ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಪಾಂಜಿ ಪ್ರೀತಿಯ ಭಿನ್ನ ದಾರಿ

ಮಿನುಗು ಮಿಂಚು
Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ಜೇನ್ ಗೂಡಾಲ್ ಹುಟ್ಟಿದ್ದು 1934, ಏಪ್ರಿಲ್ 3ರಂದು. ಎರಡು ವರ್ಷದ ಮಗುವಾಗಿದ್ದ ಜೇನ್ ಕೈಗೆ ಅವರ ತಂದೆ ಚಿಂಪಾಂಜಿಯ ಬೊಂಬೆಯೊಂದನ್ನು ಕೊಟ್ಟರು. ಅದು ಜೀವವಿರುವ ಚಿಂಪಾಂಜಿಯನ್ನು ಬಹುವಾಗಿ ಹೋಲುತ್ತಿದ್ದುದರಿಂದ, ಆಪ್ತೇಷ್ಟರು ಅದನ್ನು ಕಂಡು ಮಗು ಹೆದರೀತು ಎಂದು ಎಚ್ಚರಿಸಿದರು. ಆದರೆ ಜೇನ್ ಅದನ್ನು ವಿಪರೀತ ಹಚ್ಚಿಕೊಂಡರು. ಈಗಲೂ ಅವರ ಬಳಿ ಆ ಬೊಂಬೆ ಇದೆ.

ಜೇನ್ ಅವರಿಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ನಾಲ್ಕು ವರ್ಷದವಳಿದ್ದಾಗಲೇ ಕೋಳಿಯು ಮೊಟ್ಟೆಯನ್ನು ಹೇಗೆ ಇಡುತ್ತದೆ ಎನ್ನುವುದನ್ನು ಕಾದು ನೋಡುತ್ತಿದ್ದಳು. ‘ಟಾರ್ಜನ್‌’ನಿಂದ ‘ಜಂಗಲ್ ಬುಕ್‌’ವರೆಗೆ ಎಲ್ಲವೂ ಅವಳಿಗೆ ಇಷ್ಟದ ಪುಸ್ತಕಗಳೇ. ಆಫ್ರಿಕಾಗೆ ಹೋಗಿ ಪ್ರಾಣಿಗಳ ವಿಷಯದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಬಾಲ್ಯದಿಂದಲೇ ಹುಡುಗಿ ಕಂಡ ಕನಸನ್ನು ಅಪ್ಪ–ಅಮ್ಮ ಪೋಷಿಸಿದರು.

ಶಾಲಾ ಸ್ನೇಹಿತೆ ಕೀನ್ಯಾಗೆ ಬರುವಂತೆ ಆಹ್ವಾನವಿತ್ತಾಗ ಜೇನ್ ಹೋಗಲು ಸಿದ್ಧಗೊಂಡಿದ್ದೂ ಒಂದು ರೋಚಕ ಕಥಾನಕ. ಹೋಟೆಲ್ ಒಂದರಲ್ಲಿ ಅರೆಕಾಲಿಕ ಕೆಲಸ ಮಾಡಿ, ಹಣ ಕೂಡಿಟ್ಟು ಕೀನ್ಯಾಗೆ ಹೋಗಲು ಟಿಕೆಟ್ ಕೊಂಡಳು. ಆಫ್ರಿಕಾದಲ್ಲಿ ಅವಳು ಹೆಸರಾಂತ ಜೀವವಿಜ್ಞಾನಿ ಲೂಯಿ ಲೀಕಿ ಅವರನ್ನು ಭೇಟಿ ಮಾಡಿದಳು. ತಾಂಜೇನಿಯಾದ ಗೊಂಬೆ ಸ್ಟೀಮ್ ನ್ಯಾಷನಲ್ ಪಾರ್ಕ್‌ನಲ್ಲಿ ಚಿಂಪಾಂಜಿಗಳನ್ನು ಕುರಿತು ಅಧ್ಯಯನ ನಡೆಸಲು ಹುಡುಗಿಯನ್ನು ಲೂಯಿ ಉತ್ತೇಜಿಸಿದರು. ಅಲ್ಲಿ ಚಿಂಪಾಂಜಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಧ್ಯಯನ ನಡೆಸಿದ ಜೇನ್ ಅವುಗಳ ವಿಶೇಷ ವ್ಯಕ್ತಿತ್ವ ಹಾಗೂ ಸಲಕರಣೆಗಳನ್ನು ಬಳಸುವ ವಿಧಾನವನ್ನು ಪತ್ತೆಹಚ್ಚಿದಳು. ನೋಡನೋಡುತ್ತಲೇ ಅವಳು ‘ಅವರು’ ಎನ್ನುವಷ್ಟು ದೊಡ್ಡ ಹೆಸರು ಮಾಡಿದ್ದು ಇನ್ನೊಂದು ಕಥಾನಕ.

ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವರ್ತನೆಶಾಸ್ತ್ರ ವಿಷಯದಲ್ಲಿ ಜೇನ್ ಪಿಎಚ್.ಡಿ ಪದವಿ ಪಡೆದರು. ಗೊಂಬೆಗೆ ಮರಳಿ ಮತ್ತೆ ಮನುಷ್ಯನನ್ನು ಹೋಲುವ ವನ್ಯ ಜೀವಿಗಳನ್ನು ಕುರಿತ ಅಧ್ಯಯನವನ್ನು ಮುಂದುವರಿಸಿದರು. ಪ್ರಾಣಿ ಸಂರಕ್ಷಣೆಯ ಪ್ರತಿಪಾದಕಿಯೂ ಆಗಿರುವ ಜೇನ್, ‘ಥ್ರೂ ಎ ವಿಂಡೊ: ಮೈ ಥರ್ಟಿ ಇಯರ್ಸ್ ವಿತ್ ದಿ ಚಿಂಪಾಂಜೀಸ್ ಆಫ್ ಗೊಂಬೆ’ ಎಂಬ ಕೃತಿಯನ್ನು ಬರೆದಿದ್ದಾರೆ. ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ನೀಡುವ ವಿಲಿಯಮ್ ಪ್ರಾಕ್ಟರ್ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ.

ಪುರಸ್ಕಾರಗಳು ಅವರಿಗೆ ಸಂದಿವೆ. 2003ರಲ್ಲಿ ರಾಣಿ ಎರಡನೇ ಎಜಿಜಬೆತ್, ಅವರನ್ನು ‘ಡೇಮ್’ ಎಂದು ಕರೆದರು. ಇದು ನೈಟ್‌ಹುಡ್ ಪದವಿಗೆ ಸಮಾನ. ವರ್ಷಗಳ ನಂತರ ಜೇನ್ ಸಸ್ಯಗಳ ಕಡೆಗೂ ತಮ್ಮ ಆಸಕ್ತಿಯನ್ನು ವಿಸ್ತರಿಸಿಕೊಂಡರು. ಸಸ್ಯಗಳಿಲ್ಲದೆ ಚಿಂಪಾಂಜಿಗಳಿಲ್ಲ. ಮನುಷ್ಯರೂ ಇಲ್ಲ ಎಂದು ಅರಿತ ಅವರು, ‘ಸೀಡ್ಸ್ ಆಫ್ ಹೋಪ್, ವಿಸ್ಡಮ್ ಫ್ರಮ್ ದಿ ವರ್ಲ್ಡ್ ಆಫ್ ಪ್ಲಾಂಟ್ಸ್’ ಕೃತಿಯನ್ನು ಬರೆದರು.

ಈಗ ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿರುವ ಜೇನ್ 81 ವರ್ಷದ ಪ್ರಾಯದಲ್ಲಿಯೂ ವರ್ಷದ 300 ದಿನಗಳ ಕಾಲ ಪ್ರವಾಸ ಹೋಗುತ್ತಾರೆ. ಚಿಂಪಾಂಜಿಗಳನ್ನು ರಕ್ಷಿಸಲೆಂದು ಸ್ಥಾಪಿಸಿರುವ ‘ಜೇನ್ ಗೂಡಾಲ್ ಇನ್ಸ್‌ಟಿಟ್ಯೂಟ್‌’ಗೆ ದೇಣಿಗೆ ಸಂಗ್ರಹಿಸಲು ಅವರು ಹಗಲಿರುಳು ಶ್ರಮಿಸುತ್ತಾ ಇದ್ದಾರೆ. ವಿಶ್ವದಾದ್ಯಂತ ಈ ಸಂಸ್ಥೆಯ 28 ಶಾಖೆಗಳಿವೆ. ಮಕ್ಕಳಲ್ಲಿ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಮನೋಭಾವ ಮೂಡಿಸಲು ‘ರೂಟ್ಸ್ ಅಂಡ್ ಶೂಟ್ಸ್’ ಎಂಬ ಇನ್ನೊಂದು ಸಂಸ್ಥೆಯನ್ನೂ ಅವರು ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT