ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾವಣಿ ಸೌರ ವಿದ್ಯುತ್‌ಗೆ ಸಬ್ಸಿಡಿ

Last Updated 5 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಇತ್ತೀಚೆಗೆ ಜಾರಿಗೊಳಿಸಿದ ‘ಪರಿಷ್ಕೃತ ಸೌರವಿದ್ಯುತ್ ನೀತಿ’ ಪ್ರಕಾರ ಮೇಲ್ಚಾವಣಿಯಲ್ಲೂ ಸೌರ ವಿದ್ಯುತ್‌ ಉತ್ಪಾದಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಸಬ್ಸಿಡಿ ಸೌಲಭ್ಯವೂ ಇದೆ.

ಮನೆಯ ಮೇಲ್ಚಾವಣಿಯಲ್ಲಿ ಸೌರಫಲಕಗಳನ್ನು ಅಳವಡಿಸುವ ಮೂಲಕ ಯಾರೂ ಬೇಕಾದರೂ ಸೌರವಿದ್ಯುತ್ ಉತ್ಪಾದಿಸಬಹುದು. ತಮ್ಮ ಬಳಕೆಗೆ ಆಗಿ ಉಳಿದಿದ್ದನ್ನು  ಮಾರಾಟ ಮಾಡಲೂಬಹುದು.

ಸೌರಫಲಕವನ್ನು ಅಳವಡಿಸಿಕೊಂಡ ನಂತರ ಸಬ್ಸಿಡಿ ಬಯಸುವವರು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ನಿಗಮವು ಆ ಪ್ರಸ್ತಾವನೆಗಳನ್ನು ಪರಿಶೀಲಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಕೇಂದ್ರದ ನವೀಕರಿಸಬಹುದಾದ ಇಂಧನ ಇಲಾಖೆ ಮೂಲಕ ಅರ್ಹರಿಗೆ ಸಬ್ಸಿಡಿ ಸೌಲಭ್ಯ ದೊರೆಯಲಿದೆ.

ಮನೆ ಚಾವಣಿ, ಕೃಷಿ ಭೂಮಿಯಲ್ಲಿ ಸೌರಫಲಕಗಳನ್ನು ಅಳವಡಿಸಲು ಮಾಡಿದ ಒಟ್ಟು ವೆಚ್ಚದಲ್ಲಿ ಶೇ 30ರಷ್ಟನ್ನು ಸಬ್ಸಿಡಿ ರೂಪದಲ್ಲಿ ಮರುಪಾವತಿಸಲಾಗುತ್ತದೆ.

ಆದರೆ, ಈ ರೀತಿ ಸರ್ಕಾರದ ಸಬ್ಸಿಡಿ ಪಡೆದು ಉತ್ಪಾದನೆ ಮಾಡುವ ಸೌರವಿದ್ಯುತ್‌ನ ಖರೀದಿ ದರ ಮಾತ್ರ ಕಡಿಮೆಯೇ ಇರುತ್ತದೆ. ಸಬ್ಸಿಡಿ ಪಡೆಯದೇ ಉತ್ಪಾದನೆ ಮಾಡುವ ಸೌರ ವಿದ್ಯುತ್‌ಗೆ ಹೆಚ್ಚಿನ ದರ ನಿಗದಿ ಮಾಡಲಾಗುತ್ತದೆ ಎಂಬುದು ಇಲ್ಲಿ ಗಮನಾರ್ಹ ಅಂಶ.

ಶೇ 30ರಷ್ಟು ಸಬ್ಸಿಡಿ ಪಡೆದು ಸೌರವಿದ್ಯುತ್‌ ಉತ್ಪಾದನೆ ಮಾಡಿದರೆ, ಸದ್ಯ ಪ್ರತಿ ಯೂನಿಟ್‌ಗೆ ₨7.20 ದರದಲ್ಲಿ ಖರೀದಿಸಲಾಗುತ್ತದೆ. ಸಬ್ಸಿಡಿ ಪಡೆಯದೇ ಇದ್ದರೆ ಯೂನಿಟ್‌ಗೆ ₨9.56 ದರದಲ್ಲಿ ಖರೀದಿಸಲಾಗುತ್ತದೆ. ಇದು ಈಗಿನ ದರವಾಗಿದ್ದು, ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕಾಲ ಕಾಲಕ್ಕೆ ದರ ಪರಿಷ್ಕರಣೆ ಮಾಡುತ್ತದೆ.

ಆಯೋಗ ನಿಗದಿ ಮಾಡುವ ದರಕ್ಕೆ ಅನುಗುಣವಾಗಿ ವಿದ್ಯುತ್‌ ಸರಬರಾಜು ಕಂಪೆನಿಗಳು, ಉತ್ಪಾದಕರಿಂದ ಸೌರವಿದ್ಯುತ್‌ ಖರೀದಿಸುತ್ತವೆ. ಈ ಸಂಬಂಧ ಕಂಪೆನಿ ಗಳೊಂದಿಗೆ ಉತ್ಪಾದಕರು ಮೊದಲೇ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ.

ಸಬ್ಸಿಡಿ ಬೇಕಾದರೆ ಮಾತ್ರ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬೇಕು. ಇಲ್ಲದಿದ್ದರೆ ನೇರವಾಗಿ ವಿದ್ಯುತ್‌ ಸರಬರಾಜು ಕಂಪೆನಿಗಳನ್ನು ಸಂಪರ್ಕಿಸಿ, ಒಪ್ಪಂದ ಮಾಡಿಕೊಳ್ಳುವ ಮೂಲಕ ಮೇಲ್ಚಾವಣಿಯಲ್ಲಿ ಸೌರವಿದ್ಯುತ್‌ ಉತ್ಪಾದಿಸಬಹುದು.

ಮೇಲ್ಚಾವಣಿಯಲ್ಲಿ ಒಂದು ಕಿ.ವಾ. ಸೌರವಿದ್ಯುತ್‌ ಉತ್ಪಾದನೆಗೆ ಒಂದು ಲಕ್ಷ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜು ಮಾಡಲಾಗಿದೆ. ಇದರಲ್ಲಿ ₨30 ಸಾವಿರವನ್ನು ಸಬ್ಸಿಡಿ ರೂಪದಲ್ಲಿ ಸರ್ಕಾರದಿಂದ ಪಡೆಯಬಹುದು.

ರೈತರೂ ಸಹ ತಮ್ಮ ಕೃಷಿ ಭೂಮಿಯಲ್ಲಿ ಸೌರಫಲಕಗಳನ್ನು ಅಳವಡಿಸಿ ಸೌರವಿದ್ಯುತ್‌ ಉತ್ಪಾದಿಸಬಹುದು. ಕೃಷಿ ಭೂಮಿಯಲ್ಲಿ ಉತ್ಪಾದನೆ ಮಾಡಿದ ಪ್ರತಿ ಯೂನಿಟ್‌ ಸೌರವಿದ್ಯುತ್‌ಗೆ ಸದ್ಯ ₨8.40 ನಿಗದಿ ಮಾಡಲಾಗಿದೆ. ಈ ದರಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.

ರಾಜ್ಯದ ಕೃಷಿಕ ಸಮೂಹದಿಂದಲೇ ಒಟ್ಟು 300 ಮೆಗಾವಾಟ್‌ ಸೌರವಿದ್ಯುತ್‌ ಉತ್ಪಾದಿಸಬಹುದು ಎಂಬ ಅಂದಾಜು ಗುರಿಯನ್ನೂ ಇಟ್ಟುಕೊಳ್ಳಲಾಗಿದೆ. ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿ ಅರ್ಹ ರೈತರಿಗೆ ಸೌರ ವಿದ್ಯುತ್‌ ಉತ್ಪಾದಿಸಲು ಅವಕಾಶ ನೀಡಲಾಗುತ್ತದೆ.

ಪ್ರಸ್ತಾವನೆಗಳನ್ನು ಸಲ್ಲಿಸಲು ಗಡುವು ನಿಗದಿ ಮಾಡಲಾಗುತ್ತದೆ. ಸೌರವಿದ್ಯುತ್‌ ಉತ್ಪಾದನೆಯಲ್ಲಿ ತೊಡಗಲು ಆಸಕ್ತಿ ಹೊಂದಿರುವವರು ಇದರ ಸದುಪಯೋಗ ಪಡೆಯ ಬಹುದು.

ರೈತರಿಗೆ ಕನಿಷ್ಠ 1ರಿಂದ 3 ಮೆಗಾವಾಟ್‌  ಸೌರವಿದ್ಯುತ್‌ ಉತ್ಪಾದನೆಗೆ ಅವಕಾಶ ಇದೆ. ಒಂದು ಮೆಗಾವಾಟ್ ವಿದ್ಯುತ್‌ ಉತ್ಪಾದನೆಗೆ ಐದು ಎಕರೆ ಜಮೀನು ಬೇಕಾಗಬಹುದು.

ಡಾ. ಡಿ.ಎಂ.ನಂಜುಂಡಪ್ಪ ವರದಿ ಯಲ್ಲಿ ಪ್ರಸ್ತಾಪಿಸಿರುವ ಹಿಂದುಳಿದ ತಾಲ್ಲೂಕುಗಳಲ್ಲಿ ಸೌರವಿದ್ಯುತ್‌ ಪಾರ್ಕ್‌ಗಳನ್ನು ಸ್ಥಾಪಿಸಲು ಸರ್ಕಾರ ಸಹಾಯಧನ ನೀಡಲಾಗುತ್ತದೆ. ಕನಿಷ್ಠ 100 ಎಕರೆ ಜಾಗದಲ್ಲಿ ಸೌರವಿದ್ಯುತ್‌ ಪಾರ್ಕ್‌ ಸ್ಥಾಪಿಸಿದರೆ ಪ್ರತಿ ಪಾರ್ಕ್‌ಗೆ ₨1 ಕೋಟಿ ನೀಡಲಾಗುತ್ತದೆ. ಇದನ್ನು ಹೊರತುಪಡಿಸಿದರೆ ಬೇರೆ ರೀತಿಯ ಸಹಾಯಧನ ದೊರೆಯುವುದಿಲ್ಲ.

ಸೌರವಿದ್ಯುತ್‌ ಉತ್ಪಾದನೆ ಮತ್ತು ಮಾರಾಟ ಕುರಿತ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ವಿಳಾಸ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ, ನಂ.39, ಶಾಂತಿಗೃಹ, ಭಾರತ್‌  ಸ್ಕೌಟ್ಸ್ ಅಂಡ್‌ ಗೈಡ್ಸ್‌ ಕಟ್ಟಡ, ಅರಮನೆ ರಸ್ತೆ, ಬೆಂಗಳೂರು - 560 001, ದೂರವಾಣಿ ಸಂಖ್ಯೆ: 080-22207851

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT