುಳುಗಿದ್ದ ಆ ಕಾನನ ಕ್ಷಣಾರ್ಧದಲ್ಲಿ ರವಿ ಕಿರಣಗಳ ಕಾಂತಿಯಿಂದ ಕಂಗೊಳಿಸುತ್ತಿತ್ತು. ಮೈ ಮರೆಸುವ ಕ್ಷಣಗಳವು. ಆಗ ಕೇಳಿಸಿತು ಹರ್ಷನ ಧ್ವನಿ. ಇವನು ನಮ್ಮ ಚಾರಣಕ್ಕೆ ಸೂತ್ರಧಾರಿ. ಬೇಗ ತಿಂಡಿ ತಿಂದು ಹೊರಡಬೇಕೆಂದೂ ಬೇಗ ಚಾರಣ ಪ್ರಾರಂಭಿಸಬೇಕು ಎಂದೂ ಎಚ್ಚರಿಸಿದ. ಅಲ್ಲೇ ಇದ್ದ ಹೋಟೆಲ್ ಒಂದರಲ್ಲಿ ನೀರು ದೋಸೆಯನ್ನು ಚಟ್ನಿಯ ಜೊತೆ ತಿಂದು ಹೊರಡಲು ಅನುವಾದೆವು. ಅಲ್ಲಿಂದ ನೋಡಿದರೆ ನಾವು ಹತ್ತಬೇಕಾಗಿದ್ದ ಗುಡ್ಡ ಬೃಹದಾಕಾರವಾಗಿ ಕಂಡಿತ್ತು. ತುದಿಯಲ್ಲಿ ಮುಸುಕಿದ್ದ ಮಂಜು.

ನಮಗೆ ಸಹಾಯ ಮಾಡಲು ಆ ಊರಿನವರೇ ಆದ ಒಬ್ಬ ಮಾರ್ಗದರ್ಶಿಯನ್ನು ಗೊತ್ತು ಮಾಡಿದ್ದ ಹರ್ಷ. ಅವರು ಇಂಬಳಗಳ  ಕಾಟದಿಂದ ತಪ್ಪಿಸಿಕೊಳ್ಳಲು ಒಂದಷ್ಟು ಎಣ್ಣೆ, ನಶ್ಯದ ಪುಡಿಯ ಮಿಶ್ರಣ ಮಾಡಿ ಹಚ್ಚಿಕೊಳ್ಳಲು ಹೇಳಿದರು. ನಾನಂತೂ ಕೈ–ಕಾಲು, ಬೂಟು, ಕಾಲುಚೀಲ ಎಲ್ಲದಕ್ಕೂ ಮೆತ್ತಿಕೊಂಡಿದ್ದೇ! ಅಂತೂ ಏರಿಕಲ್ಲುಗುಡ್ಡ ಹತ್ತಲು ಸಂಪೂರ್ಣ ಸನ್ನದ್ಧರಾದೆವು.ಆಗ ಸುಮಾರು ಒಂಬತ್ತು ಗಂಟೆ.

ನಮ್ಮ ಮಹಾ ಆರೋಹಣಕ್ಕೆ ಮೊದಲು ಸ್ವಾಗತಿಸಿದ್ದು ಇಂಬಳಗಳು. ಅವೆಷ್ಟಿದ್ದವೂ ಆ ಜಾಗದಲ್ಲಿ! ಒಂದೆರಡಲ್ಲ ನೂರಾರು.

ಒಂದು ಕಾಲಿಗೆ ಹತ್ತಿಕೊಂಡಿದ್ದ ರಕ್ತದಾಹಿಗಳನ್ನು ಬಿಡಿಸುವಷ್ಟರಲ್ಲಿ ಇನ್ನೊಂದು ಕಾಲಿಗೂ ಹತ್ತಿರುತ್ತಿದ್ದವು. ಮತ್ತೊಂದಿಷ್ಟು ನಶ್ಯದ ಪುಡಿ ಸವರಿಕೊಂಡೆವು. ಸ್ವಲ್ಪ ದೂರ ನಡೆವಷ್ಟರಲ್ಲಿ ಚೆಲುವಾದ ಚಿಕ್ಕ ತೊರೆ ಎದುರಾಯಿತು.

ಅಲ್ಲಿ ನಿಂತು ನೋಡಿ ಆನಂದಿಸಲು ಇಂಬಳಗಳಿಗೆ ರಕ್ತದ ಶುಲ್ಕ ತೆರಬೇಕಾಗಿದ್ದರಿಂದ, ಹೆಚ್ಚು ಹೊತ್ತು ನಿಲ್ಲದೆ ಮುನ್ನಡೆದೆವು. ನಡೆದಂತೆಲ್ಲ ಗುಡ್ಡದ ಏರು ಹೆಚ್ಚು ಕಡಿದಾಗತೊಡಗಿತು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಸುಸ್ತಾಗಿ  ಮುನ್ನಡೆಯಲು ಸಾಧ್ಯವೇ ಇಲ್ಲ ಎಂದೆನಿಸಿ ಕುಳಿತುಕೊಂಡೆ. ಜೊತೆಗಿದ್ದ ಗೆಳೆಯರು ಹುರಿದುಂಬಿಸಿದರು. ಸೋತು ಹಿಂದೆ ಹೆಜ್ಜೆ ಇಟ್ಟರೆ ಇಲ್ಲಿಯವರೆಗೆ ಬಂದಿದ್ದು ಏನು ಪ್ರಯೋಜನ ಎನ್ನಿಸಿ ಕಷ್ಟವಾದರೂ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ಮುನ್ನಡೆದೆ. ಮುಂದೆ ಕಾಡು ಕಡಿಮೆಯಾಗುತ್ತಾ ಬಂತು. ಸುಮಾರು ಹನ್ನೊಂದು ಗಂಟೆಗೆ ಹುಲ್ಲುಗಳಿಂದ ಆವೃತವಾದ ಬೆಟ್ಟದ ಭಾಗವನ್ನು ತಲುಪಿದೆವು.

ಎದ್ದು ಬಿದ್ದು ಏದುಸಿರು ಬಿಡುತ್ತಾ ಹತ್ತುತ್ತಿದ್ದವರಿಗೆ ನನಗಿಂತ ಮುಂದೆ ಸಾಗಿದ್ದ ಗೆಳೆಯರ ಕೇಕೆ ಕೇಳಿಸಿತು. ದಟ್ಟ ಮಂಜು ಮುಸುಕಿದ್ದುದರಿಂದ  ಅವರ್‍ಯಾರೂ ಕಾಣುತ್ತಿರಲಿಲ್ಲ. ಇನ್ನೇನು ಬೆಟ್ಟದ ತುದಿ ಬಂದೇಬಿಟ್ಟಿತು ಎಂಬ ಹುರುಪಿನಲ್ಲಿ ಮುನ್ನಡೆದೆವು.

ಅಂತೂ ತುದಿ ಎಂದು ಹೇಳಬಹುದಾದ ಜಾಗವೊಂದನ್ನು ತಲುಪಿದೆವು. ಅಲ್ಲಿ ನಿಂತು ತಲೆಯೆತ್ತಿದರೆ ನಮ್ಮನ್ನು ನೋಡಿ ನಗುತ್ತಿದ್ದ ಇನ್ನೊಂದು ಬೆಟ್ಟದ ತುದಿಯನ್ನು ಕಂಡ ಮೇಲೆ ಅರಿವಾಯಿತು, ನಾವು ತಲುಪಿದ್ದು ಬೆಟ್ಟದ ತುದಿ ಅಲ್ಲವೆಂದು.
ನಾವು ಹತ್ತಿದಷ್ಟೂ ಬೆಟ್ಟ ಏರುತ್ತಲೇ ಹೋಗುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಕೆಲವರು ಸುಸ್ತಾಗಿ ಅಲ್ಲೇ ಇದ್ದ ಬಂಡೆಗಳ ಮೇಲೆ ಆಸೀನರಾದರು. ನಾನು ಉಳಿದ ದೂರವನ್ನು ವಿನಾಯಕನ ಜೊತೆ ಕ್ರಮಿಸಲು ನಿರ್ಧರಿಸಿದೆ.

ಅತಿಯಾಗಿ ಆಯಾಸಗೊಂಡಿದ್ದೆ ನಾನು. ಇನ್ನು ಹತ್ತೇ ಹೆಜ್ಜೆಗಳು ಎಂದು ಲೆಕ್ಕವಿಟ್ಟು ನನ್ನನ್ನು ನಾನೇ ಸಂಭಾಳಿಸಿಕೊಂಡು ಹತ್ತುತ್ತಿದ್ದೆ. ನಮಗಿಂತ ಮೊದಲು ಹತ್ತಿದ ಗೆಳೆಯರು ಕಾಣುವವರೆಗೂ ಹತ್ತುವುದನ್ನು ನಿಲ್ಲಿಸಕೂಡದು ಎಂದು ನಿರ್ಧರಿಸಿಕೊಂಡು ಮುಂದೆ ಸಾಗಿದೆವು. ಸ್ವಲ್ಪ ಹೆಜ್ಜೆ ಎಣಿಸಿದ ನಂತರ ಮುಸುಕಿದ ಮಂಜಿನ ತೆರೆಯಾಚೆ ಎಲ್ಲೋ ದೂರದಲ್ಲಿ ಮನುಷ್ಯರ ಮಾತು ಕೇಳಿಸಿತು.

ಅತ್ತ ಕಡೆ ಹೆಜ್ಜೆ ಇಟ್ಟಾಗ ಮೊದಲೇ ತಲುಪಿದ್ದ ನಮ್ಮ ಜೊತೆಗಾರರು. ಅದು ಏರಿ ಕಲ್ಲು ಗುಡ್ಡದ ತುದಿಯಾಗಿತ್ತು.ಅಂತೂ ಏರಿ ಏರಿ ಏರಿಕಲ್ಲು ಗುಡ್ಡದ ನೆತ್ತಿಯನ್ನು ತಲುಪಿದ್ದೆವು. ಆಗ ಮಧ್ಯಾಹ್ನ ಒಂದು ಗಂಟೆ.

ಚಾರಣದ ಕೊನೆಯ ಹಂತ ತಲುಪಿದಾಗ ಸಿಗುವ ಸಾರ್ಥಕತೆಯ ಸಂಭ್ರಮ  ಅವರ್ಣನೀಯ. ಅದು ಅನುಭವಿಸಿಯೇ ತಿಳಿಯುವಂತಹುದು. ಅವತ್ತು ಇಡೀ ಬೆಟ್ಟ–ಜಗತ್ತೆಲ್ಲ ನಮ್ಮ ಕಾಲ ಕೆಳಗಿತ್ತು. ಅಲ್ಲಿಂದ ಕೆಳಗೆ ಕಣ್ಣು ಹಾಯಿಸಿದರೆ ಪ್ರಪಾತ. ಇಡೀ ಚಾರ್ಮಾಡಿ ಹಳ್ಳಿ ಸ್ತಬ್ದ ಚಿತ್ರದಂತೆ ಭಾಸವಾಗಿತ್ತು. ಸುತ್ತಲೂ ಪಶ್ಚಿಮ ಘಟ್ಟಗಳ ಸಾಲು ಸಾಲು. ಮಿಂಚುಕಲ್ಲು ಗುಡ್ಡ, ಎತ್ತಿನ ಭುಜ, ಕೊಡೇಕಲ್ಲು ಗುಡ್ಡ, ಬಾಳೆಕಲ್ಲು ಗುಡ್ಡ ಎಲ್ಲವೂ ಶತ್ರುವಿಗೆ ಎದೆಯೊಡ್ಡಿ ನಿಂತ ಸೈನಿಕರಂತೆ ನಿಂತಿದ್ದವು. ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಂತರ ಇಳಿಯಲು ಪ್ರಾರಂಭಿಸಿದೆವು.

ಇಳಿಯುವುದೇನೂ ಸುಲಭವಾಗಿರಲಿಲ್ಲ. ಅಷ್ಟೊತ್ತಿಗೆ ಸರಿಯಾಗಿ ಮಳೆ ಹನಿಯಲಾರಂಭಿಸಿತು. ನೆಲ ತೋಯ್ದು ಕಾಲಿಟ್ಟಲ್ಲೆಲ್ಲ ಜಾರುತ್ತಿತ್ತು. ಊರುಗೋಲನ್ನು ಆಧಾರವಾಗಿಟ್ಟುಕೊಂಡು ಹೆಜ್ಜೆ ಇಡುತ್ತಿದ್ದೆ ನಾನು. ಅಲ್ಲೇ ಮಧ್ಯದಲ್ಲಿನಮ್ಮ ವನಭೋಜನ. ಕೆಳಗಿನಿಂದ ಹೊತ್ತು ತಂದಿದ್ದ ಚಪಾತಿ, ಚಟ್ನಿಪುಡಿ ತಿಂದೆವು. ಹತ್ತುವಾಗಲೇ ನೀರು ಖಾಲಿ ಮಾಡಿಕೊಂಡಿದ್ದರಿಂದ ಇಳಿಯುವಾಗ ಕುಡಿಯುವ ನೀರು ಇರಲಿಲ್ಲ. ಹತ್ತುವುದಕ್ಕಿಂತ ಇಳಿಯುವ ಹಾದಿ ಕಷ್ಟಕರವಾಗಿತ್ತು. ನಿಧಾನವಾಗಿ ನಡೆಯುತ್ತಾ ಅಲ್ಲಿಯೇ ಹರಿಯುತ್ತಿದ್ದ ಹಳ್ಳವೊಂದರ ಬಳಿ ತಲುಪಿದೆವು. ಮೊದಲೇ ಬಾಯಾರಿದ್ದ ನಮಗೆ ನಿಧಿ ಸಿಕ್ಕಂತಾಗಿ ನೀರು ತುಂಬಿಸಿಕೊಂಡು ಕುಡಿದೆವು. ನೀರಿನಲ್ಲಿ ಕಾಲಿಟ್ಟುಕೊಂಡು ಕುಳಿತಾಗ ಆಹ್ಲಾದವೆನಿಸಿತು. ಅಲ್ಲೇ ಇದ್ದು ಬಿಡೋಣವೆಂದೆನಿಸುವಷ್ಟು ಸುಸ್ತಾಗಿದ್ದರೂ ಹಸಿವು ಬಾಧಿಸತೊಡಗಿ ಊರ ದಾರಿ ಹಿಡಿದೆವು.

ಅವತ್ತು ರಾತ್ರಿ ಅಲ್ಲಿನ ಸಣ್ಣ ಹೋಟೆಲ್ ಒಂದರಲ್ಲಿ ನಮ್ಮ ಊಟ. ಹತ್ತಿರದಲ್ಲಿ ಇದ್ದ ದೇವಸ್ಥಾನಕ್ಕೆ ಸೇರಿದ ಛತ್ರವೊಂದು ನಮ್ಮ ರಾತ್ರಿಯ ತಂಗುದಾಣವಾಗಿತ್ತು. ಅಲ್ಲೇ ಸ್ಲೀಪಿಂಗ್ ಬ್ಯಾಗ್ ತೆಗೆದು ಬೆಚ್ಚಗೆ ಅದರೊಳಗೆ ಮಲಗಿದೆವು. ಮರುದಿನದ ಚಾರಣದ ಬಗ್ಗೆ ಆಲೋಚಿಸಲು ಸಾಧ್ಯವಿಲ್ಲದಷ್ಟು ಸುಸ್ತಾಗಿದ್ದ ನಮ್ಮನ್ನು ನಿದ್ರಾದೇವಿ ತನ್ನ ತೆಕ್ಕೆಗೆ ಎಳೆದುಕೊಂಡಿದ್ದಳು.


ಚಾರಣಿಗರಿಗೆ ಒಂದಷ್ಟು ಸೂಚನೆಗಳು
ಬೆಂಗಳೂರಿನಿಂದ ಸುಮಾರು 292 ಕಿ.ಮೀ. ದೂರದಲ್ಲಿದೆ ಚಾರ್ಮಾಡಿ. ಬೆಂಗಳೂರಿನಿಂದ ಹಾಸನ, ಬೇಲೂರು, ಚಿಕ್ಕಮಗಳೂರು, ಮೂಡಿಗೆರೆ, ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ತಲುಪಬಹುದು. ಸ್ವಂತ ವಾಹನವನ್ನು ತೆಗೆದುಕೊಂಡು ಹೋಗುವುದೇ ಉತ್ತಮ. ಕೊಟ್ಟಿಗೆಹಾರದಿಂದ ಚಾರ್ಮಾಡಿಗೆ ಸುಮಾರು ಅರ್ಧ ಗಂಟೆಯ ಪ್ರಯಾಣ. ಚಾರ್ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ ಪುಟ್ಟ ಹಳ್ಳಿ. ದೊಡ್ಡ ಹೋಟೆಲ್ಗಳು ಯಾವುದೂಇಲ್ಲ . ಮೊದಲೇ ನಿಮ್ಮ ಬರುವಿಕೆಯನ್ನು ತಿಳಿಸಿ ಊಟದ ವ್ಯವಸ್ಥೆ ಮಾಡಿಕೊಳ್ಳಬಹುದು. ರಾತ್ರಿ ತಂಗಲು ನಾವು ಅಲ್ಲಿ ಇದ್ದ ದೇವಸ್ಥಾನಕ್ಕೆ ಸೇರಿದ ಛತ್ರವೊಂದರಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದೆವು. ಅಲ್ಲಿಯೂ ಮುಂಚಿತವಾಗಿ ತಿಳಿಸಿರಬೇಕಾಗುತ್ತದೆ. ಸ್ಲೀಪಿಂಗ್ ಬ್ಯಾಗ್ಗಳನ್ನು ಜೊತೆಯಲ್ಲಿ ಕೊಂಡೊಯ್ಯುವುದು ಉತ್ತಮ.

ಚಾರ್ಮಾಡಿಯಿಂದ ಉಜಿರೆಗೆ ಕೇವಲ 15-–16 ಕಿ.ಮೀ. ಉಜಿರೆ ಸಮೀಪವಿರುವುದರಿಂದ ಅಲ್ಲಿ ತಂಗಿದ್ದು, ಊಟ ತಿಂಡಿಯ ವ್ಯವಸ್ಥೆ ಮಾಡಿಕೊಳ್ಳಬಹುದು.

ಬೆಟ್ಟ ಹತ್ತಲು ಮಾರ್ಗದರ್ಶಿಯ  ಅವಶ್ಯಕತೆ ಇದೆ. ಅವರಿಗೂ ಮೊದಲೇ ತಿಳಿಸಿರಬೇಕಾಗುತ್ತದೆ. ಇಂಬಳಗಳಿಂದ ತಪ್ಪಿಸಿಕೊಳ್ಳಲು ಡೆಟಾಲ್, ನಶ್ಯದ ಪುಡಿಯನ್ನು ಎಣ್ಣೆಯ ಜೊತೆ ಸೇರಿಸಿಕೊಂಡು ಬಳಸಬಹುದು. ನಮ್ಮ ಜೊತೆ ಬಂದವರಲ್ಲಿ ಕೆಲವರು ಡಿಯೋಡರೆಂಟ್ ಅನ್ನು ಕಚ್ಚಿದ ಇಂಬಳಗಳನ್ನು ತೆಗೆಯಲು ಬಳಸಿದ್ದರು. ಹತ್ತಲು ಪ್ರಾರಂಭಿಸಿದ 10–-15 ನಿಮಿಷಕ್ಕೆ ಒಂದು ಸಣ್ಣ ನೀರಿನ ಒರತೆ ಸಿಗುತ್ತದೆ. ಅದನ್ನು ಬಿಟ್ಟರೆ ಮುಂದೆ ನೀರು ಎಲ್ಲಿಯೂ ಸಿಗುವುದಿಲ್ಲ. ಬೆಟ್ಟ ಹತ್ತುವಾಗ ನೀರನ್ನು ಹೆಚ್ಚಾಗಿ ಒಯ್ಯುವುದು ಒಳ್ಳೆಯದು. ಏರಿಕಲ್ಲು ಗುಡ್ಡ ಹತ್ತುವಾಗ ಮಧ್ಯಾಹ್ನ ಊಟದ ವ್ಯವಸ್ಥೆ  ಮಾಡಿಕೊಳ್ಳಬೇಕಾಗುತ್ತದೆ. ನಾವು ಚಪಾತಿ, ಕ್ರೀಮ್ ಬನ್‌ಗಳನ್ನು ಹೊತ್ತೊಯ್ದಿದ್ದೆವು.

ಹತ್ತುವಾಗ ಆಯಾಸವಾಗುವುದರಿಂದ ಗ್ಲೂಕೋಸ್ ತೆಗೆದುಕೊಳ್ಳಬಹುದು. 5 ಸ್ಟಾರ್, ಡೇರೀ ಮಿಲ್ಕ್ ಚಾಕ್ಲೇಟ್‌ಗಳು ತಕ್ಷಣಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿ. ಸಣ್ಣ ಚಾಕು, ಬ್ಯಾಂಡ್‌ ಏಡ್, ಟಾರ್ಚ್, ತಲೆನೋವಿಗೆ, ಜ್ವರಕ್ಕೆ ಬೇಕಾಗುವ ಮಾತ್ರೆ ಜೊತೆಗೆ ಇದ್ದರೆ ಒಳ್ಳೆಯದು. ಚಾರಣಿಗರು ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುವನ್ನು ಅಲ್ಲಲ್ಲಿ ಎಸೆದು ಪರಿಸರಕ್ಕೆ ಹಾನಿ ಮಾಡಬಾರದೆಂದು ವಿನಂತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT