ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚನಸೂರ್‌ಗೆ ₹2 ಕೋಟಿ ಲಂಚ

ಸಂಭಾಷಣೆಯ ತುಣುಕು ಬಿಡುಗಡೆ ಮಾಡಿ ಜಗದೀಶ್‌ ಶೆಟ್ಟರ್‌ ಆರೋಪ
Last Updated 28 ಮೇ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಂದರು ಸಚಿವ ಬಾಬುರಾವ್‌ ಚಿಂಚನಸೂರು ಅವರು ಬ್ರೇಕ್‌  ವಾಟರ್‌ ಕಾಮಗಾರಿಯ ಟೆಂಡರ್‌  ಮಂಜೂರು ಮಾಡಿಸಲು ಗುತ್ತಿಗೆ ಕಂಪೆನಿಯೊಂದರಿಂದ  ₹ 2 ಕೋಟಿ ಲಂಚ ಪಡೆದಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)  ಕಾಮಗಾರಿಯೊಂದರಲ್ಲಿ ಟೆಂಡರ್‌ ಮೊತ್ತ ಹೆಚ್ಚಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್‌, ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಚಿವರು ಹಾಗೂ ಗುತ್ತಿಗೆದಾರರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಧ್ವನಿ ತುಣುಕುಗಳನ್ನು ಬಿಡುಗಡೆ ಮಾಡಿದರು.

‘ಸಾರ್ವಜನಿಕರಿಂದ ಲಭ್ಯವಾದ ಈ ಧ್ವನಿ ತುಣುಕಿನಲ್ಲಿರುವುದು ಸಚಿವರದೇ ಧ್ವನಿ. ಇದನ್ನು ದೃಢೀಕರಣ ಪರೀಕ್ಷೆಗೆ ಒಳಪಡಿಸಿಲ್ಲ. ಆದರೆ, ಸಚಿವರು ಈ ಆರೋಪ ನಿರಾಕರಿಸಿದರೆ, ಅದನ್ನು ಸಾಬೀತುಪಡಿಸಲು ಸಿದ್ಧ’ ಎಂದು ಸವಾಲು ಹಾಕಿದರು.

‘ಕೆಐಎಡಿಬಿ ಕಾಮಗಾರಿಯ  ಟೆಂಡರ್‌  ಪ್ರಕರಣದ ಸಂಭಾಷಣೆಯಲ್ಲಿ ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಅವರ ಹೆಸರೂ ಪ್ರಸ್ತಾಪವಾಗಿದೆ. ದೇಶಪಾಂಡೆ ಅವರಿಗೆ ಲಂಚ ನೀಡಬೇಕಾಗುತ್ತದೆ ಎಂದು ಗುತ್ತಿಗೆದಾರರು ಹೇಳಿರುವ ಧ್ವನಿ ತುಣುಕು ಲಭ್ಯವಾಗಿದೆ. ಹಾಗಾಗಿ ಅವರೂ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು’ ಎಂದು ಶೆಟ್ಟರ್‌ ಒತ್ತಾಯಿಸಿದರು.

ರಾಜೀನಾಮೆಗೆ ಒತ್ತಾಯ: ‘ಈ ಎರಡೂ ಪ್ರಕರಣಗಳನ್ನು ಸಿಬಿಐ   ತನಿಖೆಗೆ ಒಳಪಡಿಸಬೇಕು. ಸಚಿವರಾದ  ಚಿಂಚನಸೂರು ಮತ್ತು ಆರ್‌.ವಿ. ದೇಶಪಾಂಡೆ ರಾಜೀನಾಮೆ ನೀಡಬೇಕು. ಅವರಾಗಿ ರಾಜೀನಾಮೆ ನೀಡದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ  ಸಚಿವರಿಂದ ರಾಜೀನಾಮೆ ಪಡೆಯಬೇಕು’ ಎಂದು ಒತ್ತಾಯಿಸಿದರು. 

ಏನಿದು ಬ್ರೇಕ್‌ ವಾಟರ್‌ ಪ್ರಕರಣ: ‘ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ₹ 102 ಕೋಟಿ ವೆಚ್ಚದಲ್ಲಿ ಬ್ರೇಕ್‌ ವಾಟರ್‌  (ಬಂದರಿನ ಬಳಿ ಸಮುದ್ರದ ಅಲೆಗಳ ಅಬ್ಬರ ಕಡಿಮೆಗೊಳಿಸಲು ನಿರ್ಮಿಸುವ ತಡೆಗೋಡೆ) ನಿರ್ಮಿಸಲು ಟೆಂಡರ್‌ ಕರೆಯಲಾಗಿತ್ತು. ಆರು ಕಂಪೆನಿಗಳು ಇದರಲ್ಲಿ ಭಾಗವಹಿಸಿದ್ದವು. ತಾಂತ್ರಿಕ ಬಿಡ್‌ ಸಲ್ಲಿಕೆ ಹಂತದಲ್ಲಿ ಮಂಗಳೂರಿನ ಯೋಜಿತ ಕಂಪೆನಿ ಮತ್ತು ಚೆನ್ನೈ ಮೂಲದ ಶ್ರೀಪತಿ ಅಸೋಸಿಯೇಟ್ಸ್‌ ಕಂಪೆನಿ ಹೊರತಾಗಿ ಉಳಿದ ನಾಲ್ಕು ಕಂಪೆನಿಗಳು ಅನರ್ಹಗೊಂಡಿದ್ದವು. ತಾಂತ್ರಿಕ ಪರಿಶೀಲನೆಯಲ್ಲಿ ಯೋಜಿತ ಕಂಪೆನಿಯೂ ಅನರ್ಹಗೊಂಡಿತು. 
ಅರ್ಹತೆ ಪಡೆದ ಶ್ರೀಪತಿ ಅಸೋಸಿಯೇಟ್ಸ್‌  ಕಂಪೆನಿ ಟೆಂಡರ್‌ ಮೊತ್ತಕ್ಕಿಂತ ಶೇ 24.17ರಷ್ಟು ಹೆಚ್ಚು ಮೊತ್ತ ನಮೂದಿಸಿತ್ತು’ ಎಂದು ಶೆಟ್ಟರ್‌ ವಿವರಿಸಿದರು.

‘2015ರ ಜುಲೈ 7ರಂದು ಸಭೆ ನಡೆಸಿದ್ದ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್, ಟೆಂಡರ್‌ ಮೊತ್ತಕ್ಕಿಂತ ಶೇ 24.17 ರಷ್ಟು ಹೆಚ್ಚು ಮೊತ್ತ ಪಾವತಿಸುವ ಬದಲು ಟೆಂಡರ್‌ ರದ್ದುಪಡಿಸಿ ಮರುಟೆಂಡರ್‌ ಕರೆಯುವಂತೆ ಸೂಚಿಸಿದ್ದರು. ಆದರೆ, ಚಿಂಚನಸೂರು ಆಗಸ್ಟ್‌ 28ರಂದು ಮೀನುಗಾರಿಕಾ ಸಚಿವರಿಗೆ ಪತ್ರ  ಬರೆದು ಟೆಂಡರ್ ರದ್ದುಪಡಿಸದಂತೆ ಹಾಗೂ ಗುತ್ತಿಗೆದಾರ ಕಂಪೆನಿ ಜತೆ ದರ ಸಂಧಾನ  ನಡೆಸುವಂತೆ ಒತ್ತಾಯಿಸಿದ್ದಾರೆ’ ಎಂದರು.

‘ಚಿಂಚನಸೂರು ಒತ್ತಾಯಕ್ಕೆ ಮಣಿದ ಮೀನುಗಾರಿಕಾ ಸಚಿವರು   ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳುವಂತೆ ಸೆಪ್ಟೆಂಬರ್‌ 8 ರಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ  ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಸಂಪುಟ ಸಭೆಯಲ್ಲಿ ಶ್ರೀಪತಿ ಅಸೋಸಿಯೇಟ್ಸ್‌ ಕಂಪೆನಿಗೆ ಗುತ್ತಿಗೆ ನೀಡಲು ಅನುಮೋದನೆ ನೀಡಲಾಗಿತ್ತು’ ಎಂದರು.

‘ಶ್ರೀಪತಿ ಅಸೋಸಿಯೇಟ್ಸ್‌ ಕಂಪೆನಿಯಿಂದ ಸಚಿವ ಚಿಂಚನಸೂರು ಅವರು   ₹ 2 ಕೊಟಿ ಲಂಚ ಪಡೆದಿದ್ದಾರೆ.  ಕಂಪೆನಿಯ ನಿರ್ದೇಶಕ ಸುಂದರ್‌ ರಾಜನ್‌ ಜತೆ ಚಿಂಚನಸೂರು ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಇದಕ್ಕೆ ಪೂರಕ ಅಂಶಗಳಿವೆ’ ಎಂದರು. ಈ ಕುರಿತ ಧ್ವನಿ ಸಂಭಾಷಣೆಯ ಮುದ್ರಿಕೆಯನ್ನೂ ಶೆಟ್ಟರ್‌ ಬಿಡುಗಡೆ ಮಾಡಿದರು.

ಕೆಐಎಡಿಬಿ ಕಾಮಗಾರಿಯಲ್ಲೂ  ಲಂಚ
‘ಯಾದಗಿರಿ ತಾಲ್ಲೂಕಿನ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 36 ಕೋಟಿ ವೆಚ್ಚದ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ಮೊತ್ತಕ್ಕಿಂತ ಶೇ 10ರಷ್ಟು ಹೆಚ್ಚುವರಿ ಹಣವನ್ನು ಕೊಡಿಸುವಲ್ಲೂ ಸಚಿವರು ಪ್ರಮು ಪಾತ್ರ ವಹಿಸಿದ್ದಾರೆ’ ಎಂದು ಶೆಟ್ಟರ್ ಆರೋಪಿಸಿದರು.

‘ಕೆಬಿಆರ್‌ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಗೆ ಟೆಂಡರ್‌ ಕೊಡಿಸಲು ಚಿಂಚನಸೂರು ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಐಎಡಿಬಿ ಮುಖ್ಯ ಎಂಜಿನಿಯರ್‌ಗೆ ದುಡ್ಡು ನೀಡಿ ಕಾಮಗಾರಿಯ ಕಾರ್ಯಾದೇಶ ಪಡೆದುಕೊಳ್ಳುವಂತೆ ಸಚಿವರು ಹೇಳಿದ್ದಾರೆ. ಈ ಅಂಶ ಕೆಬಿಆರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಅವರ ಜತೆ ನಡೆಸಿರುವ ದೂರವಾಣಿ ಸಂಭಾಷಣೆಯಲ್ಲಿದೆ’ ಎಂದು ಶೆಟ್ಟರ್‌  ಆರೋಪಿಸಿದರು.

‘ಯಾದಗಿರಿ ತಾಲ್ಲೂಕಿನ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕೆಐಎಡಿಬಿ ವತಿಯಿಂದ ಮೂಲಸೌಕರ್ಯ ಅಭಿವೃದ್ಧಿಗಾಗಿ ₹ 36 ಕೋಟಿ ವೆಚ್ಚದ ಟೆಂಡರ್‌ ಕರೆಯಲಾಗಿತ್ತು. ಟೆಂಡರ್‌ ಮೊತ್ತಕ್ಕಿಂತ ಶೇ 10ರಷ್ಟು ಹೆಚ್ಚುವರಿ ಹಣವನ್ನು ಕೊಡಿಸುವಲ್ಲೂ ಸಚಿವರು ಪ್ರಮು ಪಾತ್ರ ವಹಿಸಿದ್ದಾರೆ’ ಎಂದು ಶೆಟ್ಟರ್ ಆರೋಪಿಸಿದರು.

‘ಕೆಬಿಆರ್‌ ಕನ್‌ಸ್ಟ್ರಕ್ಷನ್ಸ್‌ ಕಂಪೆನಿಗೆ ಟೆಂಡರ್‌ ಕೊಡಿಸಲು ಚಿಂಚನಸೂರು ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೆಐಎಡಿಬಿ ಮುಖ್ಯ ಎಂಜಿನಿಯರ್‌ಗೆ ದುಡ್ಡು ನೀಡಿ ಕಾಮಗಾರಿಯ ಕಾರ್ಯಾದೇಶ ಪಡೆದುಕೊಳ್ಳುವಂತೆ ಸಚಿವರು ಹೇಳಿದ್ದಾರೆ. ಈ ಅಂಶ ಕೆಬಿಆರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಅಜಿತ್‌ ಅವರ ಜತೆ ನಡೆಸಿರುವ ದೂರವಾಣಿ ಸಂಭಾಷಣೆಯಲ್ಲಿದೆ’ ಎಂದು ಶೆಟ್ಟರ್‌  ಆರೋಪಿಸಿದರು.

ಕರೆಗೆ ಸಿಗದ ಸಚಿವರು:  ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಚಿವ ಬಾಬುರಾವ್‌ ಚಿಂಚನಸೂರು ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರ ಆಪ್ತಸಹಾಯಕರೊಬ್ಬರು ಕರೆ ಸ್ವೀಕರಿಸಿ, ಸಚಿವರು ಪ್ರತಿಕ್ರಿಯೆ ನೀಡುತ್ತಾರೆ ಎಂದು ತಿಳಿಸಿದರು. ಆದರೆ, ಆ ಬಳಿಕ ಕರೆಗೆ ಲಭ್ಯವಾಗಲಿಲ್ಲ.

ಸಂಭಾಷಣೆಯ ಆಯ್ದ ಧ್ವನಿ ತುಣುಕುಗಳು
ಶ್ರೀಪತಿ ಅಸೋಸಿಯೇಟ್ಸ್‌ ಕಂಪೆನಿ ಎಂ.ಡಿ ಜತೆಗಿನ ಸಂಭಾಷಣೆ

ಸಚಿವ ಚಿಂಚನಸೂರು ಧ್ವನಿ ಹೋಲುವ ಧ್ವನಿ: ಸುಂದರ ರಾಜ್‌ ಹಲೋ 
ಸುಂದರ ರಾಜ್‌: ವಣಕ್ಕಂ, ವಣಕ್ಕಂ

ಸಚಿವರು: ಮೇ ಪೂರಾ ಅಪ್‌ಸೆಟ್‌ ಹೋಗಯಾ, ಹಮಾರ ಮೇಜರ್‌ ಆಪರೇಷನ್‌ ಮಿಸೆಸ್‌ ಕಾ. ಮೇರಾ ಮೈಂಡ್‌ 100 ಪರ್‌ಸೆಂಟ್‌ ಅಪ್‌ಸೆಟ್‌ ಹೋಗಯಾ.

ಸಚಿವರ ಆಪ್ತ ಸಹಾಯಕನ(ಮುತ್ತತ್ತಿ) ಧ್ವನಿ: ಹಲೋ ಮುತ್ತತ್ತಿ ಸ್ಪೀಕಿಂಗ್‌, ಹೌ ಆರ್‌ ಯು

ಮುತ್ತತ್ತಿ: ಅವರ್‌ ಮಿನಿಸ್ಟರ್‌ ಬಿಕೇಮ್‌ ವೆರಿ ಅಪ್ಸೆಟ್‌, ಹೀಸ್‌ ವೈಫ್‌ ಈಸ್‌ ಗೋಯಿಂಗ್‌ ಫಾರ್‌ ಮೆಡಿಕಲ್‌ ಟ್ರೀಟ್‌ಮೆಂಟ್‌

ಸುಂದರರಾಜ್‌: ಸಾರ್‌ ಟುಡೇ ಐ ಸೆಂಡ್‌ 50. ಆಲ್‌ರೆಡಿ ಈ ಸೆಂಟ್‌ 50

ಮುತ್ತತ್ತಿ: ಮಂಡೇ ಪಾಸಿಟೀವ್‌ಲಿ. ಇಫ್‌ ಪಾಸಿಬಲ್‌ ಬ್ಯಾಲನ್ಸ್‌ ಆಲ್ಸೊ. ಲೆಫ್ಟ್‌ ಟು ಯು. ಸೀ ವಾಟ್‌ ಕ್ಯಾನ್‌ ಬಿ ಡನ್‌. ಪ್ಲೀಸ್‌ ಕಂ ಆನ್‌ ಮಂಡೇ ಪಾಸಿಟಿವ್‌ಲಿ.

********
ಸಚಿವ ಚಿಂಚನಸೂರು ಅವರ ಧ್ವನಿಯನ್ನು ಹೋಲುವ ಧ್ವನಿ: ಅಜಿತ್‌ ರೇ ನಮಸ್ಕಾರ. ಈಗ ಎಲೆಕ್ಷನ್‌ ಡಿಕ್ಲೇರ್‌ ಆಯಿತು. ಅದಕ್ಕೆ ನಾಳಿನ ಡೇಟ್‌ ಹಾಕಿ ವರ್ಕ್‌ ಆರ್ಡರ್‌ ಕೊಡಕ್ಕೆ ಬರಲ್ಲ. ಇವತ್ತಿನ ಡೇಟ್‌ ಹಾಕಿ ವರ್ಕ್‌ ಆರ್ಡರ್‌ ಕೊಡಬೇಕು. ದಯಾಮಾಡಿ ಏನೋ ಮಾಡಿರಿ. ರಾತ್ರಿ– 9–10 ಗಂಟೆಗೆ ಚೀಫ್‌ ಎಂಜಿನಿಯರ್‌ ಮನೆಗೆ ಹೋಗ್ರಿ. ಅವರಿಗೆ ಏನ್‌ ಕೊಡ್ತೀರೋ ಕೊಡ್ರಿ. ರೆಹಮಾನ್‌ ಕರೆಸಿ ಈಗಲೇ ಕೊಡು ಅಂತ ಹೇಳ್ರಿ. ಅಚಾನಕ್‌ ಬೆಳಿಗ್ಗೆ ಕೊಡ್ತೀನ್‌ಪಾ ಅಂದರಾ ಇವತ್ತಿನ ಡೇಟ್‌ ಹಾಕಿ ನಾಳಿ ಕೊಡಕ್ಕ ಹೇಳ್ರಿ.

ಅಜಿತ್‌ (ಕೆಬಿಆರ್‌ ಕಂಪೆನಿ ಎಂ.ಡಿ): ಆಯಿತು ಸಾರ್‌ ಯಾರನ್ನಾದರೂ ಕಳುಹಿಸಿಕೊಟ್ಟು ಮಾತನಾಡುತ್ತೇನೆ.

ಸಚಿವರು: ಇಲ್ಲ ನೀವೇ ಹೋಗರಿ. 10 ಗಂಟೆ ಆಗಲ್ದಾಗ ಚೀಫ್‌ ಎಂಜಿನಿಯರ್‌ ಮನೆಗೆ ಹೋಗರಿ. ಅವರಿಗೆ ಏನು ಕೊಡ್ತೀರಿ ಕೊಡ್ರಿ

ಅಜಿತ್‌: ನಾನು ಮಂಗಳೂರಿನಲ್ಲಿದ್ದೇನೆ. ಸಾರ್‌ ಬರುತ್ತಾ ಇದ್ದೇನೆ

ಸಚಿವರು: ನೀವು ಮಂಗಳೂರಿನಲ್ಲಿದ್ದರೆ ಒಂದು ಕೆಲಸ ಮಾಡ್ರಿ...

ಅಜಿತ: ಏನೋ ವ್ಯವಸ್ಥೆ ಮಾಡುತ್ತೇನೆ. ನನಗೆ ಎಲ್ಲಾ ಅರ್ಥ ಆಗುತ್ತದೆ. ಇಲ್ಲದಿದ್ದರೆ ಒಂದು ಒಂದೂವರೆ ತಿಂಗಳು ಲೇಟ್‌ ಆಗುತ್ತದೆ. ನಾಳೆ ಮುಂಜಾನೆ ವ್ಯವಸ್ಥೆ ಮಾಡುತ್ತೇನೆ.

ಸಚಿವರು: ನಾನು ನಿಮಗೋಸ್ಕರ ಬಂದಿದ್ದೇನೆ. ತಿರುಪತಿ ವೆಂಕಟೇಶ್ವರನ ಆಣೆ. ನನ್ನ ಹೆಂಡತಿ ಆಣೆ, ನನ್ನ ಮಿಸೆಸ್‌ ಆಣೆ. ನಾನು ಬಂದಿದ್ದೇ ನಿಮಗೋಸ್ಕರ...

***
‘ದೇಶಪಾಂಡೆ ಒಂದೂವರೆ ಕೇಳುತ್ತಿದ್ದಾರೆ’

ಸಚಿವ ಚಿಂಚನಸೂರು ಅವರ ಧ್ವನಿಯನ್ನು ಹೋಲುವ ಧ್ವನಿ: ಅಜಿತ್‌ ನಮಸ್ಕಾರ. ಆರಾಮ ಇದ್ದೀರಿ?

ಅಜಿತ್‌: ನಮಸ್ಕಾರ. ಆರಾಮ ಸಾರ್‌.

ಸಚಿವರು: ಮನೆಯಲ್ಲಿ ಮಿಸೆಸ್‌ ಎಲ್ಲ ಆರಾಮ ಇದ್ದಾರ?

ಅಜಿತ್‌: ಎಲ್ಲಾ ಚೆನ್ನಾಗಿದ್ದಾರೆ ಸಾರ್‌.

ಸಚಿವರು: ಅಜಿತ್‌ ನೀನು ನನ್ನ ಬ್ರದರ್‌ ಇದ್ದಂಗೆ. ಸಣ್ಣ ತಮ್ಮ ಇದ್ದಂಗೆ. ನನಗೆ ಸಣ್ಣ ಬುದ್ಧಿ ಇಲ್ಲ. ನನ್ನ ಬಳಿ ಸಣ್ಣ  ಗುಣ ಇಲ್ಲ. ರಾಯಲ್‌ ಗುಣ ಇದೆ. ನಿನ್ನ ನನ್ನ ತಮ್ಮನ ತರಹ ಬೆಳೆಸುತ್ತೇನೆ.

ಅಜಿತ್‌: ಮಾತಾಡಲಿಕ್ಕೆ ಅವಕಾಶ ಕೊಡಿ ಸಾರ್‌.

ಸಚಿವರು: ನಾನು ಭಯಂಕರ ಟೆನ್ಷನ್‌ನಲ್ಲಿದ್ದೇನೆ. ಇವತ್ತು ತಮ್ಮಗ ರಿಕ್ವೆಸ್ಟ್‌ ಮಾಡುತ್ತೇನೆ. ಈಗ ಎಲೆಕ್ಷನ್‌ನಲ್ಲಿದ್ದೇನೆ. ಮನಿ ಮಂದ 80–90 ಜೀಪ್‌ ನಿಂತವ.

ಅಜಿತ್‌: ‘ಈಗ ಏನಾಗಿದೆ ಎಂದರೆ, ದೇಶಪಾಂಡೆ ಅವರೂ ಒಂದೂವರೆ ಕೇಳುತ್ತಿದ್ದಾರೆ. ಒಂದು ರೂಪಾಯಿ ಕಮ್ಮಿ ಆಗಲ್ಲ ಎನ್ನುತ್ತಿದ್ದಾರೆ. ನೀವು ಅಲ್ಲಿ ಏಕೆ ಅಷ್ಟು ಕೊಡ್ತೀರ. ಅಲ್ಲಿ ಕಡಿಮೆ ಕೊಡಬೇಕು. ನೀವು ಒಂದೂವರೆ ಕೊಡಲೇ ಬೇಕು. ಕೊಡದಿದ್ದರೆ ಕೆಲಸ ಮಾಡಕ್ಕಾಗಲ್ಲ ಅಂತಿದ್ದಾರೆ. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಅಂತ ಹೇಳುತ್ತಾ ಇದ್ದಾರೆ. ಅವರನ್ನು ಬಿಟ್ಟು ಹೋಗುವಂಗಿಲ್ಲ. ಅವರು ಖಾತೆ ಮಂತ್ರಿ, ನೀವು ಉಸ್ತುವಾರಿ ಮಂತ್ರಿ. ಇಬ್ಬರೂ ನಮಗೆ ಬೇಕು.
ಬಟ್‌, ಈಗ ನಮಗೆ ಬರ್ಡನ್‌ ಆಗಿದೆ ಸಾರ್‌. ಎಷ್ಟು ಬರ್ಡನ್‌ ಆಗಿದೆ ಅಂದರೆ ನಮಗೆ ಈ ಕೆಲಸಾನೇ ಬೇಡ, ಬಿಟ್ಟು ಹೋಗೋಣ ಅಂತ ಯೋಚನೆ ಮಾಡುತ್ತಿದ್ದೀವಿ. ಫೈನಲ್‌ ಆಗಿ ಒಂದು ಹೇಳುತ್ತೇನೆ ಸಾರ್‌. ಈಗ ನೀವು ಏನು ಹೇಳಿದರೂ ಅಲ್ಲಿ ಕೊಡೋದನ್ನು ಕೊಡಲೇ ಬೇಕು. ಅವರು ಬಿಡಲ್ಲ. ಫೈನಲಿ ನಾನು 20 ನಿಮ್ಮ ಸ್ಪೆಷಲ್‌ ಆಫಿಸರ್‌ ಹತ್ತಿರ ಕೊಟ್ಟು ಕಳುಹಿಸುತ್ತೇನೆ. ಅಲ್ಲಿಗೆ ಕ್ಲೋಸ್‌ ಮಾಡಿ ಸಾರ್‌.

ಸಚಿವರು: ಇಲ್ಲ ಆಗಲ್ಲ, ಆಗಲ್ಲ ಸಾರ್‌. ಆಗಲ್ಲ

ಅಜಿತ್: ಆಗಲ್ಲ ಅಂದರೆ ಕೆಲಸಾನೇ ಬೇಡ.

ಸಚಿವರು: ಎಲೆಕ್ಷನ್‌ ಇಲ್ಲದಿದ್ದರೆ ನಿಮ್ಮ ಬಳಿ ತೆಗೋತಾ ಇರಲಿಲ್ಲ. ತೆಂಗಿನಕಾಯಿ ತೋರಿಸಿ ತಗೋತಿರಲಿಲ್ಲ.

‘ಪತ್ತೆ ಹಚ್ಚಬೇಕಿದೆ’
ಯಾವ ದೂರವಾಣಿ ಸಂಖ್ಯೆಯಿಂದ ಯಾವ ಸಂಖ್ಯೆಗೆ ಕರೆ ಮಾಡಲಾಗಿದೆ. ಯಾವ ದಿನಾಂಕದಂದು ಕರೆ ಮಾಡಲಾ ಗಿದೆ  ಎಂಬ ಪ್ರಶ್ನೆಗೆ, ‘ಅದನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ’ ಎಂದು ಶೆಟ್ಟರ್‌ ಉತ್ತರಿಸಿದರು.

ವಿರೋಧ ಪಕ್ಷದ ನಾಯಕರು  ಬಿಡುಗಡೆ ಮಾಡಿದ ಧ್ವನಿ ತುಣುಕಿನಲ್ಲಿರುವ ಸಂಭಾಷಣೆಯಲ್ಲಿ ₹ 2 ಕೋಟಿಗೆ ಲಂಚ ನೀಡುವಂತೆ ಚಿಂಚನಸೂರು ಅವರು ಒತ್ತಾಯಿಸಿದ ಸ್ಪಷ್ಟ ವಿವರಗಳು ಲಭ್ಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT